/newsfirstlive-kannada/media/post_attachments/wp-content/uploads/2025/02/RAMKRISHNA-DALMIA.jpg)
ಜೀವನದಲ್ಲಿ ಅತ್ಯಂತ ಯಶಸ್ವಿಯಾಗಲು ಕೇವಲ ಶಿಕ್ಷಣವೊಂದೇ ಮಾರ್ಗವಲ್ಲ ಎಂದು ಹೇಳಿದ ಒಬ್ಬ ವ್ಯಕ್ತಿ ಕೇವಲ ಹೇಳಿಕೆಗೆ ಸೀಮಿತವಾಗಲಿಲ್ಲ. ಅದನ್ನು ಮಾಡಿ ಕೂಡ ತೋರಿಸಿದರು. ಭಾರತೀಯ ಅತ್ಯಂತ ಸರ್ವಶ್ರೇಷ್ಠ ಉದ್ಯಮಿಗಳ ಸಾಲಿನಲ್ಲಿ ಬಂದು ಕುಳಿತರು. ತಮ್ಮ 18 ನೇ ವಯಸ್ಸಿನಲ್ಲಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಈ ವ್ಯಕ್ತಿ ನೋಡ ನೋಡುತ್ತಲೇ ವಿಶ್ವವೇ ಬೆರಗಾಗುವ ಮಟ್ಟಕ್ಕೆ ಬೆಳೆದು ಬಿಟ್ಟರು. 18ನೇ ವಯಸ್ಸಿನಲ್ಲಿ ಅವರು ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಾಗ ಅವರಿಗೆ ತಂದೆ ಬಿಟ್ಟು ಹೋದ ಅಥವಾ ವಂಶಪಾರಂಪರ್ಯವಾಗಿ ಬಂದಿದ್ದ ಯಾವ ಆಸ್ತಿಯೂ ಇರಲಿಲ್ಲ. ಆದರೂ ಶ್ರಮ ಮತ್ತು ಛಲದಿಂದ ದಾಲ್ಮಿಯಾ ಎಂಬ ಬೃಹತ್ ಬ್ರ್ಯಾಂಡ್ವೊಂದನ್ನು ನಿರ್ಮಾಣ ಮಾಡಿ ಇಡೀ ಜಗತ್ತಿಗೆ ಮಾದರಿಯಾದವರು ರಾಮಕೃಷ್ಣ ದಾಲ್ಮಿಯಾ.
ರಾಮಕೃಷ್ಣ ದಾಲ್ಮಿಯಾ ವಿದ್ಯಾಭ್ಯಾಸವನ್ನು ನೋಡಿದಾಗ ನಮಗೆ ಅವರು ಸ್ಕೂಲ್ ಇಲ್ಲವೇ ಕಾಲೇಜ್ಗೆ ಹೋದ ಯಾವ ದಾಖಲೆಗಳು ಕೂಡ ದೊರಕುವುದಿಲ್ಲ. ಇದರಾಚೆಯೂ ಅವರು ದಾಲ್ಮಿಯಾ ಗ್ರೂಪ್ ಸ್ಥಾಪನೆ ಮಾಡಿ ವಿಶ್ವದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾದರು.
ಗಾಂಧಿ ಮತ್ತು ಜಿನ್ಹಾರೊಂದಿಗೆ ಕೂಡ ಇವರಿಗೆ ಇತ್ತು ಸಂಪರ್ಕ
ಇದನ್ನೂ ಓದಿ:ಭಾರತದಾದ್ಯಂತ ಪ್ರವಾಸ ಮಾಡುವ ಕನಸು ಇದೆಯಾ: ಈ 10 ಐತಿಹಾಸಿಕ ಕಟ್ಟಡಗಳನ್ನು ನೋಡಲು ಮರೆಯದಿರಿ
ರಾಮಕೃಷ್ಣ ದಾಲ್ಮಿಯಾ ಅವರು ರಾಜಸ್ಥಾನದ ಚೀವಾರ್ ಎಂಬ ಅತ್ಯಂತ ಪುಟ್ಟ ಗ್ರಾಮದಲ್ಲಿ ಜನಿಸಿದವರು. ಅಲ್ಲಿಯೇ ಅವರು ಯಶಸ್ವಿಯ ಹಾದಿಯನ್ನು ಕಂಡು ಹಿಡಿದರು. ಇವರು ಸಕ್ಕರೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಕಾಗದದ ಕಾರ್ಖಾನೆ. ಬ್ಯಾಂಕ್ ಇನ್ಸೂರೆನ್ಸ್ ಕಂಪನಿ, ಬಿಸ್ಕಿಟ್ ಕಂಪನಿ, ವಿಮಾನಯಾನ ಕಂಪನಿ ಹೀಗೆ ಸಾಲು ಸಾಲು ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದರು. ಓದು ಬರಹವಿಲ್ಲದ ಒಬ್ಬ ವ್ಯಕ್ತಿ ಕೂಡ ಜಗತ್ತಿನ ಸರ್ವಶ್ರೇಷ್ಠ ಉದ್ಯಮಿಯಾಗಬಹುದು ಎಂಬ ದಾರಿಯೊಂದನ್ನು ಹಾಕಿಕೊಟ್ಟ ರಾಮಕೃಷ್ಣ ದಾಲ್ಮಿಯಾ ಅವರಿಗೆ ಗಾಂಧಿಜೀ ಮತ್ತು ಜಿನ್ಹಾ ಅವರ ಜೊತೆಗೂ ಕೂಡ ಸಂಪರ್ಕವಿತ್ತು.
ಅತ್ಯಂತ ರಸಿಕ ಉದ್ಯಮಿ ರಾಮಕೃಷ್ಣ ದಾಲ್ಮಿಯಾ
ಈ ದೇಶ ಜೇಮಶೇಡಡ್ಜಿ ಟಾಟಾ, ಘನ್ಶ್ಯಾಮ್ ದಾಸ್ ಸೇರಿ ಹಲವು ಉದ್ಯಮಿಗಳನ್ನು ಕಂಡಿದೆ. ಆದ್ರೆ ಇವರೆಲ್ಲರಿಗಿಂತ ಭಿನ್ನವಾಗಿದ್ದರು ರಾಮಕೃಷ್ಣ ದಾಲ್ಮಿಯಾ. ಅವರಿಗೆ ಹುಡುಗಿಯ ಶೋಕಿ ತುಂಬಾ ಇತ್ತು ಎಂದು ಕೂಡ ಐತಿಹಾಸಿಕ ಘಟನೆಗಳು ಹೇಳುತ್ತವೆ. ಅವರು ತಮ್ಮ ಜೀವನದಲ್ಲಿ ಒಂದಲ್ಲ, ಎರಡಲ್ಲ ಒಟ್ಟು ಆರು ಮದುವೆಯಾಗಿದ್ದರು. ಇದರ ಜೊತೆಗೆ ಅವರಿಗೆ ಅನೇಕ ಮಹಿಳೆಯರೊಂದಿಗೆ ಆಚೆಗೆ ಸಂಬಂಧಗಳು ಇದ್ದವು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಆರು ಮದುವೆ, ಸಾಲು ಸಾಲು ಪ್ರೇಯಸಿಯರೊಂದಿಗೆ ರಾಮಕೃಷ್ಣ ದಾಲ್ಮಿಯಾ ಅವರ ಹೆಸರು ಬೇರೆ ರೀತಿಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತು ಆ ಕಾಲದಲ್ಲಿ.
ಮೊಹಮ್ಮದ ಅಲಿ ಜಿನ್ಹಾ ತಂಗಿಯ ಜೊತೆಗೂ ಆಫೇರ್?
ಈಗಾಗಲೇ ಹೇಳಿದಂತೆ ರಾಮಕೃಷ್ಣ ದಾಲ್ಮಿಯಾ ಒಬ್ಬ ಅತ್ಯಂತ ರಸಿಕ ಉದ್ಯಮಿ. ಚೆಂದುಳ್ಳಿ ಚೆಲುವೆಯರಿಗೆ ಬಲು ಬೇಗ ಆಕರ್ಷಣೆಗೆ ಒಳಗಾಗುತ್ತಿದ್ದರು. ಇದು ಯಾವ ಮಟ್ಟಕ್ಕೆ ಅಂದ್ರೆ ಇವರಿಗೆ ಹಾಗೂ ಮೊಹಮ್ಮದ್ ಅಲಿ ಜಿನ್ಹಾ ಅವರ ಸಹೋದರಿ ಫಾತಿಮಾ ಜಿನ್ಹಾ ಅವರ ನಡುವೆ ಪ್ರೇಮಾಂಕುರವಾಗಿತ್ತು ಎಂದು ಕೂಡ ಮಾತುಗಳು ಅಂದು ಕೇಳಿ ಬಂದಿದ್ದವು. ಆದ್ರೆ ದಾಲ್ಮಿಯಾ ಇದರ ಬಗ್ಗೆ ಎಲ್ಲಿಯೂ ಕೂಡ ಸ್ಪಷ್ಟನೆ ನೀಡಿಲ್ಲ. ಅವರು ಹೇಳುವ ಪ್ರಕಾರ ಅವರ ಮೊದಲ ಎರಡು ವಿವಾಹ ಹಾಗೂ ನಂತರದ ನಾಲ್ಕು ವಿವಾಹಕ್ಕೂ ಮೊದಲು ಅನೇಕ ಮಹಿಳೆಯರೊಂದಿಗೆ ನಾನು ರೋಮ್ಯಾನ್ಸ್ ಮಾಡಿದ್ದೇನೆ. ನನಗೆ ಅದರಾಚೆಯೂ ಅನೇಕ ಹುಡುಗಿಯರು ಇಷ್ಟವಾಗಿದ್ದರು ಎಂದು ಖುದ್ದು ದಾಲ್ಮಿಯಾ ಅವರೇ ಹೇಳಿದ್ದಾರೆ.
ಅನೇಕ ಪ್ರಣಯ ಪ್ರಸಂಗಗಳು
ಇಷ್ಟೊಂದು ಮದುವೆಯ ನಂತರವು ರಾಮಕೃಷ್ಣ ದಾಲ್ಮಿಯಾ ಅವರ ಪ್ರಯಣಯ ಪ್ರಸಂಗಗಳ ಬಗ್ಗೆ ಮಾತುಗಳು ಕೇಳಿ ಬಂದಿವೆ. ಇದನ್ನು ಅವರ ಪುತ್ರಿ ನೀಲಮ್ ದಾಲ್ಮಿಯಾ ತಮ್ಮ ಪುಸ್ತಕ ಫಾದರ್ ಡಿಯರೆಸ್ಟ್ ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಪುಸ್ತಕದಲ್ಲಿ ಅವರ ಪತ್ನಿಯರು ಹಾಗೂ ಉಳಿದ ಅನೇಕ ಯುವತಿಯರೊಂದಿಗೆ ಅವರಿಗಿದ್ದ ದೈಹಿಕ ಸಂಬಂಧದ ಬಗ್ಗೆಯೂ ಉಲ್ಲೇಖವಿದೆ. ನೀಲಮ್ ಹೇಳುವ ಪ್ರಕಾರ ಅವರ ತಂದೆ ತಮ್ಮನ್ನು ತಾವು ಯಾವ ರಾಜನಿಗೂ ಕಡಿಮೆಯಿಲ್ಲ ಎಂದು ಭಾವಿಸಿದ್ದರಂತೆ. ಹೀಗಾಗಿ ಅದೇ ರೀತಿಯ ಬದುಕನ್ನು ಬದುಕುವ ಇಚ್ಛೆ ಅವರದ್ದಾಗಿತ್ತಂತೆ. ಅದು ಸಂಪತ್ತಿನ ಶಕ್ತಿಯ ವಿಚಾರದಲ್ಲಾಗಲಿ ಅಥವಾ ಮಹಿಳೆಯರ ವಿಚಾರದಲ್ಲಾಗಲಿ ನಮ್ಮ ತಂದೆ ರಾಜನಂತೆಯೇ ಬದುಕಿದರು ಎಂದು ಬರೆದುಕೊಂಡಿದ್ದಾರೆ. ಇನ್ನು ರಾಜಸ್ಥಾನದ ಕವಿಯಿತ್ರಿ ದಿನೇಶ್ ನಂದಿನಿಯ ಮೇಲೂ ಕೂಡ ರಾಮಕೃಷ್ಣ ದಾಲ್ಮಿಯಾ ಅವರಿಗೆ ಪ್ರೇಮಾಂಕುರವಾಗಿತ್ತಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ