/newsfirstlive-kannada/media/post_attachments/wp-content/uploads/2025/02/Microfinance.jpg)
ಬೆಂಗಳೂರು: ಸಾಲ ತೆಗೆದುಕೊಳ್ಳುವಾಗ ಹಬ್ಬದೂಟ, ತೀರಿಸುವಾಗ ಪ್ರಾಣಸಂಕಟ ಎಂಬ ಮಾತಿದೆ. ಇದು ಅಕ್ಷರಶಃ ನಿಜ. ಇದೀಗ ಬಡ್ಡಿ ದಂಧೆಯ ಕಾಲದಲ್ಲಿ ಸಾಲ ಅಂದ್ರೆ ಶೂಲ ಎನ್ನುವಂತಾಗಿದೆ. ಮೈಕ್ರೋ ಮನೆಹಾಳರ ಕಾಟಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಇದೀಗ ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಹಾದಿ ಹಿಡಿಯುವವರ ಸರಣಿ ಮುಂದುವರಿದಿದೆ. ಸಾಲ ಕೊಟ್ಟವರ ಕಿರುಕುಳಕ್ಕೆ ಇವತ್ತು ಮೂರು ಬಲಿಯಾಗಿವೆ.
ಸಾಯೋತನಕ ಸಾಲಗಾರನ ಮನೆಗೆ ಸೌದೆ ಹೊತ್ರೆ ಬರೀ ಬಡ್ಡಿಗೆ ಸಮ ಆಗಿತ್ತಂತೆ. ಈಗ ಮೈಕ್ರೋ ಫೈನಾನ್ಸ್ ಕಾಲದಲ್ಲಿ ಇದು ನಿಜವಾಗಿದೆ. ಸಾಲಕೊಟ್ಟ ಯಮದೂತರ ಕಾಟಕ್ಕೆ ಅದೆಷ್ಟೋ ಮಂದಿ ಸಾವಿನ ಮನೆಯ ಕದ ತಟ್ಟಿದ್ದಾರೆ. ತಮ್ಮವರನ್ನ ಕಳೆದುಕೊಂಡು ಬಡ ಜನರ ಕಣ್ಣೀರಿನ ಕೋಡಿಯೇ ಹರಿಯುತ್ತಿದೆ.
ಸಾಲದ ಶೂಲಕ್ಕೆ ರಾಜ್ಯದಲ್ಲಿ ಮತ್ತೆ ಮೂರು ಬಲಿ!
ಹಾವೇರಿಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿಯೊಬ್ಬ ಪರಲೋಕದ ಹಾದಿ ಹಿಡಿದಿದ್ದಾನೆ. ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಮಾಲತೇಶ್ ಎಂಬ ವ್ಯಕ್ತಿ ಮೈಕ್ರೋ ಫೈನಾನ್ಸ್‌ನಿಂದ 4 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಪಡೆದಿದ್ದ. ಆದ್ರೆ, ಮಾಲತೇಶ್‌ಗೆ ಸಾಲದ ಕಂತು ಕಟ್ಟಲು ಆಗಿರಲಿಲ್ಲ. ಅಷ್ಟರಲ್ಲೇ ಫೈನಾನ್ಸ್ ಸಿಬ್ಬಂದಿ ಕಿರುಕುಳ ಹೆಚ್ಚಾಗಿತ್ತು. ಇದೇ ವೇಳೆ ಈತನ ಪತ್ನಿ ಗೀತಾ ಸಾಲ ತೀರಿಸೋಕೆ ಹಣ ಕೇಳೋಕೆ ತವರು ಮನೆಗೆ ಹೋಗಿದ್ದಾರೆ. ಅಷ್ಟರಲ್ಲೇ ಮಾಲತೇಶ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಮನೆಯ ಯಜಮಾನನ ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.
ಸಾಲಬಾಧೆ ತಾಳದೆ ಇಬ್ಬರು ಅನ್ನದಾತರು ಆತ್ಮಹತ್ಯೆ
ಸಾಲ ಅನ್ನೋದು ರೈತನಿಗೆ ಯಾವತ್ತಿದ್ರೂ ಶೂಲಾನೇ. ಇದೀಗ ಹಾಸನದಲ್ಲಿ ರವಿ ಎಂಬ ರೈತ ಸಾಲಬಾಧೆ ತಾಳದೇ ನೇಣಿಗೆ ಕೊರಳೊಡ್ಡಿದ್ದಾನೆ. ಮೈಕ್ರೋ ಫೈನಾನ್ಸ್, ಸಂಘಗಳಲ್ಲಿ ರೈತ ರವಿ, 9 ಲಕ್ಷ ರೂಪಾಯಿ ಸಾಲ ಮಾಡಿದ್ದನಂತೆ. ಈಗ ಫೈನಾನ್ಸ್ ಸಿಬ್ಬಂದಿ ಸಾಲದ ಹಣ ಪಾವತಿಸುವಂತೆ ಒತ್ತಡ ಹೇರಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ.
ಇತ್ತ ದಾವಣಗೆರೆಯಲ್ಲೂ ಸಾಲಗಾರರ ಕಾಟಕ್ಕೆ ರೈತ ಸೂಸೈಡ್ ಮಾಡಿಕೊಂಡಿದ್ದಾನೆ. ಹರಿಹರ ತಾಲೂಕಿನ ದೀಟೂರು ಗ್ರಾಮದ ರೈತ ಸುರೇಶ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 32 ಲಕ್ಷ ರೂಪಾಯಿ ಸಾಲ ಮಾಡಿದ್ರಂತೆ. ಇದೀಗ ಬ್ಯಾಂಕ್‌ನಿಂದ ನೋಟಿಸ್ ಬರ್ತಿದ್ದಂತೆ ಹೆದರಿದ ರವಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೈಕ್ರೋಫೈನಾನ್ಸ್ ಕಿರುಕುಳ.. ಮಹಿಳೆ ಆತ್ಮಹತ್ಯೆ ಯತ್ನ
ಬಾಗಲಕೋಟೆಯಲ್ಲೂ ಮೈಕ್ರೋ ಫೈನಾನ್ಸ್ ಮನೆಹಾಳರ ದೌರ್ಜನ್ಯ ಹೆಚ್ಚಾಗಿದೆ. ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ರಬಕವಿಬನಹಟ್ಟಿ ತಾಲ್ಲೂಕಿನ ಬಂಡಿಗಣಿ ಗ್ರಾಮದ ರಾಜೇಶ್ವರಿ ಮಾದರ ಎಂಬ 51 ವರ್ಷದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಂದ್ಹಾಗೆ ರಾಜೇಶ್ವರಿ ಸ್ಪಂದನಾ ಮೈಕ್ರೋ ಫೈನಾನ್ಸ್‌ನಲ್ಲಿ 80 ಸಾವಿರ ರೂಪಾಯಿ ಸಾಲ ಪಡೆದಿದ್ರಂತೆ. 2 ತಿಂಗಳು ಕಂತು ಕಟ್ಟಿರಲ್ಲಿಲ್ವಂತೆ. ಬಳಿಕ ಫೈನಾನ್ಸ್ ಸಿಬ್ಬಂದಿ ರಾಜೇಶ್ವರಿಗೆ ನರಕ ದರ್ಶನ ಮಾಡಿಸಿದ್ದಾರೆ. ಇದ್ರಿಂದ ಮನನೊಂದು ರಾಜೇಶ್ವರಿ ಮಾತ್ರೆ ಸೇವಿಸಿ ಸೂಸೈಡ್ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಗಾದ ಕಿರುಕುಳದ ಬಗ್ಗೆ ನ್ಯೂಸ್‌ಫಸ್ಟ್ ಮುಂದೆ ಹೇಳಿಕೊಂಡಿದ್ದಾರೆ.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕಲು ಸರ್ಕಾರ ಕಠಿಣ ಮಾರ್ಗಸೂಚಿಗಳನ್ನ ಹೊರಡಿಸಿದೆ. ಇಷ್ಟಾದ್ರೂ ಆತ್ಮಹತ್ಯೆಯ ಸರಣಿಗಳು ಮುಂದುವರಿದಿದೆ. ಹೀಗಾಗಿ ಕೂಡಲೇ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮಸೂದೆ ಜಾರಿಗೆ ತಂದು ಸಾಲಗಾರರ ಅಟ್ಟಹಾಸಕ್ಕೆ ಮೂಗುದಾರ ಹಾಕಬೇಕಿದೆ.
ಇದನ್ನೂ ಓದಿ:ಟೀಮ್ ಇಂಡಿಯಾದಿಂದಲೇ ಹೊರಬಿದ್ದ ಸ್ಟಾರ್ ವೇಗಿ ಬುಮ್ರಾ; ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ