/newsfirstlive-kannada/media/media_files/2025/10/06/pavan-kalyan-at-chintamani-2025-10-06-18-46-36.jpg)
ನಿವೃತ್ತ ಜಸ್ಟೀಸ್ ವಿ.ಗೋಪಾಲಗೌಡರಿಗೆ ಸನ್ಮಾನಿಸಿದ ಪವನ್ ಕಲ್ಯಾಣ್
ಪವರ್ ಸ್ಟಾರ್ ಹಾಗೂ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಇಂದು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಳಿಗ್ಗೆ ಚಿಂತಾಮಣಿಗೆ ಬಂದಿದ್ದರು. ಸಂಜೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಪವನ್ ಕಲ್ಯಾಣ್ ಅತಿಥಿಯಾಗಿದ್ದಾರೆ. ಮುಖ್ಯವಾಗಿ ಪವನ್ ಕಲ್ಯಾಣ್ ರನ್ನು ಜಸ್ಟೀಸ್ ವಿ.ಗೋಪಾಲಗೌಡರ ಹುಟ್ಟುಹಬ್ಬದ ಕಾರ್ಯಕ್ರಮದ ನೆಪದಲ್ಲಿ ಅವಿಭಜಿತ ಕೋಲಾರ ಜಿಲ್ಲೆಗೆ ಕರೆಸಿ, ಆಂಧ್ರದಿಂದ ನೇರವಾಗಿ ಕೃಷ್ಣಾ ನದಿ ನೀರು ಅನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹರಿಸುವಂತೆ ಮನವಿ ಮಾಡುವ ಪ್ಲ್ಯಾನ್ ಮಾಡಲಾಗಿದೆ. ಇದನ್ನು ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಜೆ.ಕೆ.ಕೃಷ್ಣಾ ರೆಡ್ಡಿ ಬಹಿರಂಗಪಡಿಸಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೃಷ್ಣಾ ನದಿ ಹರಿಸಲು ಪವನ್ ಕಲ್ಯಾಣ್ ರನ್ನ ಕರೆಸಿದ್ದೇವೆ ಎಂದು ಚಿಂತಾಮಣಿ ಕ್ಷೇತ್ರದಲ್ಲಿ ನಡೆದ ಜಸ್ಟೀಸ್ ವಿ.ಗೋಪಾಲಗೌಡರ ಬರ್ತ್ ಡೇ ಕಾರ್ಯಕ್ರಮದಲ್ಲಿ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದ್ದಾರೆ. ಈ ಮೂಲಕ ಕಾರ್ಯಕ್ರಮದ ಅಸಲಿ ಉದ್ದೇಶವನ್ನು ಮಾಜಿ ಡೆಪ್ಯುಟಿ ಸ್ಪೀಕರ್ ಜೆ.ಕೆ.ಕೃಷ್ಣಾರೆಡ್ಡಿ ಬಹಿರಂಗಪಡಿಸಿದ್ದಾರೆ.
ಜಸ್ಟೀಸ್ ಗೋಪಾಲಗೌಡ ರ ಹುಟ್ಟು ಹಬ್ಬ ನೆಪ ಮಾತ್ರ ಅಷ್ಟೇ . ವಾಸ್ತವವಾಗಿ ಈ ಭಾಗಕ್ಕೆ ಕೃಷ್ಣ ನದಿಯನ್ನು ಹರಿಸಲು ಪವನ್ ಕಲ್ಯಾಣ್ ರಿಗೆ ಮನವಿ ಮಾಡಲು ಕರೆಸಿದ್ದೇವೆ. 2014 ರಲ್ಲಿ ಈ ಭಾಗಕ್ಕೆ ಎತ್ತಿನ ಹೊಳೆ ಯೋಜನೆಯನ್ನು 3 ವರ್ಷದಲ್ಲಿ ಮಾಡ್ತೀವಿ ಅಂತ ಇದೇ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಇದುವರೆಗೂ ಎತ್ತಿನ ಹೊಳೆ ಯೋಜನೆಯ ನೀರು ಬರಲಿಲ್ಲ . ಹೀಗಾಗಿ ಬೇರೆ ದಾರಿಯಿಲ್ಲದೆ ಪಕ್ಕದ ಆಂಧ್ರದಿಂದ ಕೃಷ್ಣಾ ನದಿ ನೀರು ಹರಿಸುವ ಮನವಿ ಮಾಡುತ್ತಿದ್ದೇವೆ. ಶಾಶ್ವತ ನೀರಾವರಿ ಹೋರಾಟ ಸಮಿತಿಯು ಜಲಾಗ್ರಹ ಹೋರಾಟದ ಮೂಲಕ ಮನವಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದ್ದಾರೆ. ಈ ಭಾಗದ ಮೂರು ಜಿಲ್ಲೆಗಳ 60 ಲಕ್ಷ ಜನರಿಗೆ ನೀರಿನ ಬವಣೆ ಎದುರಾಗಿದೆ. ತಾವು ದಯವಿಟ್ಟು ಈ ಭಾಗಕ್ಕೆ ಕೃಷ್ಣಾ ನದಿ ನೀರು ಹರಿಸಿ ಪವನ್ ಕಲ್ಯಾಣ್ ಅವರೇ ಎಂದು ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಪವನ್ ಕಲ್ಯಾಣ್ ಗೆ ಮನವಿ ಮಾಡಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ಕೃಷ್ಣಾನದಿ ನೀರನ್ನು ಹರಿಸಲು ಈ ಕಾರ್ಯಕ್ರಮ ಮಾಡಲಾಗಿದೆ. ಗೋಪಾಲಗೌಡರ ಹುಟ್ಟುಹಬ್ಬ ಒಂದು ನೆಪ ಮಾತ್ರ . ಅವರ ಹೆಸರಿನಲ್ಲಿ ಕೃಷ್ಣಾನದಿ ನೀರು ತರಲು ಮುಂದಾಗಿದ್ದೇವೆ. ಸನಾತನಧರ್ಮದ ಬಗ್ಗೆ ಅವರಿಗೆ ಕಾಳಜಿ ಹೆಚ್ಚಿದೆ. ದಕ್ಷಿಣ ಭಾರತದಲ್ಲಿ ಕಲರಿ ಕಲೆಯನ್ನು ಕಲಿತಿರುವ ನಾಯಕ ಪವನ್ ಕಲ್ಯಾಣ್ . ಆಧ್ಯಾತ್ಮಿಕ, ಸನಾತನ ಧರ್ಮಕ್ಕೆ ಸಹಕಾರ ಕೊಡುತ್ತಿರುವ ನಾಯಕ ಪವನ್ ಕಲ್ಯಾಣ್ ಎಂದು ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದ್ದಾರೆ.
ಕೃಷ್ಣಾನದಿ ನೀರು ಅನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ತಂದರೇ, ನಮ್ಮ ಭಾಗಕ್ಕೆ ಅನುಕೂಲ ವಾಗಲಿದೆ. ಸಾರ್ ನಮ್ಮ ಜಿಲ್ಲೆಯಲ್ಲಿ 2 ಸಾವಿರ ಅಡಿ ಹೋದ್ರು ನೀರು ಸಿಗಲ್ಲ. ನಮಗೆ ಕುಡಿಯುವ ನೀರು ಬೇಕು . ಎತ್ತಿನಹೊಳೆ ಯೋಜನೆಯಡಿ ನೀರು ಹರಿಸಲು ಇದುವರೆಗೂ ಇಂದಿನ ಸಿಎಂ ವಿಫಲರಾಗಿದ್ದಾರೆ. ಎತ್ತಿನಹೊಳೆಗೆ 30 ಸಾವಿರ ಕೋಟಿ ರೂಪಾಯಿ ಖರ್ಚಾಗಿದೆ. ಕೃಷ್ಣಾನದಿ ನೀರು ಬಂದ್ರೆ ಮೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ನೀವು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಮೋದಿ ಅವರ ಜೊತೆ ಮಾತನಾಡಿ ಕೃಷ್ಣಾನದಿ ನೀರು ತರಬೇಕು ಎಂದು ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಗೆ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮನವಿ ಮಾಡಿಕೊಂಡಿದ್ದಾರೆ. ನೀವು ಈ ಬಗ್ಗೆ ಇದೇ ವೇದಿಕೆಯಲ್ಲೇ ಭರವಸೆ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಇದಾದ ಬಳಿಕ ವೇದಿಕೆಯಲ್ಲಿ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಮಾತನಾಡಿದ್ದರು. ರಾಷ್ಟ್ರಕವಿ ಕುವೆಂಪು ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರನ್ನು ಪವನ್ ಕಲ್ಯಾಣ್ ಪ್ರಾರಂಭದಲ್ಲಿ ಸ್ಮರಿಸಿದ್ದರು.
ಕರ್ನಾಟಕದ ಪ್ರಜೆಗಳಿಗೆ ತಲೆ ಬಾಗಿ ನಮಿಸುತ್ತೇನೆ ಎಂದು ಕನ್ನಡದಲ್ಲೇ ಪವನ್ ಕಲ್ಯಾಣ್ ಭಾಷಣ ಮಾಡಿದ್ದರು. ಚಿಂತಾಮಣಿಯ ಸಹೋದರ ಸಹೋದರಿಯರಿಗೆ ನಮಸ್ಕಾರಗಳು. ಕನ್ನಡ ಸಂಸ್ಕೃತಿಗೆ ,ಸರ್ ಎಂ ವಿಶ್ವೇಶ್ವರಯ್ಯ, ರಚನೆಗಳಿಂದ ಪ್ರಖ್ಯಾತರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರಿಗೆ ನಮನಗಳು.
ಗೋಪಾಲ ಗೌಡರ ಹುಟ್ಟುಹಬ್ಬದಲ್ಲಿ ಭಾಗಿಯಾಗಿರುವುದು ಸಂತೋಷ ತಂದಿದೆ ಎಂದು ಕನ್ನಡದಲ್ಲೇ ಭಾಷಣ ಮುಂದುವರೆಸಿದ ಡಿಸಿಎಂ ಪವನ್ ಕಲ್ಯಾಣ್, ತಮ್ಮ ಅನಾರೋಗ್ಯದ ನಡುವೆಯೂ ಕಾರ್ಯಕ್ರಮಕ್ಕೆ ಹಾಜರಾಗಿದ್ದು ವಿಶೇಷ. ಕೆಮ್ಮುತ್ತಲೇ ಪವನ್ ಕಲ್ಯಾಣ್ ಭಾಷಣ ಮಾಡಿದ್ದರು.
ಜನಸೇನಾ ಪಕ್ಷಕ್ಕೆ ಬಲವಾದ ವ್ಯಕ್ತಿ ಗೋಪಾಲಗೌಡರು. ಅವರು ಹೋರಾಟ ಯೋಧರು. ಜನಸೇನಾ ಪಕ್ಷದ ಸಿದ್ದಾಂತಗಳನ್ನು ಗೌರವಿಸುತ್ತಾರೆ. ನಮ್ಮ ಹೋರಾಟಕ್ಕೆ ಅವರು ಬಲ ಇದ್ದಂತೆ. ನಮ್ಮಿಬ್ಬರಿಗೂ ಯುವಜನತೆ, ರೈತರು, ಪರಿಸರದ ಬಗ್ಗೆ ಕಾಳಜಿ ಇದೆ. ಅದರಿಂದಲೇ ನಾನು ರಾಜಕೀಯ ಬಂದೆ. ನಾನು ಸೋಲುವ ಸಮಯದಲ್ಲಿ ಬಲವನ್ನು ಕೊಟ್ಟವರು ಗೋಪಾಲ ಗೌಡರು. ಕೋಲಾರ, ಚಿಕ್ಕಬಳ್ಳಾಪುರ ಬೆಂಗಳೂರಿಗೆ ಆಹಾರ ಕೊಡುವ ಅಕ್ಷಯ ಪಾತ್ರೆ.
ನೀರಾವರಿ ಯೋಜನೆಯ ಬಗ್ಗೆ ನನ್ನ ಪ್ರಯತ್ನ ಮಾಡುವೆ ಎಂದು ಹೇಳುವ ಮೂಲಕ ನಟ ಹಾಗೂ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್, ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಂಧ್ರದಿಂದ ಕೃಷ್ಣಾ ನದಿ ನೀರು ಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ.
ನಿಮ್ಮ ಅಭಿಮಾನ,ಪ್ರೀತಿ ನನ್ನನ್ನು ಇಲ್ಲಿಗೆ ಕರೆ ತಂದಿದೆ. ಆಂಧ್ರ , ಕರ್ನಾಟಕದ ನಡುವೆ ಗೌರವ ದಶಕಗಳಿಂದ ಇದೆ. ಆಂಧ್ರ ಪ್ರದೇಶದಲ್ಲಿಯೂ ಕನ್ನಡ ಶಾಲೆಗಳಿವೆ. ಅಲ್ಲಿಯೂ ಕನ್ನಡ ಕಲಿಯುತ್ತಿದ್ದಾರೆ. ಕಾಡು ಆನೆಗಳನ್ನು ನಿಯಂತ್ರಿಸಲು ಕುಮ್ಕಿ ಆನೆಗಳನ್ನು ಕಳುಹಿಸಿದೆ. ಇದು ಆಂಧ್ರ- ಕರ್ನಾಟಕ ಬಾಂಧವ್ಯ ಪ್ರತಿನಿಧಿಸುತ್ತದೆ ಎಂದು ಪವನ್ ಕಲ್ಯಾಣ್ ಹೇಳಿದ್ದರು.
/filters:format(webp)/newsfirstlive-kannada/media/media_files/2025/10/06/pavan-kalyan-at-chintamani02-2025-10-06-18-54-24.jpg)
ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸಹಾಯದೊಂದಿಗೆ ಕಾರ್ಯಕ್ರಮ ಮಾಡಲಾಗುತ್ತಿದೆ. ಕಲೆ ಮತ್ತು ಸಂಸ್ಕೃತಿ ಒಂದು ಗೂಡಿಸಬೇಕು, ಬೇರೆ ಮಾಡಬಾರದು . ನಾವೆಲ್ಲಾ ಭಾರತ ಮಾತೆಯ ಮಕ್ಕಳು. ಆಂಧ್ರ ಪ್ರದೇಶಕ್ಕೆ ಕರ್ನಾಟಕದ ಮೇಲೆ ತುಂಬಾ ಪ್ರೀತಿ ಇದೆ . ಕರ್ನಾಟಕದ ಸಂಸ್ಕೃತಿಯನ್ನು ಯಾವಾಗಲೂ ಪ್ರೀತಿಸುತ್ತದೆ. ಚಲನಚಿತ್ರಗಳು ಸೇರಿದಂತೆ ಹಲವು ಆಯಾಮಗಳಲ್ಲಿ ಗೌರವಿಸುತ್ತದೆ ಎಂದು ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದರು. ಜೈ ಹಿಂದ್, ಜೈ ಕರ್ನಾಟಕ ಮಾತೆ ಎಂದು ಹೇಳಿ ಪವರ್ ಸ್ಟಾರ್ ಹಾಗೂ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ತಮ್ಮ ಭಾಷಣ ಮುಗಿಸಿದ್ದರು.
ನಿವೃತ್ತ ಜಸ್ಟೀಸ್ ಗೋಪಾಲಗೌಡರಿಗೆ ನಟ ಪವನ್ ಕಲ್ಯಾಣ್ ವೇದಿಕೆಯಲ್ಲಿ ಸನ್ಮಾನಿಸಿ ಅಭಿನಂದಿಸಿದ್ದರು. ಗೋಪಾಲಗೌಡರಿಗೆ ಉತ್ತಮ ಆರೋಗ್ಯ , ಸಮೃದ್ದಿ ಸಿಗಲೆಂದು ಹಾರೈಸಿದ್ದರು.
ಇನ್ನೂ ಸಂಜೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ನಿವೃತ್ತ ಜಸ್ಟೀಸ್ ಗೋಪಾಲಗೌಡರ ಬರ್ತ್ ಡೇ ಕಾರ್ಯಕ್ರಮದಲ್ಲೂ ನಟ ಪವನ್ ಕಲ್ಯಾಣ್ ಭಾಗಿಯಾಗಿದ್ದರು. ಮಾನವತಾವಾದಿ ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us