/newsfirstlive-kannada/media/media_files/2025/09/22/jackline-fernandes-2025-09-22-20-49-02.jpg)
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಗೆ ಹಿನ್ನಡೆ
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಈಗ ಕೊನೆಯ ಹಂತದ ಕಾನೂನು ಹೋರಾಟಕ್ಕೆ ಇಳಿದಿದ್ದರು. ವಂಚಕ ಸುಖೇಶ್ ಚಂದ್ರಶೇಖರ್ ವಿರುದ್ಧ ದಾಖಲಾಗಿರುವ 215 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಕೇಸ್ ನಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಆರೋಪಿ. ಈ ಅಕ್ರಮ ಹಣ ವರ್ಗಾವಣೆ ಕೇಸ್ ನಿಂದ ತಮ್ಮನ್ನು ಕೈ ಬಿಡಬೇಕೆಂದು ಕೋರಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೆಳ ನ್ಯಾಯಾಲಯ ಹಾಗೂ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೇ, ಕೆಳ ನ್ಯಾಯಾಲಯ ಹಾಗೂ ಹೈಕೋರ್ಟ್, ನಟಿ ಜಾಕ್ವೆಲಿನ್ ವಿರುದ್ಧದ ಕೇಸ್ ರದ್ದುಪಡಿಸಲು ನಿರಾಕರಿಸಿದ್ದವು.
ಹೀಗಾಗಿ ಈಗ ಅಂತಿಮವಾಗಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು. ಸುಪ್ರೀಂಕೋರ್ಟ್ ನಲ್ಲಿ ತಮ್ಮ ವಿರುದ್ಧದ ಕೇಸ್ ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.
ಆದರೇ, ಇಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಕೂಡ ವಜಾಗೊಳಿಸಿದೆ. ತಾವು ವಂಚಕ ಸುಖೇಶ್ ಚಂದ್ರಶೇಖರ್ ನೀಡಿದ್ದ ಗಿಫ್ಟ್ ಗಳನ್ನು ಪಡೆದಿದ್ದೇನೆ. ಆದರೇ, ತಾನು ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿಲ್ಲ ಎಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸುಪ್ರೀಂಕೋರ್ಟ್ ನಲ್ಲಿ ವಾದಿಸಿದ್ದರು. ಆದರೇ, ಇದು ಕೆಳ ನ್ಯಾಯಾಲಯದ ವಿಚಾರಣೆಯಲ್ಲಿ ನಿರ್ಧಾರವಾಗಲಿ ಎಂದು ಹೇಳಿದ ಸುಪ್ರೀಂಕೋರ್ಟ್ , ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ವಂಚಕ ಸುಖೇಶ್ ಚಂದ್ರಶೇಖರ್, ವಂಚನೆಯ ಹಿನ್ನಲೆ ಗೊತ್ತಿದ್ದರೂ, ಆತನಿಂದ 7 ಕೋಟಿ ರೂಪಾಯಿ ಮೌಲ್ಯದ ಗಿಫ್ಟ್ ಗಳನ್ನು ಪಡೆದಿದ್ದಾರೆ ಎಂದು ಇ.ಡಿ. ಆರೋಪಿಸಿದೆ. ಇ.ಡಿ. ಕೇಸ್ ನಲ್ಲಿ ಬಾಲಿವುಡ್ ನಟಿ, ಕನ್ನಡದ ರುಕ್ಕಮ್ಮ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಆರೋಪಿಯಾಗಿದ್ದಾರೆ.
ಸುಪ್ರೀಂಕೋರ್ಟ್ ನಲ್ಲಿ ಇಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು.
ಸುಖೇಶ್ ಚಂದ್ರಶೇಖರ್ ಗೆ ನನ್ನ ಮೇಲೆ ಆಕರ್ಷಣೆ ಇತ್ತು. ಹೀಗಾಗಿ ಸುಖೇಶ್ ನನಗೆ ಗಿಫ್ಟ್ ಗಳನ್ನು ಕಳಿಸಿದ್ದಾನೆ. ಬ್ಯಾಗ್, ಜ್ಯುವೆಲ್ಲರಿ ಗಿಫ್ಟ್ ನೀಡಿದ್ದಾರೆ. 200 ಕೋಟಿ ರೂಪಾಯಿ ಹಣದ ಅಕ್ರಮ ಹಣ ವರ್ಗಾವಣೆಯಲ್ಲಿ ನಾನು ಆತನಿಗೆ ಯಾವುದೇ ಸಹಾಯ ಮಾಡಿಲ್ಲ. ಹಣ ವಸೂಲಿಯ ಅಪರಾಧದಲ್ಲಿ ನಾನು ಆರೋಪಿಯಲ್ಲ. 200 ಕೋಟಿ ರೂಪಾಯಿ ವಸೂಲಿ ಮಾಡಿದ ಹಣ ನನ್ನ ಬಳಿ ಬಂದಿಲ್ಲ ಎಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಾದಿಸಿದ್ದರು.
ಆದರೇ, 200 ಕೋಟಿ ರೂಪಾಯಿ ಹಣದ ಪೈಕಿ ಸ್ವಲ್ಪ ಹಣ ಗಿಫ್ಟ್ ರೂಪದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಹೋಗಿದೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ಹೇಳಿದ್ದರು.
"200 ಕೋಟಿ ರೂಪಾಯಿ ಹಣದಲ್ಲಿ ಸ್ಪಲ್ಪ ಭಾಗ ಗಿಫ್ಟ್ ಆಗಿ ನಿಮಗೆ ಬಂದಿದೆ ಎಂಬ ಆರೋಪ ಇದೆ. ಕಾನೂನು ಪ್ರಕಾರ, ಅಪರಾಧದಲ್ಲಿ ಯಾರು ಬೇಕಾದರೂ ಭಾಗಿಯಾಗಬಹುದು. ಇಬ್ಬರೂ ಕ್ಲೋಸ್ ಫ್ರೆಂಡ್ಸ್ . ಒಂದು ವೇಳೆ ಒಬ್ಬರು ಏನನ್ನಾದರೂ, ಮತ್ತೊಬ್ಬರಿಗೆ ಗಿಫ್ಟ್ ನೀಡಿದರೇ, ಅಪರಾಧವಾಗುತ್ತೆ. ಇದು ಬಹಳ ಕಠಿಣವಾದುದು" ಎಂದು ಜಸ್ಟೀಸ್ ದೀಪಾಂಕರ್ ದತ್ತಾ ಹೇಳಿದ್ದರು
ಅನುಮಾನದ ಆಧಾರದ ಮೇಲೆಯೇ ತಮ್ಮ ಕಕ್ಷಿದಾರರಾಗಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ವಿಚಾರಣೆಗೆ ಒಳಪಡಿಸಬಾರದು ಎಂದು ಹಿರಿಯ ವಕೀಲ ಮುಕುಲ್ ರೋಹಟಗಿ ವಾದಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.