ವಿಮಾನ ಪತನದ ವಿಡಿಯೋ ರೆಕಾರ್ಡ್ ಮಾಡಿದ್ದ ಬಾಲಕನಿಗೆ ಈಗ ಭಯ!

author-image
Bheemappa
Updated On
ವಿಮಾನ ಪತನದ ವಿಡಿಯೋ ರೆಕಾರ್ಡ್ ಮಾಡಿದ್ದ ಬಾಲಕನಿಗೆ ಈಗ ಭಯ!
Advertisment
  • ಇನ್ನೆಂದೂ ವಿಮಾನ ಹತ್ತಲ್ಲ ಎಂದು ಬಾಲಕನ ಶಪಥ
  • ಅಹಮದಾಬಾದ್​ನಲ್ಲಿ ಪತನ ಆಗಿದ್ದ ಏರ್​ ಇಂಡಿಯಾ
  • ವಿಮಾನ ಪತನ ಕಣ್ಣಾರೆ ಕಂಡು ಭಯಗೊಂಡ ಬಾಲಕ

ಗುಜರಾತ್​​​ನ ಅಹಮದಾಬಾದ್​ನಲ್ಲಿ ಜೂನ್ 12 ರಂದು ಏರ್ ಇಂಡಿಯಾ ಡ್ರೀಮ್ ಲೈನರ್ ವಿಮಾನ ಪತನವಾಗಿದ್ದನ್ನು ಇಡೀ ಜಗತ್ತು ನೋಡಿದೆ. ಜನರು ವಿಮಾನ ಪತನದ ದೃಶ್ಯವನ್ನು ತಮ್ಮ ಮೊಬೈಲ್, ಟಿವಿ ಸ್ಕ್ರೀನ್​ಗಳಲ್ಲಿ ನೋಡಿದ್ದಾರೆ. ಆದರೇ, ಯಾರಿಗೂ ಕೂಡ ಈ ವಿಡಿಯೋ ರೆಕಾರ್ಡ್ ಮಾಡಿದ್ದು ಯಾರೆಂದು ಗೊತ್ತಿಲ್ಲ. ವಿಮಾನ ಏರ್​ಪೋರ್ಟ್​ನಿಂದ ಟೇಕಾಫ್ ಆದ ಕೆಲವೇ ಸೆಕೆಂಡ್​​ಗಳಲ್ಲಿ ಬಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡದ ಮೇಲೆ ಪತನವಾಗಿತ್ತು. ಈ ವಿಮಾನ ಪತನದ ವಿಡಿಯೋ ರೆಕಾರ್ಡ್ ಮಾಡಿದ್ದು 17 ವರ್ಷದ ಬಾಲಕ ಆರ್ಯನ್ ಅಸಾರಿ.

publive-image

ಬಾಲಕ ಆರ್ಯನ್ ಅಸಾರಿಗೆ, ತಾನು ರೆಕಾರ್ಡ್ ಮಾಡುತ್ತಿರುವ ವಿಮಾನ ಪತನವಾಗುತ್ತೆ ಎಂಬ ಸಣ್ಣ ಸುಳಿವು, ನಿರೀಕ್ಷೆ ಯಾವುದೂ ಇರಲಿಲ್ಲ. ಗುಜರಾತ್- ರಾಜಸ್ಥಾನ ಗಡಿಯ ಗ್ರಾಮದಲ್ಲಿ ವಾಸವಿದ್ದ ಆರ್ಯನ್ ಅಸಾರಿ ಜೂನ್ 12 ರಂದು ಮೊದಲ ಬಾರಿಗೆ ಅಹಮದಾಬಾದ್​ಗೆ ಬಂದಿದ್ದ. ಈ ಬಾಲಕನಿಗೆ ವಿಮಾನಗಳ ಬಗ್ಗೆ, ಅವುಗಳ ಸೌಂಡ್ ಬಗ್ಗೆ ಕುತೂಹಲ ಇತ್ತು. ಹೀಗಾಗಿ ತನ್ನ ತಂದೆಯ ಬಾಡಿಗೆ ಮನೆಯ ಟೇರೇಸ್ ಮೇಲೆ ನಿಂತು ಮೊಬೈಲ್ ನಲ್ಲಿ ವಿಮಾನ ಟೇಕಾಫ್ ಆದ ಕ್ಷಣದಿಂದ ಪತನದ ಕ್ಷಣದವರೆಗಿನ ವಿಡಿಯೋ ರೆಕಾರ್ಡ್ ಮಾಡಿದ್ದ. 24 ಸೆಕೆಂಡ್​ಗಳ ಇದೇ ವಿಡಿಯೋ ಹೊರ ಜಗತ್ತಿಗೆ ವಿಮಾನ ಪತನ ಹೇಗಾಯಿತು ಎಂಬುದು ಸ್ಪಷ್ಟವಾಗಿ ಗೊತ್ತಾಗಲು ಮತ್ತು ತನಿಖಾ ಸಂಸ್ಥೆಗಳು ತನಿಖೆ ನಡೆಸಲು ಈಗ ನೆರವಾಗಿದೆ. ಆರ್ಯಾನ್ ಅಸಾರಿ ತಂದೆ ಈ ಹಿಂದೆ ಮಿಲಿಟರಿಯಲ್ಲಿದ್ದರು. ಈಗ ಅಹಮದಾಬಾದ್ ಮೆಟ್ರೋದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದಾರೆ. ಹೀಗಾಗಿ ತಂದೆಯ ಮನೆಗೆ ಗಡಿ ಭಾಗದ ಹಳ್ಳಿಯಿಂದ ಆರ್ಯನ್ ಅಸಾರಿ ಬಂದಿದ್ದ.

ಅಹಮದಾಬಾದ್‌ನ ಕ್ರೈಂ ಬ್ರಾಂಚ್ ಪೊಲೀಸರು ಬಾಲಕ ಆರ್ಯಾನ್ ಅಸಾರಿ ಹೇಳಿಕೆಯನ್ನು ತಮ್ಮ ತನಿಖೆಯ ಭಾಗವಾಗಿ ದಾಖಲಿಸಿಕೊಂಡಿದ್ದಾರೆ. ತನ್ನ ತಂದೆಯ ಜೊತೆ ಕ್ರೈಂ ಬ್ರಾಂಚ್ ಕಚೇರಿಗೆ ಬಂದು ಆರ್ಯಾನ್ ಅಸಾರಿ ಹೇಳಿಕೆ ನೀಡಿದ್ದಾನೆ. ವಿಡಿಯೋ ರೆಕಾರ್ಡ್ ಮಾಡಿದ್ದಕ್ಕಾಗಿ ಯಾರನ್ನೂ ಬಂಧಿಸಿಲ್ಲ ಎಂದು ಅಹಮದಾಬಾದ್ ಪೊಲೀಸರು ಹೇಳಿದ್ದಾರೆ.

ವಿಡಿಯೋವನ್ನು ಮೊದಲು ಸೋದರಿಗೆ ತೋರಿಸಿದ್ದ ಆರ್ಯನ್

ವಿಮಾನ ಬಿದ್ದ ಬಳಿಕ ನನಗೆ ಬಹಳ ಭಯವಾಯಿತು. ನನ್ನ ಸೋದರಿ ಮೊದಲಿಗೆ ವಿಡಿಯೋ ನೋಡಿದ್ದಳು. ನಾನು ಏನು ನೋಡಿದ್ದೆನೋ, ಅದರಿಂದ ನನಗೆ ಭಾರೀ ಭಯವಾಯಿತು ಎಂದು ಆರ್ಯಾನ್ ಅಸಾರಿ ಹೇಳಿದ್ದಾನೆ. ನಾನು ವಿಮಾನದ ವಿಡಿಯೋವನ್ನು ನನ್ನ ಸ್ನೇಹಿತರಿಗೆ ತೋರಿಸಲು ಬಯಸಿದ್ದೆ. ಆದರೇ, ಆ ವಿಮಾನ ತೀರಾ ಕೆಳಗೆ ಹಾರಾಟ ನಡೆಸಿತ್ತು.

ನಾನು ನನ್ನ ತಂದೆಯ ಮನೆಗೆ ಮಧ್ಯಾಹ್ನ 12.30ಕ್ಕೆ ಬಂದಿದ್ದೆ. ಟೇರೇಸ್​ಗೆ ಹೋಗಿ ವಿಮಾನಗಳ ಸೌಂಡ್ ಕೇಳುತ್ತಿದ್ದೆ. ನನಗೆ ಕುತೂಹಲ ಹೆಚ್ಚಾಯಿತು. ಹೀಗಾಗಿ ವಿಮಾನಗಳ ಹಾರಾಟವನ್ನು ಮೊಬೈಲ್​​ನಲ್ಲಿ ರೆಕಾರ್ಡ್ ಮಾಡುತ್ತಿದ್ದೆ. ಆದರೇ, ಆ ವಿಮಾನ ತೀರಾ ಕೆಳಗೆ ಹಾರಾಟ ನಡೆಸಿತ್ತು. ಆ ವಿಮಾನವೇ ಭೂಮಿಗೆ ಭಾರಿ ಹತ್ತಿರದಲ್ಲಿತ್ತು. ನಾನು ಮೊದಲಿಗೆ ವಿಮಾನ, ಏರ್​​ಪೋರ್ಟ್​​ನ ಕೊನೆಯ ಭಾಗದಲ್ಲಿ ಲ್ಯಾಂಡ್ ಆಗಬಹುದು ಎಂದುಕೊಂಡಿದ್ದೆ. ಆದರೇ, ಕೆಲವೇ ಕ್ಷಣಗಳಲ್ಲಿ ಅದು ಬಿದ್ದು ಹೋಯಿತು. ನನ್ನ ಕಣ್ಣೆದುರೇ ಸ್ಫೋಟವಾಗಿ ಬೆಂಕಿಯಲ್ಲಿ ಹೊತ್ತಿ ಉರಿಯಿತು. ಇಡೀ ಘಟನೆ ಭಯಾನಕವಾಗಿತ್ತು ಎಂದು 17 ವರ್ಷದ ಬಾಲಕ ಆರ್ಯನ್ ಅಸಾರಿ ಹೇಳಿದ್ದಾನೆ. ಇನ್ನೆಂದೂ ಜೀವನದಲ್ಲಿ ವಿಮಾನ ಹತ್ತಲ್ಲ ಎಂದು ಬಾಲಕ ಹೇಳಿದ್ದಾನೆ.

ಇದನ್ನೂ ಓದಿ:ಟೀಮ್ ಇಂಡಿಯಾದಲ್ಲಿ ಕನ್ನಡಿಗರದ್ದೇ ದರ್ಬಾರ್​.. ಇಂಗ್ಲೆಂಡ್​ ವಿರುದ್ಧ ಕಣಕ್ಕೆ ಇಳಿದ ಮೂವರು

publive-image

ಬಾಲಕ ಸರಿಯಾಗಿ ಮಾತನಾಡುತ್ತಿಲ್ಲ

ಇನ್ನೂ ಆರ್ಯನ್ ಅಸಾರಿ ತನ್ನ ಸೋದರಿಯ ಜೊತೆಯೂ ಭಯ ವ್ಯಕ್ತಪಡಿಸಿದ್ದಾನೆ. ಆರ್ಯನ್ ಅಸಾರಿ, ಈಗ ಇಲ್ಲಿ ವಾಸಿಸಲು ಬಯಸುತ್ತಿಲ್ಲ. ಏಕೆಂದರೇ, ಈ ಪ್ರದೇಶವೇ ಅಪಾಯಕಾರಿ ಅಂತ ಆರ್ಯನ್ ಅಸಾರಿ ಹೇಳುತ್ತಿದ್ದಾನೆ ಎಂದು ಸೋದರಿ ಹೇಳಿದ್ದಾರೆ. ವಿಮಾನ ಪತನದ ಬಳಿಕ ಆರ್ಯನ್ ಅಸಾರಿ ಸಾಕಷ್ಟು ಭಯಗೊಂಡಿದ್ದು, ಸರಿಯಾಗಿ ಮಾತನಾಡಲು ಕೂಡ ಆತನಿಗೆ ಆಗುತ್ತಿಲ್ಲವಂತೆ.

ಆರ್ಯನ್ ಅಸಾರಿ ತಂದೆ ಏರ್​ಪೋರ್ಟ್ ಸಮೀಪವೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೇ, ಆರ್ಯಾನ್ ಜೂನ್ 12 ರಂದೇ ಅಹಮದಾಬಾದ್​ಗೆ ಮೊದಲ ಬಾರಿಗೆ ಬಂದಿದ್ದ. ಬಾಲಕನ ತಂದೆಯ ಬಾಡಿಗೆ ಮನೆಯ ಮಾಲಕಿ ಕೈಲಾಸಬೆನ್ ಠಾಕೂರ್ ಹೇಳುವ ಪ್ರಕಾರ, ಆ ಬಾಲಕ ಸರಿಯಾಗಿ ಮಾತನಾಡಲು ಆಗುತ್ತಿಲ್ಲ. ನಾನು ಆತನಿಗೆ ಧೈರ್ಯ ಹೇಳಿದೆ. ಆತ ಇಡೀ ರಾತ್ರಿ ಎಚ್ಚರವಾಗಿರುತ್ತಾನೆ. ಬಾಲಕ ಈಗ ಸೈಲೆಂಟ್ ಆಗಿದ್ದಾನೆ. ಏನನ್ನೂ ಸರಿಯಾಗಿ ತಿನ್ನುತ್ತಿಲ್ಲ ಎಂದು ಹೇಳಿದ್ದಾರೆ.

ವಿಶೇಷ ವರದಿ:ಚಂದ್ರಮೋಹನ್, ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment