/newsfirstlive-kannada/media/media_files/2025/09/02/dinesh-gundurao-1-2025-09-02-16-44-12.jpg)
ಸರ್ಕಾರಿ ಆಸ್ಪತ್ರೆ ಅಂದ್ರೆ ಅಸಡ್ಡೆ ಮಾಡುವವರ ಸಂಖ್ಯೆ ಜಾಸ್ತಿ. ಸೌಲಭ್ಯ ಸೇರಿ ಅನೇಕ ಕೊರತೆಗಳ ಪಟ್ಟಿ ಮಾಡುವವರ ಸಂಖ್ಯೆ ಡಬಲ್. ಆದ್ರೆ ಈ ರೀತಿ ಮೂಗು ಮುರಿಯುವವರ ಮಧ್ಯೆ ಮಾದರಿ ಆಸ್ಪತ್ರೆಯಾಗಿ ಸರ್ಕಾರಿ ಆಸ್ಪತ್ರೆ ಬದಲಾಯಿಸಲು ಆರೋಗ್ಯ ಇಲಾಖೆ ಹರ ಸಾಹಸ ಪಡುತ್ತಿದೆ. ಸರ್ಕಾರಿ ಆಸ್ಪತ್ರೆ ಒಳ ರೋಗಿಗಳಿಗೆ ಪೌಷ್ಠಿಕಾಂಶದ ಆಹಾರ ಪೂರೈಕೆ ಮಾಡುವ ಆಹಾರ ಯೋಜನೆ ಪರಿಚಯಿಸುತ್ತಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಒದಗಿಸಲಾಗುವ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸುವ ಪ್ರಯತ್ನ ಆರೋಗ್ಯ ಇಲಾಖೆ ಮಾಡುತ್ತಿದೆ.
ಸದ್ಯ ಈ ಪ್ರಯತ್ನದ ಮೊದಲ ಹೆಜ್ಜೆಯಾಗಿ ಸರ್ಕಾರಿ ಆಸ್ಪತ್ರೆ ಒಳ ರೋಗಿಗಳಿಗೆ ಉತ್ತಮ ಪೌಷ್ಟಿಕ ಯುಕ್ತ ಆಹಾರ ಕೊಡಲು ಇಸ್ಕಾನ್ ಜೊತೆ ಸರ್ಕಾರ ಒಪ್ಪಂದ ಮಾಡಿ ಕೊಂಡಿದ್ದು ಪ್ರಾಥಮಿಕ ಹಂತವಾಗಿ ಬೆಂಗಳೂರು ನಗರದ ಪ್ರಮುಖ ಮೂರು ಸರ್ಕಾರಿ ಆಸ್ಪತ್ರೆಯಲ್ಲಿ ಇಸ್ಕಾನ್ ಪೌಷ್ಟಿಕ ಆಹಾರ ಪೂರೈಕೆ ಮಾಡಲಿದೆ. ಅಧಿಕೃತವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಸರ್ ಸಿ.ವಿ. ರಾಮನ್ ನಗರ ಆಸ್ಪತ್ರೆಯಲ್ಲಿ ಚಾಲನೆ ಕೊಟ್ಟಿದ್ದಾರೆ.
ಇಂದಿರಾನಗರದಲ್ಲಿರುವ ಸರ್ ಸಿವಿ ರಾಮನ್ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಾವೇ ಊಟ ಕೊಡುವ ಮೂಲಕ ಪೌಷ್ಟಿಕ ಆಹಾರ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ಈ ವೇಳೆ ರೋಗಿಗಳ ಬಗ್ಗೆ ಆಸ್ಪತ್ರೆ ಸೌಲಭ್ಯಗಳ ಬಗ್ಗೆಯೂ ಕೂಡ ಸಚಿವರು ಮಾತನಾಡಿದ್ದಾರೆ.
ಸರ್ ಸಿವಿ ರಾಮನ್ ಆಸ್ಪತ್ರೆ ಮಾತ್ರವಲ್ಲದೇ ಇಸ್ಕಾನ್ ಸಹಯೋಗದೊಂದಿಗೆ KC ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ಪೌಷ್ಟಿಕ ಆಹಾರ ಯೋಜನೆ ಜಾರಿಯಲ್ಲಿ ಇರುತ್ತೆ. ಮಕ್ಕಳಿಗೆ ವಯಸ್ಸಾದವರಿಗೆ ಗರ್ಭಿಣಿಯರಿಗೆ ಪ್ರತ್ಯೇಕ ಮೆನು ಇದೆ.
ಮಕ್ಕಳಿಗೆ ಗರ್ಭಿಣಿಯರಿಗೆ ಹಿರಿಯರಿಗೆ ಪ್ರತ್ಯೇಕ ಮೆನು ಫಿಕ್ಸ್ ಮಾಡಲಾಗಿದೆ. ದಿನಕ್ಕೆ 5 ಬಾರಿ ಆಹಾರ ಪೂರೈಕೆ ಮಾಡಲಾಗುತ್ತೆ. ಬೆಳಿಗ್ಗೆ ತಿಂಡಿ ,ಮಧ್ಯಾಹ್ನ, ರಾತ್ರಿ ಊಟ , ಬೆಳಿಗ್ಗೆ 10 ಗಂಟೆ ಹೊತ್ತಿಗೆ ಸ್ನ್ಯಾಕ್ಸ್ ಸಂಜೆ 4 ಗಂಟೆ ಹೊತ್ತಿಗೆ ಸ್ನ್ಯಾಕ್ಸ್ ಪೂರೈಕೆ ಮಾಡಲಾಗುತ್ತೆ. ಒಟ್ಟು 9 ತಿಂಗಳು ಪೌಷ್ಠಿಕಾಂಶದ ಆಹಾರ ಪೂರೈಕೆಗೆ ಇಸ್ಕಾನ್ ಜೊತೆ ಒಪ್ಪಂದ ಮಾಡಿ ಕೊಳ್ಳಲಾಗಿದೆ.
ಒಟ್ಟಿನಲ್ಲಿ ಮೊದಲ ಹಂತವಾಗಿ ಮೂರು ಆಸ್ಪತ್ರೆಗಳಲ್ಲಿ ಇಸ್ಕಾನ್ ಆಹಾರ ಪೂರೈಕೆ ಮಾಡುತ್ತಿದ್ದು ಮುಂದೆ ಇದನ್ನು ವಿಸ್ತರಿಸುವ ಭರವಸೆಯನ್ನು ಆರೋಗ್ಯ ಸಚಿವರು ಕೊಟ್ಟಿದ್ದು ಪೌಷ್ಟಿಕ ಆಹಾರ ಯೋಜನೆ ಬಗ್ಗೆ ಯಾರ್ಯಾರು ಏನೇನು ಅಭಿಪ್ರಾಯ ವ್ಯಕ್ತ ಪಡಿಸ್ತಾರೆ ಕಾದು ನೋಡಬೇಕು
ಪ್ರಗತಿ ಶೆಟ್ಟಿ
ನ್ಯೂಸ್ ಫಸ್ಟ್
ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.