/newsfirstlive-kannada/media/media_files/2025/08/18/kaduru-murder-case022-2025-08-18-19-59-43.jpg)
ಕೊಲೆಯಾದ ಸುಬ್ರಮಣ್ಯ, ಪತ್ನಿ ಮೀನಾಕ್ಷಿ , ಮೂವರು ಆರೋಪಿಗಳು
ತನಗಿಂತ 20 ವರ್ಷ ಚಿಕ್ಕವನಾದ ಪ್ರಿಯಕರನೊಂದಿಗೆ ಅನೈತಿಕ ಸಂಬಂಧ ಮುಂದುವರಿಸುವುದಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಆತನ ಪತ್ನಿಯೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ. ಈ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ಕೊಲೆ ಮಾಡಿ ಎರಡು ತಿಂಗಳ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಕಡೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತ ದುರ್ದೈವಿಯನ್ನು ಸುಬ್ರಹ್ಮಣ್ಯ ಎಂದು ಗುರುತಿಸಲಾಗಿದೆ. ಈತನ ಪತ್ನಿ ಮೀನಾಕ್ಷಿ (53) ಮತ್ತು ಆಕೆಯ ಪ್ರಿಯಕರ ಪ್ರದೀಪ್ (33) ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಗಂಡನ ಕೊಲೆಗೆ ಸ್ಕೆಚ್!
ಕಡೂರು ತಾಲೂಕಿನ ಕಂಸಾಗರ ಗೇಟ್ ಬಳಿ ಈ ಕ್ರೌರ್ಯ ನಡೆದಿತ್ತು. ಸುಬ್ರಹ್ಮಣ್ಯ ಅವರು ಕಡೂರಿನಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ತಾವಾಯಿತು, ತಮ್ಮ ಕೆಲಸವಾಯಿತು ಎಂದು ತಮ್ಮ ಪಾಡಿಗೆ ತಾವು ಇದ್ದರು. ಆದರೇ, ಸುಬ್ರಮಣ್ಯ ಪತ್ನಿ ಮೀನಾಕ್ಷಿ ಮಾತ್ರ ಬೇಲಿ ಹಾರುವ ಕೆಲಸ ಮಾಡುತ್ತಿದ್ದಳು. ತನ್ನ ಪತ್ನಿ ಮೀನಾಕ್ಷಿಯ ನಡವಳಿಕೆ ಬಗ್ಗೆ ಪತಿ ಸುಬ್ರಮಣ್ಯಗೆ ಅನುಮಾನವಿತ್ತು. ಮೀನಾಕ್ಷಿಗೆ ಪ್ರದೀಪ್ ಎಂಬಾತನ ಜೊತೆ ಅಕ್ರಮ ಸಂಬಂಧ ಇದೆ ಎಂಬುದು ಸುಬ್ರಮಣ್ಯಗೆ ಗೊತ್ತಾಗಿತ್ತು. ಇದರಿಂದಾಗಿ ದಂಪತಿ ಮಧ್ಯೆ ಆಗ್ಗಾಗ್ಗೆ ಜಗಳ ಆಗುತ್ತಿತ್ತು. ಪ್ರದೀಪ್ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವುದಕ್ಕೆ ಗಂಡನೇ ಅಡ್ಡಿ ಆಗುತ್ತಿದ್ದಾನೆ. ಪ್ರತಿನಿತ್ಯ ತನ್ನ ಚಲನವಲನ ಗಮನಿಸುತ್ತಾ, ತನಗೆ ಕಡಿವಾಣ ಹಾಕುತ್ತಿದ್ದಾನೆ ಎಂದು ಮೀನಾಕ್ಷಿ ಮನಸ್ಸಿನೊಳಗೆ ಕೊತ ಕೊತ ಕುದಿಯತೊಡಗಿದ್ದಳು ಆದರೆ, ಯುವಕನೊಂದಿಗೆ ಅನೈತಿಕ ಸಂಬಂಧ ಬಿಟ್ಟಿರಲಾಗದ ಹೆಂಡತಿ ಗಂಡನನ್ನು ಕೊಲೆ ಮಾಡಿದರೆ, ಪ್ರಿಯಕರನೊಂದಿಗೆ ಸುಖವಾಗಿ ಜೀವನ ಮಾಡಬಹುದು ಎಂದು ಭಾವಿಸಿದ್ದಳು. ಈ ಹಿನ್ನೆಲೆಯಲ್ಲಿ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಾಳೆ.
ಸುಬ್ರಮಣ್ಯ ಹಾಗೂ ಪತ್ನಿ ಮೀನಾಕ್ಷಿ
ಶವನನ್ನ ಸುಟ್ಟು ಹಾಕಿದ್ರು!
ಈ ವಿಚಾರವನ್ನು ಮೀನಾಕ್ಷಿ ಆಕೆಯ ಪ್ರೇಮಿ ಪ್ರದೀಪ್ ಮತ್ತು ಆತನ ಇಬ್ಬರು ಸ್ನೇಹಿತರಿಗೆ ತಿಳಿಸಿದ್ದಾಳೆ. ಎಲ್ಲರೂ ಸೇರಿ ಮೀನಾಕ್ಷಿಯ ಗಂಡ ಸುಬ್ರಹ್ಮಣ್ಯನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ತಮ್ಮ ಯೋಜನೆಯಂತೆ ಸುಬ್ರಹ್ಮಣ್ಯನನ್ನು ಒಂದು ಕಾರ್ಯಕ್ರಮದ ನೆಪದಲ್ಲಿ ಚಿಕ್ಕಮಗಳೂರಿಗೆ ಕರೆತಂದ ಮೀನಾಕ್ಷಿ, ಮೇ 31ರಂದು ಕಂಸಾಗರ ಗೇಟ್ ಬಳಿ ಕ್ರೂರವಾಗಿ ಕೊಲೆ ಮಾಡಿ, ಶವವನ್ನು ಸುಟ್ಟು ಹಾಕಿದ್ದರು. ಆಶ್ಚರ್ಯವೆಂದರೆ, ಪತಿಯನ್ನು ಕೊಂದ ಬಳಿಕ ಆಕೆ ಜೂನ್ 2ರಂದು ಪತಿ ಕಾಣೆಯಾಗಿದ್ದಾನೆ ಎಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಕೊಲೆ ಬಯಲಾಗಿದ್ದು ಹೇಗೆ?
ಘಟನೆಯ ನಂತರ ಕೊಲೆಯಾದ ಸುಬ್ರಹ್ಮಣ್ಯ ಅವರ ಅಂಗಡಿಯ ಕೀಗಳನ್ನು ಪೊಲೀಸರು ಪತ್ತೆಹಚ್ಚಿದರು. ಕೀಯಿಂದಲೇ ಕೊಲೆಗಾರರನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಪೊಲೀಸರು ಪ್ರಾರಂಭಿಸಿದರು. ನಂತರ, ತನಿಖೆ ತೀವ್ರಗೊಂಡಾಗ ಮೀನಾಕ್ಷಿ ಮತ್ತು ಆಕೆಯ ಪ್ರಿಯಕರ ಪ್ರದೀಪ್ ಮೇಲೆ ಅನುಮಾನ ಬಂದಿತು. ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇಬ್ಬರೂ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಕೊಲೆಗೆ ಪ್ರದೀಪ್‌ಗೆ ಆತನ ಇಬ್ಬರು ಸ್ನೇಹಿತರಾದ ಸಿದ್ದೇಶ್, ವಿಶ್ವಾಸ್ ಸಹ ಸಹಾಯ ಮಾಡಿದ್ದು, ಅವರೆಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.