/newsfirstlive-kannada/media/media_files/2025/08/11/delhi-schools-n-minister-2025-08-11-16-10-44.jpg)
ದೆಹಲಿಯಲ್ಲಿ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ದೆಹಲಿ ಸರ್ಕಾರ ನಿರ್ಧರಿಸಿದೆ. ದೆಹಲಿಯಲ್ಲಿ ಖಾಸಗಿ ಶಾಲೆ ಸೇರಿದಂತೆ ಯಾವುದೇ ಶಾಲೆಗಳು ಶುಲ್ಕ ಏರಿಕೆಗೆ ಇನ್ನೂ ಮುಂದೆ ದೆಹಲಿ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಖಾಸಗಿ ಶಾಲೆಗಳ ಶುಲ್ಕವನ್ನು ಮನಸ್ಸಿಗೆ ಬಂದಂತೆ ನಿಗದಿಪಡಿಸುವುದು ಮತ್ತು ಹೆಚ್ಚಳ ಮಾಡುವುದಕ್ಕೆ ಬ್ರೇಕ್ ಹಾಕಲು ದೆಹಲಿ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಶಾಲಾ ಶಿಕ್ಷಣ ಮಸೂದೆ(ಶುಲ್ಕ ನಿಗದಿ ಮತ್ತು ರೆಗ್ಯುಲೇಷನ್ ನಲ್ಲಿ ಪಾರದರ್ಶಕತೆ) 2025 ಅನ್ನು ದೆಹಲಿ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಮಸೂದೆಯನ್ನು ಈಗ ಲೆಫ್ಟಿನೆಂಟ್ ಗರ್ವನರ್ ಅವರ ಒಪ್ಪಿಗೆಗಾಗಿ ಕಳಿಸಲಾಗುವುದು ಎಂದು ದೆಹಲಿ ವಿಧಾನಸಭೆ ಸ್ಪೀಕರ್ ವಿಜೇಂದ್ರ ಗುಪ್ತಾ ಪ್ರಕಟಿಸಿದ್ದಾರೆ.
ಶಾಲಾ ಶಿಕ್ಷಣ ಮಸೂದೆ- 2025 ರಲ್ಲಿ ಪ್ರಮುಖವಾಗಿ ಶಾಲಾ ಶುಲ್ಕ ಹೆಚ್ಚಳಕ್ಕೆ ದೆಹಲಿ ಸರ್ಕಾರದ ಒಪ್ಪಿಗೆ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ನಾಲ್ಕು ಗಂಟೆಗಳ ಚರ್ಚೆಯ ಬಳಿಕ ಮಸೂದೆಯನ್ನು ಅಂಗೀಕರಿಸಲಾಗಿದೆ. ದೆಹಲಿಯಲ್ಲಿ ಈ ವರ್ಷ ಕೆಲ ಶಾಲೆಗಳು ಶೇ. 30 ರಿಂದ ಶೇ. 40 ರಷ್ಟು ಫೀಸ್ ಹೆಚ್ಚಳ ಮಾಡಿವೆ. ಇದರಿಂದ ಪೋಷಕರಿಗೆ ತುಂಬಾ ಹೊರೆಯಾಗಿತ್ತು, ಇದು ಆಕ್ರೋಶಕ್ಕೂ ಕಾರಣವಾಗಿತ್ತು. ದೆಹಲಿಯಲ್ಲಿ ಬೇಕಾಬಿಟ್ಟಿ ಶಾಲಾ ಶುಲ್ಕ ಏರಿಕೆಗೆ ಮೂಗುದಾರ ಹಾಕಲು ದೆಹಲಿ ಸರ್ಕಾರ ಹೊಸ ಮಸೂದೆ ಮಂಡನೆ ಮಾಡಿ ಅಂಗಿಕರಿಸಿದೆ. ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಮಸೂದೆಗೆ ದೆಹಲಿ ಲೆಫ್ಟಿನೆಂಟ್ ಗರ್ವನರ್ ಒಪ್ಪಿಗೆ ನೀಡಿದ ಬಳಿಕ ಕಾಯಿದೆಯಾಗಿ ಜಾರಿಗೆ ಬರಲಿದೆ.
ಈ ಹಿಂದೆ ಸರ್ಕಾರದಿಂದ ಹಂಚಿಕೆಯಾದ ಭೂಮಿಯಲ್ಲಿ ನಿರ್ಮಾಣಗೊಂಡ ಸುಮಾರು 350 ಶಾಲೆಗಳು ಮಾತ್ರ ಶುಲ್ಕ ಪರಿಷ್ಕರಣೆಗೆ ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು. ಆದರೇ ಈಗ ದೆಹಲಿ ನಗರದ ಎಲ್ಲಾ 1,443 ಖಾಸಗಿ ಅನುದಾನರಹಿತ ಶಾಲೆಗಳಿಗೂ ಈ ನಿಯಮಗಳು ಅನ್ವಯವಾಗುತ್ತವೆ.
ದೆಹಲಿಯಲ್ಲಿ ಶಾಲೆಗಳು ಏಕಪಕ್ಷೀಯವಾಗಿ ಶಾಲಾ ಶುಲ್ಕ ಏರಿಕೆಗೆ ಈಗ ಬ್ರೇಕ್ ಬಿದ್ದಿದೆ.
ಈ ಮಸೂದೆಯು ಶಾಲೆಗಳು ಏಕಪಕ್ಷೀಯವಾಗಿ ಶುಲ್ಕ ಏರಿಸುವ ಕಳವಳವನ್ನು ನಿವಾರಿಸುವ ಭರವಸೆ ಮೂಢಿಸಿದೆ. ಸರ್ಕಾರದ ಒಪ್ಪಿಗೆ ಇಲ್ಲದೇ ಇನ್ನೂ ಮುಂದೆ ದೆಹಲಿಯಲ್ಲಿ ಯಾವುದೇ ಶಾಲೆಗಳು ಶುಲ್ಕವನ್ನು ಏರಿಕೆ ಮಾಡುವಂತಿಲ್ಲ ಎಂದು ದೆಹಲಿ ಶಿಕ್ಷಣ ಸಚಿವ ಅಶೀಶ್ ಸೂದ್ ಮಸೂದೆ ಮಂಡಿಸುವಾಗ ಹೇಳಿದ್ದಾರೆ.
ದೆಹಲಿ ಶಾಲಾ ಶಿಕ್ಷಣ ಕಾಯಿದೆ ಮತ್ತು ನಿಯಮಗಳು, 1973ರ ನಿಯಮಗಳನ್ನು ಹೊಸ ಕಾಯಿದೆಯಲ್ಲಿ ಬದಲಾಯಿಸಲಾಗಿದೆ. ಈ ಹಿಂದಿನ ಕಾಯಿದೆಯಲ್ಲಿ ಬಹುತೇಕ ಶಾಲೆಗಳು ಶಾಲಾ ಶುಲ್ಕ ಏರಿಕೆಗೆ ದೆಹಲಿ ಸರ್ಕಾರದ ಒಪ್ಪಿಗೆ ಪಡೆಯಬೇಕಾಗಿರಲಿಲ್ಲ.
ಕೊರೊನಾ ಸಮಯದಲ್ಲಿ ಬಹಳಷ್ಟು ಶಾಲೆಗಳು, ಸರ್ಕಾರದ ಆದೇಶವನ್ನು ಉಲಂಘಿಸಿ ಶುಲ್ಕ ಏರಿಕೆ ಮಾಡಿದ್ದವು. ಸ್ಪಷ್ಟ, ಕಾನೂನು ಬದ್ದ ವ್ಯವಸ್ಥೆಯೇ ಇರಲಿಲ್ಲ. ಸರ್ಕಾರದ ನಿಯಮಗಳನ್ನು ಜಾರಿಗೊಳಿಸಲು ಸಾಧ್ಯವೂ ಇರಲಿಲ್ಲ. ಈಗ ಈ ಸಮಸ್ಯೆಗಳೆಲ್ಲಾ ಈ ಹೊಸ ಕಾಯಿದೆಯಿಂದ ಪರಿಹಾರವಾಗಿದೆ.
ದೆಹಲಿಯಲ್ಲಿ ಶಾಲೆಗಳು ಶುಲ್ಕ ನಿರ್ಧರಿಸುವ ಸಮಿತಿಯಲ್ಲಿ ಕೇವಲ ಶಾಲಾ ಮ್ಯಾನೇಜ್ ಮೆಂಟ್ ಮಾತ್ರವಲ್ಲ, ಪೋಷಕರಿಗೂ ಸ್ಥಾನ ನೀಡಲಾಗಿದೆ. ವಿದ್ಯಾರ್ಥಿಗಳ ವಿರುದ್ಧ ಯಾವುದೇ ಪ್ರತಿಕೂಲ ಕ್ರಮ ಕೈಗೊಳ್ಳುವಂತಿಲ್ಲ. ಸಮರ್ಥನೀಯವಲ್ಲದ ರೀತಿ ಶಾಲಾ ಶುಲ್ಕ ಏರಿಕೆ ಮಾಡಿದರೇ, ಅಂಥ ಶಾಲೆಗಳಿಗೆ ಭಾರಿ ದಂಡ ವಿಧಿಸಲಾಗುತ್ತೆ. ಮೂರು ಹಂತದ ಸಮಸ್ಯೆ ಪರಿಹಾರದ ವ್ಯವಸ್ಥೆಯನ್ನು ಹೊಸ ಕಾಯಿದೆಯಲ್ಲಿ ರೂಪಿಸಲಾಗಿದೆ.
The article powerfully showcases how our Delhi School Education (Transparency in Fixation & Regulation of Fees) Bill, 2025 puts parents first-
— Ashish Sood (@ashishsood_bjp) August 10, 2025
-Parents in fee committees, not just management
-Zero tolerance for coercion against students
-Steep penalties for unjustified hikes… pic.twitter.com/wnSG9PLE9a
ದೆಹಲಿ ಸರ್ಕಾರದ ಕ್ರಮ ಕರ್ನಾಟಕಕ್ಕೂ ಮಾದರಿಯಾಗಬಾರದೇ?
ದೆಹಲಿ ಸರ್ಕಾರದ ಈ ಕ್ರಮ ದೇಶದ ಉಳಿದ ರಾಜ್ಯ ಸರ್ಕಾರಗಳಿಗೂ ಮಾದರಿ. ನಮ್ಮ ಕರ್ನಾಟಕದಲ್ಲೂ ಈ ಹಿಂದೆ ರಾಜ್ಯ ಸರ್ಕಾರ, ಹೈಕೋರ್ಟ್ ಆದೇಶ ಮಾಡಿದ್ದರೂ, ಶಾಲೆಗಳು ಆ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಕರ್ನಾಟಕದಲ್ಲೂ ಶಾಲಾ ಶುಲ್ಕವನ್ನು ಶಾಲೆಯ ನೋಟೀಸ್ ಬೋರ್ಡ್ ನಲ್ಲಿ ಪ್ರಕಟಿಸಬೇಕೆಂಬ ನಿಯಮ ಇದೆ. ಆದರೇ, ಆ ನಿಯಮವೂ ಪಾಲನೆಯಾಗುತ್ತಿಲ್ಲ. ಜೊತೆಗೆ ಈಗ ದೆಹಲಿ ಸರ್ಕಾರವು ಎಲ್ಲ ಖಾಸಗಿ ಶಾಲೆಗಳು ಹಾಗೂ ಅನುದಾನಿತ, ಅನುದಾನ ರಹಿತ ಶಾಲೆಗಳು ಕೂಡ ಶಾಲಾ ಶುಲ್ಕ ಏರಿಕೆಗೆ ದೆಹಲಿ ಸರ್ಕಾರದ ಒಪ್ಪಿಗೆ ಪಡೆಯಬೇಕೆಂದು ಕಾಯಿದೆಯನ್ನು ರಚಿಸಿ ಜಾರಿಗೆ ತರುತ್ತಿದೆ. ದೆಹಲಿ ಸರ್ಕಾರದ ಈ ಹೊಸ ಶುಲ್ಕ ನಿಯಂತ್ರಣ ಕಾಯಿದೆಯ ಮಾದರಿಯಲ್ಲೇ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಶಾಲಾ ಶುಲ್ಕ ನಿಯಂತ್ರಣಕ್ಕೆ ಹೊಸ ಕಾಯಿದೆಯನ್ನು ಜಾರಿಗೆ ತರುವ ಅಗತ್ಯತೆ ಈ ಹಿಂದಿಗಿಂತ ಈಗ ಹೆಚ್ಚಾಗಿದೆ.
ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಕನಿಷ್ಠ ಒಂದು ಲಕ್ಷ ರೂಪಾಯಿಯಿಂದ ಶಾಲಾ ಶುಲ್ಕ ಪ್ರಾರಂಭವಾಗುತ್ತೆ. ಕೆಲವು ಶಾಲೆಗಳಲ್ಲಿ ವಾರ್ಷಿಕ 40 ಸಾವಿರ ರೂಪಾಯಿಯಿಂದ 80 ಸಾವಿರ ರೂಪಾಯಿ ಶಾಲಾ ಶುಲ್ಕ ಇದೆ. 2 ರಿಂದ 3 ಲಕ್ಷ ರೂಪಾಯಿ ಶಾಲಾ ಶುಲ್ಕ ವಸೂಲಿ ಮಾಡುವ ಶಾಲೆಗಳೂ ಇವೆ. ಶಾಲೆಗಳಿಗೆ ಶಿಕ್ಷಕರು, ಸಿಬ್ಬಂದಿ ಸಂಬಳ ನೀಡಬೇಕು ಅನ್ನೋದೇನೋ ನಿಜ. ಆದರೇ, ದುಬಾರಿ ಶಾಲಾ ಶುಲ್ಕ ವಸೂಲಿ ಶಿಕ್ಷಣದ ವಾಣಿಜ್ಯೀಕರಣ ಮಾಡುತ್ತಿರುವುದಕ್ಕೆ ಹೊಸ ಕಾಯಿದೆ ಜಾರಿಗೆ ತಂದು ಬ್ರೇಕ್ ಹಾಕಬೇಕಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಗಮನ ಹರಿಸಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.