/newsfirstlive-kannada/media/post_attachments/wp-content/uploads/2025/05/Operation-Sindoor23.jpg)
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7ರ ರಾತ್ರಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ಮಾಡಿತ್ತು. ಆಪರೇಷನ್ ಸಿಂಧೂರ ಮೂಲಕ ಪಾಕ್ ಮೇಲೆ ದಾಳಿ ಮಾಡಿದ್ದ ವೇಳೆ ಐವರು ಪ್ರಮುಖ ಭಯೋತ್ಪಾದಕ ನಾಯಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದೀಗ ಸಾವನ್ನಪ್ಪಿರುವ ಉಗ್ರರ ಹಿನ್ನೆಲೆ ಬಗ್ಗೆ ಮಾಹಿತಿ ಇಲ್ಲಿದೆ.
1. ಮುದಸ್ಸರ್ ಖಾಡಿಯನ್ ಖಾಸ್ @ ಮುದಸ್ಸರ್
ಭಾರತದ ಆಪರೇಷನ್ ಸಿಂಧೂರ್ ದಾಳಿಗೆ ಪಾಕ್ನ ಪ್ರಮುಖ ಭಯೋತ್ಪಾದಕ ಮುದಸ್ಸರ್ ಖಾಡಿಯನ್ ಹತನಾಗಿದ್ದಾನೆ. ಈತ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರಗಾಮಿಯಾಗಿದ್ದು, ಈತನ ಅಂತ್ಯಕ್ರಿಯೆಗೆ ಪಾಕ್ ಸೇನೆ ಗೌರವ ನಮನ ಸಲ್ಲಿಸಿದೆ. ಅಲ್ಲದೇ ಸರ್ಕಾರಿ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕೂ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಪಾಕ್ ಸೇನಾ ಮುಖ್ಯಸ್ಥ ಮತ್ತು ಪಾಕಿಸ್ತಾನದ ಪಂಜಾಬ್ ಸಿಎಂ ಮರ್ಯಂ ನವಾಜ್ ಪರವಾಗಿ ಸೇನಾಧಿಕಾರಿ ಮಾಲಾರ್ಪಣೆ ಮಾಡಿದ್ರು. ಇನ್ನು, ಮುದಸ್ಸರ್ ಖಾಡಿಯನ್ ಖಾಸ್ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಪಾಕ್ ಸೇನೆಯ ಲೆಫ್ಟಿನೆಂಟ್ ಜನರಲ್ ಮತ್ತು ಪಾಕಿಸ್ತಾನದ ಪಂಜಾಬ್ ಪೊಲೀಸ್ ಐಜಿ ಭಾಗಿಯಾಗಿದ್ದರು.
2. ಹಫೀಜ್ ಮುಹಮ್ಮದ್ ಜಮೀಲ್
ಭಾರತದ ಅಟ್ಟಹಾಸಕ್ಕೆ ಪಾಕ್ನ ಮತ್ತೊಬ್ಬ ಭಯೋತ್ಪಾದಕ ಹಫೀಜ್ ಮುಹಮ್ಮದ್ ಜಮೀಲ್ ಬಲಿಯಾಗಿದ್ದಾನೆ. ಈತ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಯಾಗಿದ್ದು, ಮೌಲಾನಾ ಮಸೂದ್ ಅಜರ್ ಅವರ ಹಿರಿಯ ಸೋದರ ಮಾವನಾಗಿದ್ದಾನೆ. ಹಫೀಜ್ ಮುಹಮ್ಮದ್ ಜಮೀಲ್ ಯುವಕರ ಆಮೂಲಾಗ್ರ ಬೋಧನೆ ಮತ್ತು ಜೆಇಎಂಗೆ ನಿಧಿಸಂಗ್ರಹಣೆಯಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಭಯೋತ್ಪಾದಕನಾಗಿದ್ದಾನೆ.
ಇದನ್ನೂ ಓದಿ: ತಂದೆ, ತಾಯಿಗೆ ಒಬ್ಬನೇ ಒಬ್ಬ ಮಗ.. ವಾಯುನೆಲೆಯಲ್ಲಿ ಹುತಾತ್ಮನಾದ ಸುರೇಂದ್ರ ಕುಮಾರ್
3. ಮೊಹಮ್ಮದ್ ಯೂಸುಫ್ ಅಜರ್ @ ಉಸ್ತಾದ್ ಜಿ
ಭಾರತೀಯ ಸೇನೆ ದಾಳಿಗೆ ಬಲಿಯಾದ ಮತ್ತೊಬ್ಬ ಭಯೋತ್ಪಾದಕ ಮೊಹಮ್ಮದ್ ಯೂಸುಫ್ ಅಜರ್ ಜೈಶ್-ಎ-ಮೊಹಮ್ಮದ್ ಸಂಘಟನೆಯವನು ಆಗಿದ್ದಾನೆ. ಈತನೂ ಕೂಡ ಮೌಲಾನಾ ಮಸೂದ್ ಅಜರ್ ಅವರ ಸೋದರ ಮಾವನಾಗಿದ್ದಾನೆ. ಮೊಹಮ್ಮದ್ ಯೂಸುಫ್ ಅಜರ್ ಜೆಇಎಂಗೆ ನಿರ್ವಹಿಸಬಹುದಾದ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ. ಅಲ್ಲದೇ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ. ಅಲ್ಲದೇ ಐಸಿ-814 ವಿಮಾನ ಅಪಹರಣ ಪ್ರಕರಣದಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರಗಾಮಿಯಾಗಿದ್ದಾನೆ..
4. ಖಾಲಿದ್ @ ಅಬು ಆಕಾಶ
ಭಾರತೀಯ ಸೇನೆ ದಾಳಿಗೆ ಬಲಿಯಾದ ಮತ್ತೊಬ್ಬ ಭಯೋತ್ಪಾದಕ ಖಾಲಿದ್ @ ಅಬು ಆಕಾಶ, ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರಗಾಮಿಯಾಗಿದ್ದಾನೆ. ಈತನೂ ಕೂಡ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ. ಅಲ್ಲದೇ ಅಫ್ಘಾನಿಸ್ತಾನದಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ಕೂಡ ತೊಡಗಿದ್ದ. ಇನ್ನು, ಉಗ್ರಗಾಮಿ ಖಾಲಿದ್ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಹಿರಿಯ ಸೇನಾ ಅಧಿಕಾರಿಗಳು ಮತ್ತು ಫೈಸಲಾಬಾದ್‌ನ ಉಪ ಆಯುಕ್ತ ಭಾಗಿಯಾಗಿದ್ರು.
5. ಮೊಹಮ್ಮದ್ ಹಸನ್ ಖಾನ್
ಭಾರತೀಯ ಸೇನೆ ದಾಳಿಗೆ ಬಲಿಯಾದ ಮತ್ತೊಬ್ಬ ಭಯೋತ್ಪಾದಕ ಮೊಹಮ್ಮದ್ ಹಸನ್ ಖಾನ್, ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಯಾಗಿದ್ದಾನೆ. ಈತ ಪಿಒಕೆ ಜೆಇಎಂ ಕಾರ್ಯಾಚರಣೆಯ ಕಮಾಂಡರ್ ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿ ಅವರ ಮಗನಾಗಿದ್ದಾನೆ. ಅಲ್ಲದೇ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ