/newsfirstlive-kannada/media/post_attachments/wp-content/uploads/2025/04/ban-on-physical-relationship.jpg)
ಅಮೆರಿಕಾ ಸರ್ಕಾರ ಚೀನಾದಲ್ಲಿರುವ ತನ್ನ ಪ್ರಜೆಗಳಿಗೆ ಅಲ್ಲಿಯ ಚೀನಾ ಮೂಲದ ಮತ್ತು ಚೀನಾ ಪ್ರಜೆಗಳೊಂದಿಗೆ ಯಾವುದೇ ಕಾರಣಕ್ಕೂ ಪ್ರಣಯ ಹಾಗೂ ದೈಹಿಕ ಮಿಲನದ ಸಂಬಂಧ ಇಟ್ಟುಕೊಳ್ಳದಂತೆ ನಿಷೇಧ ಹೇರಿದೆ. ಚೀನಾದಿಂದ ಅಮೆರಿಕಾಗೆ ಬರುವ ಮುಂಚೆಯೇ ಅಮೆರಿಕಾದ ರಾಯಭಾರಿ ನಿಕೋಲಸ್ ಬರ್ನ್ ಈ ಸೂಚನೆಯನ್ನು ನೀಡಿದ್ದಾರೆ. ಇದು ರಾಜತಾಂತ್ರಿಕ ಸಂಬಂಧಕ್ಕೂ, ಕುಟುಂಬದ ಸದಸ್ಯರಿಗೂ ಮತ್ತು ಸೆಕ್ಯೂರಿಟಿ ಕ್ಲೀಯರನ್ಸ್ಗೆ ಕಾಯುತ್ತಿರುವ ಗುತ್ತಿಗೆದಾರರಿಗೂ ಕೂಡ ಅಳವಡಿಕೆಯಾಗುತ್ತದೆ ಎಂದು ನಿಕೋಲಸ್ ಬರ್ನ್ ಹೇಳಿದ್ದಾರೆ.
ಈ ಒಂದು ನಿಷೇಧ ಚೀನಾದ ಪ್ರಮುಖ ಪ್ರದೇಶಗಳಲ್ಲಿ ನೆಲೆಸುತ್ತಿರುವ ಯುಎಸ್ನ ಕಾರ್ಯಭಾರಿಗಳಿಗೆ,ಬಿಜಿಂಗ್ನಲ್ಲಿರುವ ರಾಯಭಾರಿ ಕಚೇರಿಗಳ ಸಿಬ್ಬಂದಿಗೆ, ದೂತವಾಸ ಕಚೇರಿಗಳಿರುವ ಗುವಾಂಗ್ಝೌ, ಶಾಂಘೈ, ಶೆನ್ಯಾಂಗ್, ವುಹಾನ್ ಮತ್ತು ಹಾಂಗಕಾಂಗ್ನ ಸಿಬ್ಬಂದಿಗಳಿಗೆ ಈ ಒಂದು ನಿಷೇಧವನ್ನು ಹೇರಲಾಗಿದೆ. ಇಲ್ಲಿನ ಸಿಬ್ಬಂದಿಗಳಿಗೆ ಯಾವುದೇ ಕಾರಣಕ್ಕೂ ಚೀನಾ ಮೂಲದ ಹಾಗೂ ಚೀನಾ ನಾಗರಿಕತ್ವ ಹೊಂದಿರುವ ಗಂಡು ಹಾಗೂ ಹೆಣ್ಣಿನೊಂದಿಗೆ ದೈಹಿಕ ಸಂಪರ್ಕ, ಪ್ರೀತಿ ಪ್ರೇಮ ಪ್ರಣಯದಂತಹ ಸಂಬಂಧಗಳನ್ನು ಇರಿಸಿಕೊಳ್ಳುವಂತಿಲ್ಲ ಖಡಕ್ ನಿರ್ಬಂಧ ವಿಧಿಸಿದೆ.
ಇನ್ನು ಚೀನಾದ ಬಿಟ್ಟು ಹೊರಗಿನ ದೇಶದವರೊಂದಿಗೆ ಈಗಾಗಲೇ ಸಂಬಂಧಗಳನ್ನು ಹೊಂದಿದವರಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲ ಮತ್ತು ಈಗಾಗಲೇ ಯಾರಾದರೂ ಚೀನಿಗಳೊಂದಿಗೆ ದೈಹಿಕ ಸಂಪರ್ಕ ಹಾಗೂ ಪ್ರೀತಿ ಪ್ರೇಮದಂತ ಸಂಬಂಧ ಹೊಂದಿದವರನ್ನು ಈ ನಿಷೇಧದಿಂದ ರಿಯಾಯಿತಿ ನೀಡಲಾಗಿದೆ.
ಅಮೆರಿಕಾದ ಈ ಒಂದು ನಿರ್ಧಾರಕ್ಕೆ ಕಾರಣಗಳೇನು ಎಂಬುದನ್ನು ನೋಡುವುದಾದರೆ, ಹಲವು ಕಾರಣಗಳು ನಮ್ಮ ಮುಂದೆ ಇವೆ. ಅದರಲ್ಲಿ ಪ್ರಮುಖ ಮೂರು ಕಾರಣಗಳು ಅಮೆರಿಕಾದ ಆಡಳಿತಕ್ಕೆ ತಲೆನೋವಾಗಿದೆ.
1. ಹನಿಟ್ರ್ಯಾಪ್ಗೆ ಒಳಗಾಗುವ ಭಯ: ಅಮೆರಿಕಾಗೆ ಮೊದಲನೇ ಚಿಂತೆ ಎಂದರೆ ಯುಎಸ್ನ ರಾಯಭಾರಿ, ದೂತವಾಸ ಕಚೇರಿ ಹಾಗೂ ಉಭಯ ದೇಶಗಳ ನಡುವಿನ ಸಂಪರ್ಕವನ್ನು ಕಾಯ್ದುಕೊಳ್ಳುವ ಚೀನಾದಲ್ಲಿರುವ ಅಧಿಕಾರಿಗಳು ಹನಿಟ್ರ್ಯಾಪ್ಗೆ ಬಿದ್ದು, ಚೀನಾದ ಗುಪ್ತಚರ ಇಲಾಖೆಗೆ ಅಮೆರಿಕಾಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡದಿರಲಿ ಎಂಬುದು ಒಂದು ಕಾರಣ. ಅದರ ಜೊತೆಗೆ ಮಹಿಳಾ ಅಧಿಕಾರಿಗಳನ್ನು ಇದೇ ರೀತಿ ಗೌಪ್ಯ ಮಾಹಿತಿ ಕದಿಯಲು ಸ್ಥಳೀಯ ಚೀನಿ ಪುರುಷರು ಅವರನ್ನು ಪ್ರೀತಿ ಪ್ರೇಮ ಹಾಗೂ ದೈಹಿಕ ಮಿಲನದಂತಹ ಭಾವನಾತ್ಮಕ ಖೆಡ್ಡಾಗಳಿಗೆ ಕೆಡವಿ ಅವರಿಂದ ಅಮೆರಿಕಾಗೆ ಸಂಬಂಧಿಸಿದ ಗುಪ್ತ ಮಾಹಿತಿಗಳನ್ನು ಕದಿಯದಿರಲಿ ಎಂಬ ಮುನ್ನೆಚ್ಚರಿಕೆ.
2. ಶೀತಲ ಸಮರ: ಸದ್ಯ ಚೀನಾ ಅಮೆರಿಕಾಗೆ ಸೆಡ್ಡು ಹೊಡೆದು ತಾನು ವಿಶ್ವದ ಸೂಪರ್ ಪವರ್ ರಾಷ್ಟ್ರವಾಗುವ ಕನಸು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾ ಮತ್ತು ಅಮೆರಿಕಾದ ನಡುವೆ ಒಂದು ಶೀತಲ ಸಮರ ಹಲವು ವರ್ಷಗಳಿಂದ ಜಾರಿಯಲ್ಲಿದೆ. ಅದು ಟ್ರಂಪ್ ಬಂದ ಮೇಲೆ ಇದು ವ್ಯಾಪಾರ ಒಪ್ಪಂದಗಳ ಕುರಿತಾಗಿ ಇನ್ನೂ ಜೋರಾಗಿದೆ. ಇನ್ನು ಒಂದು ವಿಷಯ ಅಂದ್ರೆ ಚೀನಾದಲ್ಲಿ ಪರೋಕ್ಷವಾಗಿ ರಷ್ಯಾ ಹಿಡಿತದಲ್ಲಿರುವ ಕೆಲವು ಪ್ರದೇಶಗಳಿವೆ. ಈ ಕಡೆ ರಷ್ಯಾದ ಜೊತೆಗೂ ಅಮೆರಿಕಾಗೆ ಶೀತಲ ಸಮರ ಜಾರಿಯಲ್ಲಿದೆ. 1991ಕ್ಕೂ ಮುಂಚೆ ಅಂದ್ರೆ ಸೋವಿಯತ್ ಯುನಿಯನ್ ಕುಸಿದು ಬೀಳುವ ಮೊದಲು ಕೂಡ ಇದೇ ರೀತಿಯ ನಿಷೇಧಗಳು ಚೀನಾದಲ್ಲಿದ್ದ ಅಮೆರಿಕಾ ಅಧಿಕಾರಿಗಳ ಮೇಲೆ ಅಲ್ಲಿ ಜಾರಿಯಲ್ಲಿದ್ದವು.1991ರ ಬಳಿಕ ಅದನ್ನು ತೆರವುಗೊಳಿಸಲಾಯ್ತು. ಈಗ ವಾಪಸ್ ಅದೇ ಮಾದರಿಯ ನಿಷೇಧಗಳನ್ನು ಯುಎಸ್ ತನ್ನ ಅಧಿಕಾರಿಗಳ ಮೇಲೆ ಹೇರಿದೆ.
3.ಬಿಜಿಂಗ್ ವಾಷಿಂಗ್ಟನ್ ನಡುವೆ ವಾರ್: ಇತ್ತೀಚೆಗೆ ಚೀನಾ ಮತ್ತು ಅಮೆರಿಕಾದ ನಡುವೆ ಒಂದು ಪರೋಕ್ಷ ಯುದ್ಧ ಜಾರಿಯಲ್ಲಿದೆ. ವ್ಯಾಪಾರ ಒಪ್ಪಂದಿಂದ ಹಿಡಿದು ತಂತ್ರಜ್ಞಾನ ಮತ್ತು ಭೌಗೋಳಿಕ ರಾಜಕೀಯ ಜೋರಾಗಿಯೇ ಉಭಯ ರಾಷ್ಟ್ರಗಳು ಸ್ಪರ್ಧೆಗೆ ಬಿದ್ದಿವೆ. ಹೀಗಾಗಿ ಚೀನಾದ ಕೆಲವು ಎಜೆಂಟ್ರು ನಮ್ಮ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಂಡು ಅವರನ್ನು ಭ್ರಷ್ಟಗೊಳಿಸಿ ನಮ್ಮಲ್ಲಿನ ಆಂತರಿಕ ಮಾಹಿತಿಯನ್ನು ಕದಿಯುವ ಸಾಧ್ಯತೆ ಇದೆ. ಇತ್ತೀಚೆಗೆ ಇಂತಹ ಪ್ರಕರಣಗಳು ವರದಿಯಾಗಿವೆ. ಚೀನಾದವರು ಕೇವಲ ಗುಪ್ತಚರ ಇಲಾಖೆಯನ್ನು ಬಳಸಿ ಮಾಹಿತಿ ಕಲೆ ಹಾಕುವುದಿಲ್ಲ. ತನ್ನ ಸಾಮಾನ್ಯ ಪ್ರಜೆಗಳನ್ನು ಕೂಡ ಇಂತಹ ಆಪರೇಷನ್ಗಳಿಗೆ ಕಳುಹಿಸುತ್ತದೆ. ಈ ಕಾರಣದಿಂದಾಗಿಯೇ ನಮ್ಮ ಅಧಿಕಾರಿಗಳಿಗೆ ಚೀನಿಗಳೊಂದಿಗೆ ದೈಹಿಕ ಸಂಪರ್ಕ ಹೊಂದದಂತೆ ನಿಷೇಧ ಹೇರಲಾಗಿದೆ ಎಂದು ಯುಎಸ್ ಸರ್ಕಾರ ಸಮರ್ಥನೆ ನೀಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ