/newsfirstlive-kannada/media/media_files/2025/08/04/supreme-court-2025-08-04-13-18-14.jpg)
ಸುಪ್ರೀಂಕೋರ್ಟ್
ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದ ನಗರಗಳಲ್ಲಿ ಬೀದಿನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ ಹೋಮ್ ಗಳಿಗೆ ಹಾಕಬೇಕೆಂಬ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಅರ್ಜಿಯೊಂದು ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿದೆ. ಈ ಅರ್ಜಿಯನ್ನು ಸುಪ್ರೀಂಕೋರ್ಟ್ ನ ಸಿಜೆ ಬಿ.ಆರ್.ಗವಾಯಿ ಅವರ ಪೀಠದ ಮುಂದೆ ಇಂದು ಪ್ರಸ್ತಾಪ ಮಾಡಲಾಗಿದೆ.
ಬೀದಿನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ ಗೆ ಹಾಕುವ ಆದೇಶದ ಬಗ್ಗೆ ಗಮನ ಹರಿಸುವುದಾಗಿ ಸುಪ್ರೀಂಕೋರ್ಟ್ ಸಿಜೆ ಬಿ.ಆರ್.ಗವಾಯಿ ಹೇಳಿದ್ದಾರೆ.
ಆಗಸ್ಟ್ 11 ರಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಹಾಗೂ ಜಸ್ಟೀಸ್ ಆರ್.ಮಹದೇವನ್ ಅವರ ಪೀಠವು ದೆಹಲಿ ಹಾಗೂ ಸುತ್ತಲಿನ ನಗರಗಳಲ್ಲಿ ಬೀದಿನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ ಹೋಮ್ ಗೆ ಹಾಕಬೇಕೆಂದು ಆದೇಶ ನೀಡಿದೆ.
ಈ ಆದೇಶದ ವಿರುದ್ಧ ಇಂದು ಸುಪ್ರೀಂಕೋರ್ಟ್ ನಲ್ಲಿ ವಾದಿಸಿದ ವಕೀಲರೊಬ್ಬರು, ಇದು ಸಮುದಾಯದ ನಾಯಿಗಳಿಗೆ ಸಂಬಂಧಿಸಿದ ವಿಷಯ. ನಾಯಿಗಳನ್ನು ಕೊಲ್ಲಬಾರದು ಎಂದು ಈ ಹಿಂದೆ ಸುಪ್ರೀಂಕೋರ್ಟ್ ಆದೇಶಿಸಿದೆ. ಜಸ್ಟೀಸ್ ಕರೋಲ್ ಅವರು ಈ ಆದೇಶ ಕೊಟ್ಟ ಪೀಠದ ಭಾಗವಾಗಿದ್ದರು. ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ವಕೀಲರು ಸಿಜೆ ಪೀಠದ ಎದುರು ಇಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆ ಬಿ.ಆರ್.ಗವಾಯಿ ಅವರು, ಆದರೇ, ಸುಪ್ರೀಂಕೋರ್ಟ್ ನ ಬೇರೊಂದು ಪೀಠ ಈಗಾಗಲೇ ಈ ಬಗ್ಗೆ ಆದೇಶ ನೀಡಿದೆ. ನಾನು ಇದರ ಬಗ್ಗೆ ಗಮನ ಹರಿಸುತ್ತೇನೆ ಎಂದು ಹೇಳಿದ್ದರು.
ಆದರೇ, ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂಕೋರ್ಟ್ ಒಪ್ಪಲಿಲ್ಲ. ಹೀಗಾಗಿ ಬೀದಿನಾಯಿಗಳ ವಿಷಯ ಮತ್ತೆ ಸುಪ್ರಿಂಕೋರ್ಟ್ ಮೆಟ್ಟಿಲೇರಿದಂತೆ ಆಗಿದೆ. ಈಗ ಸಿಜೆ ಬಿ.ಆರ್.ಗವಾಯಿ ಅವರು ಜಸ್ಟೀಸ್ ಜೆ.ಬಿ.ಪರ್ದಿವಾಲಾ ಅವರ ಪೀಠದ ಆದೇಶವನ್ನು ಏನಾದರೂ ಮಾರ್ಪಡಿಸುತ್ತಾರಾ ಎಂಬ ಕುತೂಹಲ ಶ್ವಾನಪ್ರಿಯರಲ್ಲಿದೆ.
ಸಿಜೆಐ ಬಿ.ಆರ್.ಗವಾಯಿ
ಆದರೇ, ದೇಶದಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದೆ. ರಸ್ತೆಯಲ್ಲಿ ಮಕ್ಕಳು, ವೃದ್ದರು ನಿರ್ಭಯವಾಗಿ ಓಡಾಡಲು ಆಗದ ಪರಿಸ್ಥಿತಿ. ಬೀದಿನಾಯಿಗಳೇ ಬೀದಿ ರೌಡಿಗಳಂತೆ ಎಲ್ಲರ ಮೇಲೂ ಎರಗುತ್ತಿವೆ. ಹೀಗಾಗಿ ದೆಹಲಿ, ಎನ್‌ಸಿಆರ್ ಗೆ ಸೀಮಿತವಾಗಿ ಕೊಟ್ಟಿರುವ ಆದೇಶವನ್ನು ಇಡೀ ದೇಶಾದ್ಯಂತ ವಿಸ್ತರಿಸಬೇಕೆಂಬ ಒತ್ತಾಯ ಕೂಡ ಜನರಿಂದ ಬಂದಿದೆ. ಕರ್ನಾಟಕ ವಿಧಾನಸಭೆಯಲ್ಲೂ ಈ ಒತ್ತಾಯ ವ್ಯಕ್ತವಾಗಿದೆ. ಕರ್ನಾಟಕದಾದ್ಯಂತ ಬೀದಿನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ ಹೋಮ್ ಗೆ ಹಾಕಿ ಎಂದು ಪಕ್ಷಾತೀತವಾಗಿ ಶಾಸಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.