/newsfirstlive-kannada/media/post_attachments/wp-content/uploads/2025/03/ROHIT_SHARMA-3.jpg)
ಚಾಂಪಿಯನ್ಸ್ ಟ್ರೋಫಿ ಟೂರ್ನಿ ಇತಿಹಾಸದಲ್ಲೇ ಭಾರತ ಮೂರನೇ ಬಾರಿಗೆ ಗೆದ್ದು ಬೀಗಿದೆ. 12 ವರ್ಷಗಳ ಬಳಿಕ 3ನೇ ಬಾರಿ ಟ್ರೋಫಿ ಎತ್ತಿ ಹಿಡಿದು ಸಂಭ್ರಮದಲ್ಲಿ ತೇಲಾಡಿದೆ.
ವಿಶ್ವಕಪ್ ಇತಿಹಾಸದಲ್ಲಿ ಪಾಕ್ ವಿರುದ್ಧ 8ನೇ ಬಾರಿ ಟೀಮ್ ಇಂಡಿಯಾ ಗೆದ್ದುಬೀಗಿದೆ. ವರ್ಲ್ಡ್ ಕಪ್ನಲ್ಲಿ ಸೋಲಿಲ್ಲದ ಸರದಾರ ಅಂತಾ ಸಾಬೀತುಪಡಿಸಿದೆ. ಬದ್ಧವೈರಿಗಳಿಗೆ ರೋಹಿತ್ ಪಡೆ ಆನ್ಫೀಲ್ಡ್ ಮಣ್ಣು ಮುಕ್ಕಿಸಿದೆ. ಹೀಗೆ ದೊಡ್ಡ ಗೆಲುವೇ ಸಿಕ್ಕ ಕಾರಣ ಸಂಭ್ರಮಾಚರಣೆಯೂ ದೊಡ್ಡ ಮಟ್ಟದಲ್ಲೇ ನಡೆದಿದೆ.
ಸಂಭ್ರಮ.. ಸಡಗರ.. ತ್ರಿವರ್ಣ ಧ್ವಜದ ಹಾರಾಟ. ಬ್ಲೂ ಜೆರ್ಸಿ ತೊಟ್ಟು ಹರ್ಷೋದ್ಘಾರ. ಪಟಾಕಿ ಸಿಡಿಸಿ ವಿಜಯದ ಆಚರಣೆ. ಇವೆಲ್ಲದಕ್ಕೂ ಕಾರಣ ಟೀಂ ಇಂಡಿಯಾ 12 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಗೆದ್ದಿರೋದು. ದುಬೈನಲ್ಲಿ ಟೀಮ್ ಇಂಡಿಯಾ ಜಯ ಸಾಧಿಸ್ತಿದ್ದಂತೆ ರಾಷ್ಟ್ರಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಕತ್ತಲಲ್ಲೂ ಸಂಭ್ರಮದ ಬೆಳಕು ಮೂಡಿತ್ತು. ಫ್ಯಾನ್ಸ್ಗಳ ಸಪ್ಪಳ ಜೋರಾಗಿತ್ತು.
ಭಾರತ ಗೆಲುವು.. ಪಟಾಕಿ ಸಿಡಿಸಿ ಫ್ಯಾನ್ಸ್ ಮೋಜು!
ದುಬೈನಲ್ಲಿ ನಿನ್ನೆ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ನಲ್ಲಿ ಟೀಂ ಇಂಡಿಯಾ ಕಿವೀಸ್ನ ಕಿವಿ ಹಿಂಡಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ಅತ್ತ ಟೀಂ ಇಂಡಿಯಾ ಗೆಲ್ಲುತ್ತಿದ್ದಂತೆ ದೇಶಾದ್ಯಂತ ಜೈ ಹೋ ಎಂಬ ಮಂತ್ರಘೋಷ ಮೊಳಗಿತ್ತು. ಎಲ್ಲೆಲ್ಲೂ ಕ್ರಿಕೆಟ್ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲಾದಂತಾಗಿತ್ತು.
ಬೆಂಗಳೂರಿನಲ್ಲಿ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಊಹೆಗೂ ಮೀರಿತ್ತು. ವೀಕೆಂಡ್ ಎಂಜಾಯ್ ಮಾಡುತ್ತಾ ಟೀಮ್ ಇಂಡಿಯಾ ಆಟ ನೋಡಿದವರು ರೊಚ್ಚಿಗದ್ದಿದ್ರೂ. ಕುಣಿದು ಕುಪ್ಪಳಿಸುತ್ತಾ ಟೀಂ ಇಂಡಿಯಾ ಗೆಲುವನ್ನ ಅದ್ಧೂರಿಯಾಗಿ ಸಂಭ್ರಮಿಸಿದರು.
ಬೆಳಗಾವಿಯಲ್ಲೂ ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮ ಭರ್ಜರಿಯಾಗಿತ್ತು. ಪಟಾಕಿ ಸಿಡಿಸಿ, ತ್ರಿವರ್ಣ ಧ್ವಜ ಹಿಡಿದು ಯುವಕರು ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದರು. ಟೀಂ ಇಂಡಿಯಾ ಜಯವನ್ನ ಸಂಭ್ರಮಿಸುತ್ತಾ ಘೋಷಣೆಗಳನ್ನು ಕೂಗಿದರು.
ಮೈಸೂರಿನಲ್ಲೂ ಈ ಸಂಭ್ರಮ ಶಿಖರವೇರಿತ್ತು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಈ ಸಂಭ್ರಮ ಶಿಖರವೇರಿತ್ತು. ರೋಹಿತ್ ಶರ್ಮಾ ನೇತೃತ್ವದ ತಂಡ ಜಯಭೇರಿ ಭಾರಿಸಿದ್ದನ್ನ ಭರ್ಜರಿ ಸೆಲೆಬ್ರೇಟ್ ಮಾಡಲಾಯಿತು. ಟೀಂ ಪರ ಜಯಘೋಷ ಕೂಗುತ್ತಾ ಯುವಕರು ತಮ್ಮ ಖುಷಿಯನ್ನ ವ್ಯಕ್ತಪಡಿಸಿದರು.
ಇತ್ತ, ಹುಬ್ಬಳ್ಳಿಯಲ್ಲೂ ಕೂಡ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಡೊಲ್ಲು ಬಾರಿಸಿ, ಪಟಾಕಿ ಸಿಡಿಸಿ ಕ್ರಿಕೆಟ್ ಅಭಿಮಾನಿಗಳು ಟೀಂ ಇಂಡಿಯಾ ಗೆಲುವನ್ನ ಸಖತ್ ಎಂಜಾಯ್ ಮಾಡಿದ್ದಾರೆ. ಬೀದರ್, ಚಿಕ್ಕಮಗಳೂರು, ಧಾರವಾಡ, ಕಲಬುರಗಿ ಸೇರಿ ಎಲ್ಲಾ ಜಿಲ್ಲೆಗಳಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದ ಸಂಭ್ರಮ ಮನೆಮಾಡಿತ್ತು.
ದೇಶಾದ್ಯಂತ ಪಟಾಕಿ ಸಿಡಿಸಿ, ಡ್ಯಾನ್ಸ್ ಮಾಡುತ್ತಾ ಟೀಂ ಇಂಡಿಯಾ ಅಭಿಮಾನಿಗಳು ಸಂಭ್ರಮಪಟ್ಟಿದ್ದಾರೆ. ಎಲ್ಲೆಲ್ಲೂ ಜೈ ಹೋ ಟೀಂ ಇಂಡಿಯಾ ಎಂಬ ಘೋಷ ಮೊಳಗಿತ್ತು. ದೇಶದ ಮೂಲೆ ಮೂಲೆಯಲ್ಲಿ ರೋಹಿತ್ ಬಳಗದ ದಾಖಲೆಯ ಜಯಕ್ಕೆ ಸಂಭ್ರಮದ ಸುನಾಮಿಯೇ ಎದ್ದಿತ್ತು. 12 ವರ್ಷಗಳ ಬಳಿಕ ಭಾರತ ಚಾಂಪಿಯನ್ ಟ್ರೋಫಿ ಸಂಭ್ರಮ ಇಡೀ ದೇಶದಲ್ಲಿ ಮನೆ ಮಾಡಿದೆ. ಟೀಮ್ ಇಂಡಿಯಾ ಜಯದ ಗುಂಗಲ್ಲೇ ಕ್ರಿಕೆಟ್ ಫ್ಯಾನ್ಸ್ ಇಡೀ ರಾತ್ರಿ ಕಳೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ