/newsfirstlive-kannada/media/post_attachments/wp-content/uploads/2025/03/CTR-DIVORCE-CASE-1.jpg)
ಸಾಮಾಜಿಕ ಜಾಲತಾಣದಲ್ಲಿ ಜಸ್ಟ್ ಪರಿಚಯವಾದ್ರೆ ಸಾಕು, ಅದು ಸ್ನೇಹ-ಪ್ರೀತಿ-ಮದುವೆ ಅಂತ ಎಲ್ಲಿಗೋ ಹೋಗಿಬಿಡುತ್ತೆ. ಹಾಗೆಯೇ ಇಲ್ಲೊಂದು ಜೋಡಿ ಕುಟುಂಬಸ್ಥರಿಗೆ ವಿರುದ್ಧವಾಗಿ ಮದುವೆ ಆಗಿದ್ರು. ಇದನ್ನು ಸಹಿಸದ ಯುವತಿಯ ಪೋಷಕರು 6 ತಿಂಗಳಿಗೇ ವಿಚ್ಛೇದನಕ್ಕಾಗಿ ಕೊರ್ಟ್ ಮೆಟ್ಟಿಲೇರಿದ್ರು. ಆದ್ರೆ ಬುದ್ಧಿಮಾತು ಹೇಳಿದ್ದಷ್ಟೆ. ವಿಚ್ಚೇದನಕ್ಕಾಗಿ ಬಂದವರು ವಾಪಸ್ ಕೈ ಕೈ ಹಿಡಿದುಕೊಂಡು ಮನೆ ಸೇರಿದ್ದಾರೆ.
ಚಿಕ್ಕಪುಟ್ಟ ವಿಚಾರಕ್ಕೆ ವೈಮನಸ್ಸು ಉಂಟಾಗಿ ವಿಚ್ಚೇದನಕ್ಕೆ ಅರ್ಜಿ ಹಾಕಿರುವ ನವಜೋಡಿ. ದಂಪತಿಯನ್ನು ಮುಂದೆ ಕೂರಿಸಿಕೊಂಡು ಬುದ್ಧಿವಾದ ಹೇಳಿದ ನ್ಯಾಯಾಧೀಶರು. ಎಲ್ಲರ ಸಮ್ಮುಖದಲ್ಲಿ ತಪ್ಪನ್ನು ತಿದ್ದಿಕೊಂಡು ಮತ್ತೆ ಒಂದಾಗಿ ಬಾಳುವುದಾಗಿ ಹೇಳಿ ಹಾರ ಬದಲಾಯಿಸಿಕೊಂಡು ಸಿಹಿ ತಿಂದರು ಪತಿ-ಪತ್ನಿ. ಇಂತಹದೊಂದು ಅಪರೂಪದ ಘಟನೆ ನಡೆದಿದ್ದು ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯದಲ್ಲಿ.
ಇದನ್ನೂ ಓದಿ:ಮದುವೆಗೂ ಮುನ್ನ ಕ್ಯೂಟಿ, ಆದ್ಮೇಲೆ ಇಲ್ವಂತೆ ಬ್ಯೂಟಿ; ‘ದಪ್ಪ’ ಇದ್ಯಾ ಅಂತ ಹೆಂಡತಿ ಮೇಲೆ ಗಂಡನ ಕಿತಾಪತಿ!
ವಿಚ್ಛೇದನಕ್ಕೆ ಬಂದವರನ್ನು ಮತ್ತೆ ಒಂದಾಗಿಸಿದ ಜಡ್ಜ್
ವಿಚ್ಛೇದನಕ್ಕೆ ಕೋರ್ಟಿಗೆ ಬಂದ ನವ ದಂಪತಿಯನ್ನು ನ್ಯಾಯಾಧೀಶರು ಕೂಡಿ ಬಾಳುವಂತೆ ಮಾಡಿದ್ದಾರೆ. ಹೀಗೆ ನ್ಯಾಯಾಧೀಶರ ಬುದ್ಧಿಮಾತಿಗೆ ಮತ್ತೆ ಒಂದಾಗಿ ಬಾಳಬೇಕೆಂದು ಮುಂದೆ ಬಂದ ಜೋಡಿ ಶ್ರೀಕಾಂತ ಹಾಗೂ ರಾಧಿಕಾ. ಭರಮಸಾಗರ ಮೂಲದ ಶ್ರೀಕಾಂತ ಹಾಗೂ ತುರುವೆಕೆರೆ ಮೂಲದ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಪ್ರೀತಿಸಿದ್ರು. ಶ್ರೀಕಾಂತನೇ ರಾಧಿಕಾ ಮನೆಗೆ ಹೋಗಿ ನಿಮ್ಮ ಮಗಳನ್ನು ಮದುವೆಯಾಗ್ತೀನಿ ಅಂದಿದ್ರು. ಆದ್ರೆ ಶ್ರೀಕಾಂತ ವಾಟರ್ ಮನ್ ಅನ್ನೋ ಕಾರಣಕ್ಕೆ ಹೆಣ್ಣು ಕೊಡೋಕೆ ನಿರಾಕರಿಸಿದ್ರು. ಕುಟುಂಬಸ್ಥರ ವಿರೋಧದ ಮಧ್ಯೆ ಮನೆಯಿಂದ ಓಡಿಹೋಗಿ ಮದುವೆ ಆಗಿದ್ರು. ಇದನ್ನು ಸಹಿಸದ ರಾಧಿಕಾ ಕುಟುಂಬಸ್ಥರು, ಪೂಜೆ ನೆಪ ಒಡ್ಡಿ ರಾಧಿಕಾಳನ್ನು ಮನೆಗೆ ಕರೆಸಿ ವಿಚ್ಛೇದನಕ್ಕೆ ಅರ್ಜಿ ಹಾಕಿಸಿದ್ದರು.
ಆದ್ರೆ ಜಿಲ್ಲಾ ನ್ಯಾಯಾಲಯದ ಲೊಕ್ ಅದಾಲತ್ನಲ್ಲಿ ನ್ಯಾಯಾಧೀಶರಾದ ರೋಣ್ ವಾಸುದೇವ್ ಬುದ್ಧಿವಾದ ಹೇಳಿದ್ದನ್ನು ಒಪ್ಪಿ ಮತ್ತೆ ಹೊಸ ಜೀವನ ಮಾಡ್ತೀವಿ ಅಂತ ಮುಂದೆ ಬಂದಿದ್ದಾರೆ. ಇನ್ನು ಲೋಕ್ ಅದಾಲತ್ನಲ್ಲಿ ತಮ್ಮ ಸಮಸ್ಯೆ ಬಗೆಹರಿಸಿಕೊಂಡ ಜೋಡಿಗಳಿಗೆ ಶುಭ ಕೋರಲಾಯ್ತು. ಸಣ್ಣ ಪುಟ್ಟ ಮನಸ್ತಾಪಕ್ಕೆ ನ್ಯಾಯಾಲಯದ ಹೊಸ್ತಿಲು ತುಳಿಯುವ ಜೋಡಿಗಳಿಗೆ ಹೊಸ ಜೀವನದ ಗುಟ್ಟು ಹೇಳಿಕೊಟ್ಟು, ಅವರನ್ನು ಮತ್ತೆ ಸಂಸಾರಿಕ ಜೀವನಕ್ಕೆ ಮರಳುವಂತೆ ಮಾಡಿದ್ರು. ಅಲ್ಲದೆ ಸಾರ್ವಜನಿಕರು ಸುಖ ಜೀವನಕ್ಕೆ ಲೋಕ್ ಅದಾಲತ್ನ ಸದುಪಯೋಗ ಪಡೆಯುವಂತೆ ಹೇಳಿದರು.
ಇದನ್ನೂ ಓದಿ:ರನ್ಯಾ ರಾವ್ ಬೆನ್ನಲ್ಲೇ ದುಬೈನಿಂದ ಬೆಂಗಳೂರಿಗೆ ಮತ್ತೆ ಚಿನ್ನ ಕಳ್ಳ ಸಾಗಣೆ; ಸಿಕ್ಕಿಬಿದ್ದಿದ್ದೇ ರೋಚಕ ಸ್ಟೋರಿ!
ಪ್ರೀತಿಸುವುದು ದೊಡ್ಡದಲ್ಲ, ಆದ್ರೆ ಆ ಪ್ರೀತಿಯನ್ನು ಮುಂದುವರೆಸಿಕೊಂಡು ಹೋಗುವುದು ಇದೆಯಲ್ಲ ಅದೇ ನಿಜವಾದ ಸವಾಲು. ಮದುವೆಯಾದ ಮೇಲೆ ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುವುದೇ ಜೀವನ. ಪತಿ-ಪತ್ನಿ ಮಧ್ಯೆ ಮಕ್ಕಳನ್ನು ಬಿಟ್ಟು ಮತ್ತೊಬ್ಬರ ಪ್ರವೇಶಕ್ಕೆ ಆಸ್ಪದ ಕೊಡಬಾರದು. ಸದ್ಯ ಲೋಕ್ ಅದಾಲತ್ನಲ್ಲಿ ಮತ್ತೆ ಒಂದಾದ ಜೋಡಿ ನೂರಾರು ಕಾಲ ಸುಖವಾಗಿ ಬಾಳಲಿ ಎಂದು ಎಲ್ಲರೂ ಹರಸಿ ಕಳುಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ