/newsfirstlive-kannada/media/post_attachments/wp-content/uploads/2025/07/SHUBMAN_GILL-2.jpg)
ಇಂಡೋ-ಇಂಗ್ಲೆಂಡ್ ಲಾರ್ಡ್ಸ್ ಟೆಸ್ಟ್ ಪಂದ್ಯ ಥ್ರಿಲ್ಲಿಂಗ್ ಅಂತ್ಯ ಕಂಡಿದೆ. ಐಕಾನಿಕ್ ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ಮದಗಜಗಳ ನಡುವೆ 5 ದಿನಗಳ ಕಾಲ ನಡೆದ ಜಿದ್ದಾಜಿದ್ದಿನ ಕಾದಾಟ ಫ್ಯಾನ್ಸ್ಗೆ ಭರ್ಜರಿ ಎಂಟರ್ಟೈನ್ಮೆಂಟ್ ನೀಡಿತು. ಈ ಪಂದ್ಯದ ಆಟದ್ದು ಒಂದು ಗತ್ತಾದ್ರೆ, ಮಧ್ಯೆ ಮಧ್ಯೆ ನಡೆದ ಕಿರಿಕ್ಗಳದ್ದು ಮತ್ತೊಂದು ಗತ್ತು. ಇನ್ಫ್ಯಾಕ್ಟ್ ಇಡೀ ಪಂದ್ಯಕ್ಕೆ ರೋಚಕತೆಯ ಟಚ್ ನೀಡಿದ್ದೇ ಈ ಕಿರಿಕ್ಗಳು.
ಕಿರಿಕ್ ನಂ.1- ಅಂಪೈರ್ ಜೊತೆಗೆ ಶುಭ್ಮನ್ ವಾಗ್ವಾದ
ಲಾರ್ಡ್ಸ್ ಟೆಸ್ಟ್ನ 2ನೇ ದಿನದಾಟದ ಮೊದಲ ಸೆಷನ್ನಿಂದಲೇ ಶುರುವಾಗಿದ್ದು ಈ ಕಿರಿಕ್ ಸ್ಟೋರಿಗಳು. ಬಾಲ್ ಬದಲಾವಣೆ ವಿಚಾರಕ್ಕೆ ಅಂಪೈರ್ ಜೊತೆಗೆ ಇಂಡಿಯನ್ ಕ್ಯಾಪ್ಟನ್ ಶುಭ್ಮನ್ ಗಿಲ್ ವಾಗ್ವಾದ ನಡೆಸಿದರು. ಹಿಂದೆಂದೂ ಗಿಲ್ ಅಷ್ಟೊಂದು ಅಗ್ರೆಸ್ಸಿವ್ ಆಗಿ ಕಾಣಿಸಿರಲಿಲ್ಲ. ಬಾಲ್ ಬದಲಾವಣೆ ವಿಚಾರಕ್ಕೆ ಗಿಲ್ ಫುಲ್ ಗರಂ ಆಗಿದ್ದರು.
ಕಿರಿಕ್ ನಂ.2- ಕಾಲಹರಣ ಮಾಡಿ ಕೆಣಕಿದ ಕ್ರಾವ್ಲಿ
ಟೆಸ್ಟ್ ಪಂದ್ಯಕ್ಕೆ ರೋಚಕತೆಯನ್ನ ಹೆಚ್ಚಿಸಿದ್ದೆ ಈ ಜಾಕ್ ಕ್ರಾವ್ಲಿ. 3ನೇ ದಿನದಾಟದ ಅಂತ್ಯದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸೋಕೆ ಬಂದ ಇಂಗ್ಲೆಂಡ್ನ ಓಪನರ್ ಜಾಕ್ ಕ್ರಾವ್ಲಿ ಟೈಮ್ವೇಸ್ಟ್ ಮಾಡಿದರು. ಇದು ದಿನಾದಾಟದ ಅಂತ್ಯದೊಳಗೆ ಕನಿಷ್ಟ 2 ಓವರ್ಗಳನ್ನಾದ್ರೂ ಹಾಕಬೇಕು ಅಂದು ಕೊಂಡಿದ್ದ ಟೀಮ್ ಇಂಡಿಯಾವನ್ನ ಕೆರಳಿಸಿತು. ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಮುಗಿಬಿದ್ದರು. ಚಪ್ಪಾಳೆ ತಟ್ಟಿ ಕ್ರಾವ್ಲಿ ಕಾಲೆಳೆದರು. ಕ್ರಾವ್ಲಿಯ ಕಾಲಹರಣದ ನಡೆಯಿಂದ ಕ್ಯಾಪ್ಟನ್ ಶುಭ್ಮನ್ ಗಿಲ್ ಅಂತೂ ಕೆಂಡವಾಗಿದರು. ನೇರವಾಗಿ ತೆರಳಿ ಡೈರೆಕ್ಟ್ ವಾರ್ನಿಂಗ್ ಕೂಡ ಕೊಟ್ಟರು.
ಕಿರಿಕ್ ನಂ.3- ಡಕೆಟ್ಗೆ ಗುಡ್ ಬೈ ಹೇಳಿ ದಂಡಕ್ಕೆ ಗುರಿಯಾದ ಸಿರಾಜ್
3ನೇ ದಿನದಾಟ ಅಂತ್ಯದಲ್ಲಾದ ಘಟನೆ ಇಡೀ ಟೀಮ್ ಇಂಡಿಯಾವನ್ನ ಕೆರಳಿಸಿತ್ತು. ವೇಗಿ ಮೊಹಮ್ಮದ್ ಸಿರಾಜ್ ಅಂತೂ ಫುಲ್ ಸಿಡಿದೆದ್ದಿದ್ದರು. 4ನೇ ದಿನದ ಮೊದಲ ಸೆಷನ್ನಲ್ಲಿ ಬೆನ್ ಡಕೆಟ್ ವಿಕೆಟ್ ಉರುಳಿಸಿದ ಸಿರಾಜ್ ಅಗ್ರೆಸ್ಸಿವ್ ಸೆಲಬ್ರೇಷನ್ ಮಾಡಿದರು. ಡಕೆಟ್ ಹತ್ತಿರ ಹೋಗಿ ಗುರಾಯಿಸಿ ಕಣ್ಣಲ್ಲೇ ವಾರ್ನಿಂಗ್ ಕೊಟ್ರು. ಸೆಲೆಬ್ರೇಷನ್ ಕಾರಣಕ್ಕೆ ರೆಫರಿ ಕೆಂಗಣ್ಣಿಗೆ ಗುರಿಯಾಗಿ ಕೊನೆಗೆ ದಂಡಕ್ಕೆ ಗುರಿಯಾದರು.
ಕಿರಿಕ್ ನಂ.4- ಆಕಾಶ್ದೀಪ್ VS ಕರ್ಸ್ ಮಾತಿನ ಚಕಮಕಿ
4ನೇ ದಿನದಾಟದ ಅಂತ್ಯದಲ್ಲಿ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಿತ್ತು. ಈ ವೇಳೆ ನೈಟ್ ವಾಚ್ಮನ್ ಆಗಿ ಕಣಕ್ಕಿಳಿದ ಆಕಾಶ್ದೀಪ್ನ ಔಟ್ ಮಾಡೋಕೆ ಆಂಗ್ಲ ಪಡೆ ಸರ್ವಪ್ರಯತ್ನ ಮಾಡ್ತಿತ್ತು. ಈ ವೇಳೆ ಇಂಗ್ಲೆಂಡ್ ವೇಗಿ ಬ್ರೆಂಡನ್ ಕರ್ಸ್ -ಆಕಾಶ್ದೀಪ್ ನಡುವೆ ಮಾತಿನ ಚಕಮಕಿ ನಡೀತು.
ಕಿರಿಕ್ ನಂ.5- ರಾಹುಲ್ VS ಸ್ಟೋಕ್ಸ್.. ಮಾತಿನ ಸಮರ
ಆಕಾಶ್ದೀಪ್ -ಬ್ರೆಂಡನ್ ಕರ್ಸ್ ನಡುವಿನ ಚಕಮಕಿ ಮುಗಿಯೋ ಮುನ್ನವೇ ರಾಹುಲ್-ಸ್ಟೋಕ್ಸ್ ನಡುವೆ ವಾದ ನಡೀತು. ನಾನ್ಸ್ಟ್ರೈಕ್ ಎಂಡ್ನಲ್ಲಿದ್ದ ರಾಹುಲ್ ಬಳಿ ಬಂದ ಸ್ಟೋಕ್ಸ್ ಚಪ್ಪಾಳೆ ತಟ್ತಾ ಏನನ್ನೋ ಹೇಳಿದರು. ಇದಕ್ಕೆ ರಾಹುಲ್ ನಗುನಗ್ತಾನೇ ಆನ್ಸರ್ ಕೊಟ್ಟರು.
ಇದನ್ನೂ ಓದಿ:ಟೀಮ್ ಇಂಡಿಯಾಕ್ಕೆ ಕೈ ಕೊಟ್ಟ ಬ್ಯಾಟರ್ಸ್.. 193 ರನ್ ಚೇಸ್ ಮಾಡಲಾಗದ ಗಿಲ್ ಸೇನೆಗೆ ಭಾರೀ ಅವಮಾನ!
ಕಿರಿಕ್ ನಂ.6- ಪಂತ್ಗೆ ಸೆಂಡ್ಅಪ್, ನಿತೀಶ್ಗೆ ವೆಲ್ಕಮ್
ಐದನೇ ದಿನದಾಟದಲ್ಲಂತೂ ಇಂಗ್ಲೆಂಡ್ ತಂಡ ಫುಲ್ ಕೆರಳಿ ನಿಂತಿತ್ತು. ಅದ್ರಲ್ಲೂ ವೇಗಿ ಜೋಫ್ರಾ ಆರ್ಚರ್ ಫುಲ್ ಅಗ್ರೆಸ್ಸಿವ್ ಆಗಿದ್ದರು. ಔಟಾದ ಬಳಿಕ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕ್ತಿದ್ದ ರಿಷಭ್ ಪಂತ್ ಬಳಿ ತೆರಳಿ ನಿಂದಿಸಿದರು. ಬ್ಯಾಟಿಂಗ್ಗೆ ಬಂದ ನಿತೀಶ್ ರೆಡ್ಡಿಗೆ ಮೊದಲ ಎಸೆತದಲ್ಲೇ ಬೌನ್ಸರ್ ಹಾಕಿದ ಆರ್ಚರ್, ಬಳಿಕ ನಿತೀಶ್ ಬಳಿಕ ತೆರಳಿ ಸ್ಲೆಡ್ಜ್ ಮಾಡಿದರು.
ಕಿರಿಕ್ ನಂ.7- ಜಡೇಜಾ VS ಬ್ರೆಂಡನ್ ಕರ್ಸ್ ಫೈಟ್
ಟೀಮ್ ಇಂಡಿಯಾ ಬ್ಯಾಟಿಂಗ್ನ 34ನೇ ಓವರ್ನಲ್ಲಿ ನಡೆದ ಘಟನೆಯಿದು. ಸ್ಟ್ರೈಕ್ನಲ್ಲಿದ್ದ ಜಡೇಜಾ 2 ರನ್ಗಾಗಿ ಓಡ್ತಿದ್ರು. ಬಾಲ್ ಮೇಲೆ ಗಮನವಹಿಸಿದ್ದ ಜಡೇಜಾ ಎದುರಿಗಿದ್ದ ಬ್ರೆಂಡನ್ ಕರ್ಸ್ನ ನೋಡದೆ ಡಿಕ್ಕಿ ಹೊಡೆದು ಬಿಟ್ರು. ಅಕಸ್ಮಾತ್ ಆದ ಅಪಘಾತ ಬಿಸಿ ಚರ್ಚೆಗೆ ಕಾರಣವಾಯ್ತು. ಇನ್ನು, ಆನ್ಫೀಲ್ಡ್ನಲ್ಲಿ ಆಟಗಾರರ ನಡುವಿನ ಕಾದಾಟಕ್ಕೆ ಸ್ಟ್ಯಾಂಡ್ನಲ್ಲಿದ್ದ ಅಭಿಮಾನಿಗಳು ಇನ್ವಾಲ್ವ್ ಆಗಿದ್ದರು. ಜೋರಾಗಿ ಚಿಯರ್ ಮಾಡ್ತಾ, ಕ್ಲ್ಯಾಪ್ಸ್ ಬಾರಿಸ್ತಾ ಪಂದ್ಯದ ರೋಚಕತೆಯನ್ನ ಮತ್ತಷ್ಟು ಹೆಚ್ಚಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ