/newsfirstlive-kannada/media/media_files/2025/08/30/government-engineering-colleges02-2025-08-30-11-56-22.jpg)
ಬೀದರ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು
ರಾಜ್ಯದಲ್ಲಿರುವ ಕಾಮೆಡ್ -ಕೆ ವ್ಯಾಪ್ತಿಯ 150 ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳು ಹಂಚಿಕೆ ನಡೆಯುತ್ತಿದೆ. ಕಾಮೆಡ್-ಕೆ ನಲ್ಲಿ 10 ಸಾವಿರ ಇಂಜಿನಿಯರಿಂಗ್ ಸೀಟುಗಳು ಮಾತ್ರ ಭರ್ತಿಯಾಗಿದ್ದು, 18 ಸಾವಿರ ಸೀಟುಗಳು ಬಾಕಿ ಉಳಿದಿವೆ. 18 ಸಾವಿರ ಸೀಟುಗಳನ್ನು ಕೇಳೋರೇ ಇಲ್ಲ. ಕಾಮೆಡ್ -ಕೆ ವ್ಯಾಪ್ತಿಯ ಕಾಲೇಜುಗಳಲ್ಲಿ ಅಡ್ಮಿಷನ್ ಆಗುವವರು ಇಲ್ಲದೇ 18 ಸಾವಿರ ಸೀಟುಗಳು ಖಾಲಿ ಉಳಿದಿವೆ. ಕಳೆದ ವರ್ಷ ಕೂಡ 20 ಸಾವಿರ ಸೀಟುಗಳಲ್ಲಿ 12 ಸಾವಿರ ಸೀಟುಗಳು ಬಾಕಿ ಉಳಿದಿದ್ದವು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ವಿತರಿಸುವ ಸೀಟುಗಳಿಗೂ ಕಾಮೆಡ್-ಕೆ ಮೂಲಕ ಪಡೆಯುವ ಸೀಟುಗಳ ನಡುವೆ ಭಾರಿ ಶುಲ್ಕ ವ್ಯತ್ಯಾಸ ಇದೆ. ಅಲ್ಲದೇ ಕಾಮೆಡ್ ಕೆ ಮೂಲಕ ಪ್ರವೇಶ ಪಡೆದಿದ್ದರೂ, ಕೆಇಎ ಸಿಇಟಿ ಯಲ್ಲಿ ಸೀಟು ದೊರೆತರೇ, ಸಹಜವಾಗಿ ಕಾಮೆಡ್ ಕೆ ಸೀಟು ರದ್ದುಗೊಳಿಸಲು ಅವಕಾಶ ಇದೆ. ಈ ಕಾರಣಕ್ಕಾಗಿ ಹೆಚ್ಚಿನ ವಿದ್ಯಾರ್ಥಿಗಳು ಕೆಇಎ ಮೂಲಕವೇ ಪ್ರವೇಶ ಪಡೆಯುತ್ತಿದ್ದಾರೆ. ಹೊರ ರಾಜ್ಯದ ವಿದ್ಯಾರ್ಥಿಗಳು ಮಾತ್ರ ಕಾಮೆಡ್ -ಕೆ ಸೀಟುಗಳಿಗೆ ಒಲವು ತೋರುತ್ತಿದ್ದಾರೆ.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳು ಖಾಲಿ ಖಾಲಿ
ರಾಜ್ಯದಲ್ಲಿ ಅನೇಕ ಜಿಲ್ಲೆ, ತಾಲ್ಲೂಕುಗಳಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿವೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲೂ ಈ ಭಾರಿ ಸಾಕಷ್ಟು ಇಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿವೆ. ರಾಜ್ಯದ 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಗಳ ಸೀಟುಗಳು ಖಾಲಿ ಉಳಿದಿವೆ. ಇದೇ ರೀತಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್ ಸೀಟುಗಳು ಖಾಲಿ ಉಳಿದಿವೆ. ಚಾಮರಾಜನಗರ, ಹಾಸನ, ಕೆ.ಆರ್.ಪೇಟೆ, ರಾಮನಗರ, ಕುಶಾಲನಗರ, ರಾಯಚೂರು, ಹಾವೇರಿ, ಹೂವಿನಹಡಗಲಿ, ಕಾರವಾರ, ಕೊಪ್ಪಳದ ತಳಕಲ್, ಗಂಗಾವತಿ, ಹಾಸನದ ಮೊಸಳೆ ಹೊಸಹಳ್ಳಿ, ಚಿತ್ರದುರ್ಗದ ಚಳ್ಳಕೆರೆ, ಗದಗ್ ಜಿಲ್ಲೆಯ ನರಗುಂದ, ಬೀದರ್, ಹಾಸನದ ಅರಸೀಕೆರೆಯಲ್ಲಿ ಈ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿವೆ. ಈ ಎಲ್ಲ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಿವಿಲ್ ಇಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್ ಸೀಟುಗಳು ಖಾಲಿ ಉಳಿದಿವೆ. ಈ ಕೋರ್ಸ್ ಗಳಿಗೆ ಈಗ ಬೇಡಿಕೆ ಕುಸಿತವಾಗಿದೆ.
ಈ ಬಗ್ಗೆ ತಾಂತ್ರಿಕ ಶಿಕ್ಷಣ ಇಲಾಖೆಯೇ ಮೊನ್ನೆ ಪತ್ರಿಕಾ ಜಾಹೀರಾತು ನೀಡಿತ್ತು. ಈ ಕಾಲೇಜುಗಳಲ್ಲಿ ಪ್ರವೇಶ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿತ್ತು. ಶುಲ್ಕ ಬರೀ 28,450 ರೂಪಾಯಿ ಎಂದು ರಾಜ್ಯದ ತಾಂತ್ರಿಕ ಶಿಕ್ಷಣ ಜಾಹೀರಾತು ನೀಡಿತ್ತು. ಸಿಇಟಿ ಬರೆದು ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿ, ಸೀಟು ಸಿಗದ ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ತಮಗೆ ಇಚ್ಛೆ ಅನುಸಾರ ಕಾಲೇಜು ಮತ್ತು ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡು ನಿಗದಿತ ಶುಲ್ಕ ಪಾವತಿಸಿ, ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು ಎಂದು ರಾಜ್ಯದ ತಾಂತ್ರಿಕ ಶಿಕ್ಷಣ ಇಲಾಖೆ ಮೊನ್ನೆ ಪತ್ರಿಕಾ ಜಾಹೀರಾತು ನೀಡಿತ್ತು.
ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಬೇಡಿಕೆ ಕುಸಿದಿದ್ದು ಏಕೆ?
ವರ್ಷದಿಂದ ವರ್ಷಕ್ಕೆ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಬೇಡಿಕೆ ಕುಸಿತವಾಗುತ್ತಿದೆ. 20-25 ವರ್ಷದ ಹಿಂದೆ ಇಂಜಿನಿಯರ್ ಗಳಿಗೆ ಭಾರಿ ಬೇಡಿಕೆ ಇತ್ತು. ಆದರೇ, ಕಾಲೇಜುಗಳಿಂದ ಅಗತ್ಯಕ್ಕಿಂತ ಹೆಚ್ಚಿನ ಇಂಜಿನಿಯರ್ ಗಳು ಪದವಿ ಪಡೆದು ಹೊರ ಬಂದ ಬಳಿಕ ಬೇಡಿಕೆ ಕುಸಿತವಾಗಿದೆ. ಜೊತೆಗೆ ಇಂಜಿನಿಯರಿಂಗ್ ಕೋರ್ಸ್ ಗಳಲ್ಲಿ ಕಲಿಸುವ ಪಾಠಕ್ಕಿಂತ ಪ್ರಾಕ್ಟಿಕಲ್ ಬೇರೆಯದ್ದೇ ಆಗಿರುತ್ತೆ. ಇಂಜಿನಿಯರಿಂಗ್ ಕೋರ್ಸ್ ಗಳಲ್ಲಿ ಈಗಲೂ ಓಬಿರಾಯನ ಕಾಲದ ಸಿಲೆಬಸ್ ಇಟ್ಟುಕೊಂಡು ಪ್ರಾಧ್ಯಾಪಕರು ಪಾಠ ಮಾಡುತ್ತಾರೆ. ಆದರೇ, ವೃತ್ತಿ ಜಗತ್ತಿಗೆ ಹೊಂದಿಕೆಯಾಗುತ್ತಿಲ್ಲ. ಇದು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಾಲ. ಹಾಗಾಗಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕೋರ್ಸ್ ಗಳಿಗೆ ಭಾರಿ ಬೇಡಿಕೆ ಇದೆ. ಕಂಪನಿಗಳ ಅಗತ್ಯತೆಗೆ ಅನುಗುಣವಾಗಿ ಇಂಜಿನಿಯರಿಂಗ್ ಕೋರ್ಸ್ ಗಳ ಸಿಲೆಬಸ್ ಕೂಡ ಅಪ್ ಡೇಟ್ ಆಗಬೇಕು ಎಂದು ಐ.ಟಿ. ದಿಗ್ಗಜ ಇನ್ಪೋಸಿಸ್ ಕಂಪನಿಯಲ್ಲಿದ್ದ ಟಿ.ವಿ.ಮೋಹನ್ ದಾಸ್ ಪೈ ಇತ್ತೀಚೆಗೆ ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ತಿಳಿಸಿದ್ದರು. ಈ ನಿಟ್ಟಿನಲ್ಲಿ ವಿಟಿಯು ಹಾಗೂ ಕಾಮೆಡ್ -ಕೆ ಕಾಲೇಜುಗಳು ಗಂಭೀರ ಚಿಂತನೆ ನಡೆಸಿ, ಇಂಜಿನಿಯರಿಂಗ್ ಕೋರ್ಸ್ ಗಳನ್ನು ಕಾಲಕ್ಕೆ ತಕ್ಕಂತೆ ಅಪ್ ಡೇಟ್ ಮಾಡಬೇಕು. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಹಾಗೂ ಹೊಸ ತಂತ್ರಜ್ಞಾನದ ಕೋರ್ಸ್ ಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವತ್ತ ಗಮನ ಹರಿಸಬೇಕು.
ಜಗತ್ತಿನಲ್ಲಿ ಈಗ ಐ.ಟಿ. ವಲಯ ಕೂಡ ಕುಸಿತದತ್ತ ಸಾಗುತ್ತಿದೆ. ಈ ವರ್ಷ ಈಗಾಗಲೇ ಪ್ರಮುಖ ಟೆಕ್ ಕಂಪನಿಗಳೇ ಒಂದು ಲಕ್ಷಕ್ಕೂ ಅಧಿಕ ಟೆಕ್ ಉದ್ಯೋಗಿಗಳಿಗೆ ಲೇ ಆಫ್ ನೀಡಿ ಮನೆಗೆ ಕಳಿಸಿವೆ. ಹಾಗಾಗಿ ಕಂಪ್ಯೂಟರ್ ಸೈನ್ಸ್, INFORMATION SCIENCE ನಂಥ ಕೋರ್ಸ್ ಓದಿದವರಿಗೂ ಕೆಲಸ ಸಿಗುತ್ತಿಲ್ಲ. ಹಾಗಾಗಿ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಓದುವ ಕಡೆಗೆ ಯುವಜನತೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಸರ್ಕಾರಿ ಹಾಗೂ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಾವಿರಾರು ಸೀಟುಗಳು ಖಾಲಿ ಉಳಿಯುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.