/newsfirstlive-kannada/media/post_attachments/wp-content/uploads/2025/03/Sunita-Williams-1.jpg)
9 ತಿಂಗಳು ಅಂತಾರಾಷ್ಟ್ರೀಯ ಬಾಹಾಕ್ಯಾಶ ನಿಲ್ದಾಣದಲ್ಲಿ ಸಿಲುಕಿದ್ದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸೇಫ್ ಆಗಿ ವಾಪಸ್ ಆಗಿದ್ದಾರೆ. ಸುನೀತಾ ವಿಲಿಯಮ್ಸ್ ಮರಳಿ ಭೂಮಿಗೆ ಬಂದಿದ್ದು ಭಾರತೀಯರಿಗೆ ನಿಜಕ್ಕೂ ರೋಮಾಂಚನವನ್ನೇ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕೋಟ್ಯಾನುಕೋಟಿ ಭಾರತೀಯರಿಗೆ ಒಂದು ಗುಡ್‌ನ್ಯೂಸ್ ಕೂಡ ಸಿಕ್ಕಿದೆ.
ಬಾಹ್ಯಾಕಾಶದಿಂದ ಮರಳಿರುವ ಸುನೀತಾ ವಿಲಿಯಮ್ಸ್ ಅವರು ಆದಷ್ಟು ಬೇಗನೇ ಅವರ ತಾಯಿ, ಕುಟುಂಬದ ಸದಸ್ಯರನ್ನು ಭೇಟಿಯಾಗುತ್ತಿದ್ದಾರೆ. ಪುನರ್ವಸತಿ ಕೇಂದ್ರದಲ್ಲಿ ಸುನೀತಾ ವಿಲಿಯಮ್ಸ್ ಅವರಿಗೆ ವಿವಿಧ ವೈದ್ಯಕೀಯ ಪರೀಕ್ಷೆ ನಡೆಸುತ್ತಿರುವ ನಾಸಾ ಸೆಲೆಬ್ರೇಟ್ ಮಾಡೋಕೆ ಇನ್ನೂ ಸಮಯ ಬೇಕು ಎಂದಿದೆ.
ಇಂದು ಸ್ಪೇಸ್ X ಕ್ರ್ಯೂ-9ನಲ್ಲಿ ಆಗಮಿಸಿರುವ ನಾಲ್ವರು ಗಗನಯಾತ್ರಿಗಳು ಮುಂದಿನ 45 ದಿನಗಳ ಕಾಲ ಪುನರ್ವಸತಿ ಕೇಂದ್ರದಲ್ಲಿ ಇರಲಿದ್ದಾರೆ. ನಾಸಾ ಈ ನಾಲ್ವರು ಗಗನಯಾತ್ರಿಗಳಿಗೆ ಗುಡ್‌ನ್ಯೂಸ್ ನೀಡಿದೆ. ರಿಹ್ಯಾಬ್ ಸೆಂಟರ್ನಲ್ಲೇ ನಾಲ್ವರು ಗಗನಯಾತ್ರಿಗಳಿಗೆ ತಮ್ಮ ಕುಟುಂಬಸ್ಥರನ್ನು ಭೇಟಿಯಾಗಲು ಅವಕಾಶ ನೀಡುತ್ತಿದೆ.
ಭಾರತದಲ್ಲಿ ಸಂಭ್ರಮವೋ ಸಂಭ್ರಮ!
ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರ ಕುಟುಂಬ ಗುಜರಾತ್‌ನ ಜೂಲಾಸನ್ ಮೂಲದವರು. ಸುನೀತಾ ಸೇಫ್ ಆಗಿ ಬರುತ್ತಿದ್ದಂತೆ ಗುಜರಾತ್‌ನ ಈ ಗ್ರಾಮದಲ್ಲಿ ಸಂಬಂಧಿಕರು, ಆಪ್ತರು ಕುಣಿದು ಕುಪ್ಪಳಿಸಿದ್ದಾರೆ.
ಸುನೀತಾ ವಿಲಿಯಮ್ಸ್ ಸೇಫ್ ಆಗುತ್ತಿದ್ದಂತೆ ಸಂಬಂಧಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಫಲ್ಗುಣಿ ಪಾಂಡ್ಯ ಎಂಬುವವರು ರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಮಗೆ ತುಂಬಾ ಸಂತೋಷವಾಗಿದೆ. ಸುನೀತಾ ವಿಲಿಯಮ್ಸ್ ಪ್ರತಿ ಬಾರಿಯಂತೆ ಈ ಬಾರಿಯೂ ಭಾರತಕ್ಕೆ ಬರುತ್ತಾರೆ. ನಾವು ಅವರ ಜೊತೆ ಸಮೋಸಾ ಪಾರ್ಟಿ ಮಾಡಲು ಕಾಯುತ್ತಿದ್ದೇವೆ ಎಂದಿದ್ದಾರೆ.
ಸುನೀತಾ ಭಾರತಕ್ಕೆ ಬಂದೇ ಬರ್ತಾರೆ!
ಭಾರತ ಮೂಲದ ಸುನೀತಾ ವಿಲಿಯಮ್ಸ್ ತಮ್ಮ ಮೊದಲ ಬಾಹ್ಯಾಕಾಶ ಹಾರಾಟ ಮುಗಿಸಿದ ನಂತರ ಭಾರತಕ್ಕೆ ಭೇಟಿ ನೀಡಿದ್ದರು. 2007ರಲ್ಲಿ ಗುಜರಾತ್‌ನ ಸಬರಮತಿ ಆಶ್ರಮ ಮತ್ತು ಅವರ ಹುಟ್ಟೂರು ಜುಲಾಸನ್‌ಗೆ ಭೇಟಿ ನೀಡಿದ್ದರು. ಜುಲಾಸನ್‌ನಲ್ಲಿರುವ ಶಾಲೆಗೆ ದೇಣಿಗೆ ಕೂಡ ನೀಡಿದ್ದರು. ಆ ಸಮಯದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದರು.
ಇದನ್ನೂ ಓದಿ: ಉಸಿರು ಬಿಗಿ ಹಿಡಿದು ಕೂತಿದ್ದ ಸುನೀತಾ ವಿಲಿಯಮ್ಸ್.. ಹೇಗಿತ್ತು ಕೊನೆಯ ಆ ಕ್ಷಣ? ಟಾಪ್ 10 ಫೋಟೋ!
2013ರಲ್ಲಿ ತನ್ನ 2ನೇ ಬಾಹ್ಯಾಕಾಶ ಯಾನ ಪೂರ್ಣಗೊಂಡ ನಂತರ ಸುನೀತಾ ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡಿದರು. ಇದೀಗ ಸುನೀತಾ ವಿಲಿಯಮ್ಸ್ ಅವರು 3ನೇ ಬಾಹ್ಯಾಕಾಶ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಬಾರಿಯೂ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದ್ದು, ಭಾರತೀಯರು ಸುನೀತಾ ಸ್ವಾಗತವನ್ನೇ ಎದುರು ನೋಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸುನೀತಾ ಅವರು ನಮ್ಮ ಭಾರತ ಮಾತೆಯ ಹೆಮ್ಮೆಯ ಮಗಳು ಎನ್ನುತ್ತಾ ನಮ್ಮ ದೇಶಕ್ಕೆ ಬರಲು ಆಹ್ವಾನ ನೀಡಿದ್ದಾರೆ. ಇಸ್ರೋ ಕೂಡ ಸುನೀತಾ ವಿಲಿಯಮ್ಸ್ ಅವರಿಗೆ ಶುಭಾಶಯ ತಿಳಿಸಿದ್ದು, ನಿಮ್ಮಿಂದ ಕಲಿಯೋದು ಬಹಳಷ್ಟಿದೆ ಎಂದು ತಿಳಿಸಿದೆ. ಸದ್ಯ ಪುನರ್ವಸತಿ ಕೇಂದ್ರದಲ್ಲಿ ಸುಮಾರು 45 ದಿನಗಳು ಕಾಲ ಕಳೆಯುವ ಸುನೀತಾ ಅವರು ತಮ್ಮ ಮುಂದಿನ ದಿನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ