/newsfirstlive-kannada/media/post_attachments/wp-content/uploads/2025/07/MI-TECHIE.jpg)
ಮುಂಬೈನಂತಹ ಮಹಾನಗರದ ಜನದಟ್ಟಣೆಯ ಜಗತ್ತಿನಲ್ಲಿ ವ್ಯಕ್ತಿಯೊಬ್ಬ ಒಂಟಿತನ, ಖಿನ್ನತೆ ಹಾಗೂ ಅಪನಂಬಿಕೆಗೆ ಒಳಗಾಗಿ ತನ್ನನ್ನೇ ತಾನು ಬರೋಬ್ಬರಿ ಮೂರು ವರ್ಷಗಳ ಕಾಲ ಸ್ವಂತ ಮನೆಯಲ್ಲಿ ಬಂಧಿಯಾಗಿದ್ದ. ಆಘಾತಕಾರಿ ವಿಚಾರ ಗೊತ್ತಾಗುತ್ತಿದ್ದಂತೆಯೇ ಆತನನ್ನು ರಕ್ಷಣೆ ಮಾಡಲಾಗಿದೆ. ಸದ್ಯ ಆಶ್ರಮವೊಂದರ ಆರೈಕೆಯಲ್ಲಿ ಇದ್ದಾನೆ.
ಯಾರು ಆತ..?
ಜುಯ್ನಾನಗರ್ ನಿವಾಸಿ ಅನೂಪ್ ಕುಮಾರ್ ನಾಯರ್ ತನ್ನನ್ನು ತಾನೇ ಕೂಡಿ ಹಾಕಿಕೊಂಡಿದ್ದ. 55 ವರ್ಷದ ಈತ, ಈ ಹಿಂದೆ ಕಂಪ್ಯೂಟರ್ ಪ್ರೋಗ್ರಾಮರ್ ಆಗಿದ್ದ. ಸ್ವಂತ ಮನೆಯಲ್ಲಿ ಬಂಧಿಸಿಕೊಂಡಿದ್ದ ಈತ, ಆಹಾರಕ್ಕಾಗಿ ಆನ್‌ಲೈನ್ ಮೂಲಕ ಡೆಲಿವರಿ ಮಾಡಿಸಿಕೊಳ್ಳುತ್ತಿದ್ದ. ಆಹಾರ ನೀಡುತ್ತಿದ್ದ ಹುಡುಗರ ಬಿಟ್ಟರೆ ಬೇರೆ ಯಾರ ಸಂಪರ್ಕದಲ್ಲೂ ಇರಲಿಲ್ಲ ಎಂದು ತಿಳಿದುಬಂದಿದೆ.
ಗೊತ್ತಾಗಿದ್ದು ಹೇಗೆ..?
ಸೋಷಿಯಲ್ ಆ್ಯಂಡ್ ಎವಾಂಜೆಲಿಕಲ್ ಅಸೋಸಿಯೇಷನ್ ಫಾರ್ ಲವ್ (SEAL) ಸಂಘಟನೆಯ ಸಾಮಾಜಿಕ ಕಾರ್ಯಕರ್ತರಿಗೆ ಫೋನ್ ಕರೆಯೊಂದು ಬಂದಿತ್ತು. ವರದಿಗಳ ಪ್ರಕಾರ, ನಾಯರ್ ಅವರ ಹಿತೈಷಿಯೊಬ್ಬರು SEALಗೆ ಕರೆ ಮಾಡಿದ್ದರು. ಈ ಸಂಘಟನೆಯು ಅನೂಪ್ ಕುಮಾರ್ ನಾಯರ್ ವಾಸಿಸುತ್ತಿದ್ದ ಫ್ಲಾಟ್ಗೆ ದೌಡಾಯಿಸಿದೆ. ಅವರ ಮನೆಯ ಬಾಗಿಲು ಮುರಿದು, ಅಸ್ತವ್ಯಸ್ತಗೊಂಡಿದ್ದ ಅವರ ಅಪಾರ್ಟ್ ಮೆಂಟ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ..
ಯಾಕೆ ಆತ ಬಂಧಿಯಾಗಿದ್ದ..?
ನಾಯರ್ ಕುಟುಂಬದಲ್ಲಿ ಈಗ ಯಾರೂ ಉಳಿದಿಲ್ಲ. ತಾಯಿ ಪೂನಮ್ಮ ನಾಯರ್ ಭಾರತೀಯ ವಾಯುಪಡೆಯ ದೂರಸಂಪರ್ಕ ವಿಭಾಗದಲ್ಲಿ ಕೆಲಸ ಮಾಡ್ತಿದ್ದರು. ತಂದೆ ವಿ.ಪಿ. ಕುಟ್ಟಿ ಕೃಷ್ಣನ್ ನಾಯರ್ ಮುಂಬೈನ ಟಾಟಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 6 ವರ್ಷಗಳ ಹಿಂದೆ ಇಬ್ಬರು ನಿಧನರಾಗಿದ್ದಾರೆ. ಅಣ್ಣ 20 ವರ್ಷಗಳ ಹಿಂದೆ ಆ*ಹತ್ಯೆ ಮಾಡಿಕೊಂಡಿದ್ದಾರೆ. ಈ ದುರಂತಗಳೇ ಅನುಪ್ ಅವರನ್ನು ತೀವ್ರ ಘಾಸಿಗೊಳಿಸಿದ್ದವು ಎನ್ನಲಾಗಿದೆ.
ಇದನ್ನೂ ಓದಿ: ಇಂದಿನಿಂದ ರೈಲು ಪ್ರಯಾಣವೂ ದುಬಾರಿ.. ಐದು ವರ್ಷಗಳ ನಂತರ ಟಿಕೆಟ್ ರೇಟ್ ಹೆಚ್ಚಳ..
ಹೀಗಾಗಿ ಅನುಪ್ ಯಾರನ್ನೂ ಭೇಟಿಯಾಗಲಿಲ್ಲ. ಯಾರ ಬಾಹ್ಯ ಸಂಪರ್ಕಕ್ಕೂ ಸಿಗಲಿಲ್ಲ. ಆನ್ಲೈನ್ನಲ್ಲಿ ಆಹಾರ ಆರ್ಡರ್ ಮಾಡೋದಕ್ಕೆ ಮಾತ್ರ ಸೀಮಿತರಾಗಿದ್ದರು. ಮನೆಯಿಂದ ಎಲ್ಲಿಗೂ ಹೊರಗೆ ಹೋಗುತ್ತಿರಲಿಲ್ಲ. ಕಸವನ್ನು ಹೊರಗೆ ಎಸೆಯುತ್ತಿರಲಿಲ್ಲ. ಕೊಳಕು ಕೋಣೆಯಲ್ಲಿ ಕೇವಲ ಒಂದು ಕುರ್ಚಿಯ ಮೇಲೆ ಮಲಗುತ್ತಿದ್ದರು ಅನ್ನೋ ವಿಚಾರ ಗೊತ್ತಾಗಿದೆ.
ಸೀಲ್ ಸಂಘಟನೆಯ ಕಾರ್ಯಕರ್ತರು ಹೋದಾಗ ಅಲ್ಲಿನ ಪರಿಸ್ಥಿತಿ ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಸೀಲ್‌ನ ಪಾದ್ರಿ ಕೆ.ಎಂ. ಫಿಲಿಪ್ ಪ್ರಕಾರ, ಮನೆಯಲ್ಲಿ ಹೆಚ್ಚಿನ ಪೀಠೋಪಕರಣಗಳು ಇರಲಿಲ್ಲ. ನಾಯರ್ ಕೇವಲ ಒಂದು ಕುರ್ಚಿಯ ಮೇಲೆ ಮಲಗುತ್ತಿದ್ದರು. ಅವರ ಪಾದಗಳಲ್ಲಿ ಗಂಭೀರ ಸೋಂಕು ಕೂಡ ಇತ್ತು. ಪ್ರಸ್ತುತ, ನಾಯರ್ ಅವರನ್ನು ಪನ್ವೇಲ್‌ನಲ್ಲಿರುವ ಸೀಲ್ ಆಶ್ರಮದಲ್ಲಿ ಇರಿಸಲಾಗಿದೆ. ಇಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಆರೈಕೆ ಮಾಡಲಾಗುತ್ತಿದೆ. ‘ನನಗೆ ಸ್ನೇಹಿತರಿಲ್ಲ, ನನ್ನ ಕುಟುಂಬ ಈಗಾಗಲೇ ಮನೆ ಬಿಟ್ಟು ಹೋಗಿದೆ. ಮತ್ತು ನನ್ನ ಆರೋಗ್ಯ ತುಂಬಾ ಹದಗೆಟ್ಟಿದ್ದು, ನನಗೆ ಹೊಸ ಕೆಲಸ ಸಿಗುತ್ತಿಲ್ಲ’ ಎಂದು ನಾಯರ್ ಹೇಳುತ್ತಿದ್ದಾರಂತೆ..
ಇದನ್ನೂ ಓದಿ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ; ಮೃತರ ಸಂಖ್ಯೆ 34ಕ್ಕೆ ಏರಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ