ಜಾತಿ ಗಣತಿಗೆ ಮುಹೂರ್ತ ನಿಗದಿ; ಸೆಪ್ಟೆಂಬರ್ 22 ರಿಂದ ಮನೆ ಮನೆಗೆ ಬಂದು ಅಂಕಿ-ಅಂಶ ಸಂಗ್ರಹ

author-image
Ganesh
Updated On
ಜಾತಿ ಗಣತಿಗೆ ಮುಹೂರ್ತ ನಿಗದಿ; ಸೆಪ್ಟೆಂಬರ್ 22 ರಿಂದ ಮನೆ ಮನೆಗೆ ಬಂದು ಅಂಕಿ-ಅಂಶ ಸಂಗ್ರಹ
Advertisment
  • ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮುಹೂರ್ತ ನಿಗದಿ
  • ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ
  • ಜಾತಿ ಗಣತಿ ಸಂಬಂಧ ಸರ್ಕಾರ ಇಂದು ಕೈಗೊಂಡ ನಿರ್ಧಾರಗಳೇನು?

ರಾಜ್ಯದಲ್ಲಿ ಮತ್ತೊಮ್ಮೆ ಜಾತಿಗಣತಿ ಅರ್ಥಾತ್ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ರಾಜ್ಯದ ಸಿಎಂ ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಜಾತಿ ಗಣತಿ ಅರ್ಥಾತ್ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಗಣತಿದಾರರು ಎಲ್ಲರ ಮನೆಗಳಿಗೂ ಭೇಟಿ ನೀಡಿ ಜನರ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ.

2014-15ರಲ್ಲಿ ನಡೆಸಿದ್ದ ಸಮೀಕ್ಷೆಯು ಹತ್ತು ವರ್ಷ ಹಳೆಯದಾಗಿದೆ ಹಾಗೂ ವೈಜ್ಞಾನಿಕವಾಗಿ ಸಮೀಕ್ಷೆ ನಡೆದಿಲ್ಲ. ಎಲ್ಲರ ಮನೆ ಬಾಗಿಲಿಗೂ ಹೋಗಿ ಸಮೀಕ್ಷೆ ನಡೆಸದೇ ಎಲ್ಲೋ ಕುಳಿತುಕೊಂಡು ಸಮೀಕ್ಷೆಯ ಅಂಕಿಅಂಶಗಳನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ: ಪ್ರಸಿದ್ಧ್ ಕೃಷ್ಣ, ಕರುಣ್​ಗೆ ಇಲ್ಲ ಸ್ಥಾನ.. ಕಾಂಬೋಜ್​​ಗೆ ಒಲಿದ ಅದೃಷ್ಟ.. ಹೇಗಿದೆ ಪ್ಲೇಯಿಂಗ್​-11..?

ಉದ್ದೇಶಪೂರ್ವಕವಾಗಿಯೇ ರಾಜ್ಯದ ಪ್ರಭಾವಿ ಜಾತಿಗಳಾದ ಲಿಂಗಾಯತ, ಒಕ್ಕಲಿಗ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ ಎಂಬೆಲ್ಲಾ ಆರೋಪಗಳಿದ್ದವು. ಹೀಗಾಗಿ ಕಾಂಗ್ರೆಸ್ ಹೈಕಮ್ಯಾಂಡ್ ಮತ್ತೊಮ್ಮೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಸಿಎಂ ಸಿದ್ದರಾಮಯ್ಯಗೆ ಸೂಚಿಸಿತ್ತು. ಹೀಗಾಗಿ ಇಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರು, ಅಧಿಕಾರಿಗಳ ಜೊತೆ ಸಭೆ ನಡೆಸಿ ಮತ್ತೊಮ್ಮೆ ಸಮೀಕ್ಷೆಗೆ ಮುಹೂರ್ತ ನಿಗದಿಪಡಿಸಿದ್ದಾರೆ. ಈ ತೀರ್ಮಾನದ ಪ್ರಕಾರ, ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಆಕ್ಟೋಬರ್ 7 ರವರೆಗೆ ಸಮೀಕ್ಷೆ ನಡೆಯಲಿದೆ. ಇದರ ಆಧಾರದ ಮೇಲೆ ಮುಂದೆ ಆಯಾ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ , ಔದ್ಯೋಗಿಕ ಮೀಸಲಾತಿ ನೀಡುವ ತೀರ್ಮಾನ ಕೈಗೊಳ್ಳಬಹುದು. ಸಮೀಕ್ಷೆಯ ಅಂತಿಮ ಅಂಕಿಅಂಶಗಳ ಆಧಾರದ ಮೇಲೆ ಮೀಸಲಾತಿಯನ್ನು ಪರಿಷ್ಕರಿಸಲೂಬಹುದು.

ಇಂದಿನ ಸಭೆಯ ಹೈಲೈಟ್ಸ್​..!

  • ಹಿಂದುಳಿದ ವರ್ಗಗಳ ಆಯೋಗ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಕುರಿತಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಇದರಂತೆ ರಾಜ್ಯದ ಎಲ್ಲಾ 7ಕೋಟಿ ಜನರ ಸಮೀಕ್ಷೆ ನಡೆಸಲಾಗುವುದು. ಜಾತಿ ತಾರತಮ್ಯ ನಿವಾರಣೆ ಮಾಡುವುದು ಗಣತಿಯ ಮುಖ್ಯ ಉದ್ದೇಶ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.
  • ರಾಜ್ಯದ ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ, ಜಮೀನು ಇದೆಯೇ ಇಲ್ಲವೇ ಸೇರಿದಂತೆ ಸಮಗ್ರ ಸಮೀಕ್ಷೆ ನಡೆಯಬೇಕು. ಈ ಸಮೀಕ್ಷೆ ವರದಿ ಮುಂದಿನ ಬಜೆಟ್ ಸಿದ್ಧಪಡಿಸುವ ಸಂದರ್ಭದಲ್ಲಿ ಆಧಾರವಾಗಲಿದೆ. ಈ ಬಾರಿಯ ಸಮೀಕ್ಷೆ ದೇಶದಲ್ಲೇ ಮಾದರಿ ಸಮೀಕ್ಷೆಯಾಗಬೇಕು ಎಂದರು.
  • ಸೆಪ್ಟಂಬರ್ 22ರಿಂದ ಅಕ್ಟೋಬರ್ 7ರವರೆಗೆ 15ದಿನಗಳ ಕಾಲ ಸಮೀಕ್ಷೆ ನಡೆಸುವ ನಿರ್ಧಾರ. ಅಕ್ಟೋಬರ್ ಕೊನೆಯ ಒಳಗಾಗಿ ಸಮೀಕ್ಷೆ ವರದಿಯನ್ನು ಸಲ್ಲಿಸಬೇಕು. ತರಬೇತಿ ಸೇರಿದಂತೆ ಸಮೀಕ್ಷೆಗೆ ಪೂರ್ವಭಾವಿ ಸಿದ್ಧತೆಗಳನ್ನು ಈಗಲೇ ಆರಂಭಿಸಲು ಸೂಚನೆ.
  • ಸಮೀಕ್ಷೆ ಅತ್ಯಂತ ಸಮರ್ಪಕವಾಗಿ ನಡೆಯಬೇಕು. ಸಮೀಕ್ಷೆ ಕುರಿತು ಯಾವುದೇ ದೂರುಗಳಿಗೆ ಅಸ್ಪದವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಮೀಕ್ಷೆಯಿಂದ ಯಾರೂ ಹೊರಗುಳಿಯದಂತೆ ಖಾತ್ರಿಪಡಿಸಬೇಕು ಎಂದರು.
  • ಕಾಂತರಾಜು ಆಯೋಗ 54 ಪ್ರಶ್ನೆಗಳನ್ನು ಸಿದ್ದಪಡಿಸಿ manual ಆಗಿ ಈ ಹಿಂದೆ ಸಮೀಕ್ಷೆ ನಡೆಸಿತ್ತು. ಈ ಬಾರಿಯ ಸಮೀಕ್ಷೆಯಲ್ಲಿ ಇನ್ನಷ್ಟು ಅಂಶಗಳನ್ನು ಸೇರಿಸುವ ಕುರಿತು ಪರಿಶೀಲನೆ. ಈ ಬಾರಿ ಮೊಬೈಲ್ ಆಪ್ ಬಳಸಿಕೊಂಡು ಸಮೀಕ್ಷೆ ನಡೆಸಲಾಗುವುದು.
  • ತೆಲಂಗಾಣದಲ್ಲಿ ಕೈಗೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕುರಿತು ಅಧ್ಯಯನ ನಡೆಸಲು ಸೂಚನೆ. ಸಮೀಕ್ಷೆ ಕಾರ್ಯದ ಮೇಲುಸ್ತುವಾರಿಗೆ ಉನ್ನತಮಟ್ಟದ ಸಮಿತಿ ರಚಿಸಲು ತಿರ್ಮಾನ.
  • ಸಮೀಕ್ಷೆ ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು. ಸಮೀಕ್ಷೆಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ಅಂತಿಮಗೊಳಿಸಲು ತಜ್ಞರ ಸಮಿತಿಯ ನೆರವು ಪಡೆಯಬೇಕು.
  • ಈ ಬಾರಿ ಸಮೀಕ್ಷೆ ಕಾರ್ಯಕ್ಕೆ 1.65ಲಕ್ಷ ಗಣತಿದಾರರು ಸೇರಿದಂತೆ ಮಾನವ ಸಂಪನ್ಮೂಲ ಅವಶ್ಯಕತೆಯಿದೆ. ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರ ಸೇವೆಯೊಂದಿಗೆ ಇತರ ಇಲಾಖೆಗಳ ಸಿಬ್ಬಂದಿಗಳನ್ನು ಸಹ ಬಳಸಿಕೊಳ್ಳಲಾಗುವುದು. ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.
  • ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಲು ಯೋಜನೆ ರೂಪಿಸಿ ಕಾರ್ಯನಿರ್ವಹಿಸಬೇಕು.
  • ಸಚಿವರಾದ ಶಿವರಾಜ ತಂಗಡಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ ಆರ್ ನಾಯ್ಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಪೊನ್ನಣ್ಣ, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ರಾಧಾ ಕಲ್ಯಾಣ ಖ್ಯಾತಿಯ ನಟಿ ಚೈತ್ರ ರೈ ಮನೆಯಲ್ಲಿ ಸಖತ್​ ಸಂಭ್ರಮ.. ಕಾರಣ ಇಲ್ಲಿದೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment