ಕೇಂದ್ರ ಸರ್ಕಾರದ ಜೊತೆಗಿನ ಕಿತ್ತಾಟದ ಕಾರಣಕ್ಕೆ ಉಪರಾಷ್ಟ್ರಪತಿ ಸ್ಥಾನಕ್ಕೆ ಧನಕರ್ ರಾಜೀನಾಮೆ..!

author-image
Ganesh
Updated On
ಕೇಂದ್ರ ಸರ್ಕಾರದ ಜೊತೆಗಿನ ಕಿತ್ತಾಟದ ಕಾರಣಕ್ಕೆ ಉಪರಾಷ್ಟ್ರಪತಿ ಸ್ಥಾನಕ್ಕೆ ಧನಕರ್ ರಾಜೀನಾಮೆ..!
Advertisment
  • ಒಂದೇ ಒಂದು ಕಾಲ್.. ಕೇಂದ್ರದ ಜೊತೆ ಫೋನ್​​ನಲ್ಲೇ ನಡೀತು ಕಿತ್ತಾಟ!
  • ಉಪರಾಷ್ಟ್ರಪತಿ ವಿರುದ್ಧವೇ ಅವಿಶ್ವಾಸಕ್ಕೆ ಮುಂದಾಗಿತ್ತು ಕೇಂದ್ರ ಸರ್ಕಾರ
  • ರಾಜ್ಯಸಭೆಯಲ್ಲಿ ಧನಕರ್​​​ ಅವರನ್ನು ಮಿಸ್​ ಮಾಡಿಕೊಳ್ತಾರೆ ದೇವೇಗೌಡರು

ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ (Jagdeep Dhankhar) ನಿನ್ನೆ ರಾತ್ರಿ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕೆಲವೇ ದಿನಗಳ ಹಿಂದೆ ನಾನು 2027ರಲ್ಲಿ ನಿವೃತ್ತಿ ತೆಗೆದುಕೊಳ್ಳುವೆ. ಅದಕ್ಕೂ ಮೊದಲು ದೇವರ ಮಧ್ಯಪ್ರವೇಶದಿಂದ ಬೇಗ ಕೆಳಕ್ಕೆ ಇಳಿಯಬಹುದು ಎಂದು ಖುದ್ದು ಜಗದೀಪ್ ಧನಕರ್ ಹೇಳಿದ್ದರು. ಆದರೆ ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭವಾದ ಮೊದಲ ದಿನವೇ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ದಿಗ್ಬ್ರಮೆಗೆ ಕಾರಣವಾಗಿದೆ. ಜಗದೀಪ್ ಧನಕರ್ ದಿಢೀರನೇ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾದ ಸನ್ನಿವೇಶ, ಪರಿಸ್ಥಿತಿ, ಸಂದರ್ಭ ಏನು ಅನ್ನೋದರ ಇನ್ ಸೈಡ್ ಡೀಟೈಲ್ಸ್ ಈಗ ಲಭ್ಯವಾಗಿದೆ. ಅದನ್ನು ಈಗ ನಿಮ್ಮ ಮುಂದೆ ಇಡುತ್ತಿದ್ದೇವೆ.

ಕಳೆದ ವರ್ಷ ವಿರೋಧ ಪಕ್ಷಗಳು ಉಪರಾಷ್ಟ್ರಪತಿ ಜಗದೀಪ್ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಈ ವರ್ಷ ಕೇಂದ್ರ ಸರ್ಕಾರವೇ ಉಪರಾಷ್ಟ್ರಪತಿ ಜಗದೀಪ್ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿತ್ತು. ಹೀಗಾಗಿ ಅದಕ್ಕೂ ಮುನ್ನವೇ ಮಾನ ಉಳಿಸಿಕೊಳ್ಳಲು ಜಗದೀಪ್ ಧನಕರ್ ಅವರು ಅನಾರೋಗ್ಯದ ಕಾರಣ ನೀಡಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಒಂದೇ ಒಂದು ಫೋನ್ ಕಾಲ್..!

ಇದೆಲ್ಲವೂ ಪ್ರಾರಂಭವಾಗಿದ್ದು ನಿನ್ನೆ ಸಂಸತ್‌ನ ಮಾನ್ಸೂನ್ ಅಧಿವೇಶನ ಆರಂಭವಾಗುತ್ತಿದ್ದಂತೆ, ದೆಹಲಿಯ ಹೈಕೋರ್ಟ್ ಜಡ್ಜ್ ಯಶವಂತ್ ವರ್ಮಾ ಅವರನ್ನು ಮಹಾಭಿಯೋಗ ಪ್ರಕ್ರಿಯೆಯ ಮೂಲಕ ಹುದ್ದೆಯಿಂದ ಕೆಳಗಿಳಿಸಲು ವಿಪಕ್ಷಗಳು ನಿರ್ಣಯ ಮಂಡಿಸಿದ್ದವು. ಜಡ್ಜ್ ಕೆಳಗಿಳಿಸಲು ವಿಪಕ್ಷಗಳು ಆರಂಭಿಸಿದ ಮಹಾಭಿಯೋಗ ಪ್ರಕ್ರಿಯೆಯು ಅದಕ್ಕಿಂತ ಮುನ್ನವೇ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನೇ ಹುದ್ದೆಯಿಂದ ಕೆಳಗಿಳಿಯುವಂತೆ ಮಾಡಿದೆ ಎಂಬುದು ವಿಪರ್ಯಾಸವಾದರೂ ಸತ್ಯ.

ಇದನ್ನೂ ಓದಿ: ಕಾಂಗ್ರೆಸ್​ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಗುಡ್​ನ್ಯೂಸ್​.. ₹50 ಕೋಟಿ ಅನುದಾನ ರಿಲೀಸ್..!

publive-image

ಕೇಂದ್ರ ಸರ್ಕಾರದಿಂದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಬಂದ ಒಂದು ಫೋನ್​ ಕಾಲ್, ಕೇಂದ್ರ ಸರ್ಕಾರ ಮತ್ತು ಉಪರಾಷ್ಟ್ರಪತಿ ಕಿತ್ತಾಡಲು ಕಾರಣವಾಗಿದೆ. ಕೊನೆಗೆ ಬೇರೆ ಆಯ್ಕೆ ಇಲ್ಲದೆ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಕೇಂದ್ರದ ಪ್ಲಾನ್ ಬೇರೆಯೇ ಆಗಿತ್ತು..

ನಿನ್ನೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ದೆಹಲಿ ಹೈಕೋರ್ಟ್ ಜಡ್ಜ್ ಯಶವಂತ್ ವರ್ಮಾ ವಿರುದ್ಧ ಮಹಾಭಿಯೋಗ ಮಂಡನೆಗೆ ನೋಟಿಸ್ ನೀಡಿದ್ದವು. ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್, ಆ ನೋಟಿಸ್ ಅನ್ನು ಅಂಗೀಕರಿಸಿದ್ದರು. ಇದರ ಬಗ್ಗೆ ಸೂಕ್ತಕ್ರಮ ಕೈಗೊಳ್ಳುವಂತೆ ರಾಜ್ಯಸಭೆಯ ಸೆಕ್ರೆಟರಿ ಜನರಲ್​ಗೆ ಸೂಚಿಸಿದ್ದರು. ಉಪರಾಷ್ಟ್ರಪತಿಗಳ ಈ ಕ್ರಮ ಕೇಂದ್ರ ಸರ್ಕಾರಕ್ಕೆ ಇಷ್ಟವಾಗಲಿಲ್ಲ. ಕೇಂದ್ರ ಸರ್ಕಾರವು ಜಸ್ಟೀಸ್ ಯಶವಂತ್ ವರ್ಮಾ ಮನೆಯಲ್ಲಿ ನೋಟು ಸುಟ್ಟ ಪ್ರಕರಣವನ್ನು ಬಳಸಿಕೊಂಡು ಜಡ್ಜ್ ವಿರುದ್ಧ ವಾಗ್ದಾಳಿ ನಡೆಸಲು ಮತ್ತು ನ್ಯಾಯಾಂಗದ ಭ್ರಷ್ಟಾಚಾರದ ಬಗ್ಗೆ ವಾಗ್ದಾಳಿ ನಡೆಸಲು ಕೇಂದ್ರ ಸರ್ಕಾರ ಬಯಸಿತ್ತು. ಮಹಾಭಿಯೋಗದ ನೋಟಿಸ್ ಅನ್ನು ಉಪರಾಷ್ಟ್ರಪತಿ ಅಂಗೀಕರಿಸಿದ್ದರಿಂದ ಕೇಂದ್ರ ಸರ್ಕಾರಕ್ಕೆ ಈ ಅವಕಾಶ ಸಿಗುತ್ತಿರಲಿಲ್ಲ.

ಇದನ್ನೂ ಓದಿ: ಬಿಜೆಪಿ ಶಾಸಕ ಪ್ರಭು ಚೌಹಾಣ್ ಮಗನ ನಿಶ್ಚಿತಾರ್ಥ ಪುರಾಣಕ್ಕೆ ಟ್ವಿಸ್ಟ್.. ದಾಖಲೆ ರಿಲೀಸ್

publive-image

ಹೀಗಾಗಿ ಕೇಂದ್ರ ಸರ್ಕಾರವು ಉಪರಾಷ್ಟ್ರಪತಿಗಳನ್ನು ಫೋನ್ ಕಾಲ್ ಮೂಲಕ ಸಂಪರ್ಕಿಸಿ ತಮ್ಮ ನಿಲುವನ್ನು ಅವರ ಗಮನಕ್ಕೆ ತಂದಿತ್ತು. ಇದಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನಕರ್, ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಮಾತುಕತೆಯೇ ವಾದ-ವಿವಾದವಾಗಿ ಬದಲಾಯಿತು. ವಾಗ್ವಾದ ವಿಕೋಪಕ್ಕೆ ತಿರುಗಿತ್ತು. ಕೊನೆಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್, ತಮಗೆ ಮಹಾಭಿಯೋಗದ ನೋಟಿಸ್ ಅಂಗೀಕರಿಸಲು ಸಂವಿಧಾನಬದ್ಧವಾಗಿಯೇ ಅಧಿಕಾರ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಹೇಳಿದ್ದರು.

ಫೋನ್​​ನಲ್ಲೇ ನಡೀತು ಕಿತ್ತಾಟ..

ಫೋನ್ ಕಾಲ್​ನಲ್ಲೇ ನಡೆದ ಈ ಕಿತ್ತಾಟವು ಉಪರಾಷ್ಟ್ರಪತಿ ವಿರುದ್ಧ ಕೇಂದ್ರ ಸರಕಾರವೇ ಅವಿಶ್ವಾಸ ನಿರ್ಣಯ ಮಂಡನೆಗೆ ನಿರ್ಧರಿಸಲು ಕಾರಣವಾಗಿತ್ತು. ವಿರೋಧ ಪಕ್ಷಗಳು ಆರು ತಿಂಗಳ ಹಿಂದೆಯಷ್ಟೇ ಉಪರಾಷ್ಟ್ರಪತಿ ಜಗದೀಪ್ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಈಗ ಕೇಂದ್ರ ಸರ್ಕಾರವೇ ಜಗದೀಪ್ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿತ್ತು. ಹೀಗಾಗಿ ಈ ಮಾಹಿತಿ ತಿಳಿದ ಜಗದೀಪ್ ಧನಕರ್, ಕೇಂದ್ರ ಸರ್ಕಾರದ ಅವಿಶ್ವಾಸ ನಿರ್ಣಯ ಮಂಡನೆ ಮೂಲಕ ಹುದ್ದೆ ಕಳೆದುಕೊಳ್ಳುವ ಬದಲು ಗೌರವಯುತವಾಗಿ ತಾವೇ ಹುದ್ದೆಯಿಂದ ನಿರ್ಗಮಿಸೋಣ ಎಂದು ನಿರ್ಧರಿಸಿ, ರಾಜೀನಾಮೆ ನೀಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಇದು ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಯ ರಾಜೀನಾಮೆಗೆ ಕಾರಣವಾದ ಸನ್ನಿವೇಶ, ಸಂದರ್ಭದ ಇನ್ ಸೈಡ್ ಮಾಹಿತಿ.

ಕೊನೆಗೆ ರಾತ್ರಿ 9.25ಕ್ಕೆ ಉಪರಾಷ್ಟ್ರಪತಿ ಅವರ ಅಧಿಕೃತ ಟ್ವೀಟರ್ ಹ್ಯಾಂಡಲ್ ಮೂಲಕ ರಾಜೀನಾಮೆ ತೀರ್ಮಾನ ಪ್ರಕಟಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಟ್ವೀಟರ್​ನಲ್ಲಿ ಪ್ರಕಟಿಸಿದ್ದರು.

ವಿಪಕ್ಷಗಳಿಂದ ಟೀಕೆ

ಜಗದೀಪ್ ಧನಕರ್ ಅವರ ರಾಜೀನಾಮೆಯು ದೆಹಲಿಯ ಪವರ್ ಕಾರಿಡಾರ್​ನಲ್ಲಿ ಅಚ್ಚರಿಗೆ ಕಾರಣವಾಗಿದೆ. ಸದಾ ಕೇಂದ್ರ ಸರ್ಕಾರದ ಪರವಾಗಿ ಬಹಿರಂಗವಾಗಿಯೇ ಜಗದೀಪ್ ಧನಕರ್ ಮಾತನಾಡುತ್ತಿದ್ದರು. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗಿಂತ ಆಡಳಿತ ಪಕ್ಷದ ಪಕ್ಷಪಾತಿ ಎಂಬುದು ವಿಪಕ್ಷಗಳ ಟೀಕೆಗೆ ಕಾರಣವಾಗಿತ್ತು.

ಇದನ್ನೂ ಓದಿ:ಮುಡಾ ಕೇಸ್.. ಸಿಎಂ ಸಿದ್ದರಾಮಯ್ಯ ಪತ್ನಿಗೆ ಬಿಗ್​ ರಿಲೀಫ್.. ಇ.ಡಿ. ಮೇಲ್ಮನವಿ ಸುಪ್ರೀಂಕೋರ್ಟ್​​ನಲ್ಲಿ ವಜಾ

publive-image

ಇಂದು ಜಗದೀಪ್ ಧನಕರ್ ರಾಜೀನಾಮೆ ಬಗ್ಗೆ ತರೇಹವಾರಿ ಕಥೆಗಳು ಹುಟ್ಟಿಕೊಂಡಿವೆ. ಅನಾರೋಗ್ಯದ ಕಾರಣ ನೀಡಿ, ಜಗದೀಪ್ ಧನಕರ್ ಅವರು ಬೀಳ್ಕೋಡುಗೆಯ ಭಾಷಣವನ್ನು ಮಾಡಲ್ಲವಂತೆ. ಜಗದೀಪ್ ಧನಕರ್ ಅವರ ಸಡನ್ ರಾಜೀನಾಮೆ ಬಗ್ಗೆ ಕೇಂದ್ರ ಸರ್ಕಾರವು ಮೌನ ವಹಿಸಿದೆ.

ವಿರೋಧ ಪಕ್ಷಗಳು ಹೇಳುವ ಪ್ರಕಾರ, ನಿನ್ನೆ ಸಂಜೆ 4.30 ಕ್ಕೆ ರಾಜ್ಯಸಭೆಯ ಕಲಾಪ ಸಲಹಾ ಸಮಿತಿಯ ಸಭೆ ನಡೆದಿದೆ. ಈ ಸಭೆಗೆ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರದ ಸಂಸದೀಯ ವ್ಯವಹಾರ ಖಾತೆ ಸಚಿವ ಕಿರಣ್ ರಿಜಿಜು ಹಾಜರಾಗಿರಲಿಲ್ಲ. ಇದರಿಂದ ಜಗದೀಪ್ ಧನಕರ್, ಅಪ್​ಸೆಟ್ ಆಗಿದ್ದಾರಂತೆ. ಜೊತೆಗೆ ನಿನ್ನೆ ರಾಜ್ಯಸಭೆಯಲ್ಲಿ ಜೆ.ಪಿ.ನಡ್ಡಾ ಅವರು ನಾನು ಏನು ಹೇಳುತ್ತೇನೋ ಅದು ಮಾತ್ರ ರೆಕಾರ್ಡ್​ಗೆ ಹೋಗಬೇಕು ಎಂದು ಹೇಳಿದ್ದಾರೆ. ಈ ಮೂಲಕ ನಡ್ಡಾ ಅವರು ಸಭಾಪತಿ ಸ್ಥಾನಕ್ಕೆ ಅಗೌರವ ತೋರಿದ್ದಾರೆ. ರಾಜ್ಯಸಭೆಯಲ್ಲಿ ಯಾವುದು ರೆಕಾರ್ಡ್​ಗೆ ಹೋಗಬೇಕು, ಯಾವುದು ಹೋಗಬಾರದು ಎಂದು ತೀರ್ಮಾನಿಸುವುದು ರಾಜ್ಯಸಭೆಯ ಸಭಾಪತಿ. ಆ ಕೆಲಸವನ್ನು ಕೇಂದ್ರದ ಆರೋಗ್ಯ ಸಚಿವರಾದ ಜೆ.ಪಿ. ನಡ್ಡಾ ಮಾಡುತ್ತಿದ್ದಾರೆ ಎಂಬುವುದು ಸಭಾಪತಿ ಜಗದೀಪ್ ಧನಕರ್ ಬೇಸಕ್ಕೆ ಕಾರಣವಾಗಿತ್ತಂತೆ.

ದೇವೇಗೌಡರು ಮಿಸ್ ಮಾಡಿಕೊಳ್ತಾರೆ..

ಜೆ.ಪಿ.ನಡ್ಡಾ ಅವರು ಈ ವಾದವನ್ನು ತಿರಸ್ಕರಿಸಿದ್ದಾರೆ. ನಾನು ಮತ್ತು ಕಿರಣ್ ರಿಜಿಜು ಇಬ್ಬರೂ ಸಂಜೆ 4.30 ರ ಸಭೆಯನ್ನು ಬೇರೆ ಸಭೆಗಳಲ್ಲಿ ಭಾಗಿಯಾಗಿರುವುದರಿಂದ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವೈಸ್ ಪ್ರೆಸಿಡೆಂಟ್​ಗೆ ತಿಳಿಸಿದ್ದೆವು ಎಂದಿದ್ದಾರೆ. ರಾಜ್ಯಸಭೆಯಲ್ಲಿ ನಾನು ಏನು ಹೇಳುತ್ತೇನೋ ಅದು ಮಾತ್ರ ರೆಕಾರ್ಡ್​ಗೆ ಹೋಗಬೇಕು ಅನ್ನೋದು ನನ್ನ ಭಾಷಣಕ್ಕೆ ಅಡ್ಡಿಪಡಿಸಿದ ವಿರೋಧ ಪಕ್ಷಗಳನ್ನು ಉದ್ದೇಶಿಸಿ ಹೇಳಿದ ಮಾತಾಗಿತ್ತು. ರಾಜ್ಯಸಭೆಯ ಸಭಾಪತಿಗಳನ್ನಲ್ಲ ಎಂದು ಜೆ.ಪಿ.ನಡ್ಡಾ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಅಚ್ಚರಿ ಮೂಡಿಸಿದ ಧನಕರ್ ದಿಢೀರ್​ ರಾಜೀನಾಮೆ.. ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಏನಿದೆ..?

publive-image

ರಾಜ್ಯಸಭೆಯಲ್ಲಿ ಜಗದೀಪ್ ಧನಕರ್ ಅವರು ಕರ್ನಾಟಕದ ಹೆಚ್‌.ಡಿ.ದೇವೇಗೌಡರಿಗೆ ಮಾತನಾಡಲು ಹೆಚ್ಚಿನ ಸಮಯ ಅವಕಾಶ ಕೊಡುತ್ತಿದ್ದರು. ರಾಜ್ಯಸಭೆಯಲ್ಲಿ ಜೆಡಿಎಸ್‌ ಪಕ್ಷ ಒಬ್ಬರೇ ಸದಸ್ಯರನ್ನು ಹೊಂದಿರುವುದರಿಂದ ಈ ಮೊದಲು ಹೆಚ್ಚಿನ ಸಮಯ ಅವಕಾಶ ಸಿಗುತ್ತಿರಲಿಲ್ಲ. ದೇವೇಗೌಡ- ಜಗದೀಪ್ ಧನಕರ್ ನಡುವೆ ಉತ್ತಮ ಭಾಂಧವ್ಯದ ಕಾರಣದಿಂದ ದೇವೇಗೌಡರಿಗೆ ಮಾತನಾಡಲು ಹೆಚ್ಚಿನ ಸಮಯ ನೀಡುತ್ತಿದ್ದರು. ರಾಜ್ಯಸಭೆಯಲ್ಲಿ ಇನ್ಮುಂದೆ ದೇವೇಗೌಡರು, ಜಗದೀಪ್ ಧನಕರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಾರೆ.

ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment