/newsfirstlive-kannada/media/post_attachments/wp-content/uploads/2025/01/Telangana-temple-theif.jpg)
ವಿಲಕ್ಷಣ ಅನಿಸೋ ಕಳ್ಳತನ ಪ್ರಕರಣವಿದು. ಹೊಸ ವರ್ಷದ ಆಚರಣೆಗೆ ದುಡ್ಡು ಇರಲಿಲ್ಲ. ಖರ್ಚಿಗಾಗಿ ಸ್ನೇಹಿತರಿಬ್ಬರು ಕಳ್ಳತನ ಮಾಡಿದ್ರು. 48 ಗಂಟೆಗಳಲ್ಲಿ ಒಂದಿಡೀ ಪಟ್ಟಣ ಬಂದ್ ಮಾಡಿತ್ತು. ಕೊನೆಗೆ ಸಾಕ್ಷಾತ್ ದೇವಿಯ ಅರಿಶಿಣ ಕುಂಕುಮ ಕಳ್ಳರನ್ನ ಹಿಡಿದುಕೊಟ್ಟಿದೆ.
ಕದ್ದ 48 ಗಂಟೆಗಳಲ್ಲೇ ಅರೆಸ್ಟ್ ಆದ್ರು!
ಡಿಸೆಂಬರ್ 31ರ ರಾತ್ರಿ ತೆಲಂಗಾಣ ರಾಜ್ಯದ ನಿರ್ಮಲ ಜಿಲ್ಲೆಯ ಭೈಂಸಾದ ನಾಗದೇವತೆಯ ಮಂದಿರದಲ್ಲಿ ಕಳ್ಳತನ ಆಗಿತ್ತು. ಕಳ್ಳರು ಬಂಗಾರ ಸಿಗಬಹುದು ಅಂತ ದೇಗುಲದ ಬೀಗ ಮುರಿದು ಒಳ ನುಗ್ಗಿದ್ರು. ಆದರೇ, ಅಲ್ಲಿ ಚಿನ್ನ ಇರಲಿಲ್ಲ, ಗಂಟೆಗಳನ್ನು ಕದ್ದವರು ಹುಂಡಿ ಮುರಿಯೋ ಪ್ರಯತ್ನ ಮಾಡಿದ್ರು. ಇದೇ ಪ್ರಯತ್ನದಲ್ಲೇ ಹಳೆಯದಾದ ಪುಟ್ಟ ಮಂದಿರದ ಒಂದು ಪಾರ್ಶ್ವ ಮುರಿದುಕೊಂಡು ಬಿತ್ತು. ಎದ್ನೋ ಬಿದ್ನೋ ಅಂತ ಕಳ್ಳರು ಓಡಿ ಹೋಗಿದ್ದರು. ಈ ಘಟನೆಯಿಂದಾಗಿ ಹಿಂದೂಪರ ಸಂಘಟನೆಗಳು ಮಂದಿರ ಕೆಡವಿದ್ದಾರೆ ಅಂತ ಖಂಡಿಸಿ ಭೈಂಸಾ ಬಂದ್ಗೆ ಕರೆ ನೀಡಿದ್ರು. ವಾತಾವರಣ ಪ್ರಕ್ಷುಬ್ಧಗೊಂಡಿತ್ತು. ಕೂಡಲೇ ಭೈಂಸಾ ಪೊಲೀಸರು ಎಚ್ಚರಿಕೆಯಿಂದ ತನಿಖೆ ಆರಂಭಿಸಿದ್ದರು.
ಇದನ್ನೂ ಓದಿ: ‘ನನ್ನ ಪಿನ್ಕೋಡ್ಗೆ ಒಂದು ಗರ್ಲ್ ಫ್ರೆಂಡ್ ಕಳಿಸಿ’; ಈ ವಿಚಿತ್ರ ಬೇಡಿಕೆಗೆ ಸ್ವಿಗ್ಗಿಯ ರಿಪ್ಲೈ ಏನಿತ್ತು ಗೊತ್ತಾ?
ಅರಿಶಿಣ ಕುಂಕುಮ ಸುಳಿವು ನೀಡಿತ್ತು!
ಭೈಂಸಾ ಪೊಲೀಸರಿಗೆ ಪ್ರಕರಣ ಕಗ್ಗಂಟಾಗಿ ಮೊದಲಿಗೆ ಕಾಣಿಸಿತ್ತು. ದೇಗುಲದ ಸುತ್ತಲಿನ ಒಂದಷ್ಟು ಸಿಸಿಟಿವಿ ದೃಶ್ಯಗಳನ್ನ ಗಮನಿಸಿದ್ರು. ಇದೇ ಕಡೆಯಿಂದ ಇಬ್ಬರು ಗಾಬರಿಯಿಂದ ಸಾಗುವ ದೃಶ್ಯ ಚಿತ್ರೀಕರಣಗೊಂಡಿತ್ತು. ಆದರೇ, ಪೊಲೀಸರು ಮುಂಜಾನೆ 4 ಗಂಟೆ ಹೊತ್ತಿನ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾಗ ಇಬ್ಬರು ಅಚ್ಚರಿಯಿಂದ ಕಂಡಿದ್ರು. ಒಬ್ಬನ ಮೈಮೇಲಿನ ಬಟ್ಟೆ ಮೇಲೆ ಅರಿಶಿಣ ಚೆಲ್ಲಿತ್ತು. ಮತ್ತೊಬ್ಬನ ಮೈಮೇಲಿನ ಬಟ್ಟೆ ಮೇಲೆ ಕುಂಕುಮ ಚೆಲ್ಲಿತ್ತು. ಇಬ್ಬರೂ ಅನುಮಾನಿತರನ್ನ ಪೊಲೀಸರು ಸ್ಟೇಷನ್ಗೆ ಕರೆಸಿ ವಿಚಾರಿಸಿದಾಗ ಸತ್ಯ ಬಯಲಾಗಿದೆ.
ಎಣ್ಣೆ ಹೊಡೆಯೋದಕ್ಕೆ ದುಡ್ಡು ಇರ್ಲಿಲ್ಲ
ಹೊಸ ವರ್ಷದ ದಿನ ಎಣ್ಣೆ ಹೊಡೆಯೋದಕ್ಕೆ ದುಡ್ಡು ಇರಲಿಲ್ಲ. ಹಾಗಾಗಿಯೇ ನಾಗದೇವತೆಯ ದೇಗುಲದ ಕಳ್ಳತನಕ್ಕೆ ಮುಂದಾಗಿದ್ವಿ. ಆದರೆ ಅಲ್ಲಿ ಘಂಟೆಗಳು ಬಿಟ್ಟರೇ ಮತ್ತೇನೂ ಸಿಗಲಿಲ್ಲ. ದೇಗುಲದ ಒಂದು ಪಾರ್ಶ್ವ ಮೈಮೇಲೆ ಬಿದ್ದಿದ್ದರಿಂದಾಗಿ ಅರಿಶಿಣ ಕುಂಕುಮ ಬಟ್ಟೆಗೆ ಅಂಟಿಕೊಂಡಿತ್ತು ಎಂದಿದ್ದಾರೆ. ಹಾಗಾಗಿಯೇ ಭೈಂಸಾ ಮಂದಿ ಸಾಕ್ಷಾತ್ ದೇವಿಯೇ ಕಳ್ಳರನ್ನ ಅರೆಸ್ಟ್ ಮಾಡಿಸಿದ್ದಾಳೆ ಅಂತ ನಂಬುತ್ತಿದ್ದಾರೆ. ಕೇವಲ 48 ಗಂಟೆಗಳಲ್ಲೇ ಪ್ರಕರಣ ಬೇಧಿಸಿದ್ದಕ್ಕೆ ಜಿಲ್ಲಾ ಎಸ್ಪಿ ಜಾನಕಿ ಷರ್ಮಿಳಾರನ್ನ ಭೈಂಸಾ ಮಂದಿ ಅಭಿನಂದಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ