/newsfirstlive-kannada/media/post_attachments/wp-content/uploads/2025/02/UP-Cm-Yogi-Mahakumbh-mela.jpg)
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಈ ಶತಮಾನದ ಮಹಾಕುಂಭಮೇಳ ಕೋಟ್ಯಾಂತರ ಭಕ್ತರ ಪಾದ ಸ್ಪರ್ಶಕ್ಕೆ ಸಾಕ್ಷಿಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ಪ್ರತಿದಿನ ಲಕ್ಷಾಂತರ ಭಕ್ತರು ಪುಣ್ಯ ಸ್ನಾನ ಮಾಡುತ್ತಿದ್ದಾರೆ. 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳ ಫೆಬ್ರವರಿ 26ರ ಶಿವರಾತ್ರಿಯಂದು ಮುಕ್ತಾಯವಾಗಲಿದೆ.
ಮಹಾಕುಂಭಮೇಳ ಅದ್ಧೂರಿಯಾಗಿ ನಡೆಯುತ್ತಿರುವಾಗಲೇ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಉತ್ತರ ಪ್ರದೇಶದ ಜೈಲುಗಳಲ್ಲಿರುವ ಕೈದಿಗಳಿಗೂ ಮಹಾಕುಂಭಮೇಳದ ಗಂಗಾಜಲದಲ್ಲಿ ತೀರ್ಥಸ್ನಾನ ಮಾಡುವ ಭಾಗ್ಯ ಕರುಣಿಸುತ್ತಿದೆ.
ಉತ್ತರ ಪ್ರದೇಶದ 75 ಜೈಲುಗಳಲ್ಲಿ ಸದ್ಯ 90 ಸಾವಿರಕ್ಕೂ ಅಧಿಕ ಖೈದಿಗಳಿದ್ದಾರೆ. ಇವರಿಗೆಲ್ಲಾ ನಾಳೆ ಬೆಳಗ್ಗೆ 9.30ರಿಂದ 10 ಗಂಟೆಯ ಒಳಗೆ ಗಂಗಾಜಲದಿಂದ ಸ್ನಾನ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಖೈದಿಗಳ ಗಂಗಾಸ್ನಾನ ಹೇಗೆ?
ಮಹಾಕುಂಭಮೇಳದ ಹಿನ್ನೆಲೆಯಲ್ಲಿ ಖೈದಿಗಳಿಗೆಲ್ಲಾ ಗಂಗಾಸ್ನಾನ ಮಾಡಿಸಲು ಅವರನ್ನೆಲ್ಲಾ ಪ್ರಯಾಗರಾಜ್‌ಗೆ ಕರೆದುಕೊಂಡು ಹೋಗುತ್ತಿಲ್ಲ. ಪ್ರಯಾಗರಾಜ್‌ನಿಂದ ಗಂಗಾಜಲವನ್ನು ಎಲ್ಲಾ 75 ಜೈಲುಗಳಿಗೆ ತಂದು ತೀರ್ಥಸ್ನಾನ ಮಾಡಲು ಅವಕಾಶ ನೀಡಲಾಗುತ್ತಿದೆ.
ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಒಬ್ಬ ಚಮತ್ಕಾರಿ ಬಾಬಾ; ಕಾಲಿನಿಂದ ಟಚ್ ಮಾಡಿದ್ರೆ ಸಾಕಂತೆ! ಏನಿವರ ಪವಾಡ?
ಉತ್ತರಪ್ರದೇಶದಲ್ಲಿ ಒಟ್ಟು 68 ಜಿಲ್ಲಾ ಜೈಲು, 7 ಸೆಂಟ್ರಲ್ ಜೈಲುಗಳಿವೆ. ಇವತ್ತು ಸಂಜೆಯೊಳಗೆ ಪ್ರಯಾಗರಾಜ್‌ನಿಂದ ಗಂಗಾಜಲವನ್ನು ಜೈಲುಗಳಿಗೆ ಸಾಗಿಸಲು ಸೂಚನೆ ನೀಡಲಾಗಿದೆ. ನಾಳೆ ಜೈಲುಗಳಲ್ಲಿ ಸ್ನಾನದ ನೀರಿನ ಜೊತೆಗೆ ಗಂಗಾಜಲ ಮಿಶ್ರಣ ಮಾಡಿ ತೀರ್ಥಸ್ನಾನ ಮಾಡಲು ಅವಕಾಶ ಮಾಡಲಾಗುತ್ತಿದೆ.
ಉತ್ತರ ಪ್ರದೇಶದ ಜೈಲು ಮಂತ್ರಿ ದಾರಾಸಿಂಗ್ ಚೌಹಾಣ್ ಸೂಚನೆ ಮೇರೆಗೆ ಖೈದಿಗಳಿಗೆ ಗಂಗಾಜಲದ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಲಕ್ನೋ ಸೆಂಟ್ರಲ್ ಜೈಲು ಕಾರ್ಯಕ್ರಮದಲ್ಲಿ ಸಚಿವ ದಾರಾಸಿಂಗ್ ಚೌಹಾಣ್ ಕೂಡ ಭಾಗಿ ಆಗುತ್ತಿದ್ದಾರೆ. ನಾಳೆ ಬೆಳಗ್ಗೆ 9.30 ರಿಂದ 10 ಗಂಟೆವರೆಗೂ ಗಂಗಾಜಲದಿಂದ ಖೈದಿಗಳು ಸ್ನಾನ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಕಳೆದ ವರ್ಷ ಉತ್ತರ ಪ್ರದೇಶದ ಎಲ್ಲಾ ಜೈಲುಗಳಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಪವಿತ್ರ ಗಂಗಾಜಲದಿಂದ ಖೈದಿಗಳಿಗೂ ತೀರ್ಥಸ್ನಾನ ಮಾಡುವ ವ್ಯವಸ್ಥೆ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ