/newsfirstlive-kannada/media/post_attachments/wp-content/uploads/2025/02/SSLC_EXAM_1.jpg)
ಹೈದರಾಬಾದ್: ಸಿಬಿಎಸ್‌ಇ, ಐಸಿಎಸ್‌ಇ, ಐಬಿ ಹಾಗೂ ತೆಲಂಗಾಣದ ಇತರ ಬೋರ್ಡ್-ಸಂಯೋಜಿತ ಶಾಲೆಗಳಲ್ಲಿ ತೆಲುಗು ಭಾಷೆ ಕಡ್ಡಾಯ ಎಂದು ತೆಲಂಗಾಣ ಸರ್ಕಾರ ನಿರ್ದೇಶನ ನೀಡಿದೆ. 2025-26 ಶೈಕ್ಷಣಿಕ ವರ್ಷದಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗುತ್ತದೆ. ಆದರೆ 10ನೇ ತರಗತಿ ವಿದ್ಯಾರ್ಥಿಗಳಿಗೆ 2026-27 ಶೈಕ್ಷಣಿಕ ಅವಧಿಯಿಂದ ಅನ್ವಯ ಆಗಲಿದೆ ಎಂದು ತಿಳಿಸಲಾಗಿದೆ.
ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ಇಂಟರ್ ನ್ಯಾಷನಲ್ ಬ್ಯಾಕಲೌರಿಯೇಟ್ (ಐಬಿ) ಸೇರಿದಂತೆ ವಿವಿಧ ಶೈಕ್ಷಣಿಕ ಮಂಡಳಿಗಳೊಂದಿಗೆ ಸಂಯೋಜಿತವಾದ ಸಂಸ್ಥೆಗಳಿಗೂ ಸರ್ಕಾರದ ಈ ನಿರ್ದೇಶನ ಅನ್ವಯಿಸುತ್ತದೆ ಎಂದು ತೆಲಂಗಾಣ ರಾಜ್ಯದ ಶಾಲಾ ಶಿಕ್ಷಣ ಇಲಾಖೆ ಹೇಳಿದೆ. ಮಕ್ಕಳಲ್ಲಿ ಮಾತೃಭಾಷೆ ಕಲಿಕೆ ಸಂಪೂರ್ಣವಾಗಿ ಇದ್ದರೇ ಅವರ ಜೀವನ ಶೈಲಿ ಎಲ್ಲ ಕ್ಷೇತ್ರದಲ್ಲೂ ಸುಧಾರಿಸುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಚಾಂಪಿಯನ್ ಟ್ರೋಫಿ ಮ್ಯಾಚ್ಗಳಿಗೆ ಭದ್ರತೆ ನೀಡುವಲ್ಲಿ ವಿಫಲ.. 100ಕ್ಕೂ ಹೆಚ್ಚು ಪೊಲೀಸರು ವಜಾ
ಇಷ್ಟು ದಿನಗಳವರೆಗೆ ಈ ಶಾಲೆಗಳೆಲ್ಲಾ ತೆಲುಗು ಭಾಷೆಯನ್ನು ಕೈಬಿಟ್ಟಿದ್ದವು. ಯುವಜನರಲ್ಲಿ ತೆಲುಗು ಕಲಿಕೆ ಉಳಿಸಿಕೊಳ್ಳಲು ಹಾಗೂ ಮುಂದಿನ ಫೀಳಿಗೆಗೆ ಭಾಷೆ ತೆಗೆದುಕೊಂಡು ಹೋಗಲು ಈ ನಿರ್ದೇಶನ ಮುನ್ನುಡಿ ಆಗಲಿದೆ. ತೆಲುಗು ಶಿಕ್ಷಣವನ್ನು ಬಲಪಡಿಸುವ ಶಿಫಾರಸನ್ನು ತೆಲುಗು ಶಾಸ್ತ್ರೀಯ ಭಾಷಾ ಸಮಿತಿ ಈ ಹಿಂದೆಯೇ ಮಾಡಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳಿಗೆ ತೆಲುಗು ಭಾಷೆ ಕಡ್ಡಾಯ ಮಾಡಿ ಜಾರಿಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ತೆಲಂಗಾಣದ ಸರ್ಕಾರಿ ಶಾಲೆಯಲ್ಲಿ ಮಾತ್ರ ತೆಲುಗು ಭಾಷೆಯ ಕಲಿಕೆ ಇತ್ತು. ಆದರೆ ಸಿಬಿಎಸ್‌ಇ, ಐಸಿಎಸ್‌ಇ, ಐಬಿ ಹಾಗೂ ಖಾಸಗಿ ಶಾಲಾ ಸಂಸ್ಥೆಗಳಲ್ಲಿ ತೆಲುಗು ಭಾಷೆ ಇರಲಿಲ್ಲ. 2008 ರಿಂದ ಆಂಧ್ರಪ್ರದೇಶದ ವಿಭಜನೆಯ ಮೊದಲು ಅಲ್ಲಿ ಇಂಗ್ಲಿಷ್ ಮೀಡಿಯಂ ಪರಿಚಯಿಸಲಾಗಿತ್ತು. ಮೂರನೇ ಒಂದರಷ್ಟು ಶಾಲೆಗಳಲ್ಲಿ ಇಂಗ್ಲಿಷ್ ಪಠ್ಯಕ್ರಮವನ್ನೇ ಅನುಸರಿಸುತ್ತಿವೆ. ತೆಲಂಗಾಣ ರಾಜ್ಯ ರಚನೆ ನಂತರವೂ ಇದು ಮುಂದುವರೆದಿತ್ತು. ಆದರೆ ಈಗ ತೆಲುಗು ಭಾಷೆಯನ್ನು ಅಲ್ಲಿನ ಶಾಲೆಗಳಲ್ಲಿ ಕಡ್ಡಾಯ ಮಾಡಿ ನಿರ್ದೇಶನ ನೀಡಲಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ