/newsfirstlive-kannada/media/post_attachments/wp-content/uploads/2025/03/sunita-williams.jpg)
9 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಸುನಿತಾ ವಿಲಿಯಮ್ಸ್ ಕೊನೆಗೂ ವಾಪಸ್ ಬರುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ನಾಳೆ ಬೆಳಗ್ಗೆ 3.30ರ ಸುಮಾರಿಗೆ ಫ್ಲೊರಿಡಾದ ಕರಾವಳಿಗೆ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಬಂದಿಳಿಯಲಿದ್ದಾರೆ. ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಆಗಮನಕ್ಕೆ ಕೋಟ್ಯಾಂತರ ಜನ ಎದುರು ನೋಡುತ್ತಿದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ ನಾಳೆ ಬೆಳಗಿನ ಜಾವ ಸುನಿತಾ ವಿಲಿಯಮ್ಸ್ ಹೊತ್ತು ಬರುತ್ತಿರುವ SpaceXನ ಕ್ರೂ ಡ್ರ್ಯಾಗನ್ ನೌಕೆ ಫ್ಲೊರಿಡಾದಲ್ಲಿ ಲ್ಯಾಂಡ್ ಆಗುತ್ತಿದೆ. ಒಟ್ಟು 4 ಹಂತದಲ್ಲಿ ಡ್ರ್ಯಾಗನ್ ನೌಕೆಯು ISSನಿಂದ ಬೇರ್ಪಟ್ಟು ಭೂಮಿಯತ್ತ ಪ್ರಯಾಣಿಸುತ್ತದೆ.
ಲ್ಯಾಂಡ್ ಆದ ಮೇಲೆ ಮುಂದೇನು?
ಹೀಗೆ ವಾಪಸ್ ಬರುವ ಗಗನಯಾತ್ರಿಗಳಿಗೆ ನಾಳೆಯಿಂದಲೇ ಅಗ್ನಿಪರೀಕ್ಷೆ ಎದುರಾಗುತ್ತದೆ. ಸಾಮಾನ್ಯವಾಗಿ ಬಾಹ್ಯಾಕಾಶದಿಂದ ಬರುವ ಗಗನಯಾತ್ರಿಗಳಿಗೆ 45 ದಿನಗಳ ರಿಕವರಿ ಪ್ರೋಗ್ರಾಂ ಇರುತ್ತದೆ. ನಾಳೆಯಿಂದ 45 ದಿನಗಳ ಪುನರ್ವಸತಿ (Rehabilitation) ಕಾರ್ಯಕ್ರಮಕ್ಕೆ ನಾಸಾ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ನೌಕಾಪಡೆಯ ಸಿಬ್ಬಂದಿ, ನಾಸಾ ವಿಜ್ಞಾನಿಗಳು, ವೈದ್ಯರು ಸೇರಿ 500ಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗಿಯಾಗುತ್ತಿದ್ದಾರೆ.
ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು ಸಂಪೂರ್ಣವಾಗಿ ತಮ್ಮ ಕಾಲಿನ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಭೂಮಿ ಮೇಲೆ ಬಂದ ಮೇಲೆ ಅವರಿಗೆ ನಿಲ್ಲೋದಕ್ಕೂ ಸಾಧ್ಯವಿಲ್ಲ. ಬಾಹ್ಯಾಕಾಶದಲ್ಲಿ ಇದ್ರೆ ದೇಹದ ಮೂಳೆ ಕೂಡ ಸವೆಯುವುದು, ಕ್ಯಾನ್ಸರ್ ಕಾರಕ ಅಂಶಗಳು ಅವರ ದೇಹದಲ್ಲಿ ಸೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ 45 ದಿನಗಳ ಪುನರ್ವಸತಿ ಶಿಬಿರದಲ್ಲಿ ದೈಹಿಕವಾಗಿ ಆಗಿರುವ ಬದಲಾವಣೆಗಳಿಂದ ಚೇತರಿಸಿಕೊಳ್ಳಲು ನೆರವು ನೀಡಲಾಗುತ್ತದೆ.
ಇದನ್ನೂ ಓದಿ: ಬಾಹ್ಯಾಕಾಶದಿಂದ ನೌಕೆ ಎಷ್ಟು ಹಂತದಲ್ಲಿ ಭೂಮಿಗೆ ಪ್ರವೇಶ.. ಲ್ಯಾಂಡಿಂಗ್ ಪ್ರಕ್ರಿಯೆ ಹೇಗಿರುತ್ತೆ..?
ಸುನಿತಾ ವಿಲಿಯಮ್ಸ್ ಚೇತರಿಕೆಗೆ ಎಷ್ಟು ದಿನ?
ಸುನಿತಾ ವಿಲಿಯಮ್ಸ್ ಅವರು ಕೇವಲ 8 ದಿನಕ್ಕೆಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದರು. ಕೇವಲ 8 ದಿನಗಳ ಅಧ್ಯಯನಕ್ಕೆ ಹೋಗಿದ್ದವರು 9 ತಿಂಗಳಾದ ಬಳಿಕ ವಾಪಸ್ ಬರುತ್ತಿದ್ದಾರೆ.
9 ತಿಂಗಳಿಗೆ ಪೂರ್ವ ತಯಾರಿ ಇಲ್ಲದೆಯೇ ಹೋಗಿದ್ದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್‌ಗೆ ಸಂಪೂರ್ಣವಾಗಿ ಚೇತರಿಕೆ ಆಗಲು 45 ದಿನಗಳು ಸಾಕಾಗಲ್ಲ. 9 ತಿಂಗಳು ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆಯೇ ಇರೋದಿಲ್ಲ. ಸದ್ಯ ಪುನರ್ವಸತಿಗೆ 45 ದಿನಗಳ ಕಾರ್ಯಕ್ರಮವಿದ್ರೂ ಇನ್ನೂ ಹೆಚ್ಚಿನ ಸಮಯ ಬೇಕು. ಸುನಿತಾ ವಿಲಿಯಮ್ಸ್ ಪುನರ್ವಸತಿಯ ಅವಧಿ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ