/newsfirstlive-kannada/media/post_attachments/wp-content/uploads/2025/01/dangerous-countries.jpg)
2024ಕ್ಕೆ ಈಗಾಗಲೇ ಟಾಟಾ ಬೈಬೈ ಹೇಳಲಾಗಿದೆ. ಹೊಸ ವರ್ಷದ ಕ್ಯಾಲೆಂಡರ್ ಮನೆಯಲ್ಲಿ ನೇತು ಹಾಕಲಾಗಿದೆ. ಈ ವರ್ಷದ ಕೆಲವು ಸಂಸ್ಥೆಗಳು ಹಲವು ಸಂಶೋಧನೆಗಳನ್ನು ಕೈಗೊಂಡಿವೆ. ಅದರಲ್ಲೂ ಅಂತಾರಾಷ್ಟ್ರೀಯ ಸುರಕ್ಷಾ ಸಮಿತಿ ಕೈಗೊಂಡ ಒಂದು ವರದಿ ಆತಂಕ ಸೃಷ್ಟಿಸಿದೆ. ಬರುವ ವರ್ಷಗಳಲ್ಲಿ ಒಂದಿಷ್ಟು ದೇಶಗಳು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಲಿವೆ ಎಂದು ಅಂದಾಜಿಸಿವೆ. ಈ ಒಂದು ವಿಶ್ಲೇಷಣೆಯಲ್ಲಿ ಸಂಘರ್ಷಗಳು, ವಾತಾವರಣದಲ್ಲಿ ಬದಲಾವಣೆ, ರಾಜಕೀಯ ಅಸ್ಥಿರತೆ ಈ ದೇಶಗಳಲ್ಲಿ ತಾಂಡವ ಆಡಲಿದೆ ಎಂದು ಹೇಳಲಾಗಿದೆ. ಅಂತಹ ದೇಶಗಳ ಪಟ್ಟಿ ಇಲ್ಲಿವೆ
ಸುಡಾನ್: ಸುಡಾನ್, ನಾಗರಿಕ ಸಂಘರ್ಷಗಳು ಸುಡಾನ್ನ್ನು ಅಕ್ಷರಶಃ ಸುಡುಗಾಡು ಮಾಡಿ ಹಾಕಿದೆ. ಸುಡಾನ್ ಸಶಸ್ತ್ರ ಪಡೆ (ಎಸ್ಎಎಫ್) ಹಾಗೂ ಱಪಿಡ್ ಸಪೋರ್ಟ್ ಫೋರ್ಸ್ ನಡುವಿನ ಸಂಘರ್ಷಗಳು ಅಲ್ಲಿಯ ನಾಗರಿಕರನ್ನು ಹೈರಾಣು ಮಾಡಿ ಹಾಕಿವೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಂಘರ್ಷ ಇದು ಎಂದು ಗುರುತಿಸಲಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ಕಾನೂನುಗಳನ್ನು ಕಾಲು ಕಸದಂತೆ ನೋಡಲಾಗುತ್ತಿದೆ. ಲೈಂಗಿಕ ಕಿರುಕುಳ, ಬಾಲಕರನ್ನು ಒತ್ತಾಯಪೂರ್ವಕವಾಗಿ ಸೇನೆಗೆ ಸೇರಿಸಿಕೊಳ್ಳುವುದು. ನಾಗರಿಕರ ಮೇಲೆ ದಾಳಿ ನಡೆಸುವುದು. ಆಸ್ಪತ್ರೆ, ಸೇವಾ ಸಂಸ್ಥೆಗಳ ಮೇಲೆ ನಡೆಯುವ ದಾಳಿಗಳು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಈ ಬೆಳವಣಿಗೆ ಹೀಗೆ ಮುಂದುವರಿದಿದ್ದೇ ಆದಲ್ಲಿ, ಸುಡಾನ್ನಿಂದ ವಿಶ್ವಕ್ಕೆ ಹಲವು ಅಪಾಯಗಳು ಉಂಟಾಗುವುದು ನಿಶ್ಚಿತ ಎನ್ನಲಾಗುತ್ತಿದೆ.
ಇದನ್ನೂ ಓದಿ:ಅರಬ್ ಕಿಂಗ್ ಅಲ್ಲ, ದುಬೈ ರಾಜನೂ ಅಲ್ಲ, ಬುರ್ಜ್ ಖಲೀಫಾದ ಅಸಲಿ ಮಾಲೀಕರು ಯಾರು?
ಮಯನ್ಮಾರ್: ಕಳೆದ ಹಲವು ವರ್ಷಗಳಿಂದ ಮಯನ್ಮಾರ್ ಅಂದ್ರೆ ಬರ್ಮಾ ದೇಶ ಅಂತಾರಾಷ್ಟ್ರೀಯ ಸುದ್ದಿಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. 2021ರಿಂದ ಇಲ್ಲಿನ ಆಡಳಿತವನ್ನು ಸೇನೆಯೇ ತೆಗೆದುಕೊಂಡಿದು. ಅಂದಿನಿಂದ ಹಿಂಸಾಚಾರಾ ಎಂಬುದು ಮುಗಿಲುಮುಟ್ಟಿದೆ. ವಿಪರೀತ ಬಂಡಾಯ ಗುಂಪುಗಳು ತಲೆಯೆತ್ತಿದ್ದು. ಹಿಂಸಾಚಾರ ಹಾಗೂ ರಕ್ತಪಾತ ಎಲ್ಲ ಸೀಮೆಯನ್ನು ದಾಟಿ ಹೋಗಿವೆ. ಅದರ ಮೇಲೆ ಸೈಕ್ಲೋನ್ ಪ್ರವಾಹದಂತಹ ನೈಸರ್ಗಿಕ ವಿಪತ್ತುಗಳು ದೇಶವನ್ನು ತಿಂದು ಹಾಕಿವೆ. ಈಗಾಗಲೇ 30 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಈ ದೇಶದ ಜನರು ನೀರು ಹಾಗೂ ಆರೋಗ್ಯ ವ್ಯವಸ್ಥೆಗಳಿಲ್ಲದೇ ಕಂಗಾಲಾಗಿ ಹೋಗಿದ್ದಾರೆ.
ಸಿರಿಯಾ: ಸಿರಿಯಾ ಅಂದ್ರೆನೇ ಸಂಘರ್ಷಗಳ ಗೂಡು. ಇಲ್ಲಿ ಒಂದಲ್ಲ ಒಂದು ಸಂಘರ್ಷ ಸದಾ ಜಾರಿಯಲ್ಲಿರುತ್ತದೆ. ಕಳೆದ 14 ವರ್ಷಗಳಿಂದ ನಡೆಯುತ್ತಿದ್ದ ಸಂಘರ್ಷ ಕೊನೆಗೆ 2024ರಲ್ಲಿ ಬಶರ್ ಅಲ್ ಅಸ್ಸಾದ್ ಸರ್ಕಾರವನ್ನು ಕೆಡುವುವ ಮಟ್ಟಕ್ಕೂ ಕೂಡ ಹೋಗಿದೆ. ಸದ್ಯ ಡೆಮಾಸ್ಕಸ್ ಮೇಳೆ ಬಂಡಾಯಗಾರರ ಗುಂಪಿನ ಹಿಡಿತವಿದ್ದು ಇದರಿಂದಾಗಿ ಸುಮಾರು 1.30 ಕೋಟಿ ಜನರ ಸಿರಿಯಾವನ್ನು ತೊರೆದಿದ್ದಾರೆ. ಇಡೀ ಸಿರಿಯಾದ ತುಂಬಾ ಬಡತನವೆಂಬುವುದು ತಾಂಡವಾಡುತ್ತಿದೆ. ಸಿರಿಯಾದ ಮುಂದಿನ ದಿನಗಳು ಹೇಗಿರಲಿವೆ ಎಂಬುದೇ ಈಗಲೂ ಕೂಡ ಅನಿಶ್ಚಿತತೆಯಿಂದ ಕೂಡಿದೆ.
ಇದನ್ನೂ ಓದಿ:ಜೈಷ್ ಸಂಘಟನೆಯ ಮಸೂದ್ ಅಜರ್ ಅಸುನೀಗಿದನಾ? ಜೀವಂತವಾಗಿದ್ದಾನಾ? ಹಿಂದಿರುವ ಸತ್ಯಗಳೇನು?
ದಕ್ಷಿಣ ಸುಡಾನ್; ಇದು ಕೂಡ ಸುಡಾನ್ನ ಸಂಘರ್ಷದಿಂದಲೇ ನಲುಗುತ್ತಿರುವ ದೇಶ. ರಾಜಕೀಯ ಅಸ್ಥಿರತೆ, ಹಿಂಸಾಚಾರಾ, ಹವಾಮಾನ ವೈಪರೀತ್ಯ ಇವೆಲ್ಲವೂ ಕೂಡ ಈ ದೇಶವನ್ನು ಬೆಂಬಿಡದಂತೆ ಕಾಡುತ್ತಿದೆ. ದಕ್ಷಿಣ ಸುಡಾನ್ಗೆ ಸುಡಾನ್ನಿಂದ ನಿರಾಶ್ರಿತರ ಪ್ರವಾಹವೇ ಹರಿದು ಬರುತ್ತಿದೆ. ಈ ಬಾರಿ ಬಂದ ಭೀಕರ ಪ್ರವಾಹ ಅಕ್ಷರಶಃ ಈ ದೇಶವನ್ನು ಕೊಚ್ಚಿಕೊಂಡು ಹೋಗಿದೆ. ಆಹಾರ ಉತ್ಪಾದನೆ, ಕುಸಿದ ಆರ್ಥಿಕ ಪರಿಸ್ಥಿತಿ, ಸೃಷ್ಟಿಯಾಗಿರುವ ಆರ್ಥಿಕ ಸಂಘರ್ಷದಿಂದ ಈ ದೇಶ ವಿಲವಿಲ ಎನ್ನುತ್ತಿದೆ. ಮುಂದೆ ಈ ದೇಶದಿಂದ ವಿಪರೀತ ಅಪಾಯಗಳು ಜಗತ್ತಿಗೆ ಕಾದಿದೆ ಎಂದು ಕೂಡ ಹೇಳಲಾಗುತ್ತಿದೆ.
ಲೆಬನಾನ್: ಅಕ್ಟೋಬರ್ 7,2023ರಂದು ಲೆಬನಾನ್ನ ಹಿಜ್ಬುಲ್ಲಾ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ದೊಡ್ಡ ಅಪಾಯ ಹಾಗೂ ದೇಶಕ್ಕೆ ದಾರಿದ್ರ್ಯತನವನ್ನು ಮೈಮೇಲೆ ಎಳೆದುಕೊಂಡಿತು. ಕಳೆದ ಎರಡು ವರ್ಷಗಳಿಂದಲೂ ಈ ದೇಶದಲ್ಲಿ ಸಂಘರ್ಷವೊಂದು ಜಾರಿಯಲ್ಲಿಯೇ ಇದೆ. ಸಶಸ್ತ್ರ ಪಡೆಗಳ ಸಂಘರ್ಷವೂ ಜಾರಿಯಲ್ಲಿದೆ. ಈಗಾಗಲೇ ದೇಶದಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ದೇಶವನ್ನು ತೊರೆದು ಹೋಗಿದ್ದಾರೆ. ಯುದ್ಧ, ಗುಂಡಿನ ದಾಳಿ, ಅಮಾಯಕರ ಹತ್ಯೆ, ಕ್ಷಿಪಣಿ ದಾಳಿ ಇವೆಲ್ಲವೂ ಇಲ್ಲಿ ಸಾಮಾನ್ಯವಾಗಿ ಹೋಗಿವೆ.
ಇವುಗಳ ಜೊತೆ ಇನ್ನು ಕೆಲವು ದೇಶಗಳಿವೆ ಬುರ್ಕಿನಾ ಫ್ಯಾಸ್ಕೊ, ಹೈತಿ, ಮಾಲಿ, ಸೋಮಾಲಿಯಾ ಹಾಗೂ ಯೆಮೆನ್ ಇವೆಲ್ಲ ದೇಶಗಳು ಒಂದಿಲ್ಲೊಂದು ನಾಗರಿಕ ಸಂಘರ್ಷ, ಮಿಲಿಟರಿ ಆಡಳಿತ, ಹಸಿವು ಬಡತನ, ನಿರುದ್ಯೋಗ, ಆರ್ಥಿಕ ಹಾಗೂ ರಾಜಕೀಯ ಅಸ್ಥಿರತೆಗಳಿಂದ ಕಂಗೆಟ್ಟು ಹೋಗಿವೆ. ಇವುಗಳ ಒಳ ಜಗಳ ಸಂಘರ್ಷಗಳು ಹಾಗೂ ಗಡಿ ತಂಟೆಗಳು ಮುಂದೊಂದು ದಿನ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಲಿವೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ