/newsfirstlive-kannada/media/post_attachments/wp-content/uploads/2024/06/Suraj-Revanna-Arrest-Case-1.jpg)
ಎಮ್ಎಲ್ಸಿ ಸೂರಜ್ ರೇವಣ್ಣಗೆ ಅವರ ಆಪ್ತನೇ ಶಾಕ್ ಕೊಟ್ಟಿದ್ದಾನೆ. ಮೊನ್ನೆವರೆಗೂ ಆಪ್ತನಾಗಿ ಸೂರಜ್ ಪರವಾಗಿ ಸಂತ್ರಸ್ತನ ವಿರುದ್ಧ ದೂರು ನೀಡಿದ್ದವನೇ ಇದೀಗ ತಾನೇ ಸಂತ್ರಸ್ತನಾಗಿ ಬದಲಾಗಿದ್ದಾನೆ. ಸೂರಜ್ ವಿರುದ್ಧ ಉಲ್ಟಾ ಹೊಡೆದು ತನ್ನ ಮೇಲೂ ಅಸಹಜ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು ಅಂತ ದೂರು ನೀಡಿದ್ದಾನೆ.
ಮಾಜಿ ಸಚಿವ ಹೆಚ್ಡಿ ರೇವಣ್ಣ ಕುಟುಂಬದ ಟೈಮೇ ಸರಿ ಇಲ್ಲದಂತಾಗಿದೆ. ಮೊದಲು ಕಿರಿಯ ಮಗ ಪೆನ್ಡ್ರೈವ್ ಕೇಸ್ನಲ್ಲಿ ಜೈಲು ಸೇರಿದ್ರೆ ಈಗ ಹಿರಿಯ ಮಗ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜುಲೈ 1ರವರೆಗೆ ಸಿಐಡಿ ಕಸ್ಟಡಿಯಲ್ಲಿದ್ದಾರೆ. ಈಗಾಗಲೇ ಸಂತ್ರಸ್ತ್ರ ಆರೋಪಿ ಸೂರಜ್ ವಿರುದ್ಧ ದೂರು ದಾಖಲಿಸಿರುವಾಗಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಸೂರಜ್ ಮೇಲಿನ ಕೇಸ್ ಈಗ ಡಬಲ್ ಸ್ಟ್ರಾಂಗ್ ಆದಂತಾಗಿದೆ.
ಕೋವಿಡ್ ವೇಳೆ ದೌರ್ಜನ್ಯವೆಸಗಿದ್ದಾರೆಂದು ಮತ್ತೊಂದು ದೂರು
ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ದಳದ ಕಾರ್ಯಕರ್ತರೇ ಕಂಟಕವಾಗಿದ್ದಾರೆ. ಸಂತ್ರಸ್ತನ ಬೆನ್ನಲ್ಲೇ ಮತ್ತೊಬ್ಬ ಸಂತ್ರಸ್ತ ಸೂರಜ್ ವಿರುದ್ಧ ಮತ್ತದೇ ಅಸಹಜ ಲೈಂಗಿಕ ದೌರ್ಜನ್ಯ ದೂರು ನೀಡಿದ್ದಾರೆ. ಇಲ್ಲಿ ಅಚ್ಚರಿ ಏನಂದ್ರೆ ಮೊನ್ನೆಯಷ್ಟೇ ಸೂರಜ್ ವಿರುದ್ಧ ಆರೋಪ ಮಾಡಿದ್ದ ಮೊದಲ ಕೇಸ್ನ ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಆಪ್ತ ಶಿವಕುಮಾರ್ ಈಗ ಉಲ್ಟಾ ಹೊಡೆದು ಸೂರಜ್ ವಿರುದ್ಧ ದೂರು ನೀಡಿದ್ದಾರೆ.
‘ಕೊರೊನಾ ಸಮಯದಲ್ಲಿ ನನ್ನ ಮೇಲೆ ಸಲಿಂಗ ಕಾಮ ದೌರ್ಜನ್ಯ’!
ಮೂರು ವರ್ಷಗಳ ಹಿಂದೆ ಕೊರೊನಾ ಸಮಯದಲ್ಲಿ ತನ್ನ ಮೇಲೆ ಕೂಡ ಅಸಜಹ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸೂರಜ್ ಆಪ್ತ ಶಿವಕುಮಾರ್ ದೂರು ನೀಡಿದ್ದಾರೆ. ಅಲ್ಲದೇ ಅರಕಲಗೂಡು ಮೂಲದ ಮೊದಲ ಪ್ರಕರಣದ ಸಂತ್ರಸ್ತನ ವಿರುದ್ಧ ದೂರು ನೀಡಲು ಸೂರಜ್ ಒತ್ತಡ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ಸೂರಜ್ ಮತ್ತೊಂದು ಕಂಟಕ ಎದುರಾಗಿದೆ. ಈ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಸೂರಜ್ ವಿರುದ್ಧ ಐಪಿಸಿ ಸೆಕ್ಷನ್ 377, 342, 506 ಅಡಿ ಎಫ್ಐಆರ್ ದಾಖಲಾಗಿದೆ. ಈ ಮೂಲಕ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಸೂರಜ್ ವಿರುದ್ಧ 2ನೇ ಕೇಸ್ ದಾಖಲಾದಂತಾಗಿದೆ.
‘ಬೆದರಿಸಿ ದೂರು ಕೊಡಿಸಿದ್ರು’
ದೌರ್ಜನ್ಯ ಮಾಡಿ ನನ್ನನ್ನು ಎದುರಿಸಿ ಸಂತ್ರಸ್ತನ ಮೇಲೆ ದೂರು ಕೊಡಿಸಿದರು. ಸೂರಜ್ ರೇವಣ್ಣ ಮತ್ತು ಅವರ ಸಹಚರರ ಮೇಲೆ ನಾನೇ ದೂರು ಕೊಟ್ಟಿದ್ದೇನೆ. ಸೂರಜ್ ಅವರ ಸಚಿನ್ ಮತ್ತು ರಕ್ಷಿತ್ ಮೇಲೆ ಕಂಪ್ಲೇಟ್ ಕೊಡಲಾಗಿದೆ. 4 ವರ್ಷದ ಹಿಂದೆ ನನ್ನ ಮೇಲೆ ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಮಾಡಿದ್ದರು. ಈಗ ಬೆದರಿಸಿ ಆ ಸಂತ್ರಸ್ತನ ಮೇಲೆ ದೂರು ಕೊಡುವಂತೆ ನನಗೆ ಮಾಡಿದ್ದರು. ನಾನು ಜೆಡಿಎಸ್ ಕಾರ್ಯಕರ್ತ. ಸೂರಜ್ ರೇವಣ್ಣ ನನಗೆ 7 ವರ್ಷದಿಂದ ಪರಿಚಯ. ನನಗೆ ಆದ ಅನ್ಯಾಯದ ಬಗ್ಗೆ ಕೇಳುತ್ತಿದ್ದೇನೆ.
ಶಿವಕುಮಾರ್, ಸಂತ್ರಸ್ತ
ಮಕ್ಕಳಿಗೆ ಊಟ, ಬಟ್ಟೆ ನೀಡಲು ಸಿಐಡಿ ಕಚೇರಿಗೆ ರೇವಣ್ಣ ಭೇಟಿ
ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ತನ್ನಿಬ್ಬರು ಮಕ್ಕಳಾದ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಸಿಐಡಿ ಕಚೇರಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಹೀಗಾಗಿ ನಿನ್ನೆ ಸಿಐಡಿ ಕಚೇರಿಗೆ ತೆರಳಿದ್ದ ತಂದೆ ಹೆಚ್.ಡಿ.ರೇವಣ್ಣ ಮಕ್ಕಳಿಗೆ ಊಟ, ಬಟ್ಟೆ ಕೊಟ್ಟು ಬಂದಿದ್ದಾರೆ. ಆಪ್ತ ಸಹಾಯಕರ ಕೈಯಲ್ಲಿ ಎರಡು ಬ್ಯಾಗ್ನಲ್ಲಿ ಊಟ ಹಾಗೂ ಬಟ್ಟೆಯನ್ನು ಸಿಐಡಿ ಸಿಬ್ಬಂದಿಗೆ ಕೊಟ್ಟು ತೆರಳಿದ್ದಾರೆ.
ಇದನ್ನೂ ಓದಿ:ದರ್ಶನ್ ಬಳಿ 2 US ಮೇಡ್ ಗನ್.. ಜೈಲಿನಲ್ಲಿ ಇದ್ರೂ ನಟನಿಗೆ ಮತ್ತೊಂದು ಸಂಕಷ್ಟ..!
ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲೇ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಜೈಲು ಪಾಲಾಗಿದ್ದಾರೆ. ಈ ಪೈಕಿ ಮೊನ್ನೆಯಷ್ಟೇ ಸೂರಜ್ ಆಪ್ತ ಶಿವಕುಮಾರ್ ಮೊದಲ ಸಂತ್ರಸ್ತನ ವಿರುದ್ಧ ದೂರು ಕೊಟ್ಟಿದ್ದರು. ಈಗ ಅದೇ ಶಿವಕುಮಾರ್ ಆಪ್ತನ ಸ್ಥಾನದಿಂದ ಎರಡನೇ ಸಂತ್ರಸ್ತನಾಗಿ ಸೂರಜ್ ವಿರುದ್ಧ ಅದೇ ಅಸಹಜ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಇದು ಸೂರಜ್ ಪಾಲಿಗೆ ಡಬಲ್ ಸಂಕಷ್ಟ ತಂದೊಡ್ಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ