/newsfirstlive-kannada/media/post_attachments/wp-content/uploads/2025/05/Virat-kohli-5.jpg)
ಈ ಬಾರಿಯ ಐಪಿಎಲ್ ಟೂರ್ನಿ 18ನೇ ಸೀಸನ್, 18ರ ಜೆರ್ಸಿಯದ್ದೇ ದರ್ಬಾರ್ ಎಂಬಂತಾಗಿದೆ. ಕಿಂಗ್ ಕೊಹ್ಲಿಯ ಘರ್ಜನೆ ಅಷ್ಟು ಜೋರಾಗಿದೆ. ಕ್ಲಾಸ್ ಆಟದ ಮೂಲಕವೇ ವಿರಾಟ್ ಐಪಿಎಲ್ ಅಖಾಡದಲ್ಲಿ ಸಖತ್ ಸೌಂಡ್ ಮಾಡ್ತಿದ್ದಾರೆ. ಆದ್ರೆ ಇದೇ ಆಟ ವಿರಾಟ್, ಟಿ20ಗೆ ಗುಡ್ ಬೈ ಹೇಳಿ ತಪ್ಪು ಮಾಡಿದ್ರಾ ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ.
29, ಜೂನ್, 2024
ಅದು ಟಿ20 ವಿಶ್ವಕಪ್ ಫೈನಲ್.. ಸೌತ್ ಆಫ್ರಿಕಾ ಎದುರಿನ ಪಂದ್ಯ.. ಈ ಪಂದ್ಯದಲ್ಲಿ ಗೆದ್ದ ಟೀಮ್ ಇಂಡಿಯಾ ಟಿ20 ವಿಶ್ವ ಚಾಂಪಿಯನ್ ಆಗಿ ಮರೆದಾಡಿತ್ತು. ಗೆದ್ದ ಖುಷಿಯಲ್ಲಿ ತೇಲಾಡುತ್ತಿದ್ದ ಫ್ಯಾನ್ಸ್ಗೆ ಒಂದು ಬರ ಸಿಡಲ ಆಘಾತ ಎದುರಾಗಿತ್ತು. ಅದೇ ಆ ಪಂದ್ಯದ ಮ್ಯಾಚ್ ವಿನ್ನರ್ ವಿರಾಟ್ ಕೊಹ್ಲಿಯ ನಿವೃತ್ತಿ. ಮ್ಯಾಚ್ ಗೆಲ್ಲಿಸಿದ್ದ ಕಿಂಗ್ ಕೊಹ್ಲಿ, ಪಂದ್ಯದ ಬಳಿಕ ಸೈಲೆಂಟ್ ಆಗಿಯೇ ನಿವೃತ್ತಿಯ ಶಾಕ್ ನೀಡಿದ್ದರು. ವಯಸ್ಸಾಯ್ತು. ಟಿ20 ಕ್ರಿಕೆಟ್ನಿಂದ ದೂರವಾಗಲು ಇದೇ ಸಮಯ ಅನ್ನೋ ನೆಮ್ಮದಿಯೂ ಒಂದೆಡೆ ಇತ್ತು. ಆದ್ರೀಗ ವಿರಾಟ್, ಟಿ20ಗೆ ಗುಡ್ ಬೈ ಹೇಳಿ ತಪ್ಪು ಮಾಡಿದ್ರಾ ಎಂಬ ಪ್ರಶ್ನೆ ಕಾಡ್ತಿದೆ. ಇದಕ್ಕೆ ಕಾರಣ ಕಿಂಗ್ ಕೊಹ್ಲಿಯ ಆಟ.
ರಿಟೈರ್ಮೆಂಟ್ ಬಳಿಕವೂ ಕಿಂಗ್ ಕೊಹ್ಲಿ ಘರ್ಜನೆ
ಐಪಿಎಲ್ ಸೀಸನ್ 18. ಕೊಹ್ಲಿ ಜೆರ್ಸಿ ನಂಬರ್ 18. ಈ ಸೀಸನ್ ಕಿಂಗ್ ಕೊಹ್ಲಿಗೆ ಸಮರ್ಪಣೆ ಅನ್ನೋ ಮಾತು ಅಭಿಮಾನಿಗಳ ವಲಯದಲ್ಲಿ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೇಳಿ ಬಂದಿದ್ವು. ಅಭಿಮಾನಿಗಳ ವಲಯದ ಈ ನಿರೀಕ್ಷೆಯನ್ನ ವಿರಾಟ್ ಹುಸಿಗೊಳಿಸಿಲ್ಲ. ಐಪಿಎಲ್ ಅಖಾಡದಲ್ಲಿ ಕ್ಲಾಸ್ ಆಟದಿಂದಲೇ ಧೂಳೆಬ್ಬಿಸ್ತಿರುವ ಕೊಹ್ಲಿ, ಎದುರಾಳಿಗಳ ಪಾಲಿಗೆ ಅಕ್ಷರಶಃ ಸಿಂಹ ಸ್ವಪ್ನವಾಗಿದ್ದಾರೆ.
ಇದನ್ನೂ ಓದಿ: ಕೇವಲ ಒಂದೇ 1 ರನ್ನಿಂದ ಆರೆಂಜ್ ಕ್ಯಾಪ್ ಪಡೆದ ಕಿಂಗ್ ಕೊಹ್ಲಿ.. ಪರ್ಪಲ್ ಕ್ಯಾಪ್ ಕೂಡ ಕನ್ನಡಿಗನಿಗೆ
11ರ ಪೈಕಿ 7 ಅರ್ಧಶತಕ.. ಕೊಹ್ಲಿಯೇ ಕನ್ಸಿಸ್ಟೆನ್ಸಿ ಕಿಂಗ್!
ಕೊಹ್ಲಿ ಅಂದ್ರೆ.. ಕನ್ಸಿಸ್ಟೆನ್ಸಿ.. ಕನ್ಸಿಸ್ಟೆನ್ಸಿ ಅಂದ್ರೆ, ವಿರಾಟ್ ಕೊಹ್ಲಿ ಅನ್ನೋ ಮಾತಿದೆ. ಈ ಮಾತು ಈ ಸೀಸನ್ನಲ್ಲಿ ಆಕ್ಷರಶಃ ನಿಜ ಮಾಡಿದ್ದಾರೆ. ಯಾಕಂದ್ರೆ, ಆಡಿದ 11 ಮ್ಯಾಚ್ಗಳ ಪೈಕಿ 4 ಮ್ಯಾಚ್ಗಳಲ್ಲಿ ಬಿಟ್ರೆ, ಉಳಿದ 7 ಮ್ಯಾಚ್ಗಳಲ್ಲಿ ಅರ್ಧಶತಕದ ಗಡಿದಾಟಿದ್ದಾರೆ. ಇದು ಪ್ರಸಕ್ತ ಆವೃತ್ತಿಯಲ್ಲಿ ಆಟಗಾರನೊಬ್ಬ ಸಿಡಿಸಿದ ಗರಿಷ್ಠಅರ್ಧಶತಕಗಳಾಗಿವೆ. ಇದು ವಿರಾಟ್ ಕನ್ಸಿಸ್ಟೆನ್ಸಿ ಆಟಕ್ಕಿಡಿದ ಕೈಗನ್ನಡಿಯೇ ಆಗಿದೆ. ಇಂಟ್ರೆಸ್ಟಿಂಗ್. ಅಂದ್ರೆ, ಕೊಹ್ಲಿ ಅರ್ಧಶತಕ ಸಿಡಿಸಿದ ಪ್ರತಿ ಮ್ಯಾಚ್ನಲ್ಲಿ ಆರ್ಸಿಬಿ ಗೆಲ್ಲುತ್ತಿದೆ. ಇದು ಕೊಹ್ಲಿಯ ಆಟದ ಇಂಪ್ಯಾಕ್ಟ್ ಎಷ್ಟು ಅನ್ನೋದನ್ನೇ ಸಾರಿ ಸಾರಿ ಹೇಳ್ತಿದೆ.
36ರ ವಯಸ್ಸಿನಲ್ಲೂ ಯುವ ಆಟಗಾರರಿಗೆ ಸವಾಲ್
ಪ್ರಸಕ್ತ ಐಪಿಎಲ್ನಲ್ಲಿ ಯುವ ಆಟಗಾರರ ಹವಾ ಜೋರಾಗಿದೆ. ಟಿ20 ಸ್ಪೆಷಲಿಸ್ಟ್ಗಳ ಅಬ್ಬರ ಮತ್ತೊಂದ್ಕಡೆ ನಡೀತಿದೆ. ಬೌಲರ್ಗಳ ಮೇಲೆ ದಂಡೆತ್ತಿ ಹೋಗ್ತಿರುವ ಆಟಗಾರರ ಜೊತೆಗೆ ವಿರಾಟ್, ವೀರಾವೇಶದ ಬ್ಯಾಟಿಂಗ್ ನಡೆಸ್ತಿದ್ದಾರೆ. ಕನ್ಸಿಸ್ಟೆಂಟ್ ಆಟದಿಂದಲೇ ರನ್ ಬ್ಯಾಟಲ್ ನಡೆಸ್ತಿರುವ ವಿರಾಟ್ ಕೊಹ್ಲಿ, ಸಾಯಿ ಸುದರ್ಶನ್, ಶುಭ್ಮನ್ ಗಿಲ್, ಜೋಸ್ ಬಟ್ಲರ್, ನಿಕೊಲಸ್ ಪೂರನ್, ಸೂರ್ಯ ಕುಮಾರ್ರಂಥ ಟಿ20 ಸ್ಪೆಷಲಿಸ್ಟ್ ಹಾಗೂ ಯುವ ಆಟಗಾರರನ್ನೇ ಆರೆಂಜ್ ಕ್ಯಾಪ್ ರೇಸ್ನಲ್ಲಿ ಹಿಂದಿಕ್ಕಿದ್ದಾರೆ.. ಅಷ್ಟೇ ಅಲ್ಲ! 36ರ ವಯಸ್ಸಿನಲ್ಲೂ ಯುವ ಆಟಗಾರರು ನಾಚಿಸುವಂತ ಆಟವಾಡ್ತಿರುವ ಕೊಹ್ಲಿ, ರನ್ಭೂಮಿಯ ರನ್ವಾರ್ನಲ್ಲಿ ಎಲ್ಲರಿಗೂ ಸವಾಲ್ ಎಸೆಯುತ್ತಿದ್ದಾರೆ.
ಇದನ್ನೂ ಓದಿ: ಸತತ 6 ಎಸೆತದಲ್ಲಿ 6 ಸಿಕ್ಸರ್.. ಸ್ಟಾರ್ ಬೌಲರ್ನ ತೊಳೆದು ಹಾಕಿದ ರಿಯಾನ್ ಪರಾಗ್..!
505 ರನ್, 63.13 ಸರಾಸರಿ, ರಿಯಲ್ ಮ್ಯಾಚ್ ವಿನ್ನರ್!
ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರೂ ಚುಟುಕು ಫಾರ್ಮೆಟ್ನಲ್ಲಿ ಕೊಹ್ಲಿಯ ಖದರ್ ಕಡಿಮೆಯಾಗಿಲ್ಲ. ಈ ಸೀಸನ್ನಲ್ಲಿ ಕೊಹ್ಲಿ ಆಟ ನೋಡಿದವರಲ್ಲಿ ಟಿ20ಗೆ ತುಂಬಾ ಬೇಗ ಗುಡ್ ಬೈ ಹೇಳಿ ಬಿಟ್ರಾ ಅನ್ನೋ ಪ್ರಶ್ನೆ ಹುಟ್ಟದೆ ಇರಲ್ಲ. ಪ್ಲೇಯಿಂಗ್ ಕಂಡಿಷನ್ಸ್ನ ಅರ್ಥ ಮಾಡಿಕೊಂಡು ಮ್ಯಾಚ್ ಸಿಚ್ಯುವೇಶನ್ಗೆ ತಕ್ಕಂತೆ ಕೊಹ್ಲಿ ಅಷ್ಟು ಬೊಂಬಾಟ್ ಬ್ಯಾಟಿಂಗ್ ನಡೆಸ್ತಿದ್ದಾರೆ. ಸೀಸನ್ನಲ್ಲಿ 11 ಇನ್ನಿಂಗ್ಸ್ಗಳನ್ನಾಡಿರೋ ವಿರಾಟ್ ಬರೋಬ್ಬರಿ 63.13ರ ಸರಾಸರಿಯಲ್ಲಿ 505 ರನ್ ಕೊಳ್ಳೆ ಹೊಡೆದಿದ್ದಾರೆ. 7 ಬಾರಿ ಹಾಫ್ ಸೆಂಚುರಿಯ ಗಡಿ ದಾಟಿದ್ದಾರೆ. ಅಷ್ಟೇ ಅಲ್ಲ.! ಆರ್ಸಿಬಿಯ ರಿಯಲ್ ಮ್ಯಾಚ್ ವಿನ್ನರ್ ಆಗಿ ಮೆರೆದಾಡ್ತಿದ್ದಾರೆ.
2026ರ ವಿಶ್ವಕಪ್ ತನಕ ಆಡಬೇಕಿತ್ತಾ ವಿರಾಟ್?
ಏಜ್ ಇಸ್ ಜಸ್ಟ್ ಎ ನಂಬರ್ ಎಂಬಂತ ಟಿ20 ಅಖಾಡದಲ್ಲಿ ಅಬ್ಬರಿಸ್ತಿರುವ ವಿರಾಟ್, ನಿಜಕ್ಕೂ 2026ರ ಟಿ20 ವಿಶ್ವಕಪ್ನಲ್ಲಿ ಆಡಿದ್ರೆ ಉತ್ತಮ ಎಂಬ ಮಾತುಗಳು ಕೇಳಿ ಬರುತ್ತಿದೆ. ಯಾಕಂದ್ರೆ, 2026ರ ಟಿ20 ವಿಶ್ವಕಪ್ ಭಾರತ ಹಾಗೂ ಲಂಕಾ ಅತಿಥ್ಯದಲ್ಲಿ ನಡೆಯಲಿದೆ. ಭಾರತ ಹಾಗೂ ಲಂಕಾದ ಯಾವುದೇ ಕಂಡೀಷನ್ಸ್ನಲ್ಲಾದರು ಸರಾಗವಾಗಿ ರನ್ ಗಳಿಸಬಲ್ಲ ಕೊಹ್ಲಿ, 36ರ ವಯಸ್ಸಿನಲ್ಲೂ ಅದೇ ಫಿಟ್ನೆಸ್ ಹೊಂದಿದ್ದಾರೆ. ಟಿ20ಗೆ ಬೇಕಾದ ರಿದಮ್ ಇದೆ. ಇದೆಲ್ಲಾ ಇರುವ ಕೊಹ್ಲಿ, ಮುಂದಿನ ಟಿ20 ತನಕ ವೇಯ್ಟ್ ಮಾಡಿದ್ರೆ ಟೀಮ್ ಇಂಡಿಯಾಗೆ ಲಾಭವಾಗ್ತಿತ್ತು ಅನ್ನೋದು ಎಲ್ಲರ ಅಭಿಪ್ರಾಯ.
ಇದನ್ನೂ ಓದಿ: ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಭಾರೀ ಏರಿಳಿತ.. ಪ್ಲೇ-ಆಫ್ಗಾಗಿ ಪೈಪೋಟಿ ಹೇಗಿದೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್