ರೋಚಕ ಪಂದ್ಯಕ್ಕೆ ಬಿಗ್​ ಟ್ವಿಸ್ಟ್​​.. ಸೂಪರ್​ ಓವರ್​​ನಲ್ಲಿ ಗೆದ್ದು ಬೀಗಿದ ಭಾರತ!

author-image
Ganesh Nachikethu
Updated On
ರೋಚಕ ಪಂದ್ಯಕ್ಕೆ ಬಿಗ್​ ಟ್ವಿಸ್ಟ್​​.. ಸೂಪರ್​ ಓವರ್​​ನಲ್ಲಿ ಗೆದ್ದು ಬೀಗಿದ ಭಾರತ!
Advertisment
  • ರೋಚಕ ಪಂದ್ಯದಲ್ಲಿ ಟೀಮ್​ ಇಂಡಿಯಾ ವಿರುದ್ಧ ಲಂಕಾಗೆ ಸೋಲು!
  • ಕೊನೆ ಮ್ಯಾಚ್​​ನಲ್ಲಿ ಸೂಪರ್​ ಓವರ್​ನಲ್ಲಿ ಗೆದ್ದು ಬೀಗಿದ ಭಾರತ ತಂಡ
  • ಶ್ರೀಲಕಾ ಟಿ20 ಸರಣಿಯನ್ನು ಕ್ಲೀನ್​ ಸ್ವೀಪ್​ ಮಾಡಿದ ಟೀಮ್​ ಇಂಡಿಯಾ

ಮೊದಲ 2 ಪಂದ್ಯಗಳಲ್ಲಿ ಗೆದ್ದ ಅತಿಯಾದ ಆತ್ಮವಿಶ್ವಾಸ 3ನೇ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಮುಳುವಾಯ್ತು. ತಂಡದಲ್ಲಿ ಬರೋಬ್ಬರಿ 4 ಬದಲಾವಣೆ ಮಾಡಿಕೊಂಡು, ಸರಣಿ ಕ್ಲೀನ್​ ಸ್ವೀಪ್​ ಟಾರ್ಗೆಟ್​ ಇಟ್ಟುಕೊಂಡು ಕಣಕ್ಕಿಳಿದ ಟೀಮ್​ ಇಂಡಿಯಾಗೆ ಪೆಲ್ಲೆಕೆಲೆಯಲ್ಲಿ ಎದುರಾಗಿದ್ದು ಶಾಕ್​.! ಗಾಯಗೊಂಡ ಸಿಂಹದಂತೆ ಲಂಕನ್​ ಲಯನ್ಸ್​ ಘರ್ಜಿಸಿದ್ರೆ, ಭಾರತೀಯ ಬ್ಯಾಟರ್ಸ್​ ಪೆವಿಲಿಯನ್​ ಪರೇಡ್​ ನಡೆಸಿದ್ರು.

ಪಲ್ಲೆಕೆಲೆ ಮೈದಾನದಲ್ಲಿ ಕಣಕ್ಕಿಳಿದಷ್ಟೇ ವೇಗವಾಗಿ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ಗೆ ವಾಪಾಸ್ಸಾದ ಪರಿಯಿದು. ಮೊದಲ 2 ಪಂದ್ಯದಲ್ಲಿ ಮುಖಭಂಗ ಅನುಭವಿಸಿ ಕೆರಳಿದ್ದ ಲಂಕನ್​​ ಸಿಂಹಗಳು ಮೈದಾನದಲ್ಲಿ ಅಕ್ಷರಶಃ ಜಾದೂ ಮಾಡಿದ್ರು. ಇವ್ರ ಮೋಡಿಗೆ ಬಲಿಯಾದ ಭಾರತದ ನಾಲ್ವರು ಟಾಪ್​ ಆರ್ಡರ್​ ಬ್ಯಾಟರ್ಸ್​, ತಂಡ 30 ರನ್​ಗಳಿಸುವಷ್ಟರಲ್ಲೇ ಪೆವಿಲಿಯನ್​ ಸೇರಿದ್ರು.

ಕುಸಿದ ತಂಡಕ್ಕೆ ಚೇತರಿಕೆ ನೀಡಿದ ಶುಭ್​ಮನ್​ - ​ಪರಾಗ್​.!

4 ವಿಕೆಟ್​​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಬಳಿಕ ಕಣಕ್ಕಿಳಿದ ಶಿವಂ ದುಬೆ ಕೂಡ ಆಸರೆಯಾಗಲಿಲ್ಲ. ತಾಳ್ಮೆಯ ಆಟವಾಡ್ತಿದ್ದ ದುಬೆ, 13 ರನ್​ಗಳಿಸಿ ನಿರ್ಗಮಿಸಿದ್ರು. ಬಳಿಕ ಜೊತೆಯಾದ ಶುಭ್​ಮನ್​ ಗಿಲ್​, ರಿಯಾನ್​ ಪರಾಗ್​ ಅರ್ಧಶತಕದ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ರು.

39 ರನ್​ಗಳಿಸಿ ಶುಭಮನ್​ ಔಟಾದ್ರೆ, ರಿಯಾನ್​ ಪರಾಗ್​ 26 ರನ್​ಗಳಿಸಿ ನಿರ್ಗಮಿಸಿದ್ರು. ಕೊನೆ ಹಂತದಲ್ಲಿ ವಾಷಿಂಗ್ಟನ್​ ಸುಂದರ್​ 25 ರನ್​ಗಳ ಉತ್ತಮ ಇನ್ನಿಂಗ್ಸ್​ ಕಟ್ಟಿದ್ರು. ಅಂತಿಮವಾಗಿ 20 ಓವರ್​ಗಳ ಅಂತ್ಯಕ್ಕೆ ಟೀಮ್​ ಇಂಡಿಯಾ 8 ವಿಕೆಟ್​ ಕಳೆದುಕೊಂಡು 137 ರನ್​ಗಳಿಸಿತು.

ಶ್ರೀಲಂಕಾಗೆ ಉತ್ತಮ ಆರಂಭ ನೀಡಿದ ನಿಸ್ಸಂಕಾ-ಮೆಂಡಿಸ್​..!

138 ರನ್​ಗಳ ಟಾರ್ಗೆಟ್​​ ಬೆನ್ನಟ್ಟಿದ ಶ್ರೀಲಂಕಾಗೆ ನಿಸ್ಸಾಂಕಾ ಹಾಗೂ ಕುಸಾಲ್ ಮೆಂಡಿಸ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್​ಗೆ 58 ರನ್​​ಗಳ ಜೊತೆಯಾಟವಾಡಿ ಮುನ್ನುಗ್ಗುತ್ತಿತ್ತು. ಈ ವೇಳೆ 26 ರನ್ ಸಿಡಿಸಿದ್ದ ನಿಸ್ಸಾಂಕಾಗೆ ರವಿ ಬಿಷ್ನೋಯಿ ಪೆವಿಲಿಯನ್ ಹಾದಿ ತೋರಿದರು.

28 ಬಾಲ್​.. 26 ರನ್​.. 7 ವಿಕೆಟ್​..! ಪಂದ್ಯಕ್ಕೆ ಟ್ವಿಸ್ಟ್​..!

ನಿಸ್ಸಾಂಕಾ ವಿಕೆಟ್ ಪತನದ ಬಳಿಕ ಕುಸಾಲ್ ಮೆಂಡಿಸ್ ಜೊತೆಗೂಡಿದ ಕುಸಾಲ್ ಪೆರೆರಾ ಸ್ಪೋಟಕ ಇನ್ನಿಂಗ್ ಆಡಿದ್ರೆ. ಎಚ್ಚರಿಕೆಯ ಬ್ಯಾಟಿಂಗ್ ನಡೆಸ್ತಿದ್ದ ಕುಸಾಲ್ ಮೆಂಡಿಸ್, 43 ರನ್ ಗಳಿಸಿದ್ದಾಗ ಬಿಷ್ನೋಯಿಗೆ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಬಂದ ಹಸರಂಗ ಹಾಗೂ ಚರಿತ ಅಸಲಂಕಾಗೆ ಸುಂದರ್​​​​​ ಪೆವಿಲಿಯನ್ ಹಾದಿ ತೋರಿದ್ರು.

ಲಂಕಾ ಪರ ಸ್ಪೋಟಕ ಬ್ಯಾಟಿಂಗ್ ನಡೆಸಿದ ಕುಸಾಲ್ ಪೆರೆರಾ, ಟೀಮ್ ಇಂಡಿಯಾ ಬೌಲರ್​ಗಳನ್ನ ಇನ್ನಿಲ್ಲದೆ ಕಾಡಿದರು. 46 ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ಕುಸಾಲ್ ಪರೆರಾ ಲಂಕಾಗೆ ಗೆಲುವಿನ ದಡ ಸೇರಿಸುವ ಲೆಕ್ಕಚಾರದಲ್ಲಿದ್ದರು. ಆದ್ರೆ, 19ನೇ ಓವರ್​ನಲ್ಲಿ ದಾಳಿಗಿಳಿದ ರಿಂಕು ಸಿಂಗ್, ಪೆರೆರಾ ಹಾಗೂ ರಮೇಶ್​ ಮೆಂಡಿಸ್ ವಿಕೆಟ್ ಬೇಟೆಯಾಡಿ ಪಂದ್ಯಕ್ಕೆ ಟ್ವಿಸ್ಟ್ ನೀಡಿದರು.

ಕೊನೆ ಓವರ್​ನಲ್ಲಿ ದಾಳಿಗಿಳಿದ ಸೂರ್ಯಕುಮಾರ್, ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಕಬಳಿಸಿದರು. ಕೊನೆ 2 ಎಸೆತಗಳಲ್ಲಿ 5 ರನ್ ಗಳಿಸಬೇಕಾದ ಸವಾಲು ಲಂಕಾ ಮುಂದಿತ್ತು. ಆದ್ರೆ, 4 ರನ್​​​​ ಗಳಿಸಷ್ಟೇ ಶಕ್ತವಾದ ಲಂಕಾ ಪಂದ್ಯವನ್ನು ಟೈ ಮಾಡಿಕೊಳ್ತು.

ಸೂಪರ್ ಓವರ್​​​​​​ನಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ!

ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್​​ಗೆ ಇಳಿದ ಶ್ರೀಲಂಕಾಗೆ ಸ್ಪಿನ್ನರ್​ ಸುಂದರ್, 3 ಎಸೆತಗಳಲ್ಲಿ 2 ವಿಕೆಟ್ ಬೇಟೆಯಾಡಿ​ ಕೇವಲ 2 ರನ್​ಗಳಿಗೆ ಕಟ್ಟಿಹಾಕಿದರು. ಈ ಟಾರ್ಗೆಟ್​ ಬೆನ್ನಟ್ಟಿದ ಟೀಮ್ ಇಂಡಿಯಾ, ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಗೆಲುವು ಸಾಧಿಸಿತು. ಆ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್​​ಸ್ವೀಪ್​​ ಸಾಧನೆ ಮಾಡ್ತು.

ಇದನ್ನೂ ಓದಿ: ‘ಎಷ್ಟು ಅವಕಾಶ ಕೊಟ್ರೂ ಅದೇ ರಾಗ ಅದೇ ಹಾಡು’- ನಾಚಿಕೆ ಆಗಬೇಕು ಎಂದು ಸ್ಟಾರ್​ ಪ್ಲೇಯರ್​ ವಿರುದ್ಧ ಆಕ್ರೋಶ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment