/newsfirstlive-kannada/media/post_attachments/wp-content/uploads/2024/03/ANNAMALAI.jpg)
ಚೆನ್ನೈ: ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಏ. 19ರಂದು ನಡೆಯಲಿದ್ದು ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಲೋಕಸಭಾ ಎಲೆಕ್ಷನ್ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೆ.ಅಣ್ಣಾಮಲೈಯವರು ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ. ಇಂದು ಪಕ್ಷದ ಕಾರ್ಯಕರ್ತರು, ಮುಖಂಡರ ಜೊತೆ ಕೊಯಮತ್ತೂರು ಜಿಲ್ಲಾ ಕಚೇರಿಗೆ ತೆರಳಿ ಡಿಸಿ ಕ್ರಾಂತಿ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಅಣ್ಣಾಮಲೈ ಜೊತೆ ಕೊಯಮತ್ತೂರು ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಇದ್ದರು.
ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ 2020ರಲ್ಲಿ ಬಿಜೆಪಿ ಸೇರಿದ್ದರು. ಅವರನ್ನು ಗುರ್ತಿಸಿದ್ದ ಬಿಜೆಪಿ ತಮಿಳುನಾಡಿನ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿತ್ತು. ಈ ಹಿಂದೆ ವಿಧಾನಸಭೆ ಎಲೆಕ್ಷನ್ಗೆ ಸ್ಪರ್ಧೆ ಮಾಡಿ ಸೋತು ಹೋಗಿದ್ದರು. ಆದರೆ ಪಕ್ಷ ಇದೀಗ ಅವರ ಮೇಲೆ ನಂಬಿಕೆ ಇಟ್ಟು ಲೋಕಸಭೆ ಚುನಾವಣೆಯ ಟಿಕೆಟ್ ನೀಡಿದ್ದು ಹೆಚ್ಚಿನ ಅಂತರದಿಂದ ಗೆಲುವು ಪಡೆಯುವುದು ಅವರ ಉದ್ದೇಶವಾಗಿದೆ. ಈ ಮೂಲಕ ಅಣ್ಣಾಮಲೈ ಮೂಲಕ ತಮಿಳುನಾಡಿನಲ್ಲಿ ಖಾತೆ ತೆರೆಯಲು ಬಿಜೆಪಿ ಬಿಗ್ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಕೆ ಅಣ್ಣಾಮಲೈ ವಿರುದ್ಧ ಸ್ಪರ್ಧಿಸಲು ಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಗಣಪತಿ ರಾಜಕುಮಾರ್ ಅವರು ಕೂಡ ನಾಮಿನೇಷನ್ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನೀರಿನ ಸಮಸ್ಯೆಗೆ ಕನ್ನಡದಲ್ಲೇ ಪರಿಹಾರ ತಿಳಿಸಿದ ಮೆಗಾಸ್ಟಾರ್ ಚಿರಂಜೀವಿ; ಐಡಿಯಾ ಸೂಪರ್!
ಮೊದಲ ಹಂತದ ಮತದಾನಕ್ಕೆ ಇಂದು ಕೊನೆ ದಿನವಾಗಿದ್ದರಿಂದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯ ಹಿರಿಯ ಮುಖಂಡ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಮಹಾರಾಷ್ಟ್ರದ ನಾಗ್ಪುರ್ನಲ್ಲಿ ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ನಿತಿನ್ ಗಡ್ಕರಿಯವರ ಜೊತೆ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂದೆ ಹಾಗೂ ಡಿಸಿಎಂ ದೇವೇಂದ್ರ ಫಡ್ನಾವೀಸ್ ಸೇರಿ ಕೆಲ ಗಣ್ಯರು ಇದ್ದರು. ಇವರು ರ್ಯಾಲಿಯಲ್ಲಿ ಪಾಲ್ಗೊಂಡು ನಾಮಪತ್ರ ಸಲ್ಲಿಸುವವರೆಗೂ ಗಡ್ಕರಿಯವರಿಗೆ ಸಾಥ್ ನೀಡಿದರು ಎನ್ನಲಾಗಿದೆ.
ರಾಜಸ್ಥಾನದ ಅಲ್ವಾರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಭುಪೇಂದರ್ ಯಾದವ್ ಅವರು ಪ್ರಚಾರದ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. DMK ಹಾಲಿ ಸಂಸದ ದಯಾನಿಧಿ ಮಾರನ್ ಅವರು ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ನಾಮಿನೇಷನ್ ಸಲ್ಲಿಸಿದ್ದಾರೆ. ಇವರು ತಮಿಳುನಾಡಿನ ಚೆನ್ನೈ ಕೇಂದ್ರ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ