/newsfirstlive-kannada/media/post_attachments/wp-content/uploads/2024/07/Money.jpg)
ಬೆಂಗಳೂರು: ರಾಜ್ಯಕ್ಕೆ ಮೈಕ್ರೋ ಫೈನಾನ್ಸ್ ಕಿರುಕುಳ ಸಾಂಕ್ರಾಮಿಕದಂತೆ ಕಾಡ್ತಿದೆ. ಫೈನಾನ್ಸ್ ಸಿಬ್ಬಂದಿ ಯಮಭಟರಂತೆ ಕೊಡುತ್ತಿರುವ ಕಿರುಕುಳ ತಾಳಲಾರದೇ ಜನರು ಸಾವಿನ ಮನೆ ಸೇರುತ್ತಿದ್ದಾರೆ. ದುರಂತ ಏನಪ್ಪಾ ಅಂದ್ರೆ ಸಿಎಂ ಆದೇಶದ ಬಳಿಕವೂ ಅವರ ತವರಲ್ಲೇ ಇಬ್ಬರು ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಾವಿನ ಸಂಖ್ಯೆ ಅಪಾಯಕಾರಿ ರೀತಿಯಲ್ಲಿ ಏರಿಕೆಯಾಗುತ್ತಿದ್ದು ಗನ್ ತೋರಿಸಿ ಸಾಲ ವಸೂಲಿ ಮಾಡಲಾಗ್ತಿದೆ.
ಮೈಕ್ರೋ ಫೈನಾನ್ಸ್.. ಹೆಸರಷ್ಟೇ ಮೈಕ್ರೋ.. ಆದ್ರೆ ರಾಜ್ಯದಲ್ಲಿ ಇದೀಗ ಬೃಹತ್ ಸಮಸ್ಯೆ, ತಲೆನೋವಾಗಿ, ಜನರ ಜೀವ, ಜೀವನ ಕಸಿದು ರಕ್ತ ಹೀರುವ ಪ್ರಾಣಾಘಾತಕವಾಗಿ ಪರಿಣಮಿಸಿದೆ. ಸುಲಭವಾಗಿ ಸಿಗುತ್ತೆ ಅಂತ ಸಾಲ ಪಡೆದ ಬಡವರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಈ ಸಾಲದ್ದು ಹೆಸರಷ್ಟೇ ಅಲ್ಪ, ಆದ್ರೆ ಬಡ್ಡಿ, ಚಕ್ರಬಡ್ಡಿ, ಮೀಟರ್ಬಡ್ಡಿ ಗಾತ್ರ ಅಕಲ್ಪನಿಯ. ಸದ್ಯ ಪೆಡಂಭೂತಕ್ಕೆ ಹೆದರಿ-ಬೆದರಿ ರಾಜ್ಯದಲ್ಲಿ ಒಬ್ಬರಾದ ಮೇಲೊಬ್ಬರು ಸಾಲದ ಶೂಲವೇರುತ್ತಿದ್ದಾರೆ. ಫೈನಾನ್ಸ್ ಸಿಬ್ಬಂದಿ ಯಮಭಟರಂತೆ ಜನರನ್ನು ಪೀಡಿಸುತ್ತಿದ್ದಾರೆ.
ಇಂದು ಮೂವರ ಜೀವ ಕಸಿದ ಮೈಕ್ರೋ ಫೈನಾನ್ಸ್ ಯಮಭಟರು
ರಾಜ್ಯದಲ್ಲಿ ಆಪತ್ತು ತರುವ ಫೈನಾನ್ಸ್ ಯಮಕಿಂಕರರ ಉಪಟಳಕ್ಕೆ ಇಂದು ಒಂದೇ ದಿನ ಮೂವರು ಕೊನೆಯುಸಿರೆಳೆದಿದ್ದಾರೆ. ಅದರಲ್ಲೂ ಸಿಎಂ ತವರು ಮೈಸೂರು ಜಿಲ್ಲೆಯಲ್ಲೇ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. 5 ಲಕ್ಷ ಸಾಲ ಪಡೆದು ಕಟ್ಟಲಾಗದೇ ನಂಜನಗೂಡಿನ ಅಂಬಳೆ ಗ್ರಾಮದ ಜಯಶೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವ್ಯವಸಾಯ, ಹಸು ಸಾಕಾಣಿಕೆಗಾಗಿ 5 ಲಕ್ಷ ಸಾಲ ಮಾಡಿದ್ದ ಮಹಿಳೆ ಪ್ರತಿ ತಿಂಗಳು 20 ಸಾವಿರಕ್ಕೂ ಹೆಚ್ಚು EMI ಕಟ್ಟುತ್ತಿದ್ದರು. ಆದ್ರೀಗ ಸಾಲ ಕಟ್ಟಲಾಗದೇ ವಿಷದ ಮಾತ್ರೆ ಸೇವಿಸಿ ಜೀವ ಬಿಟ್ಟಿದ್ದಾರೆ.
ಫೈನಾನ್ಸ್ ಕಾಟಕ್ಕೆ ಮಹಿಳೆ ಬಲಿ
ಮನೆ, ವ್ಯವಸಾಯ, ಹಸು ಸಾಕಾಣಿಕೆಗಾಗಿ ಜಯಶೀಲ ₹5 ಲಕ್ಷ ಸಾಲವನ್ನು ಐಐಎಫ್ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ನಲ್ಲಿ ಪಡೆದಿದ್ದರು. ಪ್ರತಿ ತಿಂಗಳು 20 ಸಾವಿರಕ್ಕೂ ಹೆಚ್ಚು EMI ಕಟ್ಟುತ್ತಿದ್ದರು. ಸಾಲ ಮಾಡಿ ತೆಗೆದುಕೊಂಡಿದ್ದ ಹಸು ಕೂಡ ಇತ್ತೀಚೆಗೆ ಮೃತಪಟ್ಟಿತ್ತು. ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ತಲುಪಿದ್ರು. ಸಾಲ ತೀರಿಸಲಾಗದೇ ಫೈನಾನ್ಸ್ ಕಾಟಕ್ಕೆ ಬೇಸತ್ತಿದ್ದ ಜಯಶೀಲ ಜಮೀನಿನಲ್ಲಿ ವಿಷದ ಮಾತ್ರೆ ಸೇವಿಸಿ ಒದ್ದಾಡುತ್ತಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಜಯಶೀಲ ಸಾವನ್ನಪ್ಪಿದ್ದಾರೆ.
ಇನ್ನು ನಂಜನಗೂಡಲ್ಲೇ ಮತ್ತೊಬ್ಬರು ಮೈಕ್ರೋ ಫೈನಾನ್ಸ್ ಕಾಟಕ್ಕೆ ಸಾವನ್ನಪ್ಪಿದ್ದಾರೆ. ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಹುಲ್ಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಿರಿಯಾಪಟ್ಟಣದಲ್ಲಿ ಗನ್ ತೋರಿಸಿ ಸಾಲ ವಸೂಲಿ
ರಾಜೇಶ್ ಎಂಬಾತನಿಗೆ ಗನ್ ತೋರಿಸಿ ಸಾಲ ವಸೂಲಿ ಮಾಡ್ತಿದ್ದ ಆಘಾತಕಾರಿ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ. ಫೈನಾನ್ಸ್ ಸಿಬ್ಬಂದಿಯ ಕರಾಳ ಕೃತ್ಯವನ್ನು ನ್ಯೂಸ್ಫಸ್ಟ್ ಬಿಚ್ಚಿಟ್ಟ ಬೆನ್ನಲ್ಲೇ ಸಿಬ್ಬಂದಿ ಪುನೀತ್ನ ಅರೆಸ್ಟ್ ಮಾಡಲಾಗಿದೆ. ಇದೇ ವೇಳೆ ನ್ಯೂಸ್ ಫಸ್ಟ್ ಸತತ ವರದಿಯಿಂದ ನಂಜನಗೂಡಿನ 5 ಮೈಕ್ರೋಫೈನಾನ್ಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೈಕ್ರೋ ಕಿರುಕುಳಕ್ಕೆ ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ
ಇನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಶಿಕ್ಷಕಿ ಪುಷ್ಪಲತಾ ಎಂಬುವವರು ತುಂಗಭದ್ರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆಯ ಹೊನ್ನಾಳಿ ಪಟ್ಟಣದಲ್ಲಿ ನದಿಗೆ ಹಾರಿ ಸೂಸೈಡ್ ಮಾಡಿಕೊಂಡಿದ್ದಾರೆ. ಇವರು ಮನೆ ಕಟ್ಟಲು ಶಿವಮೊಗ್ಗದ ಟಿಟಿ ಫೈನಾನ್ಸ್ನಲ್ಲಿ 38 ಲಕ್ಷ ಸಾಲ ಪಡೆದಿದ್ದರು. ಆದರೆ ಸಾಲ ಕಂತು ಬಾಕಿ ಇದ್ದ ಕಾರಣ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ನಿನ್ನೆ ಶಾಲೆಯಲ್ಲಿ ಗಣರಾಜ್ಯೋತ್ಸವ ಮುಗಿಸಿ ಬಂದ ಶಿಕ್ಷಕಿ ಜೀವ ಬಿಟ್ಟಿದ್ದಾರೆ. ಪತ್ನಿ ಸಾವಿನ ಕುರಿತು ಹೊನ್ನಾಳಿ ಪೊಲೀಸರಿಗೆ ಪತಿ ಹಾಲೇಶ್ ದೂರು ನೀಡಿದ್ದಾರೆ.
ಗ್ರಾಮಸ್ಥರ ಹೆಸರಲ್ಲಿ ಸಾಲ ಪಡೆದು ದಂಪತಿ ಜೂಟ್.. ಜನ ಕಂಗಾಲು
ಇನ್ನು ತುಮಕೂರಿನಲ್ಲಿ ಗ್ರಾಮಸ್ಥರ ಹೆಸರಲ್ಲಿ ಮೈಕ್ರೋ ಫೈನಾನ್ಸ್ಗಳಿಂದ ಸಾಲ ಪಡೆದಿದ್ದ ದಂಪತಿ ಎಸ್ಕೇಪ್ ಆಗಿದೆ. ದೊಡ್ಡಹೊಸಳ್ಳಿ ಗ್ರಾಮದ ಪ್ರತಾಪ್ ಹಾಗೂ ರತ್ನಮ್ಮ, ಸುಮಾರು 35 ಮಂದಿಯ ಆಧಾರ್ ಕಾರ್ಡ್ ಪಡೆದು 10 ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್ಗಳಿಂದ 50 ಲಕ್ಷಕ್ಕೂ ಹೆಚ್ಚು ಸಾಲ ಪಡೆದು ಪರಾರಿಯಾಗಿದ್ದಾರೆ. ಇದರಿಂದ ಸಾಲ ಪಾವತಿಸುವಂತೆ ಗ್ರಾಮಸ್ಥರಿಗೆ ನೋಟಿಸ್ ನೀಡಲಾಗಿದ್ದು, ಕಂಗಾಲಾಗಿ ಕಣ್ಣೀರಿಡುತ್ತಿದ್ದಾರೆ.
‘ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಕಂಟ್ರೋಲ್ಗೆ ಸಿಗ್ತಿಲ್ಲ’
ಇನ್ನು ರಾಜ್ಯದಲ್ಲಿ ಮೈಕ್ರೋ ಕಿರುಕುಳ ನಿಯಂತ್ರಣಕ್ಕೆ ಸಿಗದಿದ್ದಕ್ಕೆ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಸರ್ಕಾರದಲ್ಲಿ ಯಾವುದೇ ನಿಗಮದಿಂದ ಲೋನ್ ಸಿಗ್ತಿಲ್ಲ. ಹೀಗಾಗಿಯೇ ಜನರು ಮೈಕ್ರೋ ಫೈನಾನ್ಸ್ ಮೂಲಕ ಲೋನ್ ಪಡೆದು ಮೋಸ ಹೋಗುತ್ತಾರೆ. ಸರ್ಕಾರದಿಂದ ಎಲ್ಲಾ ಇಲಾಖೆಗೆ ಹೋಗಬೇಕಾದ ಅನುದಾನ ಕಡಿತ ಆಗಿದೆ ಅಂತ ಆರ್.ಅಶೋಕ್ ಗುಡುಗಿದ್ದಾರೆ.
ಒಟ್ಟಾರೆ ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಅಂತ ಸರ್ವಜ್ಞ ಸುಮ್ಮನೇ ಹೇಳಿಲ್ಲ. ಸಾಲ ಪಡೆಯುವಾಗ ಸಿಹಿಯಂತೆ ಕಂಡ್ರೂ ಹಿಂದಿರುಗಿಸುವಾಗ ಕಹಿ. ಸದ್ಯ ಇದೇ ಕಷ್ಟವನ್ನು ಜನಸಾಮಾನ್ಯರು ಅನುಭವಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯರೇ ಆದೇಶ ಹೊರಡಿಸಿದ್ರೂ ಈ ಕಿರುಕುಳ ಹೆಚ್ಚಾಗಿದ್ದು ದುರಂತ.
ಇದನ್ನೂ ಓದಿ:CM ಎಚ್ಚರಿಕೆಗೂ ಮೈಕ್ರೋಫೈನಾನ್ಸ್ ಡೋಂಟ್ ಕೇರ್.. ಸಿದ್ದು ತವರಿನಲ್ಲಿ ಜೀವ ತೆಗೆದುಕೊಂಡ ಓರ್ವ ಮಹಿಳೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ