/newsfirstlive-kannada/media/post_attachments/wp-content/uploads/2025/06/ettina-hole-9.jpg)
ನಮ್ಮ ಕರ್ನಾಟಕದ ಬಯಲು ಸೀಮೆ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಹಾಗೂ ಕೃಷಿ ನೀರಿನ ಸಮಸ್ಯೆ ಬಗೆಹರಿಸಲು ಕರ್ನಾಟಕ ರಾಜ್ಯ ಸರ್ಕಾರ ರೂಪಿಸಿದ ಎತ್ತಿನ ಹೊಳೆ ಯೋಜನೆ ದಶಕದ ಹಳೆಯ ಯೋಜನೆಯಾಗಿ ಪರಿವರ್ತನೆಯಾಗಿದೆ. ಯಾವಾಗ ಎತ್ತಿನ ಹೊಳೆ ಯೋಜನೆ ಕಾಮಗಾರಿ ಮುಗಿದು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ಜನರು, ರೈತರು ನೀರು ಪಡೆಯುತ್ತಾರೋ ಯಾರಿಗೂ ಗೊತ್ತಿಲ್ಲ. 2027 ರ ಮಾರ್ಚ್ ತಿಂಗಳೊಳಗೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಅಂತ ಈಗ ಸಿಎಂ ಸಿದ್ದರಾಮಯ್ಯ ಹೊಸ ಡೆಡ್ಲೈನ್ ನೀಡಿದ್ದಾರೆ.
ರಾಜ್ಯದಲ್ಲೇ ಯಾವುದೇ ನೀರಾವರಿ ಯೋಜನೆಯಾದರೂ ಕಾಲಮಿತಿಯಲ್ಲಿ ಪೂರ್ಣವಾಗುವುದೇ ಇಲ್ಲ. ಇದರ ಸಾಲಿಗೆ ಎತ್ತಿನ ಹೊಳೆ ಏತ ನೀರಾವರಿ ಯೋಜನೆಯೂ ಸೇರ್ಪಡೆಯಾಗಿದೆ. ಕಳೆದ ವರ್ಷವೇ ಹಾಸನ ಜಿಲ್ಲೆಯ ಸಕಲೇಶಪುರ ಬಳಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆಯನ್ನು ಉದ್ಘಾಟಿಸಲಾಯಿತು. ಮೊದಲ ಹಂತದಲ್ಲಿ ಚಿತ್ರದುರ್ಗದ ವಾಣಿವಿಲಾಸ ಸಾಗರ ಡ್ಯಾಂಗೆ ಎತ್ತಿನಹೊಳೆ ನೀರು ಹರಿಸುತ್ತೇವೆ ಅಂತ ಆಗ ಸರ್ಕಾರ ಹೇಳಿತ್ತು. ಈ ವರ್ಷದ ಮುಂಗಾರು ಶುರುವಾಗಿ 28 ದಿನವೇ ಕಳೆದಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ಉತ್ತಮ ಮಳೆಯೂ ಆಗುತ್ತಿದೆ. ಎತ್ತಿನಹೊಳೆ ಯೋಜನೆಯಿಂದ ವಾಣಿವಿಲಾಸ ಸಾಗರ ಡ್ಯಾಂಗೆ ನೀರು ಅಂತೂ ಹರಿದಿಲ್ಲ. ಚಿತ್ರದುರ್ಗದ ಕೆರೆಗಳಿಗೂ ಎತ್ತಿನ ಹೊಳೆ ನೀರು ಹರಿದಿಲ್ಲ.
24 ಟಿಎಂಸಿಯಿಂದ 18 ಟಿಎಂಸಿ ಅಡಿಗೆ ಇಳಿದ ನೀರಿನ ಲಭ್ಯತೆ
ಎತ್ತಿನಹೊಳೆ ಯೋಜನೆಯಡಿ ವರ್ಷಕ್ಕೆ ಬರೋಬ್ಬರಿ 24 ಟಿಎಂಸಿ ನೀರು ಲಭ್ಯವಾಗುತ್ತೆ ಅಂತ ಪ್ರಾರಂಭದಲ್ಲಿ ಅಂದಾಜು ಮಾಡಲಾಗಿತ್ತು. 14 ಟಿಎಂಸಿ ನೀರು ಅನ್ನು ಕುಡಿಯುವ ಉದ್ದೇಶಕ್ಕೆ ಬಳಕೆ ಮಾಡಬೇಕು, 9.9 ಟಿಎಂಸಿ ನೀರು ಅನ್ನು ಕೆರೆಗಳಿಗೆ ನೀರು ತುಂಬಿಸಲು ಬಳಕೆ ಮಾಡಬೇಕೆಂದು ಸಮಗ್ರ ಯೋಜನಾ ವರದಿ ಸಿದ್ದಪಡಿಸಲಾಗಿತ್ತು. ಬಯಲು ಸೀಮೆಯ 7 ಜಿಲ್ಲೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಪ್ರಥಮ ಆದ್ಯತೆ ನೀಡಬೇಕೆಂಬ ಗುರಿ ಇತ್ತು.
ಇದನ್ನೂ ಓದಿ: ಸರ್ಕಾರದ ನಡೆ ವಿರುದ್ಧ ಹಿರಿಯ ಸಚಿವ ಪರೋಕ್ಷ ಅಸಮಾಧಾನ.. ಸಿದ್ದರಾಮಯ್ಯಗೆ ಪಾಟೀಲ್ ಸುದೀರ್ಘ ಪತ್ರ..!
2025ರ ಹೊತ್ತಿಗೆ ಎತ್ತಿನ ಹೊಳೆ ಯೋಜನೆಯಿಂದ ಲಭ್ಯವಾಗೋದು 18 ಟಿಎಂಸಿ ಅಡಿ ನೀರು ಮಾತ್ರ ಅಂತ ಈಗ ವಾಸ್ತವದ ಅಂಕಿ-ಅಂಶವನ್ನು ಸರ್ಕಾರ ಹೇಳುತ್ತಿದೆ. ಕಳೆದ ಏಳೆಂಟು ವರ್ಷಗಳಿಂದ ಎತ್ತಿನಹೊಳೆಯಲ್ಲಿ ಲಭ್ಯವಾಗುವ ನೀರಿನ ಪ್ರಮಾಣದ ಬಗ್ಗೆ ಅಳತೆ ಮಾಡಲಾಗಿದೆ. ಇದರ ಆಧಾರದ ಮೇಲೆ ಎತ್ತಿನಹೊಳೆ ಹಾಗೂ ಬೇರೆ ಹೊಳೆಗಳಿಂದ ಲಭ್ಯವಾಗೋದು ವರ್ಷಕ್ಕೆ 18 ಟಿಎಂಸಿ ನೀರು ಎಂಬ ಅಂದಾಜು ಅನ್ನು ರಾಜ್ಯ ಸರ್ಕಾರ ಮಾಡಿದೆ. ಕೊರತೆಯಾಗುವ ನೀರು ಅನ್ನು ಪಶ್ಚಿಮ ಘಟ್ಟದ ಬೇರೆ ಹೊಳೆಗಳು, ಬೇರೆ ಮೂಲಗಳಿಂದ ಎತ್ತಿನಹೊಳೆಯ ಭಾಗಕ್ಕೆ ಹರಿಸಿ, ಅಲ್ಲಿಂದ ಬಯಲು ಸೀಮೆ ಭಾಗಕ್ಕೆ ಪೈಪ್ ಲೇನ್, ಗುರುತ್ವಾಕರ್ಷಣಾ ಶಕ್ತಿಯ ಮೂಲಕ ಹರಿಸಬೇಕೆಂದು ಸಿಎಂ ಸಿದ್ದರಾಮಯ್ಯ ಶುಕ್ರವಾರ ನಡೆಸಿದ ಉನ್ನತಾಧಿಕಾರಿಗಳು, ಸಚಿವರ ಸಭೆಯಲ್ಲಿ ಯೋಜನೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಡಬಲ್ ಆದ ಯೋಜನಾ ವೆಚ್ಚ
ಎತ್ತಿನ ಹೊಳೆ ಯೋಜನೆಯ ಯೋಜನಾ ವೆಚ್ಚ ಕಳೆದ 11 ವರ್ಷದಲ್ಲಿ ಡಬಲ್ ಆಗಿದೆ. 2014ರ ಫೆಬ್ರವರಿ 17 ರಂದು ಯೋಜನೆಯ ಒಟ್ಟಾರೆ ವೆಚ್ಚ 12,912 ಕೋಟಿ ರೂಪಾಯಿ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ವೆಬ್ ಸೈಟ್ನಲ್ಲಿ ಹೇಳಿದ್ದಾರೆ. ಇಂದಿಗೂ ಈ ಅಂಕಿ-ಅಂಶ ವೆಬ್ ಸೈಟ್ನಲ್ಲಿದೆ. 2025ರ ಹೊತ್ತಿಗೆ ಎತ್ತಿನಹೊಳೆ ಯೋಜನೆಯ ಒಟ್ಟಾರೆ ವೆಚ್ಚ 23,251 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದರ ಪೈಕಿ ಈಗಾಗಲೇ 17,147 ಕೋಟಿ ರೂಪಾಯಿ ಹಣ ಖರ್ಚಾಗಿದೆ. 2012ರಲ್ಲಿ ಯೋಜನೆಯಲ್ಲಿ 8323 ಕೋಟಿ ರೂಪಾಯಿ ನಿಗಧಿ ಮಾಡಲಾಗಿತ್ತು. ವರ್ಷಗಳು ಕಳೆದಂತೆ ಸಿಮೆಂಟ್, ಕಬ್ಬಿಣ, ಉಕ್ಕು, ಕಾರ್ಮಿಕರ ಕೂಲಿ ಸೇರಿದಂತೆ ಎಲ್ಲವೂ ಏರಿಕೆಯಾಗುವುದರಿಂದ ಯೋಜನಾ ವೆಚ್ಚ ಅಕ್ಷರಶಃ ಡಬಲ್ ಆಗಿದೆ. ಚೀನಾ, ಜಪಾನ್ ದೇಶಗಳಂತೆ ನಮ್ಮ ದೇಶದಲ್ಲಿ ಯಾವುದೇ ಯೋಜನೆಯಾಗಲಿ, ಕಾಲಮಿತಿಯಲ್ಲಿ ಮುಗಿಯದೇ ಇರೋ ಕಾರಣದಿಂದ ಯೋಜನಾ ವೆಚ್ಚವೂ ಡಬಲ್ ಆಗೋದು ಸಾಮಾನ್ಯ ಎಂಬಂತೆ ಆಗಿದೆ. ಡಬಲ್ ವೆಚ್ಚ ಮಾಡಿ, ಜನರಿಗೆ ಸಿಕ್ಕ ಫಲವೇನು ಎಂಬ ಪ್ರಶ್ನೆಗೆ ಸಿಗುವ ಉತ್ತರ ಶೂನ್ಯ ಎಂಬುದು ಮಾತ್ರ ನಿರಾಶದಾಯಕ.
ಇದನ್ನೂ ಓದಿ: ‘ನಾನು ಬಾಯಿ ತೆರೆದ್ರೆ ಸರ್ಕಾರ ಅಲ್ಲಾಡುತ್ತೆ..’ ತಮ್ಮದೇ ಸರ್ಕಾರದ ವಿರುದ್ಧ BR ಪಾಟೀಲ್ ಆಕ್ರೋಶ..?
ಬಯಲು ಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದು. ಸಣ್ಣ ನೀರಾವರಿ ಇಲಾಖೆಯಡಿ ಇರುವ 527 ಕೆರೆಗಳನ್ನು ಶೇ.50 ರಷ್ಟು ನೀರು ತುಂಬಿಸಬೇಕೆಂದು ಎತ್ತಿನಹೊಳೆ ಯೋಜನೆಯಡಿ ಗುರಿ ಹಾಕಿಕೊಳ್ಳಲಾಗಿದೆ.
ಒಂದನೇ ಹಂತದಲ್ಲಿ ನದಿ ಪಾತ್ರದ 7 ಕಾಮಗಾರಿ ಪೂರ್ಣಗೊಳಿಸಲಾಗಿದೆ. 2ನೇ ಹಂತದ 33 ಕಾಮಗಾರಿಗಳಲ್ಲಿ 11 ಪೂರ್ಣಗೊಳಿಸಲಾಗಿದೆ. 16 ಕಿಮೀ ಕಾಮಗಾರಿ ಪ್ರಾರಂಭಿಸಬೇಕಿದೆ. ಇದರ ಪೈಕಿ 6 ಎಕರೆ ಅರಣ್ಯ ಪ್ರದೇಶ ಹಾಗೂ 10 ಎಕರೆ ಸ್ವಾಧೀನ ಪ್ರಕ್ರಿಯೆ ಇನ್ನೂ ಬಾಕಿ ಇದೆ ಎಂದು ಶುಕ್ರವಾರ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗ ಎತ್ತಿನಹೊಳೆ ಯೋಜನೆಗೆ ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಕಾಮಗಾರಿಯೇ ತಲೆನೋವಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಭೈರಗೊಂಡ್ಲು ಬಳಿ ಸಮತೋಲನದ ಅಣೆಕಟ್ಟೆ ನಿರ್ಮಿಸುವ ಯೋಜನೆ ಇದೆ. ಆದರೆ ಕೊರಟಗೆರೆ ತಾಲ್ಲೂಕಿನ ರೈತರ ಭೂಮಿ ಡ್ಯಾಂ ನಿರ್ಮಾಣಕ್ಕೆ ಮುಳುಗಡೆ ಆಗುತ್ತೆ. ಇದರ ಜೊತೆಗೆ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಕೃಷಿ ಭೂಮಿ, ಗ್ರಾಮಗಳು ಡ್ಯಾಂ ನಿರ್ಮಾಣದಿಂದ ಮುಳುಗಡೆಯಾಗುತ್ತೆ. ರಾಜ್ಯ ಸರ್ಕಾರ, ರೈತರ ಭೂಮಿ ಸ್ವಾಧೀನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ರೈತರ ಭೂಮಿಗೆ ಹೆಚ್ಚಿನ ದರ, ಕೊರಟಗೆರೆ ತಾಲ್ಲೂಕಿನ ರೈತರ ಭೂಮಿಗೆ ಕಡಿಮೆ ದರ ನಿಗದಿ ಮಾಡಿದ್ದೇ ಸಮಸ್ಯೆಗೆ ಕಾರಣವಾಗಿತ್ತು. 2018 ರಲ್ಲಿ ಡಿಸಿಎಂ ಆಗಿದ್ದ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್, ಭೂಸ್ವಾಧೀನಕ್ಕೆ ತಮ್ಮ ಕ್ಷೇತ್ರದ ರೈತರಿಗೆ ಕಡಿಮೆ ರೇಟ್ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಸಮಸ್ಯೆ ಬಗೆಹರಿಯಲೇ ಇಲ್ಲ. ಭೈರಗೊಂಡ್ಲು ಬಳಿ ಡ್ಯಾಂ ನಿರ್ಮಾಣವಾಗಲೂ ಇಲ್ಲ. ಯೋಜನೆಯೂ ವೇಗವಾಗಿ ಮುಂದುವರಿಯಲೂ ಇಲ್ಲ. ಡಿಸಿಎಂ ಆಗಿದ್ದ ಪರಮೇಶ್ವರ್ ವೇಗವಾಗಿ ಯೋಜನೆ ಮುಂದುವರಿಸಲು ಒತ್ತು ನೀಡಲಿಲ್ಲ.
ಬೇರೆ ಯೋಜನೆ ವಿಳಂಬವಾದ್ರೂ ಇದು ಬೇಗ ಮುಗಿಸಲು ನಿರ್ದೇಶನ- ಡಿಕೆಶಿ
ಇಂದು( ಜೂನ್ 21) ಡಿಸಿಎಂ ಡಿಕೆಶಿ ತುಮಕೂರು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಯೋಜನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಿನ್ನೆಯ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಬೇರೆ ಯೋಜನೆಗಳು ವಿಳಂಬವಾದರೂ ಚಿಂತೆ ಇಲ್ಲ. ಆದರೆ ಎತ್ತಿನಹೊಳೆ ಯೋಜನೆಯನ್ನು ಆದ್ಯತೆ ಮೇಲೆ ಬೇಗ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಅದಕ್ಕೆ ಯೋಜನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ರಾಜ್ಯದ ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪ್ರಾಜೆಕ್ಟ್ ಪೂರ್ಣಗೊಳಿಸಿ 2027 ರೊಳಗೆ ಜನರಿಗೆ ನೀರು ಕೊಡಬೇಕು ಅಂತ ನಮ್ಮ ಸರ್ಕಾರ ಸಂಕಲ್ಪ ಮಾಡಿದೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ: ಅಪ್ಸರಕೊಂಡ ವನ್ಯಜೀವಿ ಧಾಮ ಎಂದು ಘೋಷಣೆ; ಮಾವು ಬೆಳೆಗಾರರಿಗೆ ಗುಡ್ನ್ಯೂಸ್
ತುಮಕೂರು ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆಗಾಗಿ ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ತುಮಕೂರು ತಾಲ್ಲೂಕಿನಲ್ಲೂ ಎತ್ತರದ ಸಿಮೆಂಟ್ ಕಾಲುವೆಯನ್ನೇ ನಿರ್ಮಿಸಲಾಗಿದೆ. ಎತ್ತರದ ಕಾಲುವೆಗಳಲ್ಲಿ ನೀರು ಯಾವಾಗ ಹರಿಯುತ್ತೋ ಅನ್ನೋದು ಸರ್ಕಾರಕ್ಕೂ ಗೊತ್ತಿಲ್ಲ, ಇಂಜಿನಿಯರ್ ಗಳಿಗೂ ಗೊತ್ತಿಲ್ಲ.
ಯೋಜನೆ ವಿಳಂಬಕ್ಕೆ ಕಾರಣವೇನು?
ಎತ್ತಿನ ಹೊಳೆ ಯೋಜನೆಗೆ ಪ್ರಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧ ಇತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಪ್ರತಿಭಟನೆ, ಬಂದ್ಗಳು ನಡೆದಿವೆ. ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟದ ಪರಿಸರ ನಾಶವಾಗುತ್ತೆ ಅಂತ ಕೆಲವರು ಎನ್‌ಜಿಟಿಗೂ ದೂರು ಸಲ್ಲಿಸಿದ್ದರು. ದೆಹಲಿಯ ಎನ್‌ಜಿಟಿಯಲ್ಲಿ ವರ್ಷದವರೆಗೂ ವಾದ-ಪ್ರತಿವಾದ ನಡೆದು ಅಂತಿಮವಾಗಿ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು.
ಬಳಿಕ ಎದುರಾಗಿದ್ದೇ ಭೂ-ಸ್ವಾಧೀನ ಸಮಸ್ಯೆ. ರೈತರ ಭೂಮಿ, ಸರ್ಕಾರಿ ಭೂಮಿ, ಅರಣ್ಯ ಭೂಮಿ ಸ್ವಾಧೀನದಲ್ಲಿ ಭಾರಿ ವಿಳಂಬವಾಗಿದೆ. ಕೊರಟಗೆರೆ ತಾಲ್ಲೂಕಿನ ಭೈರಗೊಂಡ್ಲು ಬಳಿ 2-3 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಡ್ಯಾಂಗೆ ಹೆಚ್ಚಿನ ಭೂಮಿ ಬೇಕಾಗುತ್ತೆ ಎಂಬ ಕಾರಣದಿಂದ ಡ್ಯಾಂ ನೀರಿನ ಸಂಗ್ರಹ ಸಾಮರ್ಥ್ಯವನ್ನು ತಗ್ಗಿಸಲಾಯಿತು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗಲಿಲ್ಲ. ಅರಣ್ಯ ಭೂಮಿ, ಕಂದಾಯ ಭೂಮಿ ಸ್ವಾಧೀನ, ಭೂಮಿಯ ದ್ವಿಮಾಲೀಕತ್ವ ಗೊಂದಲದಿಂದ ಭೂ ಸ್ವಾಧೀನ ವಿಳಂಬವಾಗಿ ಯೋಜನೆ ವೇಗ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಹೀಗಾಗಿ 2012-13 ರಲ್ಲಿ ಡಿ.ವಿ.ಸದಾನಂದಗೌಡರು ಸಿಎಂ ಆಗಿದ್ದಾಗ ಶಂಕುಸ್ಥಾಪನೆಯಾದ ಯೋಜನೆ ಇನ್ನೂ ಕುಂಟುತ್ತಲೇ ಸಾಗಿದೆ.
ಇಂಜಿನಿಯರ್ ಪರಮಶಿವಯ್ಯನವರು ಹಾಸನ, ಚಿಕ್ಕಮಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಯಲುಸೀಮೆ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆ ಮಾಡಬೇಕೆಂದು ಪ್ರಸ್ತಾಪ ಮಾಡಿದ್ದರು. ಇದಕ್ಕೆ ನೇತ್ರಾವತಿಯ ತಿರುವು ಎಂದು ಹೆಸರಿಟ್ಟಿದ್ದರು. ಇದಕ್ಕೆ ಮಂಗಳೂರಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರಿಂದ ಯೋಜನೆ ಕೈಬಿಡುವ ಸ್ಥಿತಿ ಬಂದಿತ್ತು. ಇದಾದ ಬಳಿಕ ನೀರಾವರಿ ತಜ್ಞರು ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚು ಮಳೆಯಾಗುವ ಪ್ರದೇಶವನ್ನು ಗುರುತಿಸಿದರು.
ಇದನ್ನೂ ಓದಿ: ಧ್ರುವ ಅಭಿನಯದ KD ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ಸ್.. ಸುದೀಪ್ ನಟಿಸೋದು ನಿಜನಾ..?
ಎತ್ತಿನಹೊಳೆ, ಕಾಡುಮನೆಹೊಳೆ, ಹೊಂಗದಹಳ್ಳ, ಕೇರಿಹೊಳೆ. ಇದೆಲ್ಲವು ಕ್ರೋಡಿಕೃತವಾಗಿ ಒಂದು ಕಡೆ ನೀರು ಬಂದರೆ 24 ಟಿಎಂಸಿ ಅಡಿ ಬರುತ್ತದೆ. ಈ ಯೋಜನೆಯ ಸಾಧಕ-ಬಾಧಕಗಳನ್ನು, ನೀರು ತೆಗೆದುಕೊಳ್ಳುವ ಸಾಧ್ಯ-ಅಸಾಧ್ಯತೆಯ ಕುರಿತು ಸರಕಾರಕ್ಕೆ ವರದಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಬೇಕಾದ ಹಣಕಾಸು, ತಾಂತ್ರಿಕತೆಯ ಅಧ್ಯಯನ ನಡೆಸಿ, 12,912 ಕೋಟಿ ಹಣವನ್ನು ಬಜೆಟ್‌ನಲ್ಲಿ ಒದಗಿಸಿ, 2014 ಫೆ.17ರಂದು ಆಡಳಿತಾತ್ಮಕ ಅನುಮೋದನೆ ನೀಡಿದರು ಎಂದು ಯೋಜನೆ ಆರಂಭದ ಇತಿಹಾಸವನ್ನು ಡಾ.ಜಿ.ಪರಮೇಶ್ವರ್ ನೆನೆದರು. 2025ರ ಜುಲೈ ವೇಳೆಗೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯುತ್ತೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದರು. ಮುಂದಿನ ತಿಂಗಳು ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯುವ ಲಕ್ಷಣ ಕಾಣುತ್ತಿಲ್ಲ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ