/newsfirstlive-kannada/media/post_attachments/wp-content/uploads/2025/07/Sigandur-bridge.jpg)
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಮತ್ತೊಂದು ಪ್ರವಾಸಿ ತಾಣದ ಮುಕಟವೊಂದು ಸೇರ್ಪಡೆಯಾಗಲಿದೆ. ಜಿಲ್ಲೆಯ ಜನರ ದಶಕಗಳ ಕನಸೊಂದು ಈಗ ವಾಸ್ತವ ರೂಪ ಪಡೆದು ಲೋಕಾರ್ಪಣೆಗೆ ಸಜ್ಜಾಗಿದೆ. ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದೆ.
ಕೆಲವೇ ಹೊತ್ತಲ್ಲಿ ಸಿಗಂದೂರು ಬ್ರಿಡ್ಜ್​ ಉದ್ಘಾಟನೆ
ಶಿವಮೊಗ್ಗದ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಮೇಲೆ ನಿರ್ಮಾಣವಾಗಿರುವ, ಸಿಗಂದೂರು ಸೇತುವೆ ಈಗ ಉದ್ಘಾಟನೆಯ ಹೊಸ್ತಿಲಲ್ಲಿದೆ. ಸುಮಾರು 473 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಮಹಾಸೇತುವೆ ಕೇವಲ ಕಾಂಕ್ರೀಟ್ ಮತ್ತು ಉಕ್ಕಿನ ಕಟ್ಟಡವಲ್ಲ, ಬದಲಿಗೆ ಈ ಭಾಗದ ಜನರ ಬದುಕಿಗೆ ಹೊಸ ಭರವಸೆಯ ಸೇತುವೆ.
ಇದನ್ನೂ ಓದಿ: ಒಂದೇ ಒಂದು ದಿನ.. ಕರ್ನಾಟಕದ ಈ ಜಿಲ್ಲೆಗಳಲ್ಲಿ ಹೃದಯಾಘಾತಕ್ಕೆ 8 ಮಂದಿ ಬಲಿ
ಶರಾವತಿ ಹಿನ್ನೀರು.. ಮಲೆನಾಡಿನ ಸೌಂದರ್ಯದ ಕಿರೀಟ. ಆದರೆ ಇದೇ ಹಿನ್ನೀರು, ಅಂಬಾರಗೋಡ್ಲು ಮತ್ತು ಕಳಸವಳ್ಳಿ ಭಾಗದ ಜನರಿಗೆ ದಶಕಗಳಿಂದ ಒಂದು ಶಾಪವೂ ಆಗಿತ್ತು. ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಲು ಲಾಂಚ್​ಗಳೇ ಆಧಾರವಾಗಿದ್ವು. ಬೆಳಿಗ್ಗೆಯಿಂದ ಸಂಜೆವರೆಗಷ್ಟೇ ಲಭ್ಯವಿದ್ದ ಈ ಲಾಂಚ್​ಗೆ ಗಂಟೆಗಟ್ಟಲೆ ಕಾಯುವುದು ಅನಿವಾರ್ಯವಾಗಿತ್ತು. ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಸಂಕಟ ಒಂದೆರಡಲ್ಲ.. ವಿದ್ಯಾರ್ಥಿಗಳು, ರೈತರು, ನೌಕರರಿಗೆ ನಿತ್ಯ ಗೋಳು ತಪ್ತಿರಲಿಲ್ಲ. ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರು ಕೂಡ ಲಾಂಚ್‌ಗಾಗಿ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇತ್ತು. ಈ ಎಲ್ಲಾ ಸಂಕಷ್ಟಗಳಿಗೆ, ಕಾಯುವಿಕೆಗೆ ಈಗ ತೆರೆ ಬೀಳುವ ಸಮಯ ಬಂದಿದೆ. ಈ ಸೇತುವೆ, ಆ ಕಾಯುವಿಕೆಯ ಯುಗಕ್ಕೆ ಅಂತ್ಯ ಹಾಡಿ, ನಿರಂತರ ಸಂಪರ್ಕದ ಹೊಸ ಯುಗಕ್ಕೆ ನಾಂದಿ ಹಾಡಲಿದೆ.
ಇದನ್ನೂ ಓದಿ: ನಾಳೆ 473 ಕೋಟಿ ರೂ ವೆಚ್ಚದ ಸಿಗಂದೂರು ಬ್ರಿಡ್ಜ್​ ಉದ್ಘಾಟನೆ; ಈ ಕೇಬಲ್ ಸೇತುವೆಯ ವಿಶೇಷತೆ ಏನೇನು..?
ಇಷ್ಟು ದಿನಗಳ ಕಾಲ ಲಾಂಚ್ ಒಂದನ್ನೇ ಅವಲಂಬಿಸಿ, ದಿನನಿತ್ಯದ ಓಡಾಟಕ್ಕೆ, ತುರ್ತು ಸಂದರ್ಭಗಳಲ್ಲಿ ಪರದಾಡುತ್ತಿದ್ದ ಹಿನ್ನೀರಿನ ಜನರಿಗೆ ಈ ಸೇತುವೆ ಹೊಸ ಜೀವನಾಡಿಯಾಗಲಿದೆ. ಕರ್ನಾಟಕದ ಅತಿ ಉದ್ದದ ಒಳನಾಡು ಕೇಬಲ್-ಸ್ಟೇಯ್ಡ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿಂಗಂಧೂರು ಬ್ರಿಡ್ಜ್​ ಇಂದು ಲೋಕಾರ್ಪಣೆಯಾಗ್ತಿದೆ.
ಸಿಗಂಧೂರು ಸೇತುವೆ ವಿಶೇಷತೆಗಳು
ಈ ಸೇತುವೆಯ ವಿಶೇಷತೆ ಏನು ಅನ್ನೋದನ್ನ ನೋಡೋದಾದ್ರೆ, ಈ ಕೇಬಲ್ ಬ್ರಿಡ್ಜ್ ಬರೊಬ್ಬರಿ 473 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 2019 ಡಿಸೆಂಬರ್ 12ರಂದು ಸೇತುವೆ ಕಾಮಗಾರಿ ಆರಂಭಗೊಂಡಿದ್ದು, 2025ರ ಜುಲೈ 14ರಂದು ಕಾಮಗಾರಿ ಮುಕ್ತಾಯ ಕಂಡಿದೆ. ದಿಲೀಪ್ ಬಿಲ್ಡ್ ಕಾನ್ ಏಜಿನ್ಸಿ ಇದನ್ನ ಕಾರ್ಯಗತಗೊಳಿಸಿದೆ. ಇನ್ನು, ಈ ಸೇತುವೆ ಬರೊಬ್ಬರಿ 2,125 ಮೀಟರ್​ನಷ್ಟು ಉದ್ದವಿದ್ದು 16 ಮೀಟರ್ ಅಗಲವಿದೆ.. ಇನ್ನು, ಉಕ್ಕಿನ ಕೇಬಲ್ ಉದ್ದ 470 ಮೀಟರ್ ಹೊಂದಿದೆ. ಅಲ್ಲದೇ ಇದರ ಉದ್ದ 38.50 ಮೀಟರ್​ನಷ್ಟಿದೆ.
ಈ ಸೇತುವೆ ಅಲ್ಲಿನ ಜನರ ಜೀವನಾಡಿಯೂ ಹೌದು.. ಪ್ರವಾಸಿಗರ ಪಾಲಿಗೆ ಸೌಂದರ್ಯದ ಬೀಡು ಹೌದು.. ಇದೀಗ ಉದ್ಘಾಟನೆಗೆ ಸಜ್ಜಾಗಿದೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ ಸಿಗಂದೂರಿಗೆ ತೆರಳಿ ಪೂಜೆ ಸಲ್ಲಿಸಿ ಸೇತುವೆ ಲೋಕಾರ್ಪಣೆಗೊಳಿಸಲಿದ್ದಾರೆ. ಸೇತುವೆ ಉದ್ಘಾಟನೆ ನಂತರ ಮಧ್ಯಾಹ್ನ ಸಾಗರದ ನೆಹರೂ ಮೈದಾನದಲ್ಲಿ ಸಭಾ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಅದರಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಕೂಡ ಬರುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಪರವಾಗಿ ಸಚಿವ ಸತೀಶ್ ಜಾರಕಿಹೊಳಿ ಭಾಗಿಯಾಗಲಿದ್ದಾರೆ. ಒಟ್ನಲ್ಲಿ ಈ ಸುಂದರ ಘಳಿಗೆ ಕಣ್ತುಂಬಿಕೊಳ್ಳಲು ಮಲೆನಾಡಿಗರು ತುದಿಗಾಲಲ್ಲಿ ನಿಂತಿದ್ದಾರೆ.
ಇದನ್ನೂ ಓದಿ: ಭೂಮಿಗೆ ವಾಪಸ್ ಬರ್ತಿರೋ ಶುಕ್ಲಾಗೆ ಬಾಹ್ಯಾಕಾಶದಲ್ಲಿ ಭಾವನಾತ್ಮಕ ವಿದಾಯ; ಇಂದು ಹೊರಟು ನಾಳೆ ಲ್ಯಾಂಡಿಂಗ್..!
ಈ ಸೇತುವೆಯ ಮೂಲಕ ಶರಾವತಿ ಹಿನ್ನೀರು ಭಾಗದ ಜನರ ಕನಸು ನನಸಾಗ್ತಿದೆ. ನೆಮ್ಮದಿ ತರ್ತಿದೆ. ಮತ್ತೊಂದೆಡೆ ಮಲೆನಾಡು ಶಿವಮೊಗ್ಗ ಪ್ರವಾಸೋದ್ಯಮಕ್ಕೆ ಈ ಕೇಬಲ್ ಸೇತುವೆ ಮತ್ತಷ್ಟು ಮೆರಗು ತುಂಬಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ