ಭಾಗಮಂಡಲದ ತಲಕಾವೇರಿಯಲ್ಲಿ ತೀರ್ಥೋದ್ಭವದ ಸಂಭ್ರಮ
ತೀರ್ಥೋದ್ಭವದ ಪುಣ್ಯ ಕ್ಷಣವನ್ನ ಕಣ್ತುಂಬಿಕೊಂಡ ಸಹಸ್ರಾರು ಭಕ್ತರು
ಒಂದು ತಿಂಗಳ ಕಾಲ ನಡೆಯಲಿಕ್ಕಿರುವ ಕಾವೇರಿ ತುಲಾ ಸಂಕ್ರಮಣ ಜಾತ್ರೆ
ತುಲಾ ಸಂಕ್ರಮಣದ ವಿಶೇಷ ಶುಭದಿನದಂದು ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವವಾಗಿದೆ. ಭಾಗಮಂಡಲದ ತಲಕಾವೇರಿಯಲ್ಲಿ ಈ ಪುಣ್ಯಕಾರ್ಯ ಸಾಕ್ಷಿಯಾಗಿದೆ. ಇಂದು 17ರ ಮುಂಜಾನೆ 7 ಗಂಟೆ 40 ನಿಮಿಷಕ್ಕೆ ತೀರ್ಥೋದ್ಭವಾಗಿದೆ. ಸಹಸ್ರಾರು ಭಕ್ತರು ಈ ಪುಣ್ಯ ಕ್ಷಣವನ್ನ ಕಣ್ತುಂಬಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ತಲಕಾವೇರಿಯಲ್ಲಿ ಸಹಸ್ರಾರು ಭಕ್ತರು ಕಾಣಿಸಿಕೊಂಡಿದ್ದಾರೆ. ಮಳೆ, ಚಳಿ ಎನ್ನದೆ ಪುಣ್ಯಕಾರ್ಯದಲ್ಲಿ ಭಾಗಿಗಳಾಗಿದ್ದಾರೆ. ಇನ್ನು ಒಂದು ತಿಂಗಳ ಕಾಲ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ನಡೆಯಲಿಕ್ಕಿದೆ. ಕಾವೇರಿ ಕೊಡಗಿನ ಕುಲದೇವತೆ. ಕನ್ನಡ ನಾಡಿನ ಜೀವನದಿ. ಕಾವೇರಿ ಹುಟ್ಟುವುದೇ ಇಲ್ಲಿಂದ. ದಕ್ಷಿಣ ಭಾರತದ ಗಂಗೆ ಎಂದೇ ಪೂಜಿಸಲ್ಪಡುವ ಕಾವೇರಿ ತೀರ್ಥದಲ್ಲಿ ಮಿಂದರೆ ಸಂಕಷ್ಟ ಪಾವನವಾಗುತ್ತದೆ ಎಂಬ ನಂಬಿಕೆ. ಕಾವೇರಿ ಹುಟ್ಟಿಗೆ ಪೌರಾಣಿಕ ಕಥೆಯಿದೆ. ಉತ್ತರದಲ್ಲಿದ್ದ ಅಗಸ್ತ್ಯ ಮಹರ್ಷಿಗಳು ದಕ್ಷಿಣಕ್ಕೆ ಆಗಮಿಸಿ ಇಲ್ಲೊಂದು ಅತ್ಯಂತ ಪುರಾತನ ಹಾಗೂ ಶ್ರೀಮಂತಿಕೆಯ ನಾಗರೀಕತೆಯನ್ನು ಹುಟ್ಟುಹಾಕಿದ ಕಥೆಯನ್ನು ಕಾವೇರಿ ಸಾರುತ್ತಾಳೆ. ಮಕ್ಕಳಿಲ್ಲದ ಮಹರ್ಷಿ ಕವೇರ ಬ್ರಹ್ಮಗಿರಿಯಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾರೆ. ಅವರ ಕಠೋರ ತಪಸ್ಸಿಗೆ ಪ್ರತ್ಯಕ್ಷನಾದ ಬ್ರಹ್ಮದೇವರು ನಿನ್ನಲ್ಲಿ ಪೂರ್ವಜನ್ಮದ ಪಾಪದ ಫಲವಿರುವುದರಿಂದ ನಿನಗೆ ಸಂತಾನ ಭಾಗ್ಯವಿಲ್ಲ. ಹೀಗಾಗಿ ನನ್ನ ಮಾನಸ ಪುತ್ರಿ ಲೋಪಮುದ್ರೆಯನ್ನೇ ನಿನಗೆ ಮಗಳಾಗಿ ನೀಡುತ್ತೇನೆಂದು ಲೋಪಮುದ್ರೆಯನ್ನು ಕವೇರನಿಗೆ ನೀಡಿತ್ತಾರೆ ಬ್ರಹ್ಮದೇವರು. ಕವೇರನ ಮಗಳು ಮುಂದೆ ಕಾವೇರಿಯಾಗಿ ಲೋಕಪ್ರಸಿದ್ಧಿ ಪಡೆದಳು. ಉತ್ತರದಿಂದ ದಕ್ಷಿಣದ ಕ್ರೋಡದೇಶಕ್ಕೆ ಬಂದಿದ್ದ ಮಹರ್ಷಿ ಅಗಸ್ತ್ಯ ಕಣ್ಣಿಗೆ ಕಾವೇರಿ ಬೀಳುತ್ತಾಳೆ. ಅವಳ ಲೋಕೋದ್ಧಾರಕ್ಕಾಗಿ ಬಂದಿರುವ ಹಾಗೂ ಆಕೆಯ ಜೀವನುದ್ದೇಶವನ್ನು ತಮ್ಮ ತಪೋಬಲದಿಂದ ಕಂಡುಕೊಂಡ ಅಗಸ್ತ್ಯ ಮಹರ್ಷಿಗಳು ಕಾವೇರಿಯನ್ನು ಮದುವೆಯಾಗುವುದಾಗಿ ಕವೇರನ ಬಳಿ ಕೇಳಿಕೊಳ್ಳುತ್ತಾರೆ. ಕವೇರ ಒಪ್ಪಿಕೊಂಡರೂ ಕೂಡ ಕಾವೇರಿ ಮಾತ್ರ, ನಾನು ಇವರನ್ನು ಮದುವೆಯಾಗುತ್ತೇನೆ, ಆದ್ರೆ ಇವರು ಎಂದಿಗೂ ಕೂಡ ನನ್ನನ್ನು ಬಿಟ್ಟು ಹೋಗಬಾರದು ಎಂದು ಷರತ್ತು ವಿಧಿಸುತ್ತಾಳೆ. ಇದಕ್ಕೆ ಒಪ್ಪಿದ ಅಗಸ್ತ್ಯರು ಕಾವೇರಿಯನ್ನು ವರಿಸುತ್ತಾರೆ. ಲೋಕಕಲ್ಯಾಣಕ್ಕೇ ಎಂದು ಬಂದಿದ್ದ ಲೋಪಮುದ್ರೆ ಒಂದೇ ಒಂದು ನಿಮಿತ್ಯಕ್ಕಾಗಿ ಕಾಯುತ್ತಿರುತ್ತಾಳೆ.