ಐತಿಹಾಸಿಕ ದಾಖಲೆ; ಬೃಹತ್​ ರನ್​ಗಳ ಅಂತರದಿಂದ ಗೆಲುವು ಸಾಧಿಸಿದ ಟೀಮ್ ಇಂಡಿಯಾ

author-image
Bheemappa
Updated On
ಐತಿಹಾಸಿಕ ದಾಖಲೆ; ಬೃಹತ್​ ರನ್​ಗಳ ಅಂತರದಿಂದ ಗೆಲುವು ಸಾಧಿಸಿದ ಟೀಮ್ ಇಂಡಿಯಾ
Advertisment
  • ದೊಡ್ಡ ಅಂತರದಿಂದ ಎದುರಾಳಿ ವಿರುದ್ಧ ಭಾರತಕ್ಕೆ ಜಯ
  • ಎರಡು ಸೆಂಚುರಿಗಳ ನೆರವಿನಿಂದ ಭಾರತ ಗೆಲುವು ಪಡೆದಿದೆ
  • ಅಮೋಘವಾದ ಶತಕ ಸಿಡಿಸಿದ ಸ್ಮೃತಿ ಮಂದಾನ, ಪ್ರತೀಕಾ

ಮಹಿಳೆಯರ ಐಸಿಸಿ ಚಾಂಪಿಯನ್​ಶಿಪ್ ಟೂರ್ನಿಯ ಕೊನೆಯ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ದೊಡ್ಡ ಮೊತ್ತದ ಗೆಲುವು ಸಾಧಿಸಿದೆ. ಐರ್ಲೆಂಡ್ ತಂಡ ಕೇವಲ 131 ರನ್​ಗೆ ಆಲೌಟ್ ಆಗುವ ಮೂಲಕ ಭಾರತ 304 ರನ್​ಗಳ ಅಂತರದಿಂದ ಗೆಲುವು ಪಡೆದು ಸಂಭ್ರಮಿಸಿದೆ. ಈ ಮೂಲಕ ಸರಣಿಯನ್ನು 3-0 ಅಂತರದಿಂದ ಗೆದ್ದು ಭಾರತ ಟ್ರೋಫಿ ತನ್ನದಾಗಿಸಿಕೊಂಡಿದೆ.

ರಾಜ್​ಕೋಟ್​ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕಿ ಸ್ಮೃತಿ ಮಂದಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಓಪನರ್ ಆಗಿ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಹಾಗೂ ಪ್ರತೀಕಾ ರಾವಲ್ ಅವರ ಅಮೋಘ ಶತಕದ ನೆರವಿನಿಂದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 5 ವಿಕೆಟ್​ಗೆ 435 ರನ್​ಗಳ ಬೃಹತ್​ ಮೊತ್ತದ ರನ್ ಕಲೆ ಹಾಕಿತ್ತು. ನಾಯಕಿ ಸ್ಮೃತಿ ಮಂದಾನ ಕೇವಲ 70 ಎಸೆತಗಳಲ್ಲಿ ಶತಕ ಸಿಡಿಸಿ, ಅತಿ ವೇಗದ ಸೆಂಚುರಿ ಬಾರಿಸಿದ ಖ್ಯಾತಿಗೆ ಪಾತ್ರರಾದರು.

publive-image

ಸ್ಮೃತಿ ಮಂದಾನ ಒಟ್ಟು 87 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್ ಸಮೇತ 135 ರನ್​ಗಳನ್ನು ಬಾರಿಸಿ ವಿಕೆಟ್ ಒಪ್ಪಿಸಿದರು. ಆರಂಭದಿಂದಲೂ ಸ್ಮೃತಿ ಮಂದಾನಗೆ ಜೋಡಿಯಾದ ಪ್ರತೀಕಾ ರಾವಲ್ ನಿಧಾನವಾದ ಬ್ಯಾಟಿಂಗ್ ಪ್ರದರ್ಶನ ಮಾಡಿ 100 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಏಕದಿನ ಪಂದ್ಯದಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದ್ದಲ್ಲೇ 129 ಎಸೆತಗಳಲ್ಲಿ ಪ್ರತೀಕಾ ರಾವಲ್ 1 ಸಿಕ್ಸರ್, 20 ಬೌಂಡರಿಗಳಿಂದ 154 ರನ್ ಗಳಿಸಿ ದಾಖಲೆ ಮಾಡಿದರು. ರಿಚಾ ಘೋಷ್ ಕೂಡ ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾದರು. ಈ ಮೂವರ ಬ್ಯಾಟಿಂಗ್ ಬಲದಿಂದ ಭಾರತ ಬೃಹತ್ ಮೊತ್ತದ ರನ್​ ಕಲೆ ಹಾಕಲು ಸಾಧ್ಯವಾಯಿತು.

ಇದನ್ನೂ ಓದಿ:ನಾಯಕಿ ಸ್ಮೃತಿ ಮಂದಾನ, ಪ್ರತೀಕಾ ಅದ್ಭುತ ಸೆಂಚುರಿ.. ಎದುರಾಳಿಗೆ ಬೃಹತ್ ಟಾರ್ಗೆಟ್

ಈ ದೊಡ್ಡ ಮೊತ್ತದ ರನ್​ ಟಾರ್ಗೆಟ್ ಮಾಡುವಲ್ಲಿ ಐರ್ಲೆಂಡ್ ಮಹಿಳೆಯರು ಆರಂಭದಲ್ಲೇ ಎಡವಿದರು. ಭಾರತದ ನಾರಿಯರ ಬೌಲಿಂಗ್​​ ಮುಂದೆ ಐರ್ಲೆಂಡ್ ಬ್ಯಾಟಿಂಗ್ ಅಕ್ಷರಶಃ ವಿಫಲವಾಯಿತು. ಸಾರಾ ಫೋರ್ಬ್ಸ್ 41 ಹಾಗೂ ಆರ್ಲಾ ಪ್ರೆಂಡರ್ಗಾಸ್ಟ್ 36 ಈ ಇಬ್ಬರನ್ನು ಬಿಟ್ಟರೇ ಉಳಿದ ಯಾವ ಆಟಗಾರ್ತಿಯು 15 ರನ್​ಗಳ ಗಡಿ ದಾಟಲಿಲ್ಲ. ಹೀಗಾಗಿ ಐರ್ಲೆಂಡ್ ತಂಡ ಕೇವಲ 31.4 ಓವರ್​​ಗಳಲ್ಲಿ ತನ್ನೆಲ್ಲಾ ವಿಕೆಟ್​​ ಕಳೆದುಕೊಂಡು 131 ರನ್​ ಮಾತ್ರ ಗಳಿಸಿತು. ಇದರಿಂದ ಟೀಮ್ ಇಂಡಿಯಾ ವುಮೆನ್ಸ್​ 304 ರನ್​ಗಳ ಬೃಹತ್​ ಮೊತ್ತದ ರನ್​ಗಳ ಅಂತರದಿಂದ ಗೆಲುವು ಪಡೆಯಿತು.

ಟೀಮ್ ಇಂಡಿಯಾ ವುಮೆನ್ಸ್ ಈ ಗೆಲುವು ಮಹಿಳೆಯರ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮೊತ್ತದ ಅಂತರದ ಗೆಲುವು ಆಗಿದೆ. 304 ರನ್​ಗಳ ಅಂತರದಿಂದ ಯಾವುದೇ ಟೀಮ್ ಇದುವರೆಗೂ ಗೆಲುವು ಪಡೆದಿಲ್ಲ. ಆದರೆ ಭಾರತ ಈ ಗೆಲುವನ್ನು ಸಾಧಿಸುವ ಮೂಲಕ ಹೊಸ ಇತಿಹಾಸ ಬರೆದಿದೆ. ಇನ್ನು ಈ ಹಿಂದೆ ಐರ್ಲೆಂಡ್​ ತಂಡ 249 ರನ್​ಗಳ ಅಂತರದಿಂದ ಸೋತಿರುವುದು ದಾಖಲೆಯಲ್ಲಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment