/newsfirstlive-kannada/media/post_attachments/wp-content/uploads/2025/07/Thalapathy_Vijay.jpg)
ತಮಿಳುನಾಡಿನ ರಾಜಕೀಯದಲ್ಲಿ ಹೊಸ ಹಲ್ ಚಲ್ ಎದ್ದಿದೆ. ರೀಲ್ ಲೈಫ್ನಲ್ಲಿ ಹಿರೋ ಆಗಿದ್ದ ದಳಪತಿ ವಿಜಯ್ ಸದ್ಯ ರಿಯಲ್ ಲೈಫ್ನಲ್ಲೂ ಹಿರೋ ಆಗಲು ಹೊರಟಿದ್ದಾರೆ. ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷಕ್ಕೆ ತಾವೇ ಸಿಎಂ ಅಭ್ಯರ್ಥಿ ಅನ್ನೋ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನೂ ಒಂದೇ 1 ವರ್ಷ ಬಾಕಿ ಇದೆ. ಎಲ್ಲಾ ಪಕ್ಷಗಳು ಚುನಾವಣಾ ಪೂರ್ವ ಶಸ್ತ್ರಾಭ್ಯಾಸ ನಡೆಸ್ತಿವೆ. ಆಡಳಿತಾರೂಢ ಡಿಎಂಕೆ ಮುಂದಿನ ಚುನಾವಣೆಯಲ್ಲೂ ಗೆದ್ದು ಅಧಿಕಾರದ ಗದ್ದುಗೆ ಏರಲು ಕಸರತ್ತು ಆರಂಭಿಸಿದೆ. ಎಐಡಿಎಂಕೆ ಹಾಗೂ ಬಿಜೆಪಿ ಮೈತ್ರಿಯಾಗಿ ಸ್ಪರ್ಧಿಸುವ ಇರಾದೆಯಲ್ಲಿವೆ. ಈ ಮಧ್ಯೆ ತಮಿಳುನಾಡಿನಲ್ಲಿ ಹೊಸ ಮನ್ವಂತರ ಸೃಷ್ಟಿಸಲು ಸಜ್ಜಾಗಿರೋ ಟಿವಿಕೆ ಪಕ್ಷ ಅಚ್ಚರಿ ಹೆಜ್ಜೆ ಇಟ್ಟಿದೆ.
ದಳಪತಿ ವಿಜಯ್ ಟಿವಿಕೆ ಪಕ್ಷದ ಸಿಎಂ ಅಭ್ಯರ್ಥಿ
ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರೋ ತಮಿಳಗ ವೆಟ್ರಿ ಕಳಗಂ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿ ಸಿಎಂ ಅಭ್ಯರ್ಥಿಯನ್ನೂ ಘೋಷಿಸಿದೆ. ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷ ಘೋಷಿಸಿದೆ. ಈ ಸಂಬಂಧ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿಶೇಷ ನಿರ್ಣಯವೊಂದನ್ನ ಅಂಗೀಕರಿಸಲಾಗಿದೆ. ಅಲ್ಲದೇ ಮುಂದಿನ ತಿಂಗಳು ಬೃಹತ್ ಸಮಾವೇಶ ಆಯೋಜಿಸಿ ಈ ಬಗ್ಗೆ ಘೋಷಣೆ ಮಾಡಲು ಪ್ಲಾನ್ ಮಾಡಿದೆ.
ಮೈತ್ರಿಗೆ ನೋ ಎಂದ ದಳಪತಿ ವಿಜಯ್
ಇನ್ನು ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ವಿಜಯ್ ಮೈತ್ರಿ ಬಗ್ಗೆಯೂ ಮೌನ ಮುರಿದಿದ್ದಾರೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಡಿಎಂಕೆ ಅಥವಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ತಮಿಳುನಾಡಿನಲ್ಲಿ ಬೆಳೆಯಲು ಸಾಧ್ಯವಿಲ್ಲ, ರಾಜಕೀಯ ಲಾಭಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ನಾವು ಡಿಎಂಕೆ ಅಥವಾ ಎಐಎಡಿಎಂಕೆ ರೀತಿಯ ಪಕ್ಷ ಅಲ್ಲ. ನಾವು ಟಿವಿಕೆ ಎಂದು ವಿಜಯ್ ಹೇಳಿದ್ದಾರೆ.
ಇದನ್ನೂ ಓದಿ:ಟಾಲಿವುಡ್ನ ಮತ್ತೊಬ್ಬ ಬಿಗ್ ಸ್ಟಾರ್ ಜೊತೆ ಕೈ ಜೋಡಿಸಿದ್ರಾ ಪ್ರಶಾಂತ್ ನೀಲ್.. ಮೂವಿ ಟೈಟಲ್ ರಾವಣಂ?
ಬಿಜೆಪಿ ವಿರುದ್ಧ ದಳಪತಿ ವಿಜಯ್ ವಾಗ್ದಾಳಿ
ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರೋ ಬಿಜೆಪಿ ವಿರುದ್ಧ ದಳಪತಿ ವಿಜಯ್ ತೊಡೆತಟ್ಟಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ವಿಜಯ್, ಕೆಟ್ಟ ರಾಜಕೀಯಕ್ಕಾಗಿ ಕೋಮು ಆಧಾರಿತವಾಗಿ ಜನರನ್ನು ವಿಭಜಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ತಮಿಳುನಾಡು ಮಾತ್ರವಲ್ಲದೇ ದೇಶಾದ್ಯಂತ ಇಂತಹ ಹೀನಕೃತ್ಯಗಳಲ್ಲಿ ಬಿಜೆಪಿಗರು ತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ರೀಲ್ ಲೈಫ್ನಲ್ಲಿ ಹಿರೋ ಆಗಿದ್ದ ವಿಜಯ್ ಸದ್ಯ ರಿಯಲ್ ಲೈಫ್ನಲ್ಲಿ ರಾಜಕೀಯ ರಣರಂಗಕ್ಕೆ ಕಾಲಿಟ್ಟು ಹಿರೋ ಆಗಲು ಹೊರಟ್ಟಿದ್ದಾರೆ. ಸ್ವತಃ ತಾವೇ ಸಿಎಂ ಅಭ್ಯರ್ಥಿ ಅನ್ನೋ ಮೂಲಕ ಹೊಸ ಕಿಚ್ಚು ಹೊತ್ತಿಸಿರೋ ವಿಜಯ್ ಅಭಿಮಾನಿಗಳ ಆಶೀರ್ವಾದದಿಂದ ಮೋಡಿ ಮಾಡ್ತಾರಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ