/newsfirstlive-kannada/media/post_attachments/wp-content/uploads/2025/04/RCB_Tim_David.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತವರಿನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಗುಜರಾತ್, ಡೆಲ್ಲಿ ಮತ್ತು ಪಂಜಾಬ್ ವಿರುದ್ಧ ತೀವ್ರ ಮುಖಭಂಗ ಅನುಭವಿಸಿರುವ ಆರ್ಸಿಬಿ, ಅಭಿಮಾನಿಗಳ ಹೃದಯವನ್ನ ಛಿದ್ರ, ಛಿದ್ರ ಮಾಡಿದೆ. ಈ ನಡುವೆ ಆರ್ಸಿಬಿಯ ಆ ಒಬ್ಬ ಆಟಗಾರ ಎಲ್ಲರ ಮನ ಗೆದ್ದಿದ್ದಾನೆ. ಆರ್ಸಿಬಿಯ ಮಿಸ್ಟರ್ ಡಿಪೆಂಡಬಲ್ ಎನಿಸಿಕೊಂಡಿದ್ದಾನೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ, ಸಾಕಷ್ಟು ಆಟಗಾರರು ಬಂದು ಹೋದ್ರು. ಆದ್ರೆ ಕೆಲ ಆಟಗಾರರು ಮಾತ್ರ, ಈಗಲೂ ಬೆಂಗಳೂರು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದ್ದಾರೆ. ಜಾಕ್ ಕಾಲಿಸ್, ರಾಸ್ ಟೇಲರ್, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್. ಹೀಗೆ ಅನೇಕ ಆಟಗಾರರು ಕನ್ನಡಿಗರ ಹೃದಯ ಗೆದ್ದಿದ್ದಾರೆ. ರೆಡ್ ಆರ್ಮಿಯ ಎವರ್ ಗ್ರೀನ್ ಸ್ಟಾರ್ಸ್ ಆಗಿ ಗುರುತಿಸಿಕೊಂಡಿದ್ದಾರೆ.
ಐಪಿಎಲ್ ಸೀಸನ್-18ರಲ್ಲಿ, ಆರ್ಸಿಬಿಯ ಟಿಮ್ ಡೇವಿಡ್ ಎಲ್ಲರ ಫೇವರಿಟ್ ಪ್ಲೇಯರ್ ಆಗಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ ರನ್ ಕಾಣಿಕೆ ನೀಡ್ತಿರುವ ಡೇವಿಡ್, ಮಿಸ್ಟರ್ ಡಿಪೆಂಡಬಲ್ ಕೂಡ ಆಗಿದ್ದಾರೆ. ಕೇವಲ ನಾಲ್ಕೇ ನಾಲ್ಕು ಇನ್ನಿಂಗ್ಸ್ಗಳಲ್ಲಿ, ಅಭಿಮಾನಿಗಳ ನೆಚ್ಚಿನ ಸ್ಟಾರ್ ಪ್ಲೇಯರ್ ಆಗಿದ್ದಾರೆ.
ಟಿಮ್ ಡೇವಿಡ್ V/S ಪಂಜಾಬ್ ಕಿಂಗ್ಸ್
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. 6.1 ಓವರ್ಗಳಲ್ಲಿ ಕೇವಲ 33 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆರ್ಸಿಬಿ, ಅಲ್ಪ ಮೊತ್ತಕ್ಕೆ ಕುಸಿಯೋ ಭೀತಿ ಎದುರಿಸಿತ್ತು. ಆಗ ಕ್ರೀಸ್ಗಿಳಿದ ಟಿಮ್ ಡೇವಿಡ್, ಕೇವಲ 26 ಎಸೆತಗಳಲ್ಲಿ ಅಜೇಯ 50 ರನ್ ಸಿಡಿಸಿದ್ರು. 5 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ಗಳು, ಡೇವಿಡ್ ಬ್ಯಾಟ್ನಿಂದ ದಾಖಲಾಯ್ತು.
ಟಿಮ್ ಡೇವಿಡ್ V/S ಡೆಲ್ಲಿ ಕ್ಯಾಪಿಟಲ್ಸ್
ಬೆಂಗಳೂರಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ, ಆರ್ಸಿಬಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. 14.5 ಓವರ್ಗಳಲ್ಲಿ ಪಟಿದಾರ್ ಪಡೆ, 117 ರನ್ಗಳಿಗೆ 6 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. ಆಗ ಬ್ಯಾಟಿಂಗ್ಗಿಳಿದ ಟಿಮ್ ಡೇವಿಡ್, 20 ಎಸೆತಗಳಲ್ಲಿ 37 ರನ್ ಬಾರಿಸಿದ್ರು. 2 ಬೌಂಡರಿ ಮತ್ತು 4 ಸಿಕ್ಸರ್ಗಳನ್ನೂ ಸಿಡಿಸಿದ್ರು.
ಇದನ್ನೂ ಓದಿ: ಫಸ್ಟ್ ಹಾಫ್ ಮ್ಯಾಚ್ಗಳು ಮುಗೀತು.. ಇವತ್ತಿಂದ IPL ಆಟವೇ ಬೇರೆ! RCB ಗೇಮ್ ಪ್ಲಾನ್?
ಟಿಮ್ ಡೇವಿಡ್ V/S ಗುಜರಾತ್ ಟೈಟನ್ಸ್
ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ಅನ್ನ ಬೆಂಗಳೂರು ಅಭಿಮಾನಿಗಳು ಎಂಜಾಯ್ ಮಾಡಿದ್ದು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ. 14.2 ಓವರ್ಗಳಲ್ಲಿ ಆರ್ಸಿಬಿ, 104 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಒತ್ತಡದಲ್ಲೇ ಬ್ಯಾಟಿಂಗ್ ನಡೆಸಿದ ಡೇವಿಡ್, ಗುಜರಾತ್ ಬೌಲರ್ಗಳನ್ನ ಹಿಗ್ಗಾಮುಗ್ಗಾ ಬಾರಿಸಿದ್ರು. ಕೇವಲ 18 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್ಗಳ ನೆರವಿನಿಂದ 32 ರನ್ ಕಲೆಹಾಕಿದ್ರು.
ಚೆಪಾಕ್ನಲ್ಲೂ ಟಿಮ್ ಡೇವಿಡ್ ದರ್ಬಾರ್..!
ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಆಡಿದ ಮೂರೂ ಪಂದ್ಯಗಳಲ್ಲೂ ಟಿಮ್ ಡೇವಿಡ್, ಸ್ಫೋಟಕ ಇನ್ನಿಂಗ್ಸ್ ಆಡಿ ಅಭಿಮಾನಿಗಳನ್ನ ರಂಜಿಸಿದ್ರು. ಇದಷ್ಟೇ ಅಲ್ಲ. ಚೆನ್ನೈನ ಚೆಪಾಕ್ ಮೈದಾನದಲ್ಲೂ ಡೇವಿಡ್, ದರ್ಬಾರ್ ನಡೆಸಿದ್ರು. ಸಿಎಸ್ಕೆ ವಿರುದ್ಧ ಆಡಿದ 8 ಎಸೆತಗಳಲ್ಲಿ, 22 ರನ್ ಸಿಡಿಸಿದ್ರು. ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ಸ್ಯಾಮ್ ಕರನ್ ಬೌಲಿಂಗ್ನಲ್ಲಿ ಸತತ 3 ಸಿಕ್ಸರ್ಗಳನ್ನ ಸಿಡಿಸಿದ ಆರ್ಸಿಬಿ ದೈತ್ಯ ಬ್ಯಾಟ್ಸ್ಮನ್, ತಂಡದ ಮೊತ್ತವನ್ನ 200ರ ಗಡಿಯತ್ತ ಕೊಡೊಯ್ದರು.
ಟಿಮ್ ಡೇವಿಡ್, ಸದ್ಯ ಆರ್ಸಿಬಿಯ ಮಿಸ್ಟರ್ ಡಿಪೆಂಡಬಲ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ತಂಡದ ಆಪತ್ಭಾಂದವನಾಗಿ, ಗೇಮ್ ಚೇಂಜರ್ ಆಗಿ, ಮ್ಯಾಚ್ ಫಿನಿಷರ್ ಆಗಿ ಡೇವಿಡ್, ತಂಡಕ್ಕೆ ಕಾಣಿಕೆ ನೀಡ್ತಿದ್ದಾರೆ. ಟಿಮ್ ಡೇವಿಡ್ರ ಅಮೋಘ ಬ್ಯಾಟಿಂಗ್ ಮುಂದುವರೆಯಲಿ. ಆರ್ಸಿಬಿ ತಂಡಕ್ಕೆ ನೆರವಾಗಲಿ ಅನ್ನೋದೇ, ಕನ್ನಡಿಗರ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ