/newsfirstlive-kannada/media/post_attachments/wp-content/uploads/2025/01/Supreme_Court.jpg)
ಸುಪ್ರೀಂಕೋರ್ಟ್
ಭಾರತದಲ್ಲಿ ಆಧಾರ್ ಕಾರ್ಡ್ ನಾಗರಿಕತ್ವದ ಪ್ರೂಫ್ ಆಗಲ್ಲ ಎಂಬ ಕೇಂದ್ರ ಚುನಾವಣಾ ಆಯೋಗದ ನಿಲುವು ಅನ್ನು ಸುಪ್ರೀಂಕೋರ್ಟ್ ಕೂಡ ಒಪ್ಪಿಕೊಂಡಿದೆ. ನಾಗರಿಕತ್ವವನ್ನು ಸ್ವತಂತ್ರವಾಗಿ ವೆರಿಫೈ ಮಾಡಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ.
ನೀವು ಭಾರತದ ನಾಗರಿಕರು ಎಂದು ಸಾಬೀತುಪಡಿಸಲು ಯಾವುದಾದರೂ ದಾಖಲೆ ಇರಬೇಕು. ಪ್ರತಿಯೊಬ್ಬರ ಬಳಿಯೂ ಸರ್ಟಿಫಿಕೇಟ್ ಇದೆ. ಸರ್ಟಿಫಿಕೇಟ್ ಕೊಟ್ಟೇ ಸಿಮ್ ಖರೀದಿ ಮಾಡ್ತಾರೆ ಎಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಸೂರ್ಯಕಾಂತ್ ಹೇಳಿದ್ದಾರೆ.
ಬಿಹಾರ ರಾಜ್ಯದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂಕೋರ್ಟ್, ಚುನಾವಣಾ ಆಯೋಗದ ಆಧಾರ್ ಕಾರ್ಡ್ ಬಗೆಗಿನ ನಿಲುವು ಹಾಗೂ ಅಭಿಪ್ರಾಯವನ್ನು ಅನುಮೋದಿಸಿದೆ. ಆಧಾರ್ ಕಾರ್ಡ್ ಅನ್ನು ನಾಗರಿಕತ್ವದ ಅಂತಿಮ ಪ್ರೂಫ್ ಎಂದು ಒಪ್ಪಿಕೊಳ್ಳದೇ ಇರುವ ಚುನಾವಣಾ ಆಯೋಗದ ತೀರ್ಮಾನ ಸರಿಯಾಗಿದೆ. ನಾಗರಿಕತ್ವವನ್ನು ಪರಿಶೀಲನೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಇನ್ನೂ ಸುಪ್ರೀಂಕೋರ್ಟ್, ಮತದಾರರ ಪಟ್ಟಿಯಲ್ಲಿ ಏನಾದರೂ ಆಕ್ರಮಗಳು ಸಾಬೀತಾದರೇ, ಅಂಥ ಮತದಾರರ ಪಟ್ಟಿ ಪರಿಷ್ಕರಣೆಯ ಫಲಿತಾಂಶವನ್ನೇ ಸೆಪ್ಟೆಂಬರ್ ಅಂತ್ಯದಲ್ಲೂ ನಾವು ರದ್ದುಗೊಳಿಸಬಹುದು ಎಂಬ ಎಚ್ಚರಿಕೆಯನ್ನು ಚುನಾವಣಾ ಆಯೋಗಕ್ಕೆ ನೀಡಿದೆ.
ಈಗ ಮೊದಲನೇಯದಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಅಧಿಕಾರ ಇದೆಯೇ ಎಂಬುದನ್ನು ಮೊದಲು ನಿರ್ಧರಿಸಬೇಕು. ಒಂದು ವೇಳೆ ಕೇಂದ್ರ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಿಸುವ ಅಧಿಕಾರ ಇಲ್ಲದಿದ್ದರೇ, ಎಲ್ಲವೂ ಅಂತ್ಯವಾಗುತ್ತೆ. ಒಂದು ವೇಳೆ, ಚುನಾವಣಾ ಆಯೋಗಕ್ಕೆ ಅಧಿಕಾರ ಇದ್ದರೇ, ಯಾವುದೇ ಸಮಸ್ಯೆ ಇರಲ್ಲ ಎಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಸೂರ್ಯಕಾಂತ್ ಹೇಳಿದ್ದಾರೆ.
ಇನ್ನೂ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಚುನಾವಣಾ ಆಯೋಗದ ಪರಿಷ್ಕರಣೆಯಿಂದ ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗುತ್ತಿದೆ. ಅಗತ್ಯ ಅರ್ಜಿಯನ್ನು ಸಲ್ಲಿಸದವರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗುತ್ತಿದೆ. 2003 ರಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಿದವರು ಕೂಡ ಈಗ ಹೊಸದಾಗಿ ಫಾರಂ ಅನ್ನು ಭರ್ತಿ ಮಾಡಿ ಸಲ್ಲಿಸಬೇಕಾಗಿದೆ. ಒಂದು ವೇಳೆ ಹೊಸದಾಗಿ ಫಾರಂ ಅನ್ನು ಅಧಿಕಾರಿಗಳಿಗೆ ಸಲ್ಲಿಸದೇ ಇದ್ದರೇ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗುತ್ತಿದೆ. ಮನೆ, ವಾಸ ಸ್ಥಳ ಬದಲಾವಣೆ ಮಾಡದೇ ಇದ್ದರೂ, ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡಲಾಗುತ್ತಿದೆ ಎಂದು ಕಪಿಲ್ ಸಿಬಲ್ ವಾದಿಸಿದ್ದರು.
ಇನ್ನೂ ಸುಪ್ರೀಂಕೋರ್ಟ್, 65 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿದ್ದು ಹೇಗೆ? ಪರಿಶೀಲನೆಯ ಬಳಿಕ ಕೈ ಬಿಡಲಾಯಿತೇ ಅಥವಾ ಊಹೆಯ ಆಧಾರದ ಮೇಲೆ ಕೈ ಬಿಡಲಾಗಿದೆಯೇ ಎಂದು ಸುಪ್ರೀಂಕೋರ್ಟ್, ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ. ನಿಮ್ಮ ಕಳವಳವೂ ಊಹೆಯೇ ಅಥವಾ ನಿಜವಾದ ಕಳವಳವೇ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲು ಬಯಸಿದ್ದೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಫಾರಂಗಳನ್ನು ಸಲ್ಲಿಸಿದವರು ಈಗಾಗಲೇ ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಇನ್ನೂ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮುಂದುವರಿಸಿ, 2025ರ ಮತದಾರರ ಪಟ್ಟಿಯಲ್ಲಿ ಬಿಹಾರದಲ್ಲಿ 7.9 ಕೋಟಿ ಮತದಾರರಿದ್ದರು. ಇನ್ನೂ 2003ರ ಮತದಾರರ ಪಟ್ಟಿಯಲ್ಲಿ 4.9 ಕೋಟಿ ಮತದಾರರಿದ್ದರು. 22 ಲಕ್ಷ ಮಂದಿಯನ್ನು ಸಾವನ್ನಪ್ಪಿದ್ದಾರೆ ಎಂದು ದಾಖಲಿಸಲಾಗಿದೆ ಎಂದರು.
ಇನ್ನೂ ಮತ್ತೊಬ್ಬ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಕೈ ಬಿಡಲಾದ ಮತದಾರರನ್ನು ಸಾವನ್ನಪ್ಪಿದ್ದಾರೆ ಅಥವಾ ಮನೆ ಬದಲಾವಣೆ ಮಾಡಿದ್ದಾರೆ ಎಂದು ಕೈ ಬಿಟ್ಟಿದೆಯೇ ಎಂಬ ಬಗ್ಗೆ ವಿಷಯ ಬಹಿರಂಗಪಡಿಸಿಲ್ಲ ಎಂದರು.
ಇನ್ನೂ ಸುಪ್ರೀಂಕೋರ್ಟ್ ಕೇಂದ್ರ ಚುನಾವಣಾ ಆಯೋಗದಿಂದ ಕೆಲ ಸ್ಪಷ್ಟನೆಗಳನ್ನು ಕೇಳಿದೆ. ಎಷ್ಟು ಮಂದಿಯನ್ನು ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ. ನಿಮ್ಮ ಅಧಿಕಾರಿಗಳು ಈ ಬಗ್ಗೆ ಸ್ಪಲ್ಪ ಕೆಲಸ ಮಾಡಿರಬಹುದು ಎಂದು ಹೇಳಿದೆ.
ಇನ್ನೂ ಕೇಂದ್ರ ಚುನಾವಣಾ ಆಯೋಗದ ಪರ ವಾದಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಇಷ್ಟೊಂದು ದೊಡ್ಡ ಪ್ರಕ್ರಿಯೆಯಯನ್ನು ನಡೆಸುವಾಗ, ಖಂಡಿತವಾಗಿಯೂ ಕೆಲ ತಪ್ಪುಗಳು ಆಗುತ್ತಾವೆ. ಆದರೇ, ಸತ್ತ ವ್ಯಕ್ತಿಯನ್ನು ಬದುಕಿದ್ದಾರೆ ಎಂದು ಹೇಳುವುದು ಸರಿಯಲ್ಲ. ಹೊಸ ಮಧ್ಯಂತರ ಅರ್ಜಿಯನ್ನು ಸಲ್ಲಿಸುವ ಅಗತ್ಯ ಇಲ್ಲ. ಈಗ ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿಯನ್ನು ಮಾತ್ರ ಪ್ರಕಟಿಸಿದೆ ಎಂದು ಚುನಾವಣಾ ಆಯೋಗದ ಪರ ರಾಕೇಶ್ ದ್ವಿವೇದಿ ವಾದಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.