/newsfirstlive-kannada/media/post_attachments/wp-content/uploads/2024/09/SUNITA-1.png)
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿರುವ ಸಿಲುಕಿರುವ ಬಾಹ್ಯಾಕಾಶ ಯಾತ್ರಿಗಳಾದ ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಭೂಮಿಗೆ ಮರಳುವುದು ಮತ್ತಷ್ಟು ವಿಳಂಬವಾಗಲಿದೆ. ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಫೆಬ್ರವರಿಯಲ್ಲಿ ಹಿಂತಿರುಗುವುದಿಲ್ಲ ಅಂತ ನಾಸಾ ತಿಳಿಸಿದೆ.
ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್) ಹಿಂದಿರುಗುವುದು ತಡವಾಗಲಿದೆ. ಅಲ್ಲಿ ಇಬ್ಬರು ಗಗನಯಾತ್ರಿಗಳು ಆರೋಗ್ಯವಾಗಿದ್ದಾರೆ ಅಂತ ನಾಸಾ ಮಾಹಿತಿ ನೀಡಿದೆ.
ಬೋಯಿಂಗ್ ಸಂಸ್ಥೆಯ ಸ್ಟಾರ್ಲೈನರ್ ಗಗನನೌಕೆಯಲ್ಲಿ ಸುನಿತಾ, ಬುಚ್ ಇಬ್ಬರೂ ಜೂನ್ 5ರಂದು ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದರು. ಅನಂತರ ಗಗನನೌಕೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಭೂಮಿಗೆ ಮರಳಲು ಸಾಧ್ಯವಾಗದೇ ಅಲ್ಲಿಯೇ ಸಿಲುಕಿದ್ದಾರೆ.
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಇಬ್ಬರೂ ಜೂನ್ 5ರಂದು ಬಾಹ್ಯಾಕಾಶಕ್ಕೆ 7 ರಿಂದ 10 ದಿನಗಳ ಕಾರ್ಯಾಚರಣೆಗಾಗಿ ತೆರಳಿದ್ದರು. ಆದರೆ ನೌಕೆ ಬೋಯಿಂಗ್ ಸ್ಟಾರ್ಲೈನರ್ನಲ್ಲಿ ಸುರಕ್ಷತಾ ದೋಷಗಳಿಂದಾಗಿ ಅವರ ಆಗಮನವನ್ನು ಫೆಬ್ರವರಿಗೆ ವಿಸ್ತರಿಸಲಾಗಿತ್ತು. ಇದೀಗ ನಾಸಾ ಮತ್ತೆ ಹೊಸ ದಿನಾಂಕ ಘೋಷಿಸಿದ್ದು ಮಾರ್ಚ್ ಅಥವಾ ಏಪ್ರಿಲ್ ಆರಂಭದಲ್ಲಿ ಹಿಂತಿರುಗುತ್ತಾರೆ ಅಂತ ಹೇಳಿದೆ.
ಇದನ್ನೂ ಓದಿ: ಬಾಹ್ಯಾಕಾಶ ನಿಲ್ದಾಣದಲ್ಲೇ ಕ್ರಿಸ್ಮಸ್ ಸಂಭ್ರಮ.. ಸುನೀತಾ ವಿಲಿಯಮ್ಸ್ ಮಾಡಿದ್ದೇನು?
ಇಬ್ಬರು ಗಗನಯಾನಿಗಳನ್ನು ಹೊತ್ತ ನೌಕೆಯೊಂದನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳಿಸಿ, ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿದ ನಂತರ ಸುನಿತಾ & ಬುಚ್ ವಿಲ್ಮೋರ್ರನ್ನು ವಾಪಸ್ ಕರೆತರುವ ಯೋಚನೆ ನಾಸಾ ಮಾಡಿತ್ತು. ಆದರೆ ಈಗ ಹೊಸ ಗಗನನೌಕೆಯ ಉಡ್ಡಯನ ವಿಳಂಬವಾಗುವ ಸಂಕೇತ ಸಿಕ್ಕಿದೆ. ಹೊಸ ಬಾಹ್ಯಾಕಾಶ ನೌಕೆ ತಯಾರಿಸಿ, ಪರೀಕ್ಷಿಸಲು ಹೆಚ್ಚಿನ ಸಮಯ ಬೇಕು. ಹೀಗಾಗಿ ಈ ಇಬ್ಬರೂ ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್ ವೇಳೆಗೆ ಭೂಮಿಗೆ ಮರಳಲಿದ್ದಾರೆ.
ನಾಸಾದ ಸ್ಪೇಸ್ ಎಕ್ಸ್ ನೌಕೆ-10, ಮಾರ್ಚ್ 2025ರ ಕೊನೆಯಲ್ಲಿ ನಾಲ್ವರು ಸಿಬ್ಬಂದಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಳಿಸಲಿದೆ ಅಂತ ನಾಸಾ ಹೇಳಿದೆ.
ಗಗನಯಾತ್ರೆಯಲ್ಲಿ ಅಪಾರ ಅನುಭವ ಹೊಂದಿರುವ ಸುನಿತಾ, ಈ ಬಾಹ್ಯಾಕಾಶ ಯಾತ್ರೆಯು ಅವರ ಮೂರನೇ ಹಾರಾಟವಾಗಿದೆ. ಈ ಬಾರಿ ಅವರು ಬಾಹ್ಯಾಕಾಶದಲ್ಲಿ 517 ದಿನಗಳನ್ನು ಕಳೆದಿದ್ದಾರೆ. ಒಂದು ಹಂತದಲ್ಲಿ ಬಾಹ್ಯಾಕಾಶ ನಡಿಗೆಯಲ್ಲಿ ಅತಿ ಸಮಯ ಕಳೆದ ದಾಖಲೆ ಸುನಿತಾ ವಿಲಿಯಮ್ಸ್ ಹೆಸರಿಗಿದೆ.
ಸುನಿತಾ ವಿಲಿಯಮ್ಸ್ ತೂಕ ಕಳೆದುಕೊಂಡಿದ್ದಾರೆ, ಅನಾರೋಗ್ಯವಾಗಿದ್ದಾರೆ ಎಂಬ ವದಂತಿಯನ್ನು ನಾಸಾ ತಳ್ಳಿ ಹಾಕಿದೆ. ಸಿಬ್ಬಂದಿಗೆ ಒದಗಿಸಲಾದ ಉಪಕರಣ ಬಳಸಿಕೊಂಡು ಬಾಹ್ಯಾಕಾಶ ನಿಲ್ದಾಣದಲ್ಲಿ ತೂಕ ಕಾಪಾಡಿಕೊಳ್ಳುವ ಟ್ರೇನಿಂಗ್ ಮಾಡ್ತಿದ್ದೇವೆ ಅಂತ ಸುನಿತಾ ಹೇಳಿದ್ದಾರೆ.
ಅಲ್ಲದೇ ಬಾಹ್ಯಾಕಾಶ ನಿಲ್ಧಾಣಕ್ಕೆ ನವೆಂಬರ್ನಲ್ಲಿ ಎರಡು ಮರುಪೂರೈಕೆ ನೌಕೆಗಳನ್ನು ಕಳಿಸಲಾಗಿದೆ. ಅಲ್ಲಿ ಆಹಾರ, ನೀರು, ಬಟ್ಟೆ, ಅಮ್ಲಜನಕ ಸೇರಿ ಗಗನಯಾತ್ರಿಗಳಿಗೆ ಅಗತ್ಯವಿರುವ ಎಲ್ಲವೂ ಇದೆ ಅಂತ ನಾಸಾ ಹೇಳಿದೆ.
ಗಗನಯಾತ್ರಿಗಳ ಮೇಲೆ ಸೈಡ್ ಎಫೆಕ್ಟ್
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಶೂನ್ಯ ಗುರುತ್ವಾಕರ್ಷಣೆ ಇದೆ. ಇದು ಗಗನಯಾತ್ರಿಗಳ ಮೇಲೆ ಹಲವು ಪರಿಣಾಮ ಉಂಟು ಮಾಡುತ್ತದೆ ಅಂತಾರೆ ತಜ್ಞರು. ಮಾನವ ದೇಹವು ಭೂಮಿಯ ಗುರುತ್ವಾಕರ್ಷಣೆಗೆ ತಕ್ಕಂತೆ ನಿರ್ಮಿತವಾಗಿದೆ. ಬಾಹ್ಯಾಕಾಶದಲ್ಲಿ ಮಾನವನ ದೇಹದ ಮೂಳೆ ತನ್ನ ಸಾಂದ್ರತೆ ಕಳೆದುಕೊಳ್ಳುತ್ತದೆ. ದೇಹವು ತೂಕ ಕಳೆದುಕೊಳ್ಳುತ್ತದೆ. ಹೃದಯ, ಯಕೃತ್ತು, ಕಣ್ಣುಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಗಗನಯಾತ್ರಿಗಳು ಭೂಮಿಗೆ ಮರಳಿದ ನಂತರ ಇವೆಲ್ಲವೂ ಸಹಜ ಸ್ಥಿತಿಗೆ ಬರುತ್ತವೆ ಅಂತಾರೆ ತಜ್ಞರು
- ವಿಶ್ವನಾಥ್ ಜಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ