/newsfirstlive-kannada/media/post_attachments/wp-content/uploads/2025/03/BABY-TAJMAHAL-1.jpg)
ತಾಜ್ ಮಹಲ್, ಆಗ್ರಾದಲ್ಲಿ ನೆಲೆ ನಿಂತಿರುವ ಜಗತ್ತಿನ 7 ಅದ್ಭುತಗಳಲ್ಲಿ ಒಂದು. ಇದು ವಿಶ್ವಕ್ಕೆ ತಿಳಿದ ಸತ್ಯ. ಇಂದಿಗೂ ಕೂಡ ಪ್ರೀತಿಯ ಸಂಕೇತವಾಗಿ ಶತಮಾನಗಳಿಂದ ಅದು ಪ್ರವಾಸಿಗರನ್ನು ಸೆಳೆಯುತ್ತಿದೆ. ಆದ್ರೆ ಅದೇ ಆಗ್ರಾದಲ್ಲಿ ಇನ್ನೊಂದು ತಾಜ್ ಮಹಲ್ ಇದೆ ಅಂದ್ರೆ ನಂಬೋಕೆ ಸಾಧ್ಯನಾ? ತಾಜ್ ಮಹಲ್ನಂತಹ ಕಟ್ಟಡ ಇತಿಹಾಸದಲ್ಲಿ ಒಮ್ಮೆ ಮಾತ್ರ ನಿರ್ಮಿಸಲು ಸಾಧ್ಯ ಎಂದು ಎಲ್ಲರೂ ಹೇಳುತ್ತಾರೆ. ಅದು ನೂರಕ್ಕೆ ನೂರು ಸತ್ಯ. ಆದ್ರೆ ಆಗ್ರಾದಲ್ಲಿರುವ ಈ ತಾಜ್ ಮಹಲ್, ಶಹಜಹಾನ್ ಕಟ್ಟಿಸಿರುವ ತಾಜ್ ಮಹಲ್ನ್ನೇ ಹೋಲುತ್ತದೆ. ಇದಕ್ಕೆ ಬೇಬಿ ತಾಜ್ ಮಹಲ್ ಅಂದ್ರೆ ಪುಟ್ಟ ಅಥವಾ ಮರಿ ತಾಜ್ ಮಹಲ್ ಎಂದು ಕರೆಯುತ್ತಾರೆ.
ಇದನ್ನೂ ಓದಿ:ತಾಜ್ ಮಹಲ್ ಒಂದೇ ಅಲ್ಲ.. ಭಾರತದಲ್ಲಿ ಇನ್ನೂ 6 ಪ್ರೇಮಿಗಾಗಿ ಕಟ್ಟಿದ ಸ್ಮಾರಕಗಳಿವೆ! ಎಲ್ಲಿ ಗೊತ್ತಾ?
ತಾಜ್ ಮಹಲ್ನ್ನೇ ಹೋಲುವ ಐತಿಹಾಸಿಕ ಸ್ಮಾರಕವೊಂದು ಇದೇ ಆಗ್ರಾದಲ್ಲಿದೆ. ಈಗಾಗಲೇ ಹೇಳಿದಂತೆ ಇದನ್ನು ಬೇಬಿ ತಾಜ್ ಮಹಲ್ ಎನ್ನುತ್ತಾರೆ. ಸ್ಥಳೀಯರು ಬಚ್ಚಾ ತಾಜ್ ಮಹಲ್ ಎಂದು ಬಣ್ಣಿಸುತ್ತಾರೆ. ಇತ್ಮಾದ್ ಉದ್ ಔಲ್ ಎಂಬುವವನು ಜಹಾಂಗೀರನ ಆಡಳಿತದಲ್ಲಿ ಪ್ರಧಾನಮಂತ್ರಿಯಾಗಿದ್ದ. ಅವನ ಅಸಲಿ ಹೆಸರು ಮಿರ್ಜಾ ಗಿಯಾಸ್ ಬೇಗ್. ಇವನು ಮೂಲತಃ ಪರ್ಷಿಯಾದವನು ಅಂದ್ರೆ ಇಂದಿನ ಇರಾನ್. ಈ ಗಿಯಾಸ್ ಬೇಗ್ಗೆ ನೂರ್ ಜಹಾನ್ ಎಂಬುವ ಸುಂದರವಾದ ಒಬ್ಬಳು ಪುತ್ರಿ ಇದ್ದಳು. ಅವಳನ್ನು ಜಹಾಂಗೀರ ರಾಜನಿಗೆ ಮದುವೆ ಮಾಡಿ ಕೊಟ್ಟಿದ್ದನು. ನೂರ್ ಜಹಾನ್ ಜಹಾಂಗೀರನ ದರ್ಬಾರದಲ್ಲಿ ಎಂತಹ ಹಿಡಿತ ಸಾಧಿಸಿದ್ದಳು ಅಂದ್ರೆ ಅವನ ತಂದೆ ಗಿಯಾಸ್ ಬೇಗ್ ಹಾಗೂ ಸಹೋದರ ಅಸಫ್ ಖಾನ್ಗೆ ಜಹಾಂಗೀರನ ಆಡಳಿತದಲ್ಲಿ ಅತಿದೊಡ್ಡ ಪದವಿಯಲ್ಲಿ ತಂದು ಕೂರಿಸಿದಳು.
ಇತ್ಮಾದ್ ಉದ್ ಔಲ್ ಕಂಗಡಾದಲ್ಲಿ ಸುಮಾರು 1622 ರಲ್ಲಿ ತೀರಿಕೊಂಡ. ಅವನು ತೀರಿಕೊಂಡ ಬಳಿಕ ನೂರ ಜಹಾನ್ ತಂದೆಯ ನೆನಪಿಗಾಗಿ ಆಗ್ರಾದ ಯಮುನಾ ತೀರದಲ್ಲಿಯೇ ಒಂದು ಸಮಾಧಿ ಸ್ಮಾರಕವನ್ನು 1627-28ರ ಇಸ್ವಿಯಲ್ಲಿ ನಿರ್ಮಾಣ ಮಾಡಿದಳು. ಇದೇ ಸ್ಮಾರಕವನ್ನೂ ಜನರು ಬೇಬಿ ತಾಜ್ ಮಹಲ್ ಎಂದು ಕರೆಯುತ್ತಾರೆ.
ಚಾರ್ಬಾರ್ ಶೈಲಿಯಲ್ಲಿ ನಿರ್ಮಿಸಲಾದ ಈ ಒಂದು ಗೋರಿಯು ನಾಲ್ಕು ಅತಿ ಎತ್ತರದ ಗೋಡೆಗಳನ್ನು ಹೊಂದಿದೆ. ನಾಲ್ಕು ಆಯತಾಕಾರದ ಕೋಳಗಳು ಈ ಕಟ್ಟದಲ್ಲಿವೆ. ನಾಲ್ಕು ಪ್ರವೇಶ ದ್ವಾರಗಳು ಹಾಗೂ ನಾಲ್ಕು ಅತಿಎತ್ತರದ ಸ್ಥಂಭಗಳನ್ನು ಈ ಸ್ಮಾರಕ ಸಮಾಧಿಗೆ ಅಳವಡಿಸಲಾಗಿದೆ. ಇದನ್ನು ಫಾರ್ಸಿ ಹಾಗೂ ಮೊಘಲ್ ವಾಸ್ತುಶಿಲ್ಪದ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ತನ್ನ ತಂದೆಯ ನೆನಪಿಗಾಗಿ ಈ ಒಂದು ಸಮಾಧಿಯ ಸ್ಮಾರಕವನ್ನು ಜಹಾಂಗೀರನ ಪತ್ನಿ ನೂರ ಜಹಾನ್ ನಿರ್ಮಿಸಿದ್ದಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ