/newsfirstlive-kannada/media/media_files/2025/08/22/oracle-company-lay-off-2025-08-22-20-07-32.jpg)
ಒರಾಕಲ್ ಕಂಪನಿಯಿಂದ ಶೇ.10 ರಷ್ಟು ಉದ್ಯೋಗಿಗಳಿಗೆ ಗೇಟ್ ಪಾಸ್!
ಇತ್ತೀಚೆಗೆ ಐಟಿ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿರುವುದು ಆತಂಕದ ವಿಷಯ. ಹಲವರ ಕನಸಿನ ಉದ್ಯೋಗಗಳು ಕ್ಷಣಮಾತ್ರದಲ್ಲಿ ಕಳೆದುಹೋಗುತ್ತಿದೆ. ಕೃತಕ ಬುದ್ಧಿಮತ್ತೆ (AI) ಎಂಬ ನೂತನ ತಂತ್ರಜ್ಞಾನ ಅದ್ಭುತ ವೇಗದಲ್ಲಿ ಉದ್ಯಮಗಳನ್ನು ಬದಲಾಯಿಸುತ್ತಿದೆ.
ಡೇಟಾ ನಿರ್ವಹಣೆ, ಗ್ರಾಹಕ ಸೇವೆ ಇವೆಲ್ಲವನ್ನೂ ತಂತ್ರಜ್ಞಾನ ತಾನೇ ಮಾಡಬಲ್ಲಷ್ಟು ಬಲಿಷ್ಠವಾಗಿದೆ. ಇದರ ಪರಿಣಾಮವಾಗಿ ಮಾನವ ಶ್ರಮದ ಅಗತ್ಯ ಕಡಿಮೆಯಾಗುತ್ತಿದೆ. ಹೀಗಾಗಿ ಹೆಚ್ಚು ಕಂಪನಿಗಳು automation ಕೆಲಸದ ಮೊರೆ ಹೋಗಿವೆ. ಇದರ ಪರಿಣಾಮವೇ ಲೇ ಆಫ್ ಆಗುತ್ತಿದೆ.
ಐಬಿಎಂ, Google, Amazon, Meta, Spotify ಮುಂತಾದ ದೊಡ್ಡ ಟೆಕ್ ಕಂಪನಿಗಳೂ ಸಹ ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಕ್ರಮ ಕೈಗೊಂಡಿವೆ. ಇತ್ತೀಚಿನ ವರದಿಗಳ ಪ್ರಕಾರ ಈ ವರ್ಷದಲ್ಲಿ ಮಾತ್ರ ಸುಮಾರು 100ಕ್ಕೂ ಹೆಚ್ಚು ಕಂಪನಿಗಳು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರೆಂಬ ಮಾಹಿತಿ ಇದೆ. ಈಗ ಒರಾಕಲ್ ಕಂಪನಿ ಸರದಿ.
ಒರಾಕಲ್ ವಿಶ್ವದ ಅತ್ಯಂತ ದೊಡ್ಡ ಐಟಿ ಕಂಪನಿಗಳಲ್ಲಿ ಒಂದು. ಈಗ ಒರಾಕಲ್ ತನ್ನ ಇಂಡಿಯನ್ ಟೀಮ್‌ನ ಶೇ. 10 ರಷ್ಟು ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿದೆ. ಹಾಗೆಯೇ ಅಮೆರಿಕ ಮತ್ತು ಕೆನಡಾದಲ್ಲಿರೋ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕೋ ಪ್ರಕ್ರಿಯೆ ಶುರುವಾಗಿದೆ. ಅದ್ರಲ್ಲೂ ಸಾಫ್ಟ್‌ವೇರ್ ಡೆವಲಪರ್‌ಗಳೇ ಹೆಚ್ಚು ಎಂದು ವರದಿಯಾಗಿದೆ.
ಇನ್ನೂ ಭಾರತೀಯರ ವಜಾ ಮಾಡಲು ಕಾರಣ ಏನು ಅಂತಾ ನೋಡೋದಾದ್ರೆ..!
ಅಮೆರಿಕದಲ್ಲಿರೋ ಕಂಪನಿ ಒರಾಕಲ್ ಕ್ಲೌಡ್ ಇನ್ಫ್ರಾಸ್ಟ್ರಕ್ಚರ್. ಇದರಲ್ಲಿ ಕೆಲಸ ಮಾಡುತ್ತಿರೋ ಶೇ. 10ರಷ್ಟು ಭಾರತೀಯ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ. ಉದ್ಯೋಗ ಕಡಿತವು ಪುನರ್ರಚನೆ ವ್ಯಾಯಾಮದ ಭಾಗವಾಗಿದೆ ಎಂದು ಕಂಪನಿ ಹೇಳಿದೆ. ಇನ್ನೊಂದೆಡೆ H-1B ವೀಸಾಗಳ ವಿತರಣೆ ಕಡಿಮೆ ಮಾಡುವುದಕ್ಕಾಗಿ ಮತ್ತು ಅಮೆರಿಕದ ನೀತಿ ಭಾರತೀಯರ ವಜಾಗೊಳಿಸಲು ಕಾರಣ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.
ಈಗಾಗಲೇ ಭಾರತದಲ್ಲಿರುವ ಒರಾಕಲ್‌ನ ಉದ್ಯೋಗಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ಇನ್ನೂ ಅಮೆರಿಕದಲ್ಲಿರೋ ಉದ್ಯೋಗಿಗಳಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಇನ್ನು ಕೆನಡಾದಲ್ಲಿರೋ ಉದ್ಯೋಗಿಗಳಿಗೆ ಈ ವಾರವೇ ಮಾಹಿತಿ ನೀಡುವ ಸಾಧ್ಯತೆ ಇದೆ. ಇದು ಬೇರೆ ಕಂಪನಿಗಳ ಉದ್ಯೋಗಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಒರಾಕಲ್ ಇಂಡಿಯಾದಲ್ಲಿ ಒಟ್ಟು 28 ರಿಂದ 30 ಸಾವಿರ ಉದ್ಯೋಗಿಗಳಿದ್ದಾರೆ. ಹಾಗೆಯೇ ಜಾಗತಿಕವಾಗಿ ಅಂದಾಜು 1.62 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ. ಹಲವು ವರ್ಷಗಳಿಂದ ಭಾರತವೇ ಒರಾಕಲ್ ಕಂಪನಿಗೆ ಪ್ರಮುಖ ನೆಲೆಯಾಗಿತ್ತು. ಈಗ ಭಾರತದಲ್ಲಿ ಅಂದಾಜು 3 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವುದು ನಿಶ್ಚಿತವಾಗಿದೆ.
AI ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಆಯ್ಕೆಯಾಗಿದೆ. ಕಂಪನಿಗಳಿಗೆ ಇದು ವೇಗ, ಶ್ರದ್ಧಾ ಮತ್ತು ವೆಚ್ಚಕಡಿತ ಎಂಬ ಮೂರೂ ಲಾಭಗಳನ್ನು ಒದಗಿಸುತ್ತಿದೆ. ಸಣ್ಣ ಕಂಪನಿಗಳು ಕೂಡ ಇತ್ತೀಚೆಗೆ ಯಾವುದೇ ಕಾರಣವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ.
ಒರಾಕಲ್ ಕೂಡ ಎಐನಲ್ಲಿ ಹೆಚ್ಚು ಹೂಡಿಕೆ ಮಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದೆ. ಕೃತಕ ಬುದ್ದಿಮತ್ತೆ ಬಳಕೆ ಜಾಸ್ತಿ ಮಾಡಲು ಮತ್ತು ಇಂಜಿನಿಯರ್ಸ್ ಸೇರಿದಂತೆ ಎಲ್ಲಾ ವಿಭಾಗದ ಕೆಲಸಗಾರರ ಉದ್ಯೋಗ ಕಡಿತ ಮಾಡಲು ಮುಂದಾಗಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.