/newsfirstlive-kannada/media/post_attachments/wp-content/uploads/2025/04/7-ANIMLS.jpg)
ಜಗತ್ತನ್ನು ಅದ್ಭುತವನ್ನಾಗಿ ಮಾಡುವುದು, ಎಂದು ಮರೆಯಲಾಗದ ಇತಿಹಾಸಗಳನ್ನು ರಚಿಸುವುದು ಕೇವಲ ಮಾನವನಿಂದ ಮಾತ್ರವಾಗಿಲ್ಲ. ಈ ಜಗತ್ತಿನಲ್ಲಿ ಅದೆಷ್ಟೋ ಪ್ರಾಣಿಗಳು ಪ್ರಪಂಚ ಎಂದೂ ಮರೆಯದ ಕಾಣಿಕೆಯನ್ನು ಕೊಟ್ಟು ಹೊಸ ಇತಿಹಾಸವನ್ನು ರಚಿಸಿ ಹೋಗಿವೆ. ಇಡೀ ಜಗತ್ತಿನ ಇತಿಹಾಸ ಈ ಪ್ರಾಣಿಗಳನ್ನು ನೆನಪಿಸಿಕೊಳ್ಳದೆ ಅವುಗಳ ಕಾರ್ಯವನ್ನು ಸ್ಮರಿಸಿಕೊಳ್ಳದೇ ಸಂಪೂರ್ಣವಾಗುವುದೇ ಇಲ್ಲ. ಕಾರಣ ಜಗತ್ತಿನಲ್ಲಿ ಕೇವಲ ಮಾನವರಿಂದ ಮಾತ್ರ ಇತಿಹಾಸಗಳು ಹುಟ್ಟಿಕೊಂಡಿಲ್ಲ ಅಥವಾ ರಚನೆ ಆಗಿಲ್ಲ. ಪ್ರಾಣಿಗಳು ಕೂಡ ಇತಿಹಾಸದಲ್ಲಿ ಅನೇಕ ರೀತಿಯ ನಾಯಕತ್ವದ ಪಾತ್ರ ನಿಭಾಯಿಸಿವೆ. ಅಂತಹ ಏಳು ಪ್ರಾಣಿಗಳ ಇತಿಹಾಸವನ್ನು ನಾವು ಇಂದು ನಿಮಗೆ ಹೇಳಲಿದ್ದೇವೆ.
1. ಲಾಯಿಕಾ: ಬಾಹ್ಯಾಕಾಶ ಕ್ಷೇತ್ರದ ಇತಿಹಾಸವು ಎಂದು ಮರೆಯದ ಒಂದು ಹೆಸರು ಅಂದ್ರೆ ಅದು ಲಾಯಿಕಾ. ಈ ಒಂದು ಸೋವಿಯತ್ ಶ್ವಾನ 1957ರಲ್ಲಿ ಸ್ಪುಟ್ನಿಕ್ 2 ಬಾಹ್ಯಾಕಾಶ ನೌಕೆಯ ಮೂಲಕ ಭೂಮಿಯ ಕಕ್ಷೆಯನ್ನು ಸುತ್ತಿದ ಮೊದಲ ಜೀವಿ ಎಂಬ ಹೆಗ್ಗಳಿಕೆ ಇದರದ್ದು. ಈ ಲಾಯಿಕಾ ಎಂಬ ಹೆಣ್ಣು ಶ್ವಾನ ಮಾಸ್ಕೋದ ಬೀದಿಯಲ್ಲಿ ಅಲೆಯುತ್ತಿತ್ತು. ಬಹ್ಯಾಕಾಶ ಪ್ರಯಾಣದಲ್ಲಿ ಹಸಿವು, ಚಳಿ ಮತ್ತು ವೈಪರೀತ್ಯಗಳನ್ನು ತಡೆದುಕೊಳ್ಳಲು ಇದು ಸೂಕ್ತ ಎಂದು ಇದನ್ನು ಆಯ್ಕೆ ಮಾಡಿಕೊಳ್ಳಲಾಯ್ತು. ಇದರ ಮೂಲ ಹೆಸರು ಕುದ್ರಯಾವ್ಕಾ ಎಂದು ವಿಜ್ಞಾನಿಗಳು ಕೊನೆಗೆ ಇದರ ಹೆಸರನ್ನು ಲಾಯಿಕಾ ಎಂದು ಬದಲಿಸಿದರು. ಬಾಹ್ಯಾಕಾಶ ನೌಕೆ ಲಾಂಚ್ ಆದ ಕೆಲವೇ ಗಂಟೆಗಳಲ್ಲಿ ಅಲ್ಲಿಯ ವಿಪರೀತ ಬಿಸಿಯನ್ನು ತಾಳಲಾಗದೆ ಲಾಯಿಕಾ ಪ್ರಾಣವನ್ನು ಬಿಡುತ್ತಾಳೆ. ಅಲ್ಲಿಗೆ ಲಾಯಿಕಾ ಎಂಬ ಶ್ವಾನದ ಹೆಸರು ಇಡೀ ಬಾಹ್ಯಾಕಾಶ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಲಾಗುತ್ತದೆ.
2. ಸೇಸಿಲ್: ಸೇಸಿಲ್ ಎಂಬ ಸಿಂಹ 2015ರಲ್ಲಿ ಜಿಂಬಾಬ್ವೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿ ಮಾಡಿತು. ಹ್ವಾಂಗೆ ರಾಷ್ಟ್ರೀಯ ಉದ್ಯಾನವನದಲ್ಲಿ ಜುಲೈ 2, 2015ರಲ್ಲಿ ಈ ಸಿಂಹವನ್ನು ಬೇಟೆಯಾಡಿ ಹತ್ಯೆ ಮಾಡಲಾಯ್ತು. ಈ ಸಿಂಹದ ಒಂದು ಹತ್ಯೆ ಇಡೀ ಜಗತ್ತನ್ನೆ ಕೆರಳುವಂತೆ ಮಾಡಿತ್ತು. ಇದರಿಂದ ಜಾಗತಿಕವಾಗಿ ಜಿಂಬಾಬ್ವೆಯ ಮಾನವನ್ನು ಹರಾಜು ಹಾಕಿತು. ಈ ಕಾರಣದಿಂದಾಗಿಯೇ ಅಲ್ಲಿ ವನ್ಯಜೀವಿಗಳನ್ನು ಬೇಟೆಯಾಡುವುದು ಹತ್ಯೆ ಮಾಡುವುದು ಕಾನೂನು ಬಾಹಿರ ಎಂದು ಘೋಷಿಸಲಾಯ್ತು. ಈ ಒಂದು ಸಿಂಹದ ಆತ್ಮಾರ್ಪಣೆಯಿಂದಾಗಿ ಜಿಂಬಾಬ್ವೆಯಲ್ಲಿ ವನ್ಯಜೀವಗಳ ಪರ ಅನೇಕ ಚಳುವಳಿಗಳಾದವು. ವನ್ಯಜೀವಿಗಳ ರಕ್ಷಣೆಗೆ ಕಾಯ್ದೆಗಳು ಬಂದವು.
3. ಸೀಬಿಸ್ಕೆಟ್: ರೇಸ್ ಜಗತ್ತಿನಲ್ಲ ಎಂದಿಗೂ ಅಳಿಸಲಾಗದ ಇತಿಹಾಸವನ್ನು ಬರೆದ ಕೀರ್ತಿ ಸೀಬಿಸ್ಕೆಟ್ ಎಂಬ ಅಮೆರಿಕಾದ ಥೋರಬ್ರೇಡ್ ಎಂಬ ತಳಿಯ ಈ ರೇಸ್ಹಾರ್ಸ್ಗೆ ಹೋಗಬೇಕು. ತನ್ನ ಆರಂಭದ 17 ರೇಸ್ಗಳಲ್ಲಿ ಎಂದಿಗೂ ಕೂಡ ಗೆಲ್ಲದ ಈ ಕುದುರೆ, ಬಳಿಕ ಹೊಸ ಮಾಲೀಕನು ಇದನ್ನು ಖರೀದಿ ಮಾಡಿದಾಗ ಮತ್ತು ಹೊಸ ತರಬೇತುದಾರ ಇದಕ್ಕೆ ತರಬೇತಿ ನೀಡಿದಾಗ 1938 ರಿಂದ 39 ರೊಳಗೆ ಸುಮಾರು 33 ರೇಸ್ಗಳನ್ನು ಗೆದ್ದು, ಹಾರ್ಸ್ರೇಸ್ ಇತಿಹಾಸದಲ್ಲಿಯೇ ಅಮರವಾಗಿ ತನ್ನ ಹೆಸರು ಬರೆದುಕೊಂಡಿತು. ರೇಸ್ ಹಾರ್ಸ್ ಎಂಬ ಹೆಸರು ಬಂದ ಕೂಡಲೇ ರೇಸ್ ಜಗತ್ತಿಗೆ ಮೊದಲು ನೆನಪಾಗುವುದೇ ಈ ಸೀಬಿಸ್ಕೆಟ್
4. ಬಾಲ್ಟೋ: ಸೆಬಿರಿಯನ್ ಹಸ್ಕಿ ತಳಿಯ ಈ ಶ್ವಾನ 1925ರಲ್ಲಿ ಅಮೆರಿಕಾದ ಅಲೆಕ್ಸಾ ನಗರದ ಲಕ್ಷಾಂತರ ಜನರ ಪ್ರಾಣ ಉಳಿಸಿದ ಹೆಗ್ಗಳಿಕೆಯನ್ನು ಪಡೆದಿದೆ. 1925ರಲ್ಲಿ ಭೀಕರ ಚಳಿಯಿಂದಾಗಿ ಅಲೆಕ್ಸಾದ ನೋಮ್ ಎಂಬ ಹೆಸರಿ ಪ್ರದೇಶದಲ್ಲಿ ಜನರು ಡಿಫ್ತೀರಿಯಾ ಅಂದ್ರೆ ಗಂಟಲು ಮಾರಿ ಎಂಬ ರೋಗದಿಂದ ಬಳಲುತ್ತಿದ್ದರು. ಈ ಸಮಯದಲ್ಲಿ ಈ ಬಾಲ್ಟೋ ಸುಮಾರು 1078 ಕಿಲೋ ಮೀಟರ್ ಯಾತ್ರೆಯನ್ನು ನಿರಂತರ 27 ಗಂಟೆಗಳ ಕಾಲ ಕೈಗೊಂಡು, ಅಲ್ಲಿಗೆ ಔಷಧಿಗಳನ್ನು ತಲುಪಿಸಿ ಲಕ್ಷಾಂತರ ಜನರ ಜೀವವನ್ನು ಉಳಿಸಿತ್ತು. ಅಲೆಕ್ಸಾದ ನೋಮ್ ಪ್ರದೇಶದ ಜನರು ಇಂದಿಗೂ ಕೂಡ ಬಾಲ್ಟೊನನ್ನು ನೆನೆಯುತ್ತಾರೆ ಅದಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಒಬ್ಬ ಸೈನಿಕನಿಗಿಂತ ದೊಡ್ಡ ಸಾಹಸ ಮಾಡಿದ ಕೀರ್ತಿ ಈ ಬಾಲ್ಟೊ ಶ್ವಾನಕ್ಕೆ ಸಲ್ಲುತ್ತದೆ. ಇದು ಔಷಧಿಯನ್ನು ತಲುಪಿಸಿದ ಕಾಲದಲ್ಲಿ, ಆ ಸಮಯದಲ್ಲಿ ಅಲೆಕ್ಸಾದಲ್ಲಿದ್ದ ತಾಪಮಾನ -60 ಡಿಗ್ರಿ ಸೆಲ್ಸಿಯಸ್!
5. ಚೇರ್ ಅಮಿ: ಚೇರ್ ಅಮಿ ಎನ್ನುವ ಪಾರಿವಾಳದ ಹೆಸರು ನೆನಪಿಸಿಕೊಳ್ಳದೇ ಪ್ರಥಮ ವಿಶ್ವಯುದ್ಧದ ಇತಿಹಾಸವೇ ಸಂಪೂರ್ಣವಾಗುವುದಿಲ್ಲ. 1918ರಲ್ಲಿ ನಡೆದ ಮಹಾಯುದ್ಧದ ಸಮಯದಲ್ಲಿ ಅಮೆರಿಕಾದ 77 ಡಿವಿಜನ್ನ ಸುಮಾರು 550 ಯೋಧರು ಕಾಣೆಯಾಗಿದ್ದರು. ಈ ಎಲ್ಲಾ 550 ಯೋಧರನ್ನು ಹುಡುಕಿಕೊಟ್ಟಿದ್ದು ಈ ಚೇರ್ ಅಮಿ ಎನ್ನುವ ಪಾರಿವಾಳ. ಇದರ ಸಹಾಯದಿಂದ 550 ಯೋಧರು ಪತ್ತೆಯಾಗುವುದರೊಂದಿಗೆ ಅವರ ಜೀವವನ್ನು ಉಳಿಸಲು ಸಾಧ್ಯವಾಯ್ತು.
6. ಸಾರ್ಜೆಂಟ್ ಸ್ಟಬ್ಬಿ: ಅಮೆರಿಕಾ ಸೇನೆ ಎಂದಿಗೂ ಮರೆಯಲಾಗದ ಮತ್ತೊಂದು ಶ್ವಾನದ ಹೆಸರು ಸಾರ್ಜೆಂಟ್ ಸ್ಟಬ್ಬಿ. ಇದರ ಹೆಸರನ್ನು ಉಲ್ಲೇಖಿಸದೇ ವಿಶ್ವ ಯುದ್ಧದ ಇತಿಹಾಸ ಸಂಪೂರ್ಣವಾಗುವುದಿಲ್ಲ. ಅಮೆರಿಕಾ ಸೇನೆ ಇಂದಿಗೂ ಕೂಡ ಇದರ ಹೆಸರನ್ನು ನೆನೆಯುತ್ತಲೇ ಇರುತ್ತದೆ. ವಿಶ್ವ ಯುದ್ಧದ ಸಮದಲ್ಲಿ ಟಾಕ್ಸಿಕ್ ಗ್ಯಾಸ್ನಿಂದ ಅನೇಕ ಯೋಧರನ್ನು ಸಂರಕ್ಷಿಸಿತ್ತು. ಅಲ್ಲದೇ ಗಾಯಗೊಂಡು ನಾಪತ್ತೆಯಾಗಿದ್ದ ಅನೇಕ ಸೈನಿಕರನ್ನು ಹುಡುಕಿಕೊಡುವಲ್ಲಿ ಇದರ ಪಾತ್ರ ಮಹತ್ವದ್ದಾಗಿತ್ತು. ಇದರ ಈ ಸಾಹಸದಿಂದಾಗಿಯೇ ಇದಕ್ಕೆ ಸಾರ್ಜೆಂಟ್ ಎಂಬ ಬಿರುದನ್ನು ನೀಡಿ ಗೌರವಿಸಲಾಯ್ತು.
ಹಚಿಕೋ: ಇದು ಇಡೀ ಜಪಾನ್ ಎಂದು ಮರೆಯಲಾಗದ ಶ್ವಾನ. ಸ್ವಾಮಿನಿಷ್ಠೆ, ಪ್ರಾಮಾಣಿಕತೆಗಾಗಿಯೇ ಇಡೀ ಜಗತ್ತಿನ ತುಂಬ ಹೆಸರು ಮಾಡಿದ ಶ್ವಾನ ಅಂದ್ರೆ ಅದು ಹಚಿಕೋ. ಮೃತಪಟ್ಟ ತನ್ನ ಮಾಲೀಕನಿಗಾಗಿ ಕಾಯುತ್ತ ಕಾಯುತ್ತಲೇ ಪ್ರಾಣಬಿಟ್ಟ ಈ ಹಚಿಕೋ. ನಿತ್ಯ ರೈಲ್ವೆ ಸ್ಟೇಷನ್ನಿಂದ ತನ್ನ ಕೆಲಸಕ್ಕೆ ಹೋಗುತ್ತಿದ್ದ ಮಾಲೀಕನ ಜೊತೆ ಹೋಗಿ ಅವರು ಬರುವ ಸಮಯಕ್ಕೆ ಸರಿಯಾಗಿ ರೈಲ್ವೆ ಸ್ಟೇಷನ್ಗೆ ಓಡಿ, ಅವನನ್ನು ಕರೆದುಕೊಂಡು ಬರುವ ರೂಢಿಯಿತ್ತು ಅಕಿತಾ ತಳಿಯ ಈ ಹಚಿಕೋ ಶ್ವಾನಕ್ಕೆ . ಒಂದು ದಿನ ಇದರ ಮಾಲೀಕ ಹಿಡೆಸಾಬುರೊ ಉಯೆನೊ ಎಂಬ ಸಂಗೀತ ಶಿಕ್ಷಕ, ಕಾಲೇಜಿನಲ್ಲಿಯೇ ಹೃದಯಾಘಾತವಾಗಿ ಮೃತಪಡುತ್ತಾರೆ. ಇತ್ತ ಹಚಿಕೋ ಅವನಿಗಾಗಿ ಕಾಯುತ್ತಲೇ ಇರುತ್ತದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 10 ವರ್ಷಗಳ ಕಾಲ ಅದೇ ರೈಲ್ವೆ ಸ್ಟೇಷನ್ನಲ್ಲಿ ಮಾಲೀಕನಿಗಾಗಿ ಕಾಯುತ್ತಾ, ಕಾಯುತ್ತಾ ಅಲ್ಲಿಯೇ ಪ್ರಾಣ ಬಿಡುತ್ತದೆ, ಜಪಾನ್ನ ರಾಜಧಾನಿ ಟೋಕಿಯೋದ ಶಿಬುಯಾದಲ್ಲಿ ಇಂದಿಗೂ ಕೂಡ ಅದರ ಸ್ಮಾರಕವನ್ನು ಸ್ಥಾಪಿಸಿ ಅದರ ಪ್ರಾಮಾಣಿಕತೆ, ಸ್ವಾಮಿನಿಷ್ಠೆಯ ಕತೆಯನ್ನು ಜಗತ್ತಿಗೆ ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ