/newsfirstlive-kannada/media/post_attachments/wp-content/uploads/2025/06/Kabul-City-water.jpg)
ಒಂದು ಪಡೆದರೆ ಮತ್ತೊಂದು ಕಳೆದುಕೊಳ್ಳುವ ಪರಿಸ್ಥಿತಿ, ಪಾಕಿಸ್ತಾನದ ನೆರೆ ದೇಶಕ್ಕೆ ಬಂದಿದೆ. 10 ವರ್ಷಗಳ ಸಮಯದಲ್ಲಿ, ವೇಗವಾಗಿ ಅಭಿವೃದ್ಧಿಯಾಗಿರೋ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ಗೆ ಜಲ ಸಂಕಷ್ಟ ಎಂದುರಾಗಿದೆ. ಇನ್ನೊಂದು 5 ವರ್ಷಗಳಲ್ಲಿ ಈ ಮಹಾನಗರ ಒಣಗಿ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
ಕಾಬೂಲ್ ನಗರದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಒಂದು ಮಾರಕದಂತೆ ಬಾಧಿಸುತ್ತಿದೆ. ಜನ ಕ್ಯಾನ್ಗಳನ್ನ ಹಿಡಿದು ತಳ್ಳುವ ಗಾಡಿಗಳಲ್ಲಿ ನೀರಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಕಾಬೂಲ್ನಲ್ಲಿರುವ ತೋಟಗಳು, ಹೂವು, ಹಣ್ಣಿನ ಮರಗಳೆಲ್ಲಾ ಒಣಗಿ ಹೋಗಿವೆ. ಈಗಾಗಲೇ ನಗರದ ಅರ್ಧದಷ್ಟು ಬೋರ್‌ವೆಲ್‌ಗಳು ಬತ್ತಿಹೋಗಿವೆ. ಸದ್ಯಕ್ಕೆ ಅಫ್ಘಾನಿಸ್ತಾನ ಬಹಳಷ್ಟು ಸಮಸ್ಯೆಗಳನ್ನ ಎದುರಿಸುತ್ತಿದೆ. ಆದರೆ ಈ ನೀರಿನ ಕೊರತೆ ಮಾತ್ರ ಆ ದೇಶಕ್ಕೆ ಅತ್ಯಂತ ಕಠಿಣವಾದ ಸಮಸ್ಯೆಯಾಗಿದೆ.
ಅಫ್ಘಾನಿಸ್ತಾನಕ್ಕೆ ನೀರಿನ ಕೊರತೆ ಉಂಟಾಗಿದ್ದೇಗೆ?
ಮೊದಲನೆಯದಾಗಿ ಇಲ್ಲಿ ಹವಾಮಾನ ವೈಪರೀತ್ಯ ಹೆಚ್ಚಾಗಿದೆ. ಅದಕ್ಕಿಂತ ಮುಖ್ಯವಾಗಿ ಇಲ್ಲಿನ ಜನ ಸಂಖ್ಯೆ ವಿಪರೀತವಾಗಿ ಬೆಳೆದಿದೆ. 2001ರಲ್ಲಿ ಕಾಬೂಲ್ನಲ್ಲಿ 1 ಮಿಲಿಯನ್‌ಗಿಂತಲೂ ಕಡಿಮೆ ಜನರಿದ್ದರು. ಆದರೆ ಆ ಸಂಖ್ಯೆ ಈಗ 7 ಪಟ್ಟು ಹೆಚ್ಚಾಗಿದೆ. ಇದರಿಂದ ಸಾಮಾನ್ಯವಾಗಿ ನೀರಿನ ಖರ್ಚು ಕೂಡ ಹೆಚ್ಚಾಗಿದೆ. ಇಲ್ಲಿನ ನೀರನ್ನೂ ಪ್ರತಿದಿನದ ದಿನಸಿಗಳಂತೆ ಕೊಂಡುಕೊಳ್ಳುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಯಾಕೆಂದರೆ ಕಾಬೂಲ್‌ನ ಎಲ್ಲಾ ಜಲಚರಗಳಲ್ಲಿ ನೀರಿನ ಮಟ್ಟ 30 ಮೀಟರ್‌ಗಳಷ್ಟು ಕಡಿಮೆಯಾಗಿದೆ ಎಂದು ವರದಿಯಾಗಿದೆ.
ಕಾಬೂಲ್ನಲ್ಲಿ 80% ರಷ್ಟು ಅಂತರ್ಜಲ ಇದೆ. ಆದರೆ ಆ ನೀರು ಮಾಲಿನ್ಯದಿಂದ ಕೂಡಿದೆ. ಇಲ್ಲಿ ಹೆಚ್ಚಿನ ಮಟ್ಟದಲ್ಲಿ ಒಳಚರಂಡಿ, ಲವಣಾಂಶ ಮತ್ತು ಆರ್ಸೆನಿಕ್ ಸೇರಿರುವ ನೀರೇ ಇದೆ. ಇದು ಕುಡಿಯಲು, ಕೊನೆ ಪಕ್ಷ ಕೃಷಿಗೂ ಸಹ ಉಪಯೋಗವಲ್ಲದ ನೀರಾಗಿದೆ. ಈಗಾಗಲೇ ಕಾಬೂಲ್‌ನ ಜನ ನೀರಿನ ಪರದಾಟದಿಂದ ವಲಸೆ ದಾರಿ ಹಿಡಿದಿದ್ದಾರಂತೆ.
ಇದನ್ನೂ ಓದಿ: RCB ಬ್ಯಾನ್ ಆಗುತ್ತಾ..? ಇಂಥ ದೊಡ್ಡ ನಿರ್ಧಾರವನ್ನು ಬಿಸಿಸಿಐ ಹೇಗೆ ತೆಗೆದುಕೊಳ್ಳಬಹುದು..?
ಕಾಬೂಲ್ಗೆ ನೀರು ಬೇಕೆಂದರೇ ಇರೋದು ಒಂದೇ ದಾರಿ
ಪಂಜ್‌ಶೀರ್ ನದಿ ಪೈಪ್‌ಲೈನ್.. ಈ ಒಂದು ಯೋಜನೆ ಅಫ್ಗಾನಿಸ್ತಾನದ ರಾಜಧಾನಿಗೆ ನೀರು ತರುವ ಸಾಮರ್ಥ್ಯ ಇದೆ. ಆದರೆ ಅದಿನ್ನೂ ಕಾಮಾಗಾರಿಯಲ್ಲೇ ಇದೆ. ಒಂದು ವೇಳೆ ಆ ಯೋಜನೆ ಪೂರ್ತಿಯಾದರೆ ನಗರದ ಅಂತರ್ಜಲ ಮಟ್ಟ ಬೆಳೆಯುವ ಅವಕಾಶ ಇದೆ. ಆದರೆ ಈ ಯೋಜನೆ ಬಜೆಟ್ ಅನುಮೋದನೆಗಾಗಿ ಕಾಯುತ್ತಿದೆ.
ಕಾಬೂಲ್ ನಗರ, ಈ ಬಾರಿಯ ಬರಗಾಲಕ್ಕೆ ತುತ್ತಾಗಿರುವ ಮೊದಲ ರಾಜಧಾನಿಯಾಗಿದೆ. ಇದು ಹೀಗೆ ಮುಂದುವರಿದರೆ, ಕಾಬೂಲ್‌ನ ಎಲ್ಲಾ ನೀರಿನ ಸ್ಥಳಗಳು 2030 ರ ವೇಳೆಗೆ ಬತ್ತಿ ಹೋಗುತ್ತವೆ. ಇಡೀ ನಗರ ಒಣಗಿ ಹೋಗಲಿದೆ. ಏಳು ಮಿಲಿಯನ್ ಜನರಿಗೆ ನರಕ ದರ್ಶನ ಕೊಡಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ