/newsfirstlive-kannada/media/post_attachments/wp-content/uploads/2025/05/RCB-SRH-Match.jpg)
IPL ಜಿದ್ದಾಜಿದ್ದಿಯಲ್ಲಿ ಲಕ್ನೋದ ಏಕಾನಾ ಸ್ಟೇಡಿಯಂ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 42 ರನ್‌ಗಳಿಂದ ಗೆದ್ದು ಬೀಗಿದೆ. SRH ಬಿಗ್ ಟಾರ್ಗೆಟ್ ಬೆನ್ನು ಹತ್ತಿದ್ದ RCB ಮತ್ತೆ ಟೇಬಲ್ ಟಾಪರ್ ಆಗುವ ಅವಕಾಶವನ್ನು ಮಿಸ್ ಮಾಡಿಕೊಂಡಿದೆ.
ಟಾಸ್ ಗೆದ್ದ RCB ಇವತ್ತು ಬೌಲಿಂಗ್ ಆಯ್ಕೆ ಮಾಡಿಕೊಂಡು ಸನ್ ರೈಸರ್ಸ್ ಹೈದರಾಬಾದ್‌ಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಆರಂಭದಲ್ಲಿ RCB ಬೌಲರ್ಸ್ ಹೈದರಾಬಾದ್ ಆಟಗಾರರನ್ನ ಕಟ್ಟಿ ಹಾಕಲು ಸರ್ವ ಪ್ರಯತ್ನ ಮಾಡಿದರು. ಅಭಿಷೇಕ್ ಶರ್ಮಾ 34, ಟ್ರಾವಿಸ್ ಹೆಡ್ 17 ರನ್‌ಗಳಿಗೆ ಔಟ್ ಆದರು.
ಸನ್ ರೈಸರ್ಸ್ ಹೈದರಾಬಾದ್ ಸಂಕಷ್ಟದಲ್ಲಿದ್ದಾಗ ಇಶಾನ್ ಕಿಶನ್ ಅವರು ತಂಡಕ್ಕೆ ನೆರವಾದರು. ಇಶಾನ್ ಕಿಶನ್ ಅವರು ಭರ್ಜರಿ ಅರ್ಧ ಶತಕದೊಂದಿಗೆ 5 ಸಿಕ್ಸರ್, 7 ಬೌಂಡರಿಗಳನ್ನ ಸಿಡಿಸಿದರು. ಕೊನೇ ಓವರ್‌ವರೆಗೂ ಕ್ರೀಸ್‌ನಲ್ಲಿ ಉಳಿದ ಇಶಾನ್ ಕಿಶನ್ ಅವರು 94 ರನ್‌ಗಳ ಕಾಣಿಕೆ ನೀಡಿದರು.
ಇಶಾನ್ ಕಿಶನ್ ಅವರ ಅಮೋಘ ಬ್ಯಾಟಿಂಗ್‌ನಿಂದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್‌ಗಳಿಸಿತು. ಆರ್‌ಸಿಬಿಗೆ 232 ರನ್‌ಗಳ ಬೃಹತ್ ಟಾರ್ಗೆಟ್ ನೀಡಲಾಗಿತ್ತು.
ಇದನ್ನೂ ಓದಿ: ಯಾರು ಯಾವಾಗ ಬೇಕಾದರೂ ಕೈ ಎತ್ತಬಹುದು.. ರೋಹಿತ್, ಕೊಹ್ಲಿ ನಿವೃತ್ತಿ ಬಗ್ಗೆ ಕೋಚ್ ಗಂಭೀರ್ ಮಾತು
223 ರನ್‌ಗಳ ಟಾರ್ಗೆಟ್ ಬೆನ್ನತ್ತಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್‌ಗೆ ವಿರಾಟ್ ಕೊಹ್ಲಿ ಭರ್ಜರಿ ಓಪನಿಂಗ್ ನೀಡಿದರು. 7 ಬೌಂಡರಿ 1 ಸಿಕ್ಸರ್ ಸಿಡಿಸಿದ ವಿರಾಟ್ ಕೊಹ್ಲಿ ಅಭಿಮಾನಿಗಳನ್ನ ರಂಜಿಸಿದರು. 43 ರನ್‌ಗಳಿಗೆ ಕೊಹ್ಲಿ ಔಟ್ ಆಗುತ್ತಿದ್ದಂತೆ ಫಿಲ್ ಸಾಲ್ಟ್ ಅವರು RCBಗೆ ಆಸರೆಯಾದರು.
5 ಸಿಕ್ಸರ್ 4 ಬೌಂಡರಿಯನ್ನು ಸಿಡಿಸಿದ ಫಿಲ್ ಸಾಲ್ಟ್ ಭರ್ಜರಿ ಅರ್ಧಶತಕವನ್ನು ಪೂರೈಸಿದರು. ಇದಾದ ಮೇಲೆ ಮಯಾಂಕ್ ಅಗರ್ವಾಲ್ ಅವರು 11, ರಜತ್ ಪಾಟೀದಾರ್ 18 ರನ್‌ಗಳಿಗೆ ಔಟ್ ಆದರು. ರೋಮರಿಯೋ ಶೆಪರ್ಡ್ ಅವರು ಶೂನ್ಯ ಹಾಗೂ RCB ನಾಯಕ ಜಿತೇಶ್ ಶರ್ಮಾ ಅವರು ಕೂಡ 24 ರನ್‌ಗೆ ತನ್ನ ವಿಕೆಟ್ ಒಪ್ಪಿಸಿದರು.
ಇಂದಿನ ಪಂದ್ಯದಲ್ಲಿ ರಜತ್ ಪಾಟೀದಾರ್ ಬದಲಿಗೆ ಜಿತೇಶ್ ಶರ್ಮಾ ಅವರಿಗೆ ಮೊದಲ ಬಾರಿ RCB ನಾಯಕನ ಪಟ್ಟ ಕಟ್ಟಿತ್ತು. ಟಾಸ್ ಗೆದ್ದ ಜಿತೇಶ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡುವ ಬದಲು ಬೌಲಿಂಗ್‌ಗೆ ಹೋಗಿದ್ದು, RCB ತಂಡದ ಗೆಲುವಿಗೆ ದುಬಾರಿ ಆಗಿದೆ.
ಸನ್‌ರೈಸರ್ಸ್ ಹೈದರಾಬಾದ್ ಪರ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಬ್ಯಾಟಿಂಗ್ ಹಾಗೂ ಗಾಯದ ಸಮಸ್ಯೆ ದೊಡ್ಡ ಸವಾಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ