/newsfirstlive-kannada/media/media_files/2025/09/26/7-lok-kalyana-marg-delhi-road-2025-09-26-13-22-35.jpg)
ಲೋಕ ಕಲ್ಯಾಣ ಮಾರ್ಗ್ ನಲ್ಲಿರುವ ಪ್ರಧಾನಿ ನಿವಾಸ
ಎರಡು ದಿನಗಳ ಹಿಂದೆಯಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನ ರಸ್ತೆಗಳಲ್ಲಿ ಮಾತ್ರ ರಸ್ತೆಗುಂಡಿಗಳಿಲ್ಲ. ನಾನು ದೆಹಲಿಗೆ ಹೋಗಿದ್ದೆ. ದೆಹಲಿಯ ಪ್ರಧಾನಿ ಮನೆಯ ರಸ್ತೆಯಲ್ಲೂ ರಸ್ತೆಗುಂಡಿಗಳಿವೆ ಎಂದು ಹೇಳಿದ್ದರು. ಇದು ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಪ್ರಧಾನಿ ಮನೆ ಮುಂದಿನ ರಸ್ತೆಯಲ್ಲಿ ಗುಂಡಿಗಳಿದ್ದರೇ, ನಿಮ್ಮ ಮನೆಯ ಮುಂದೆಯೂ ಹೊಂಡ ತೋಡಿಕೊಳ್ಳಿ ಎಂದು ಬಿಜೆಪಿ ನಾಯಕ ಸಿ.ಸಿ.ಪಾಟೀಲ್ , ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿದ್ದರು. ಹಾಗಾದರೇ, ನೀವು ಅಧಿಕಾರಕ್ಕೆ ಬಂದಿದ್ದು ಏಕೆ? ಎಲ್ಲದ್ದಕ್ಕೂ ಬಿಜೆಪಿಯೇ ಹೊಣೆ ಎಂದು ಹೇಳುವುದಾದರೇ, ನೀವು ಮಾಡುವುದು ಏನು ಎಂದು ಬಿಜೆಪಿ ನಾಯಕರು , ಡಿಸಿಎಂ ಡಿ.ಕೆ.ಶಿವಕುಮಾರ್ ರನ್ನು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿರುವಂತೆ ನಿಜಕ್ಕೂ ದೆಹಲಿಯ ಪ್ರಧಾನಿ ಮನೆ ಮುಂದಿನ ರಸ್ತೆಯಲ್ಲಿ ಗುಂಡಿಗಳಿವೆಯೇ ಎಂದು ರಾಷ್ಟ್ರೀಯ ಮಾಧ್ಯಮಗಳು ರಿಯಾಲಿಟಿ ಚೆಕ್ ನಡೆಸಿವೆ.
ದೆಹಲಿಯಲ್ಲಿ ಲೋಕ ಕಲ್ಯಾಣ ಮಾರ್ಗದ 7ನೇ ನಂಬರ್ ನಿವಾಸವು ಈಗ ಪ್ರಧಾನಿ ಅವರ ಅಧಿಕೃತ ನಿವಾಸ. ಈ ಲೋಕ ಕಲ್ಯಾಣ ಮಾರ್ಗವನ್ನು ಈ ಮೊದಲು ರೇಸ್ ಕೋರ್ಸ್ ರೋಡ್ ಎಂದು ಕರೆಯಲಾಗುತ್ತಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಈಗ ಈ ರಸ್ತೆಯ ಹೆಸರು ಅನ್ನು ಬದಲಾಯಿಸಿ, ಲೋಕ ಕಲ್ಯಾಣ ಮಾರ್ಗ ಎಂದು ಬದಲಾಯಿಸಲಾಗಿದೆ.
ಇನ್ನೂ ರಾಷ್ಟ್ರೀಯ ಇಂಗ್ಲೀಷ್ ಟಿವಿ ಚಾನಲ್ ವೊಂದು ಲೋಕ ಕಲ್ಯಾಣ ಮಾರ್ಗದ ರಸ್ತೆಯ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದೆ. ದೆಹಲಿಯ ಕೌಟಿಲ್ಯ ಮಾರ್ಗದ ಪಕ್ಕದಲ್ಲೇ ಲೋಕ ಕಲ್ಯಾಣ ಮಾರ್ಗ ಇದೆ. ಕೌಟಿಲ್ಯ ಮಾರ್ಗ್ ನಲ್ಲೇ ಕರ್ನಾಟಕ ಭವನ, ಗುಜರಾತ್ ಭವನ ಗಳು ಅಕ್ಕಪಕ್ಕದಲ್ಲೇ ಇವೆ. ಕೌಟಿಲ್ಯ ಮಾರ್ಗದ ಕರ್ನಾಟಕ ಭವನದಿಂದಲೇ ಇಂಗ್ಲೀಷ್ ಟಿವಿ ಚಾನಲ್ ವರದಿಗಾರರು ತಮ್ಮ ರಿಯಾಲಿಟಿ ಚೆಕ್ ಆರಂಭಿಸಿದ್ದಾರೆ. ಈ ವೇಳೆ ಲೋಕ ಕಲ್ಯಾಣ ಮಾರ್ಗದಲ್ಲಿ ಯಾವುದೇ ರಸ್ತೆ ಗುಂಡಿಗಳು ಕಂಡು ಬಂದಿಲ್ಲ. ಸುಗಮವಾಗಿ, ಸುಸೂತ್ರವಾಗಿ ಕಾರ್ ಗಳು ಲೋಕ ಕಲ್ಯಾಣ ಮಾರ್ಗದಲ್ಲಿ ಸಂಚರಿಸುತ್ತಿರುವುದು ಕ್ಯಾಮರಾ ದೃಶ್ಯದಲ್ಲಿ ಕಂಡು ಬಂದಿದೆ. ಹೀಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿರುವಂತೆ ದೆಹಲಿಯ ಪ್ರಧಾನಿ ನಿವಾಸದ ರಸ್ತೆಯಲ್ಲಿ ಯಾವುದೇ ರಸ್ತೆ ಗುಂಡಿಗಳು ಇಲ್ಲ ಎನ್ನುವುದು ಕಂಡು ಬಂದಿದೆ.
ದೆಹಲಿಯಲ್ಲಿ ಪ್ರಧಾನಿ ಮನೆಯ ರಸ್ತೆಯಾದ ಲೋಕ ಕಲ್ಯಾಣ ಮಾರ್ಗ್, ಈ ರಸ್ತೆಯಲ್ಲಿ ಯಾವುದೇ ಗುಂಡಿಗಳಿಲ್ಲ!
ಹೀಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯ ಬಿಜೆಪಿ ನಾಯಕರ ಬಾಯಿ ಮುಚ್ಚಿಸಲು ದೆಹಲಿಯ ಪ್ರಧಾನಿ ನಿವಾಸದ ರಸ್ತೆಯಲ್ಲೂ ಗುಂಡಿಗಳಿವೆ ಎಂದು ರಾಜಕೀಯ ಹೇಳಿಕೆ ನೀಡಿರುವುದು ಹಾಗೂ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ದೆಹಲಿಯ ಪ್ರಧಾನಿ ಮೋದಿ ಮನೆ ಇರುವ ಲೋಕ ಕಲ್ಯಾಣ ಮಾರ್ಗವನ್ನು ನ್ಯೂ ಡೆಲ್ಲಿ ಮುನ್ಸಿಪಲ್ ಕಾರ್ಪೋರೇಷನ್ ನಿರ್ವಹಣೆ ಮಾಡುತ್ತಿದೆ. ಈ ಪ್ರದೇಶವು ದೇಶದಲ್ಲಿ ಅತ್ಯಂತ ಹೆಚ್ಚು ಸ್ವಚ್ಛ , ಸುಂದರ ಪ್ರದೇಶವೂ ಆಗಿದೆ. ಲೋಕ ಕಲ್ಯಾಣ ಮಾರ್ಗ್ ನಲ್ಲಿ ಸದ್ಯಕ್ಕಂತೂ ಯಾವುದೇ ರಸ್ತೆಗುಂಡಿಗಳೂ ಇಲ್ಲ.
ಹೀಗಾಗಿ ಡಿಸಿಎಂ ಡಿಕೆಶಿ ಹಾಗೂ ಅವರ ಸರ್ಕಾರ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವತ್ತ ಗಮನ ಹರಿಸಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ