/newsfirstlive-kannada/media/post_attachments/wp-content/uploads/2025/07/JOB_LAYOFF.jpg)
ಈ ವರ್ಷದ ಮೊದಲ 6 ತಿಂಗಳಲ್ಲೇ ಜಗತ್ತಿನ ಟೆಕ್ ಕಂಪನಿಗಳಲ್ಲಿ ಬರೋಬ್ಬರಿ 1 ಲಕ್ಷ ಇಂಜಿನಿಯರ್ಸ್​ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದರು. ಮೈಕ್ರೋಸಾಫ್ಟ್, ಇಂಟೆಲ್, ಮೆಟಾ ಸೇರಿದಂತೆ ಟೆಕ್ ಜಗತ್ತಿನ ದೈತ್ಯ ಕಂಪನಿಗಳೇ ಲಾಭದ ಹಳಿಗೆ ಮರಳಲು, ನಷ್ಟ ಕಡಿಮೆ ಮಾಡಿಕೊಳ್ಳಲು ಲೇ ಆಫ್ ಮೊರೆ ಹೋಗಿದ್ದವು. ಈಗ ಟೆಕ್ ಜಗತ್ತಿನ ಭಾರತದ ದೈತ್ಯ ಕಂಪನಿ ಟಿಸಿಎಸ್ ಕೂಡ ಲೇ ಆಫ್ ಮೊರೆ ಹೋಗಿದೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಾರಣದಿಂದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿಲ್ಲ ಎಂದು ಕೂಡ ಟಿಸಿಎಸ್ ಕಂಪನಿಯ ಸಿಇಓ ಕೃತಿವಾಸನ್ ಹೇಳಿದ್ದಾರೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿಯ ಸಿಇಓ ಕೆ.ಕೃತಿವಾಸನ್, ತಮ್ಮ ಕಂಪನಿಯು 12 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿದ್ದಾರೆ. ಕಂಪನಿಯ ಜಾಗತಿಕ ಮಾನವ ಸಂಪನ್ಮೂಲದ ಪೈಕಿ ಶೇ.2 ರಷ್ಟು ಉದ್ಯೋಗಿಗಳನ್ನು ಲೇ ಆಫ್ ನೀಡಿ ಮನೆಗೆ ಕಳಿಸುವುದಾಗಿ ಕೃತಿವಾಸನ್ ಹೇಳಿದ್ದಾರೆ. ಆದರೇ, ಇದಕ್ಕೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಾರಣವಲ್ಲ. ಇದಕ್ಕೆ ಉದ್ಯೋಗಿಗಳ ಕೌಶಲ್ಯವು ಕಂಪನಿಗೆ ಬೇಕಾದ ಕೆಲಸಗಳಿಗೆ ಮ್ಯಾಚ್ ಆಗುತ್ತಿಲ್ಲ. ಉದ್ಯೋಗಿಗಳನ್ನು ಕೆಲಸಕ್ಕೆ ನಿಯೋಜಿಸುವ ಸಾಧ್ಯತೆ, ಅವಕಾಶಗಳು ಕಡಿಮೆಯಾಗಿದ್ದವು ಎಂದಿದ್ದಾರೆ.
/newsfirstlive-kannada/media/post_attachments/wp-content/uploads/2025/07/JOB_NEW_PHOTOS.jpg)
ವಿಶೇಷವಾಗಿ ಮಧ್ಯಮ ಮತ್ತು ಸೀನಿಯರ್ ಮಟ್ಟದ ಉದ್ಯೋಗಿಗಳ ವಿಷಯದಲ್ಲಿ ಕೌಶಲ್ಯ ಮಿಸ್ ಮ್ಯಾಚ್ ಆಗುತ್ತಿತ್ತು ಎಂದು ಕೃತಿವಾಸನ್ ಹೇಳಿದ್ದಾರೆ. ಎಐ ನಿಂದ ಸಿಕ್ಕಿರುವ ಶೇ.20 ರಷ್ಟು ಉತ್ಪಾದಕತೆಯ ಲಾಭದಿಂದ ನಾವು ಲೇ ಆಫ್ ನೀಡುತ್ತಿಲ್ಲ. ಟಿಸಿಎಸ್ ಕಂಪನಿಯನ್ನು ಭವಿಷ್ಯಕ್ಕಾಗಿ ರೆಡಿ ಮಾಡುವ ವಿಸ್ತೃತ ಪ್ಲ್ಯಾನ್ ಭಾಗವಾಗಿ ಲೇ ಆಫ್ ನೀಡಲಾಗುತ್ತಿದೆ. ಎಐ ಕಾರಣಕ್ಕಾಗಿ ನಾವು ಲೇ ಆಫ್ ನೀಡುತ್ತಿಲ್ಲ ಎಂದು ಟಿಸಿಎಸ್ ಸಿಇಓ ಕೆ.ಕೃತಿವಾಸನ್ ಸ್ಪಷ್ಟವಾಗಿ ಹೇಳಿದ್ದಾರೆ.
ಐದೂವರೆ ಲಕ್ಷ ಉದ್ಯೋಗಿಗಳಿಗೆ ತರಬೇತಿ
ಟಿಸಿಎಸ್ ಕಂಪನಿಯಲ್ಲಿ 5,50,000 ಉದ್ಯೋಗಿಗಳಿಗೆ ಎಐ ಮತ್ತು ಎಮರ್ಜೆಂಗ್ ಟೆಕ್ನಾಲಜಿ ಬಗ್ಗೆ ತರಬೇತಿ ಮತ್ತು ಕೌಶಲ್ಯವನ್ನು ನೀಡಲಾಗಿದೆ. ಆದರೇ, ಎಲ್ಲ ಉದ್ಯೋಗಿಗಳು ಟಿಸಿಎಸ್ನ ಬದಲಾಗುತ್ತಿರುವ ಅಪರೇಷನ್ ಮಾಡೆಲ್​ಗೆ ಪರಿಣಾಮಕಾರಿಯಾಗಿ ಹೊಂದಿಕೊಳ್ಳುತ್ತಿಲ್ಲ. ಬಹಳಷ್ಟು ಮಂದಿ ಈ ತರಬೇತಿ ಪಡೆದಿದ್ದಾರೆ. ಆದರೇ, ಈಗ ಹೊಸ ಸ್ವರೂಪ, ಪ್ರೊಡಕ್ಷನ್ ಆಧಾರಿತ ವ್ಯವಸ್ಥೆಗೆ ಹೊಂದಿಕೊಳ್ಳಲಾಗುತ್ತಿಲ್ಲ ಎಂದು ಕೃತಿವಾಸನ್ ಹೇಳಿದ್ದಾರೆ. ಈ ಮೂಲಕ ಲೇ ಆಫ್​ಗೆ ಎಐ ಕಾರಣ ಅನ್ನೋದು ಸ್ಪಷ್ಟವಾಗಿದೆ.
ಟಿಸಿಎಸ್ ಕಂಪನಿಯಲ್ಲಿ ಜಾಗತಿಕವಾಗಿ 6,13,000 ಉದ್ಯೋಗಿಗಳಿದ್ದಾರೆ. ಶೇ.2 ರಷ್ಟು ಅಂದರೇ, 12 ಸಾವಿರ ಉದ್ಯೋಗಿಗಳನ್ನು ಲೇ ಆಫ್ ನೀಡಿ ಮನೆಗೆ ಕಳಿಸಲಾಗುತ್ತಿದೆ. ಭಾರತದ ಐಟಿ ವಲಯವು ಕಳೆದ ಹಣಕಾಸು ವರ್ಷದಲ್ಲಿ 500 ಬಿಲಿಯನ್ ಡಾಲರ್ ಲಾಭವನ್ನು ಗಳಿಸಿತ್ತು. ಇದರಲ್ಲಿ ಐಟಿ ಸರ್ವೀಸಸ್ ನಿಂದಲೇ ಬರೋಬ್ಬರಿ 250 ಬಿಲಿಯನ್ ಡಾಲರ್ ಲಾಭ ಬಂದಿತ್ತು. ಈ ಬೆಳವಣಿಗೆ, ಲಾಭವು ಶೇ.3 ರಷ್ಟು ಈ ಹಣಕಾಸು ವರ್ಷದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಉದ್ಯೋಗಿಗಳನ್ನು ಕೆಲಸಕ್ಕೆ ನಿಯೋಜಿಸಲು ಸಾಧ್ಯವಾಗದೇ, ಲೇ ಆಫ್ ನೀಡುತ್ತಿದೆ. ಬೇರೆ ಪದಗಳಲ್ಲಿ ಹೇಳುವುದಾದರೇ, ಕಂಪನಿಯಲ್ಲಿ ಯಾವುದೇ ಪ್ರಾಜೆಕ್ಟ್ ಮಾಡದೇ, ಹೊಸ ಎಐ ಗೆ ಹೊಂದಿಕೊಳ್ಳಲಾಗದೇ, 35 ದಿನಗಳಿಗಿಂತ ಹೆಚ್ಚಿನ ದಿನ, ಇನ್ನೂ ಕೆಲವರು ನಾಲ್ಕು ತಿಂಗಳಿಗಿಂತ ಹೆಚ್ಚಿನ ದಿನ ಬೆಂಚ್​​ನಲ್ಲಿ ಕುಳಿತಿದ್ದವರಿಗೆ ಲೇ ಆಫ್ ನೀಡಿ ಮನೆಗೆ ಕಳಿಸಲಾಗುತ್ತಿದೆ.
ಇದನ್ನೂ ಓದಿ: ಪದವಿ ಓದಿದವರಿಗೆ ಸಿಹಿ ಸುದ್ದಿ.. 1500 ಅಪ್ರೆಂಟಿಸ್​ ಉದ್ಯೋಗಗಳಿಗೆ ಅರ್ಜಿ ಆಹ್ವಾನ
/newsfirstlive-kannada/media/post_attachments/wp-content/uploads/2025/03/JOB_NAVY_WORK.jpg)
ಮೈಕ್ರೋಸಾಫ್ಟ್ ಸಿಇಓ ಸತ್ಯಾ ನಡೆಲ್ಲಾ ಏನ್ ಹೇಳಿದ್ದರು?
ಇನ್ನೂ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಈ ವರ್ಷ ಇದುವರೆಗೂ 15 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿ ಮನೆಗೆ ಕಳಿಸಲಾಗಿದೆ. ಮೈಕ್ರೋಸಾಫ್ಟ್ ನಲ್ಲಿ ನಾನ್ ಟೆಕ್ನಿಕಲ್ ವಲಯದ ಸೇಲ್ಸ್ ಮತ್ತು ರೀಜನಲ್ ಸಪೋರ್ಟ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಮೈಕ್ರೋಸಾಫ್ಟ್ ಕಂಪನಿಯು ದೀರ್ಘಾವಧಿಯ ಕಾರ್ಯತಂತ್ರದ ಗುರಿಗಳನ್ನು ತಲುಪಬೇಕಾಗಿದೆ. ಎಐ, ಕ್ಲೌಡ್ ಮತ್ತು ಎಂಟರ್ ಪ್ರೈಸ್ ಟೂಲ್ಸ್ ಕೇಂದ್ರೀತ ಗುರಿಗಳನ್ನು ತಲುಪಲು ಲೇ ಆಫ್ ನೀಡಲಾಗಿದೆ ಎಂದು ಮೈಕ್ರೋಸಾಫ್ಟ್ ಸಿಇಓ ಸತ್ಯಾ ನಡೆಲ್ಲಾ ಹೇಳಿದ್ದಾರೆ. ಆದರೇ, ಷೇರುಪೇಟೆಯಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಬೆಲೆಗಳು ಏರುತ್ತಿವೆ. ಷೇರುಪೇಟೆಯಲ್ಲಿ ಮೈಕ್ರೋಸಾಫ್ಟ್ ಕಂಪನಿಯು ದಾಖಲೆಯ ಲಾಭವನ್ನು ಗಳಿಸುತ್ತಿದೆ.
ಇಂಟೆಲ್ ಕಂಪನಿಯು 24 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಪ್ಯಾನಸೋನಿಕ್ ಜಾಗತಿಕವಾಗಿ 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಮೆಟಾ ಕಂಪನಿಯು ತನ್ನ ಮಾನವ ಸಂಪನ್ಮೂಲದ ಪೈಕಿ ಶೇ.5 ರಷ್ಟು ಉದ್ಯೋಗಿಗಳನ್ನು ಮನೆಗೆ ಕಳಿಸಿದೆ. ಐಟಿ ವಲಯದ ಸಂಘಟನೆ ನಾಸಕಾಮ್ ಪ್ರಕಾರ, 54 ಲಕ್ಷ ಮಂದಿ ಐಟಿ ವಲಯ, ಬಿಪಿಎಂ ಮತ್ತು ಆರ್ ಅಂಡ್ ಡಿ ಸರ್ವೀಸಸ್ ಉದ್ಯೋಗದಲ್ಲಿದ್ದಾರೆ. ಇವರ ಪೈಕಿ ಬಹುತೇಕರು ಈಗ ಎಐ ಸಹಭಾಗಿತ್ವದ ಕಾರ್ಯಾಚರಣೆಗೆ ಸಿದ್ಧವಾಗಬೇಕು. 2030ರ ವೇಳೆಗೆ ಶೇ.80 ರಷ್ಟು ಮಂದಿ ಡಿಜಿಟಲ್ ಜಗತ್ತಿಗೆ ತಮ್ಮನ್ನು ತಾವು ಅಪ್ ಗ್ರೇಡ್ ಮಾಡಿಕೊಳ್ಳಬೇಕು. ಮುಂದಿನ 5 ವರ್ಷ ಐಟಿ ವಲಯದ ಉದ್ಯೋಗಿಗಳಿಗೆ ಅಪ್ ಗ್ರೇಡ್ ಆಗಲು ಬಹಳ ಮಹತ್ವದ್ದು. ಈಗಲೇ ಎಐ ನಿಂದಲೇ ಕಂಪನಿಯ ಕೆಲಸಗಳು ನಡೆಯುತ್ತಿವೆ. ಎಐ ಕಾರಣದಿಂದಾಗಿಯೇ ಬಹಳಷ್ಟು ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿವೆ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us