/newsfirstlive-kannada/media/post_attachments/wp-content/uploads/2024/10/Cheteshwar-Pujara.jpg)
ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಚೇತೇಶ್ವರ್ ಪೂಜಾರ. ಇವರು ಹಲವು ದಿನಗಳಿಂದ ಭಾರತ ಟೆಸ್ಟ್ ತಂಡದಿಂದ ದೂರ ಉಳಿದಿದ್ದಾರೆ. ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಅವಕಾಶ ಸಿಕ್ಕಿಲ್ಲ. ಹಾಗಾಗಿ ಮುಂದೆ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರೋ ಬಾರ್ಡರ್ ಗವಾಸ್ಕರ್ ಸರಣಿಗೆ ತಮ್ಮನ್ನು ಪರಿಗಣಿಸಿ ಎಂದು ಚೇತೇಶ್ವರ್ ಪೂಜಾರ ಬಿಸಿಸಿಐ ಸೆಲೆಕ್ಷನ್ ಕಮಿಟಿಗೆ ಎಚ್ಚರಿಕೆ ನೀಡಿದ್ದಾರೆ.
ಪೂಜಾರ ಅಮೋಘ ಪ್ರದರ್ಶನ
ಸದ್ಯ 2024ರ ರಣಜಿ ಟ್ರೋಫಿ ನಡೆಯುತ್ತಿದೆ. ಛತ್ತೀಸ್‌ಗಢ ಮತ್ತು ಸೌರಾಷ್ಟ್ರ ನಡುವಿನ ಪಂದ್ಯದಲ್ಲಿ ಪೂಜಾರ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರು. ತನ್ನ ಅತ್ಯುತ್ತಮ ಬ್ಯಾಟಿಂಗ್ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ರು. ಛತ್ತೀಸ್‌ಗಢ ವಿರುದ್ಧ ದ್ವಿಶತಕ ಸಿಡಿಸಿದ್ರು. ತಾನು ಎದುರಿಸಿದ ಬರೋಬ್ಬರಿ 383 ಎಸೆತಗಳಲ್ಲಿ 25 ಬೌಂಡರಿ, 1 ಸಿಕ್ಸರ್ ಸಹಾಯದಿಂದ 234 ರನ್ ಗಳಿಸಿ ಇತಿಹಾಸ ನಿರ್ಮಿಸಿದ್ರು.
ಲಾರಾ ದಾಖಲೆಯನ್ನೇ ಉಡೀಸ್ ಮಾಡಿದ ಪೂಜಾರ
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪೂಜಾರ ಸಿಡಿಸಿದ 66ನೇ ಶತಕ ಇದಾಗಿದೆ. ಈ ಮೂಲಕ ಪೂಜಾರ ಕ್ರಿಕೆಟ್ ದಿಗ್ಗಜ ಲಾರಾ ದಾಖಲೆಯನ್ನೇ ಉಡೀಸ್ ಮಾಡಿದ್ದಾರೆ. ಲಾರಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 65 ಶತಕ ಸಿಡಿಸಿದ್ರು. ಇಷ್ಟೇ ಅಲ್ಲದೇ ಭಾರತ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ 81 ಶತಕ ಬಾರಿಸಿದ್ದಾರೆ.
21000 ರನ್ ಪೂರೈಸಿ ಪೂಜಾರ
ಚೇತೇಶ್ವರ್ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 21000 ರನ್ ಪೂರೈಸಿದ್ದಾರೆ. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 4ನೇ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ನಂತರದ ಸಾಲಿನಲ್ಲಿ ಇವರು ನಿಲ್ಲುತ್ತಾರೆ.
ವರ್ಷದ ಕೊನೆಗೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಅದಕ್ಕೂ ಮುನ್ನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟ ಆಗಬೇಕಿದೆ. ಈ ಹೊತ್ತಲ್ಲೇ ತಮಗೆ ಮತ್ತೊಮ್ಮೆ ಚಾನ್ಸ್ ನೀಡಿ ಎಂದು ಬಿಸಿಸಿಐ ಸೆಲೆಕ್ಷನ್ ಕಮಿಟಿ ಬಾಗಲು ತಟ್ಟಿದ್ದಾರೆ ಪೂಜಾರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ