/newsfirstlive-kannada/media/media_files/2025/08/16/shwetha-menon-amma-2025-08-16-15-20-52.jpg)
'ಅಮ್ಮಾ' ಸಂಘಟನೆಯ ನೂತನ ಅಧ್ಯಕ್ಷರು, ಪದಾಧಿಕಾರಿಗಳು
ಕೇರಳದ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್( AMMA) ಸಂಘಟನೆಯ ಮೊದಲ ಮಹಿಳಾ ಅಧ್ಯಕ್ಷೆಯಾಗಿ ನಟಿ ಶ್ವೇತಾ ಮೆನನ್ ಆಯ್ಕೆಯಾಗಿದ್ದಾರೆ. ಒಂದೆರೆಡು ತಿಂಗಳಿನಿಂದ ವಿವಾದದ ಮಧ್ಯೆಯೂ ಶ್ವೇತಾ ಮೆನನ್ ಅಧ್ಯಕ್ಷೆಯಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಶ್ವೇತಾ ಮೆನನ್ ಅಶ್ಲೀಲ, ಅಸಭ್ಯ ಸಿನಿಮಾ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂದು ಶ್ವೇತಾ ಮೆನನ್ ವಿರುದ್ಧ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ದೂರಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಶ್ವೇತಾ ಮೆನನ್ ಎಫ್ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ಪಡೆದಿದ್ದರು. ತಾವು ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಕ್ಕಾಗಿ ದುರುದ್ದೇಶದಿಂದ ಕೇಸ್ ದಾಖಲಿಸಲಾಗಿದೆ ಎಂದು ಶ್ವೇತಾ ಮೆನನ್ ಹೈಕೋರ್ಟ್ ನಲ್ಲಿ ವಾದಿಸಿದ್ದರು.
ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಶ್ವೇತಾ ಮೆನನ್ ಸಂಘಟನೆಯಲ್ಲಿ ಬದಲಾವಣೆ ತರುವುದಾಗಿ ಹೇಳಿದ್ದಾರೆ. ನಾನು ಯಾವುದನ್ನೂ ಪ್ಲ್ಯಾನ್ ಮಾಡಿಲ್ಲ. ಆದರೆ, ನನಗೆ ನನ್ನದೇ ಆದ ಅಜೆಂಡಾ ಇದೆ. ಇದು ದೊಡ್ಡ ವಿಷಯ. ಆದರೇ, ದಯವಿಟ್ಟು ಯಾವುದೇ ಪವಾಡಗಳನ್ನು ನಿರೀಕ್ಷೆ ಮಾಡಬೇಡಿ. ಆದರೇ, ಬದಲಾವಣೆಯಾಗಿ ಏನನ್ನಾದರೂ ಮಾಡುತ್ತೇವೆ ಎಂದು ಶ್ವೇತಾ ಮೆನನ್ ಹೇಳಿದ್ದಾರೆ.
ಕೇರಳ ಸಿನಿಮಾ ರಂಗದಲ್ಲಿ ಸಿನಿಮಾ ನಟಿಯರನ್ನು ಲೈಂಗಿಕವಾಗಿ ಶೋಷಣೆ ಮಾಡಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ನಟಿಯರು, ಕಲಾವಿದೆಯರಿಗೆ ಸರಿಯಾದ ರಕ್ಷಣೆ ಇಲ್ಲ ಎಂದು ಜಸ್ಟೀಸ್ ಹೇಮಾ ಸಮಿತಿ ವರದಿ ನೀಡಿತ್ತು. ಕೆಲವು ನಟಿಯರು ತಮಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಹೇಮಾ ಸಮಿತಿಯ ಮುಂದೆ ಹೇಳಿಕೊಂಡಿದ್ದರು. ಈ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್ ಲಾಲ್ ರಾಜೀನಾಮೆ ನೀಡಿದ್ದರು. ಹೀಗಾಗಿ ನಿನ್ನೆ( ಆಗಸ್ಟ್ 15) ಅಮ್ಮಾ ಸಂಘಟನೆಯ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆದಿತ್ತು. 17 ಮಂದಿ ಕಾರ್ಯಕಾರಿ ಸಮಿತಿಯ ಸ್ಥಾನಗಳಿಗೂ ನಿನ್ನೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿದೆ.
ಜಸ್ಟೀಸ್ ಹೇಮಾ ಸಮಿತಿಯ ವರದಿಯಲ್ಲಿ 10 ರಿಂದ 15 ಮಂದಿಯ ಸಣ್ಣ ಗುಂಪಿನ ನಿರ್ಮಾಪಕರು, ನಿರ್ದೇಶಕರು, ನಟರೇ ಕೇರಳ ಸಿನಿಮಾ ರಂಗದಲ್ಲಿ ಪ್ರಭಾವಿಯಾಗಿದ್ದು, ನಟಿಯರು, ಕಲಾವಿದರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಬಳಿಕ 235 ಪುಟದ ವರದಿಯೂ ಸಾರ್ವಜನಿಕವಾಗಿ ಬಿಡುಗಡೆಯಾಗಿತ್ತು. ಇದರ ಬಗ್ಗೆ ತನಿಖೆಗೆ ಕೇರಳ ಸರ್ಕಾರ ಎಸ್‌ಐಟಿ ರಚಿಸಿತ್ತು. ಆದರೇ, ಎಸ್‌ಐಟಿಗೆ ಯಾವುದೇ ನಟಿಯರೂ ಲಿಖಿತ ದೂರು ನೀಡಲು ಮುಂದೆ ಬರಲಿಲ್ಲ. ದೂರು ನೀಡಿದ್ದವರು ಕೂಡ ಬಳಿಕ ವಾಪಸ್ ಪಡೆದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ