/newsfirstlive-kannada/media/media_files/2025/08/29/yadgir-2025-08-29-12-37-19.jpg)
ಯಾದಗಿರಿ: ವಸತಿ ಶಾಲೆಯ ಶೌಚಾಲಯದಲ್ಲೇ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿರೋ ಶಾಕಿಂಗ್ ಘಟನೆ ಜಿಲ್ಲೆಯ ಶಹಾಪೂರ ನಗರದಲ್ಲಿ ನಡೆದಿದೆ.
ಇದೇನಿದು ಎಂದು ಅಚ್ಚರಿಯಾದರೂ ಸತ್ಯ. ಹೌದು, ವಿದ್ಯಾರ್ಥಿನಿ ವಸತಿ ಶಾಲೆಯ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದು ಬೇರೆ ರಾಜ್ಯ-ದೇಶದಲ್ಲಿ ನಡೆದ ಘಟನೆಯಲ್ಲ. ಬದಲಿಗೆ ಕರ್ನಾಟಕದಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಈ ವಿದ್ಯಾರ್ಥಿನಿ ಹೆರಿಗೆ ನಾಗರಿಕ ಸಮಾಜ ತಲೆ ತಗ್ಗಿಸುವಂತ ಕೃತ್ಯಕ್ಕೆ ಸಾಕ್ಷಿಯಾಗಿದೆ. ಇನ್ನೂ, ವಿದ್ಯಾರ್ಥಿನಿ ಹೆರಿಗೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಸದ್ಯ ಈ ಸಂಬಂಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.
ವಿದ್ಯಾರ್ಥಿನಿ ಹೆರಿಗೆಯಿಂದ ಕಳವಳ ವ್ಯಕ್ತಪಡಿಸಿದ ಮಕ್ಕಳ ಹಕ್ಕುಗಳ ಆಯೋಗ
ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ್ ಕೋಸುಂಭೆ ಕಳವಳ ವ್ಯಕ್ತಪಡಿಸಿದ್ದಾರೆ. ಶಹಾಪೂರ ನಗರದ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಹೆರಿಗೆ ಆಗಿದೆ. ಮಕ್ಕಳ ಹಕ್ಕುಗಳ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಘಟನೆ ಕುರಿತು ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಈ ತರಹದ ದುರ್ಘಟನೆಗಳು ಪದೇ ಪದೇ ಬೆಳಕಿಗೆ ಬರುತ್ತಿದ್ದು ಬೇಸರ ತಂದಿದೆ. ಈ ಬಗ್ಗೆ ವಿಸ್ತೃತ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಗುವಿನ ದೈಹಿಕ ಬದಲಾವಣೆ ಆದ ಸಂದರ್ಭದಲ್ಲಿ ಅಧಿಕಾರಿಗಳು ಗಮನಹರಿಸಬೇಕಿತ್ತು. ತಿಂಗಳಲ್ಲಿ ಒಂದು ಬಾರಿ ವೈದ್ಯಕೀಯ ತಪಾಸಣೆ ಮಾಡಬೇಕಿತ್ತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಘಟನೆಯಲ್ಲಿ ಎಡವಿದ್ದಾರೆ. ವೈದ್ಯಕೀಯ ತಪಾಸಣೆ ಮಾಡದೇ ನಿರ್ಲಕ್ಷ್ಯ ತೋರಿದ್ದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು. ಮತ್ತೆ ಇಂತಹ ಘಟನೆ ನಡೆಯದಂತೆ ವಸತಿ ಶಾಲೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಬೇಕೆಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು, ವಸತಿ ಶಾಲೆಯಲ್ಲೇ ವಿದ್ಯಾರ್ಥಿನಿ ಹೆರಿಗೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿದೆ. ಸದ್ಯ ಶಹಾಪೂರ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ, ಮಗು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
ಈ ಘಟನೆ ಸಂಬಂಧ ಮಾತಾಡಿದ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಎಸ್ಪಿ ಪೃಥ್ವಿಕ್ ಶಂಕರ್, ಈ ಘಟನೆ ಬಗ್ಗೆ ಯಾವುದೇ ವಿಚಾರ ಬಹಿರಂಗ ಮಾಡಲು ಬರುವುದಿಲ್ಲ. ಸದ್ಯ ಪ್ರಕರಣ ವಿಚಾರಣೆ ಹಂತದಲ್ಲಿ ಇದೆ. ತಪ್ಪು ಯಾರದು ಇದೆ ಎಂಬುದರ ಪರಿಶೀಲನೆ ಮಾಡುತ್ತಿದ್ದೇವೆ. ಆಡಳಿತ ದೃಷ್ಟಿಯಿಂದ ನ್ಯೂನತೆ ಕಂಡು ಬಂದಿದೆ. ಮೆಡಿಕಲ್ ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ. ಮೆಡಿಕಲ್ ಚೆಕಪ್ ಮಾಡಿದ ಬಳಿಕ ಯಾವುದರಲ್ಲಿ ತಪ್ಪಾಗಿದೆ ಕ್ರಮ ಕೈಗೊಳ್ಳುತ್ತೇವೆ. ಮೆಡಿಕಲ್ ತಪಾಸಣೆಗೆ ಶಾಲೆಗೆ ಗೈರಾಗಿದರ ಬಗ್ಗೆ ಯಾಕೆ ಮಾಹಿತಿ ನೀಡಿಲ್ಲ ಎಂಬುದರ ಬಗ್ಗೆ ಕ್ರಮವಹಿಸುತ್ತೇವೆ. ಹಾಸ್ಟೆಲ್ ಸಿಬ್ಬಂದಿಯನ್ನ ಅಮಾನತು ಮಾಡುತ್ತೇವೆ. ಎಲ್ಲಿ ತಪ್ಪು ಆಗಿದೆ? ಯಾರದು ಆಗಿದೆ ತಿಳಿದುಕೊಂಡು ಕ್ರಮ ಕೈಗೊಳ್ಳುತ್ತೇವೆ. ಯಾರಿಗೂ ರಕ್ಷಣೆ ಮಾಡುವುದಿಲ್ಲ, ಮತ್ತೆ ಇಂತಹ ಘಟನೆ ಆಗದಂತೆ ಕ್ರಮ ವಹಿಸುತ್ತೇವೆ. ಪೋಷಕರು ಮುಚ್ಚಿಟ್ಟಿರುವ ಬಾಲ್ಯ ವಿವಾಹದ ಬಗ್ಗೆ ತನಿಖೆ ಮಾಡಲಾಗುತ್ತದೆ. ಇಂತಹ ಘಟನೆಗಳನ್ನು ತಡೆಗಟ್ಟಲು ಅಗತ್ಯ ಕ್ರಮ ವಹಿಸುತ್ತೇವೆ. ನೋಡಲ್ ಅಧಿಕಾರಿಗಳ ನೇಮಕ ಮಾಡಿ ಹಾಸ್ಟೆಲ್ನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.
ನಾಲ್ವರ ವಿರುದ್ಧ ಪ್ರಕರಣ ದಾಖಲು..
ಇದೇ ಕೇಸ್ಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಸತಿ ನಿಲಯದ ವಾರ್ಡನ್ ಗೀತಾ, ಸ್ಟಾಪ್ ನರ್ಸ್ ಕಾವೇರಮ್ಮ, ಪ್ರಾಂಶುಪಾಲರಾದ ಬಸ್ಸಮ್ಮ ಪಾಟೀಲ್ ವಿರುದ್ಧ ಕೇಸ್ ದಾಖಲಾಗಿದೆ. ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯತನ ಆರೋಪದಡಿ ನಾಲ್ವರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಅದೇ ರೀತಿ ಸಂಬಂಧಪಟ್ಟ ಇಲಾಖೆಗೆ ಸಿಬ್ಬಂದಿ ವರ್ಗ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದೆ. ಕಾರಣ ಏನೆಂದರೆ ಹೆರಿಗೆಯಾಗಿರುವ ವಿಷಯ ಯಾರಿಗೂ ಹೇಳಬೇಡಿ ಎಂದು ಹಾಸ್ಟೆಲ್ ಸಿಬ್ಬಂದಿ ವರ್ಗದವರಿಗೆ ತಿಳಿಸಿದ್ದನಂತೆ. ಹೀಗಾಗಿ ವಿದ್ಯಾರ್ಥಿನಿ ಸಹೋದರನ ವಿರುದ್ಧ ಕೂಡ ಕೇಸ್ ದಾಖಲಾಗಿದೆ. ಹಾಸ್ಟೆಲ್ ವಾರ್ಡನ್ ಗೀತಾ, ಪ್ರಾಂಶುಪಾಲರಾದ ಬಸಮ್ಮ ಪಾಟೀಲ್, ತರಗತಿ ಶಿಕ್ಷಕ ನರಸಿಂಹ ಮೂರ್ತಿ ಹಾಗೂ ದೈಹಿಕ ಶಿಕ್ಷಕ ಶ್ರೀಧರ್ ಅವರನ್ನ ಅಮಾನತು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ