/newsfirstlive-kannada/media/post_attachments/wp-content/uploads/2024/12/captagon-1.jpg)
ಸಿರಿಯಾ, ಈ ದೇಶದಲ್ಲಿ ಹುಲುಸಾಗಿ ಬೆಳೆದಿದ್ದು ಅಂದ್ರೆ ಅದು ಒಂದು ಭಯೋತ್ಪಾನೆ ಹಾಗೂ ಮತ್ತೊಂದು ಮಾದಕದ್ರವ್ಯಗಳು. ಅದರಲ್ಲೂ ಬಡವರ ಕೊಕೆನ್ ಎಂದು ಕರೆಸಿಕೊಳ್ಳುತ್ತಿದ್ದ ಕ್ಯಾಪ್ಟಾಗೊನ್ ಎಂಬ ಮಾದಕ ವಸ್ತು ಉತ್ಪಾದನೆಯಲ್ಲಿ ಸಿರಿಯಾದ ದೊಡ್ಡ ಹೆಸರು ಮಾಡಿತ್ತು. ಬಶರ್ ಅಲ್ ಅಸ್ಸಾದ್ ಆಡಳಿತ ಕಾಲಘಟ್ಟದಲ್ಲಿ ಸಿರಿಯಾಗೆ ಅತಿ ಹೆಚ್ಚು ಹಣ ಹರಿದು ಬರುತ್ತಿದ್ದದ್ದು ಇದೇ ಬಡವರ ಕೊಕೇನ್ ಕ್ಯಾಪ್ಟಾಗೊನ್ದಿಂದ ಎಂದು ಇಸ್ರೇಲ್ನ ವಲ್ಲಾ ಎಂಬ ವೆಬ್ಸೈಟ್ ವರದಿ ಮಾಡಿದೆ.
ಈ ಒಂದು ಮಾದಕ ವಸ್ತುವಿನ ರಫ್ತಿನಿಂದಲೇ ಸಿರಿಯಾ ವರ್ಷಕ್ಕೆ 42 ಸಾವಿರ ಕೋಟಿ ರೂಪಾಯಿಗಳನ್ನು ಗಳಿಸುತ್ತಿತ್ತು ಎಂದು ಹೇಳಲಾಗಿದೆ. ಸಿರಿಯಾದಿಂದ ಅರಬ್ ದೇಶಗಳು ಸೇರಿ ಗಡಿ ಹಂಚಿಕೊಂಡಿದ್ದ ದೇಶಗಳಿಗೂ ಕೂಡ ಈ ಒಂದು ಕ್ಯಾಪ್ಟಾಗೊನ್ ಎಂಬ ಮಾದಕ ಮಾತ್ರೆ ರಫ್ತಾಗುತ್ತಿತ್ತು. ಇದರಿಂದ ವರ್ಷಕ್ಕೆ ಸುಮಾರು 42 ಸಾವಿರ ಕೋಟಿ ರೂಪಾಯಿಯಷ್ಟು ಹರಿದು ಬರುತ್ತಿತ್ತು. ಇದನ್ನು ಬಶರ್ ಅಲ್ ಅಸ್ಸಾದ್ ಕುಟುಂಬ, ಹಿಜ್ಬುಲ್ಲಾ ಸಂಘಟನೆ ಹಾಗೂ ಸೇನೆಗಳ ನಡುವೆ ಹಂಚಿಕೆ ಮಾಡಲಾಗುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಮುಖವಾಗಿ ಈ ಒಂದು ಸುದ್ದಿ ಆಚೆ ಬಂದಿದ್ದು ಹಮಾಸ್ ಉಗ್ರರು ಕಳೆದ ಅಕ್ಟೋಬರ್ನಲ್ಲಿ ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಭಯೋತ್ಪಾದಕರ ಬಳಿ ಈ ಒಂದು ಮಾತ್ರೆಗಳು ಸಿಕ್ಕಿದ್ದವು.
ಇದನ್ನೂ ಓದಿ:38 ಪ್ಲೇನ್..300 ಕಾರ್.. ಅದಾನಿ, ಅಂಬಾನಿಯಷ್ಟು ಶ್ರೀಮಂತನಲ್ಲದಿದ್ದರೂ ಐಷಾರಾಮಿ ಬದುಕಿನ ‘ರಾಜ’ ಈತ
ಸಿರಿಯಾದಿಂದ ಅಸ್ಸಾದ್ನ ಸಹೋದರ ಮಹೆರ್ ಅಲ್ ಅಸ್ಸಾದ್ನಿಂದ ಹಿಜ್ಬುಲ್ಲಾ ಹಾಗೂ ಹಮಾಸ್ ಉಗ್ರರಿಗೆ ಈ ಮಾದಕ ವಸ್ತುವನ್ನು ಪೂರೈಸಲಾಗುತ್ತಿತ್ತು ಎಂದು ಹೇಳಲಾಗಿದೆ. ಈ ಒಂದು ಮಾದಕದ್ರವ್ಯ ಕ್ಯಾಪ್ಟಾಗೊನ್ನನ್ನು ಸಿದ್ಧಪಡಿಸುತ್ತಿದ್ದದ್ದು ಕೂಡ ಬಶರ್ ಅಲ್ ಅಸ್ಸಾದ್ನ ಇದೇ ಸಹೋದರ ಮಹೇರ್ ಅಲ್ ಅಸ್ಸಾದ್. ಸದ್ಯ ಈಗ ಬಶಾರ್ ಅಲ್ ಅಸ್ಸಾದ್ ಹಾಗೂ ಆತನ ಕುಟುಂಬ ರಷ್ಯಾದ ಶರಣು ಬೇಡಿಕೊಂಡು ಓಡಿ ಹೋಗಿದೆ. ಈ ಹಿನ್ನೆಲೆಯಲ್ಲಿ ಸಿರಿಯಾದಲ್ಲಿ ನಡೆಯುತ್ತಿದ್ದ ಈ ಮಾದಕ ದ್ರವ್ಯದ ಉತ್ಪಾದನೆ ಹಾಗೂ ಪೂರೈಕೆ ಸಂಪೂರ್ಣವಾಗಿ ನಿರ್ನಾಮವಾಗಲಿದೆ ಎಂಬ ಭವಿಷ್ಯಗಳು ಅಂತಾರಾಷ್ಟ್ರೀಯ ರಾಜಕಾರಣದ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಅಸ್ಸಾದ್ ಆಡಳಿತ ಕಾಲಘಟ್ಟದಲ್ಲಿ ಅತಿದೊಡ್ಡ ಆದಾಯದ ಮೂಲವೇ ಡ್ರಂಗ್ಸ್ ದಂಧೆಯಾಗಿತ್ತು ಎಂದು ಹೇಳಲಾಗುತ್ತಿದೆ. ಸಿರಿಯಾದಲ್ಲಿ ಸಣ್ಣದಾಗಿ ಆರಂಭಗೊಂಡ ಈ ಡ್ರಂಗ್ಸ್ ದಂಧೆ ಮೆಕ್ಸಿಕೊ ಹಾಗೂ ದಕ್ಷಿಣ ಅಮೆರಿಕಾದವರೆಗೆ ವ್ಯಾಪಿಸುವಷ್ಟು ದೊಡ್ಡದಾಗಿ ಬೆಳೆಯಿತು. ಬಂದ ಲಾಭದಲ್ಲಿ ಬಹುಪಾಲು ಭಾಗ ಅಸ್ಸಾದ್ ಕುಟುಂಬಕ್ಕೆ ಸೇರಿದರೆ. ಉಳಿದ ಭಾಗದಲ್ಲಿ ಸೇನೆ ಹಾಗೂ ಹಿಜ್ಬುಲ್ಲಾ ಸಂಘಟನೆಗೆ ಮೀಸಲಿಡಲಾಗುತ್ತಿತ್ತು.
ಇದನ್ನೂ ಓದಿ: 2 ವರ್ಷದ ಎರಾಸ್ ಟೂರ್ ಸಕ್ಸಸ್.. ಟೇಲರ್ ಸ್ವಿಫ್ಟ್ ಕಾರ್ಯಕ್ಕೆ ಭಾರೀ ಮೆಚ್ಚುಗೆ; ಮಾಡಿದ್ದೇನು?
ನಿಮಗೆ ಇನ್ನೊಂದು ವಿಷಯ ತಿಳಿದು ಆಶ್ಚರ್ಯವಾಗಬಹುದು ಜಗತ್ತಿನ ಶೇಕಡಾ 80ರಷ್ಟು ಕ್ಯಾಪ್ಟಗೊನ್ ಮಾದಕ ಮಾತ್ರೆಗಳು ಸಿರಿಯಾದಲ್ಲಿಯೇ ಉತ್ಪಾದನೆಗೊಳ್ಳುತ್ತಿದ್ದವು ಅದು ಅಸ್ಸಾದ್ನ ಸಹೋದರ ಮಹೆರ್ ನಿಂದಲೇ ಉತ್ಪಾದಿತಗೊಳ್ಳುತ್ತಿದ್ದವು. ಸಿರಿಯನ್ ಸೇನೆಯ ನಾಲ್ಕನೇ ವಿಭಾಗವನ್ನು ಕ್ಯಾಪ್ಟಗೊನ್ ವಿಭಾಗ ಎಂದಲೇ ಕರೆಯಲಾಗುತ್ತಿತ್ತು. ಈ ಪಡೆ ಮಾದಕ ದ್ರವ್ಯಗಳ ಉತ್ಪಾದನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿತ್ತು.
ಜೋರ್ಡಾನ್ಗಿದ್ದ ತಲೆನೋವು ತೀರಿತಾ?
ಸಿರಿಯಾದಲ್ಲಿ ಉತ್ಪಾದನೆಯಾಗುತ್ತಿದ್ದ ಮಾದಕ ಮಾತ್ರೆ ಕ್ಯಾಪ್ಟಾಗೋನ್ ತಲೆನೋವಾಗಿದ್ದು ಸಿರಿಯಾದಿಂದ ಕೂಗಳತೆ ದೂರದಲ್ಲಿರುವ ನೆರೆಯ ದೇಶ ಜೋರ್ಡಾನ್ಗೆ. ಈ ಒಂದು ಮಾದಕ ದ್ರವ್ಯ ದೇಶವನ್ನು ಪ್ರವೇಶಿಸದಂತೆ ತಡೆಯಲು ಜೋರ್ಡಾನ್ ಹಲವು ಹರಸಾಹಸಗಳನ್ನು ಮಾಡಿತ್ತು. ಆದ್ರೆ ಅದಕ್ಕೆ ಸಾಧ್ಯವಾಗಿರಲಿಲ್ಲ. ಕಳ್ಳ ಮಾರ್ಗದಲ್ಲಿ ಕ್ಯಾಪ್ಟಾಗೊನ್ ಸರಳವಾಗಿ ಜೋರ್ಡಾನ್ ಅಂಗಳದಲ್ಲಿ ಬಂದು ಬೀಳುತ್ತಿತ್ತು. ಈ ಒಂದು ಮಾದಕ ದ್ರವ್ಯವಿರುವ ದಾಸ್ತಾನು ಕೇಂದ್ರಗಳನ್ನು ಜೋರ್ಡಾನ್ ಅನೇಕ ಬಾರಿ ಏರ್ಸ್ಟ್ರೈಕ್ ಮೂಲಕ ಧ್ವಂಸಗೊಳಿಸಿತ್ತು. ಇದರಿಂದಾಗಿ ಹಲವು ಬಾರಿ ನಾಗರಿಕರು ಕೂಡ ಗಾಯಗೊಂಡಿದ್ದರು. ಆದರೂ ಕೂಡ ಜೋರ್ಡಾನ್ನಲ್ಲಿ ನಡೆಯುತ್ತಿದ್ದ ಡ್ರಂಗ್ಸ್ ದಂಧೆಯನ್ನು ಸಂಪೂರ್ಣವಾಗಿ ತಡೆಯುವಲ್ಲಿ ಜೋರ್ಡಾನ್ ಸೋತಿತ್ತು. ಈಗ ಸಿರಿಯಾದಲ್ಲಿ ಬಶರ್ ಅಲ್ ಅಸ್ಸಾದ್ನ ಆಡಳಿತ ಕೊನೆಯಾಗಿದೆ. ಹೊಸ ಪ್ರವರ್ಧಮಾನಕ್ಕೆ ಸಿರಿಯಾ ತನ್ನನ್ನು ತಾನು ತೆರೆದುಕೊಂಡಿದೆ ಎಂದು ಸ್ವಯಂ ಘೋಷಗಳು ಆಚೆ ಬರುತ್ತಿವೆ. ಈಗಲಾದರೂ ಸಿರಿಯಾದಲ್ಲಿ ಸರಳವಾಗಿ ಸಿಗುತ್ತಿದ್ದ ಈ ಕ್ಯಾಪ್ಟಾಗೊನ್ ಮಾದಕದ್ರವ್ಯದ ಜಾಲ ಸಂಪೂರ್ಣವಾಗಿ ಕುಸಿದು ಬೀಳುತ್ತದಾ ಇಲ್ಲವಾ ಅನ್ನೋದನ್ನ ಕಾಲವೇ ಉತ್ತರಿಸಬೇಕಷ್ಟೆ. ‘
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ