/newsfirstlive-kannada/media/post_attachments/wp-content/uploads/2025/04/Rana_Extradition_2.jpg)
26/11 ಮುಂಬೈ ಸ್ಫೋಟದಲ್ಲಿ ಅಡಗಿಕುಳಿತು ವಿಧ್ವಂಸಕ ಆಟವಾಡಿದ್ದ ಮಾಸ್ಟರ್ ಮೈಂಡ್ ತಹಾವುರ್ ರಾಣಾ ಎನ್​ಐಎ ಬಲೆಗೆ ಬಿದ್ದು ವಿಲವಿಲ ಅನ್ನೋ ಪರಿಸ್ಥಿತಿ ಬಂದಿದೆ. ಅಮೆರಿಕಾದಿಂದ ಗಡೀಪಾರಾಗಿ ನಿನ್ನೆ ಮಧ್ಯಾಹ್ನವಷ್ಟೇ ದೆಹಲಿಯಲ್ಲಿ ಲ್ಯಾಂಡ್ ಆಗಿದ್ದ ರಾಣಾ ತಡರಾತ್ರಿ ರಾಷ್ಟ್ರೀಯ ತನಿಖಾ ದಳದ ಕಸ್ಟಡಿಯೊಳಗೆ ಲಾಕ್ ಆಗಿದ್ದಾನೆ.
ತಹಾವುರ್ ರಾಣಾ.. 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್. 2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯ ರೂವಾರಿಗಳಲ್ಲಿ ಒಬ್ಬ. ಅಂದು ಮಾರಣಹೋಮಕ್ಕೆ ಕಾರಣೀಭೂತನಾಗಿದ್ದ ರಕ್ತಪಿಪಾಸು ಭಾರತಕ್ಕೆ ಬಂದಾಗಿದೆ. 17 ವರ್ಷಗಳ ರಾಜತಾಂತ್ರಿಕ ಹೋರಾಟಕ್ಕೆ ಜಯ ಸಿಕ್ಕಾಗಿದೆ. ಎನ್​ಐಎ ಅಧಿಕಾರಿಗಳು ವಿಚಾರಣೆ ನಡೆಸೋದೊಂದೆ ಬಾಕಿ ಇದೆ.
‘ರಾಣಾ’ಗೆ ತನಿಖೆ ಸ್ಟಾರ್ಟ್
ಅಮೆರಿಕಾದಿಂದ ವಿಶೇಷ ವಿಮಾನದಲ್ಲಿ ಬಂದ ಉಗ್ರವಾದಿ ತಹಾವುರ್ ರಾಣಾ ನಿನ್ನೆ ಮಧ್ಯಾಹ್ನ ದೆಹಲಿಯ ಪಾಲಂ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗಿತ್ತು. ತಕ್ಷಣ ಆತನನ್ನ ವಶಕ್ಕೆ ಪಡೆದ ಎನ್‌ಐಎ, ಬಂಧನದ ಪ್ರಕ್ರಿಯೆಗಳನ್ನ ಪೂರ್ಣಗೊಳಿಸಿತು. ಬಳಿಕ ರಿಮ್ಯಾಂಡ್ ಅರ್ಜಿ ಸಲ್ಲಿಕೆ ಮಾಡಿ ಮಾಸ್ಟರ್‌ಮೈಂಡ್‌ನ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರು ಪಡಿಸಲಾಯ್ತು. ಈ ವೇಳೆ 20 ದಿನಗಳು ಕಸ್ಟಡಿಗೆ ಕೊಡುವಂತೆ ಎನ್​ಐಎ ಪರ ವಕೀಲ ದಯಾನ್ ಕೃಷ್ಣನ್ ಮನವಿ ಮಾಡಿದ್ರು. ಈ ಮನವಿಯನ್ನ ಪುರಸ್ಕರಿಸಿದ ಕೋರ್ಟ್, 18 ದಿನಗಳ ಕಾಲ ರಾಣಾನನ್ನ ಎನ್​ಐಎ ಕಸ್ಟಡಿಗೆ ನೀಡಿದೆ. ಸದ್ಯ ತಮ್ಮ ಕಸ್ಟಡಿಗೆ ಪಡೆದಿರೋ ಎನ್​ಐಎ ರಾಣಾನನ್ನ ದೆಹಲಿಯ NIA ಹೆಡ್ ಕ್ವಾರ್ಟರ್ಸ್​ನಲ್ಲಿನ ಸ್ಪೆಷಲ್ ಸೆಲ್​ನಲ್ಲಿಟ್ಟು ವಿಚಾರಣೆ ನಡೆಸ್ತಿದೆ.
ಇದನ್ನೂ ಓದಿ: ಇದು ನನ್ನ ಮೈದಾನ, ನನ್ನ ಮನೆ -ಆರ್​ಸಿಬಿ ಸೋಲಿಸಿ KL ರಾಹುಲ್ ಸ್ಫೋಟಕ ಹೇಳಿಕೆ..!
2008 ನವೆಂಬರ್ 26 ರಂದು ಈತ ಟಾರ್ಗೆಟ್​ ಮಾಡಿದ್ದ ಸ್ಥಳಗಳಲ್ಲಿಯೇ 10 ಜನ ಉಗ್ರರು ದಾಳಿ ನಡೆಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಫೋಲ್ಡ್​ ಕೆಫೆ. ನಾರಿಮನ್ ಹೌಸ್​, ಹೋಟೆಲ್ ತಾಜ್​ ಸೇರಿ ಹಲವು ಕಡೆ ಉಗ್ರರು ದಾಳಿ ನಡೆಸಿದ್ದರು. ಈ ಎಲ್ಲಾ ಟಾರ್ಗೆಟ್​​ಗಳನ್ನು ಫಿಕ್ಸ್ ಮಾಡಲು ವ್ಯವಸ್ಥೆ ಮಾಡಿಕೊಟ್ಟಿದ್ದೇ ಈ ರಾಣಾ. ಇದೀಗ ಎನ್‌ಐಎ ಅಧಿಕಾರಿಗಳು ಮಾಸ್ಟರ್ ಮೈಂಡ್‌ಗೆ ಬೆಂಡೆತ್ತಲಿದ್ದಾರೆ.
ಮುಂಬೈ ಸ್ಫೋಟದ ರುವಾರಿ ರಾಣಾ!
2008ರ ನವೆಂಬರ್ 26 ರಂದು ನಡೆದ ಮುಂಬೈ ಸ್ಫೋಟದ ಮಾಸ್ಟರ್​ ಮೈಂಡ್​ಗಳಲ್ಲಿ ತಹಾವುರ್ ರಾಣಾ ಕೂಡ ಒಬ್ಬ. ಮೊದಲು ಸೇನೆಯಲ್ಲಿದ್ದ ರಾಣಾ 1997ರಲ್ಲಿ ಸೇನೆಗೆ ರಾಜೀನಾಮೆ ನೀಡಿ ಕೆನಡಾಕ್ಕೆ ತೆರಳಿದ್ದ. ಬಳಿಕ ಲಷ್ಕರ್ ಏ ತೋಯ್ಬಾ ಜೊತೆ ಕೈ ಜೋಡಿಸಿ ಸಕ್ರಿಯ ಸದಸ್ಯನಾಗಿ ಗುರುತಿಸಿಕೊಂಡಿದ್ದ. ಐಎಸ್​ಐ ಅಧಿಕಾರಿ ಮೇಜರ್ ಇಕ್ಬಾಲ್​ನ ಅತ್ಯಾಪ್ತ ಕೂಡ ಹೌದು. 2008ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್ ಆಗಿದ್ದ ಡೇವಿಡ್ ಕೋಲ್ಮನ್ ಹೆಡ್ಲಿ ಜೊತೆ ಸಂಪರ್ಕದಲ್ಲಿದ್ದ ರಾಣಾ, ಆತನಿಗೆ ಭಾರತಕ್ಕೆ ಬರಲು ಪಾಸ್​ಪೋರ್ಟ್ ಒದಗಿಸಿಕೊಟ್ಟಿದ್ದ. ಇದ್ರಿಂದಾಗಿ ಹೆಡ್ಲಿ ಮುಂಬೈಗೆ ಬಂದು ಟಾರ್ಗೆಟ್​ಗಳನ್ನ ಗುರುತಿಸಿಕೊಂಡು ಹೋಗಲು ಸುಲಭವಾಗಿತ್ತು. ಖುದ್ದು ರಾಣಾ ಕೂಡ ಬ್ಲಾಸ್ಟ್​ಗೂ ಮುನ್ನ ಮುಂಬೈನಲ್ಲಿ ಸಂಚರಿಸಿದ್ದ. 2008ರ ನವೆಂಬರ್​ 11ರಿಂದ 21ರ ನಡುವೆ ಮುಂಬೈ ಬಂದು ಹೋಗಿದ್ದ. ಈ ವೇಳೆ ಪೋವಾಯ್​ನ ರೆನೈಸಾನ್ಸ್ ಹೋಟೆಲ್​ನಲ್ಲಿ ತಂಗಿದ್ದ ಎಂಬ ಮಾಹಿತಿ ಇದೆ. ಈತನ ಓಡಾಟದ ಬೆನ್ನಲ್ಲೇ ನವೆಂಬರ್ 26ರಂದು ತಾಜ್ ಹೋಟೆಲ್​ ಸೇರಿದಂತೆ ಸುತ್ತಾಮುತ್ತ ಉಗ್ರರ ದಾಳಿ ನಡೆದಿತ್ತು. ಇದಷ್ಟೇ ಅಲ್ಲದೇ ಈ ಭಯೋತ್ಪಾದಕ ದಾಳಿಗಳನ್ನ ತಹಾವುರ್ ರಾಣಾ ಸಮರ್ಥಿಸಿಕೊಂಡಿದ್ದ. ಬಳಿಕ ವಿದೇಶದಲ್ಲಿ ಓಡಾಡಿಕೊಂಡಿದ್ದ ಈತನನ್ನ ಅಮೆರಿಕದಲ್ಲಿ ಬಂಧಿಸಿ, ಭಾರತಕ್ಕೆ ಗಡಿಪಾರು ಮಾಡಿ, ಇದೀಗ ಎನ್​ಇಎ ಕಸ್ಟಡಿಯಲ್ಲಿ ಬಂಧಿಯಾಗಿದ್ದಾನೆ.
ಕಸ್ಟಡಿಗೆ ಸಿಕ್ಕಿರೋ ರಾಣಾ ಜನ್ಮ ಜಾಲಾಡೋದಕ್ಕೆ ಎನ್​ಐಎ ಅಧಿಕಾರಿಗಳು ಸಜ್ಜಾಗಿದ್ದಾರೆ. ವಿಚಾರಣೆಯ ಕೊತಕೊತ ಎಣ್ಣೆಯಲ್ಲಿ ಉಗ್ರನನ್ನ ಮಿರ್ಚಿ ಬೋಂಡದಂತೆ ಕರಿಯಲು ತನಿಖಾ ಪಡೆ ಸಜ್ಜಾಗಿದೆ.
ವಿಚಾರಣೆಯ ರಣವ್ಯೂಹದಲ್ಲಿ ರಾಣಾ!
- ಮುಂಬೈ ಬ್ಲಾಸ್ಟ್​ನ ಸಾಕ್ಷ್ಯಾಧಾರಗಳ ಆಧಾರದಲ್ಲಿ ವಿಚಾರಣೆ
- ರಾಣಾನ ಜೊತೆ ಬ್ಲಾಸ್ಟ್​​ನಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು?
- ಈ ಹಿಂದೆ ರಾಣಾ ಎಷ್ಟು ಬಾರಿ ಭಾರತಕ್ಕೆ ಬಂದು ಹೋಗಿದ್ದಾನೆ?
- ರಾಣಾ ಯಾಱರ ಸಂಪರ್ಕದಲ್ಲಿದ್ದ, ಹೇಗೆ ಅಟ್ಯಾಕ್ ಮಾಡಿಸಿದ?
- ರಾಣಾ ಬಾಯ್ಬಿಡಿಸಲು ಮುಂದಾದ ಎನ್​ಐಎ ಅಧಿಕಾರಿಗಳು
- NIAಯಿಂದ ರಾಣಾ ನೆಟ್​ವರ್ಕ್ ಬಯಲು ಮಾಡೋ ಪ್ರಯತ್ನ
- ಉಗ್ರ ಬೆಂಬಲಿಗರು, ಸ್ಲೀಪರ್ ಸೆಲ್​ಗಳ ಬಗ್ಗೆಯೂ ವಿಚಾರಣೆ
- ಸದ್ಯದ ಪರಿಸ್ಥಿತಿಯಲ್ಲಿ ತಹಾವುರ್ ರಾಣಾ ಎಷ್ಟು ಌಕ್ಟಿವ್ ಇದ್ದಾನೆ?
- ಈಗಲೂ ತಹಾವುರ್ ರಾಣಾ ಉಗ್ರರ ಸಂಪರ್ಕದಲ್ಲಿ ಇದ್ದಾನಾ?
- ಎಲ್ಲಾ ಆಯಾಮಗಳಲ್ಲೂ ರಾಣಾ ವಿಚಾರಣೆ ಮಾಡಲಿರೋ NIA
ಉಪ್ಪು ತಿಂದುವನು ನೀರು ಕುಡಿಯಲೇಬೇಕು. 2008ರಲ್ಲಿ ತಪ್ಪು ಮಾಡಿ ಉಪ್ಪು ತಿಂದಿದ್ದ ತಹಾವುರ್ ರಾಣಾ, ಬೆಪ್ಪು ತಕ್ಕಡಿಯಂತೆ ಕಪ್ಪು ಕೋಣೆಯಲ್ಲಿ ಕೂರುವಂತಾಗಿದೆ. ತಮ್ಮದೇ ಸ್ಟೈಲ್​ನಲ್ಲಿ ರಕ್ತದಾಹಿ ರಾಣಾನ ಬೆಂಡೆತ್ತಲು ತನಿಖಾಧಿಕಾರಿಗಳು ಸಜ್ಜಾಗಿದ್ದಾರೆ. ಇದಕ್ಕೆ ಅನ್ನೋದು ಮಾಡಿದ್ದುಣ್ಣೋ ಮಹಾರಾಯ.
ಇದನ್ನೂ ಓದಿ: ಭಾರತದಲ್ಲಿ ಮೊಟ್ಟ ಮೊದಲು ಬಸ್​ ಪ್ರಯಾಣ ಶುರುವಾಗಿದ್ದು ಯಾವಾಗ? ಇದರ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್