/newsfirstlive-kannada/media/post_attachments/wp-content/uploads/2025/02/champions_trophy.jpg)
ವಿಶ್ವ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಿ 8 ದಿನಗಳಾಯಿತು. ಮಹತ್ವದ ಟೂರ್ನಿಯಲ್ಲಿ ಭಾಗಿಯಾಗಿರುವ 10 ತಂಡಗಳು ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ. ದಿನದಿಂದ ದಿನಕ್ಕೆ ಕುತೂಹಲ ಘಟ್ಟ ತಲುಪುತ್ತಾ ಇರುವ ಟೂರ್ನಿ ಫ್ಯಾನ್ಸ್ಗಂತೂ ಭರ್ಜರಿ ಟ್ರೀಟ್ ನೀಡುತ್ತಿದೆ. ಆದ್ರೆ ಇದರ ಮಧ್ಯೆ ಆಟಗಾರರಲ್ಲಿ ನಡುಕ ಶುರುವಾಗಿದೆ. ದುಬೈನಲ್ಲಿರುವ ಟೀಮ್ ಇಂಡಿಯಾ ಸೇಫ್. ಪಾಕಿಸ್ತಾನದಲ್ಲಿರುವ ಉಳಿದ ತಂಡಗಳ ಆಟಗಾರರ ಎದೆಯಲ್ಲಿ ಢವ.. ಢವ.. ಶುರುವಾಗಿದೆ.
29 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಹಕ್ಕು
29 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ತಂಡಕ್ಕೆ ಐಸಿಸಿ ಟೂರ್ನಿ ಆಯೋಜಿಸೋ ಹಕ್ಕು ಸಿಕ್ಕಿದೆ. ಜಿದ್ದಿಗೆ ಬಿದ್ದು ಐಸಿಸಿ ಬಳಿ ಟೂರ್ನಿಯ ಆಯೋಜಕತ್ವ ಪಡೆದುಕೊಂಡು ಬಂದಿರೋ ಪಾಕ್ ಕ್ರಿಕೆಟ್ ಮಂಡಳಿ ಈಗ ಇಕ್ಕಟ್ಟಿಗೆ ಸಿಲುಕಿದೆ. ನಡೀತಾ ಇರೋ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೇಲೆ ಉಗ್ರರ ಕರಿನೆರಳು ಬಿದ್ದಿದ್ದು, ಮುಂದೇ ಏನಾಗುತ್ತಪ್ಪಾ ಅನ್ನೋ ಆತಂಕ ಶುರುವಾಗಿದೆ. ವಿದೇಶಿ ಆಟಗಾರರು ಹಾಗೂ ಫ್ಯಾನ್ಸ್ಗೆ ಟೆನ್ಶನ್ ಶುರುವಾಗಿದೆ.
ಸಲೀಸಾಗಿ ಒಳನುಗ್ಗಿದ.. ರಚಿನ್ ರವೀಂದ್ರನ ಅಪ್ಪಿಕೊಂಡ.!
ರಾವಲ್ಪಿಂಡಿಯಲ್ಲಿ ನಡೆದ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ಪಂದ್ಯದ ನಡುವೆ ಒಬ್ಬ ವ್ಯಕ್ತಿ ಮೈದಾನಕ್ಕೆ ನುಗ್ಗಿದ್ದ. ಭದ್ರತೆ ಭೇದಿಸಿ ಅಂಗಳಕ್ಕೆ ಬಂದ ಆತ ಬ್ಯಾಟಿಂಗ್ ನಡೆಸ್ತಿದ್ದ ಕಿವೀಸ್ನ ರಚಿನ್ ರವಿಂದ್ರನ ಬಳಿ ಹೋಗಿ ತಬ್ಬಿಕೊಂಡ. ಪಾಕಿಸ್ತಾನ ಮಾತ್ರವಲ್ಲ, ವಿಶ್ವದ ಉಳಿದ ಕಡೆಗಳಲ್ಲೂ ಪಂದ್ಯಗಳು ನಡೆಯುವ ವೇಳೆ ನೆಚ್ಚಿನ ಆಟಗಾರನನ್ನ ಕಣ್ತುಂಬಿಕೊಳ್ಳಲು, ಮುಟ್ಟಿ ಮಾತನಾಡಿಸಲು ಭದ್ರತೆಯನ್ನ ಭೇದಿಸಿ ಫ್ಯಾನ್ಸ್ ಮೈದಾನಕ್ಕೆ ನುಗ್ಗೂದು ಇತ್ತೀಚೆಗೆ ಕಾಮನ್ ಆಗ್ಬಿಟ್ಟಿದೆ. ಇದು ಪಾಕಿಸ್ತಾನದಲ್ಲೂ ಆಗಿದೆ. ಇದ್ರಲ್ಲಿ ಆತಂಕ ಪಡುವಂತದ್ದು ಏನಿದೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಹುಟ್ಟಿರಬಹದು. ಇದೇ ಆತಂಕ ಪಡೋ ವಿಚಾರ ಇಲ್ಲಿ ಇದ್ದೇ ಇದೆ.
ಅಸಲಿಗೆ ಮೊನ್ನೆ ಮೈದಾನಕ್ಕೆ ನುಗ್ಗಿದವನ ಕೈಯಲ್ಲಿ ಒಂದು ಪೋಸ್ಟರ್ ಇತ್ತು. ಆ ಪೋಸ್ಟರ್ನಲ್ಲಿ ಇದ್ದಿದ್ದು ನಿಷೇಧಿತ ಇಸ್ಲಾಮಿಕ್ ಪಕ್ಷ ತೆಹ್ರೀಕ್-ಎ-ಲಬ್ಬಾಯಿಕ್ ಮುಖ್ಯಸ್ಥ ಸಾದ್ ರಿಜ್ವಿ ಫೋಟೋ. ನಿಷೇಧಿತ ಸಂಘಟನೆಯ ಬೆಂಬಲಿಗನೊಬ್ಬ ಸಲೀಸಾಗಿ ಮೈದಾನಕ್ಕೆ ನುಗ್ಗೋದು ಅಂದ್ರೆ ಅದೇನು ಸಾಮಾನ್ಯದ ವಿಚಾರನಾ?. ಈ ಘಟನೆ ಪಾಕಿಸ್ತಾನದ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.
ಕ್ರಿಕೆಟ್ ಮಂಡಳಿಗೆ ಎಚ್ಚರಿಕೆ ನೀಡಿದ್ದ ಪಾಕ್ ಗುಪ್ತಚರ ಸಂಸ್ಥೆ.!
ಚಾಂಪಿಯನ್ಸ್ ಟ್ರೋಫಿ ನಡೀತಾ ಇರೋ ನಡುವೆಯೇ ಭಯೋತ್ಪಾದನಾ ಸಂಘಟನೆಗಳಿಂದ ಬೆದರಿಕೆ ಕರೆ ಕೂಡ ಬಂದಿದೆ. ಬೆದರಿಕೆ ಕರೆ ಬಂದಿದೆ ಎಂದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಪಾಕ್ ಕ್ರಿಕೆಟ್ ಮಂಡಳಿಗೆ ಎಚ್ಚರಿಸಿದ ಬೆನ್ನಲ್ಲೆ, ನಿಷೇಧಿತ ಸಂಘಟನೆಯ ಸದಸ್ಯನೊಬ್ಬ ಮೈದಾನಕ್ಕೆ ಸಲೀಸಾಗಿ ಎಂಟ್ರಿ ಕೊಟ್ಟಿರೋದು. ಹೀಗಾಗಿಯೇ ಆತಂಕ ಹೆಚ್ಚಾಗಿರೋದು.
ವರದಿಗಳ ಪ್ರಕಾರ, ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಪಂದ್ಯ ವೀಕ್ಷಿಸಲು ಪಾಕಿಸ್ತಾನಕ್ಕೆ ಬಂದಿರುವ ವಿದೇಶಿ ಪ್ರಜೆಗಳನ್ನು ಕಿಡ್ನಾಪ್ ಮಾಡಲು ಪ್ಲಾನ್ ರೂಪಿಸಿದೆ. ಅವರಿಂದ ಹಣ ಸುಲಿಗೆ ಮಾಡಲು ಟಾರ್ಗೆಟ್ ಇದೆ ಎನ್ನಲಾಗಿದೆ. ಪ್ರಮುಖವಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಅರಬ್ನಿಂದ ಬಂದವರ ಮೇಲೆ ಉಗ್ರರ ಕಣ್ಣಿದೆ ಎನ್ನಲಾಗಿದೆ. ಜೊತೆಗೆ ISIS, ತೆಹ್ರೀಕ್ ಎ ತಾಲಿಬಾನ್ನಂತ ಸಂಘಟನೆಗಳು ಕ್ರಿಕೆಟರ್ಸ್ ಕಿಡ್ನಾಪ್ಗೂ ಪ್ಲಾನ್ ರೂಪಿಸಿವೆ ಅನ್ನೋ ಎಚ್ಚರಿಕೆಯನ್ನೂ ಗುಪ್ತಚರ ಇಲಾಖೆ ನೀಡಿದೆ ಎನ್ನಲಾಗ್ತಿದೆ.
ಇದನ್ನೂ ಓದಿ:ಸೆಮಿಸ್ಗೂ ಮೊದಲೇ ಟೀಮ್ ಇಂಡಿಯಾಗೆ ಬಿಗ್ ಶಾಕ್.. ಸ್ಟಾರ್ ಪೇಸರ್ ಆಡೋದೇ ಡೌಟ್
ಇನ್ನೂ ಮಾಸಿಲ್ಲ 2009ರ ಆ ಕರಾಳ ನೆನಪು..!
ಲಾಹೋರ್‌ನಲ್ಲಿ 2009ರ ಪ್ರವಾಸದ ವೇಳೆ ಶ್ರೀಲಂಕಾ ತಂಡದ ಬಸ್ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. 12 ಜನ ಬಂದೂಕುಧಾರಿಗಳು ಗಢಾಪಿ ಸ್ಟೇಡಿಯಂ ಬಳಿ ಬಸ್ ಮೇಲೆ ಗುಂಡಿನ ಸುರಿಮಳೆ ಸುರಿಸಿದರು. ಆ ಘಟನೆಯಲ್ಲಿ 8 ಜನ ಪೋಲಿಸರು ಪ್ರಾಣ ಕಳೆದುಕೊಂಡರೇ, ಆಟಗಾರರಿಗೂ ಗಾಯಗಳಾಗಿದ್ವು. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕ್ರಿಕೆಟ್ ಆಟಗಾರರು ಪ್ರಾಣಾಪಾಯದಿಂದ ಪಾರಾಗಿದ್ರು. ಬಳಿಕ ಮೈದಾನಕ್ಕೆ ಹೆಲಿಕಾಪ್ಟರ್ ತರಿಸಿ ಅವರನ್ನ ಶ್ರೀಲಂಕಾಗೆ ಕಳಿಸಲಾಗಿತ್ತು.
ಈ ಘಟನೆ ಬಳಿಕ ಪಾಕಿಸ್ತಾನದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕ್ರಿಕೆಟ್ ಅನ್ನು ನಿಷೇಧಿಸಲಾಗಿತ್ತು. ಯಾವ ದೇಶ ಕೂಡ ಪಾಕ್ಗೆ ಪ್ರಯಾಣಿಸಲು ಮುಂದಾಗಿರಲಿಲ್ಲ. ಇತ್ತೀಚೆಗೆ ದ್ವಿಪಕ್ಷೀಯ ಸರಣಿಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದ ಪಾಕ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹಕ್ಕನ್ನ ಹೋರಾಡಿ ಪಡೆದುಕೊಂಡಿತ್ತು. ಇದೀಗ ಅದಕ್ಕೂ ಉಗ್ರರ ಬೆದರಿಕೆ ಬಂದಿರುವುದು ಪಾಕ್ ಕ್ರಿಕೆಟ್ ಬೋರ್ಡ್ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸೂಕ್ತ ಭದ್ರತೆ ನೀಡುವ ಭರವಸೆಯನ್ನ ನೀಡಿದ್ರೂ ಕೂಡ, ಜೀವಭಯ ಆಟಗಾರರು ಹಾಗೂ ಫ್ಯಾನ್ಸ್ನ ಕಾಡ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ